ಕೋಲಾರ: ರಾಜಧಾನಿ ಬೆಂಗಳೂರಿನಿಂದ ಕೇವಲ 65 ಕಿ.ಮೀ. ದೂರವಿದ್ದರೂ ದಶಕಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಕೋಲಾರ ಕ್ಷೇತ್ರದ ಅಭಿವೃದ್ಧಿ ನಿಟ್ಟಿನಲ್ಲಿ ಹೊಸ ಶಾಸಕರ ಮುಂದೆ ಸಾಲು ಸವಾಲುಗಳು ಇವೆ.
ಸಿದ್ದರಾಮಯ್ಯ ಸ್ಪರ್ಧೆ ವಿಚಾರ ಮುನ್ನೆಲೆಗೆ ಬಂದಾಗ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ಸಿಗಲಿದೆ ಎಂಬ ಚರ್ಚೆ ಆರಂಭವಾಗಿತ್ತು. ಕ್ಷೇತ್ರದಿಂದ ಗೆದ್ದರೆ ಜಿಲ್ಲೆಗೆ ಎರಡನೇ ಮುಖ್ಯಮಂತ್ರಿ ಸಿಗಲಿದ್ದಾರೆ, ಅಭಿವೃದ್ಧಿ ಪರ್ವವೇ ಆರಂಭವಾಗಲಿದೆ ಎಂಬ ಆಸೆ ಜನರಲ್ಲಿ ಚಿಗುರಿತ್ತು. ಸಮಾವೇಶವೊಂದರಲ್ಲಿ ಸಿದ್ದರಾಮಯ್ಯ ಪರವಾಗಿ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಕ್ಷೇತ್ರದಲ್ಲಿ ಆಗಬೇಕಿರುವ ಕೆಲಸ ಕಾರ್ಯಗಳ ಪಟ್ಟಿಯನ್ನೇ ಮುಂದಿಟ್ಟಿದ್ದರು. ಆದರೆ, ನಾನಾ ಕಾರಣಗಳಿಂದ ಸಿದ್ದರಾಮಯ್ಯ ಹಿಂದೆ ಸರಿದು ವರುಣಾಕ್ಕೆ ಹೋದರು. ಆ ಬಳಿಕ ಚರ್ಚೆ ತಣ್ಣಗಾಯಿತು.
ಆದಾಗ್ಯೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವೇ ಬಹುಮತದೊಂದಿಗೆ ಗೆದ್ದಿದೆ. ಹೀಗಾಗಿ, ಕ್ಷೇತ್ರದ ಅಭಿವೃದ್ಧಿ ಸಂಬಂಧ ಮತ್ತೆ ಆಶಾವಾದ ಚಿಗುರಿದೆ. ಜೊತೆಗೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಗೆದ್ದಿರುವ ಕೊತ್ತೂರು ಮಂಜುನಾಥ್ ಕೂಡ ಭರವಸೆ ಮೂಡಿಸುವ ಮಾತುಗಳನ್ನಾಡಿದ್ದಾರೆ.
‘ಕ್ಷೇತ್ರದ ಅಭಿವೃದ್ಧಿ ನಿಟ್ಟಿನಲ್ಲಿ ಕೈಗೊಳ್ಳಬೇಕಿರುವ ಪಟ್ಟಿಯನ್ನು ಸಿದ್ದರಾಮಯ್ಯ ನೀಡಿದ್ದಾರೆ. ಅವರ ಸೂಚನೆಯಂತೆ ಅಭಿವೃದ್ಧಿ ಕೆಲಸ ಕೈಗೆತ್ತಿಕೊಳ್ಳುತ್ತೇನೆ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಕಳೆದ ಸರ್ಕಾರದ ಅವಧಿಯಲ್ಲಿ ಒಂದೆರಡು ಯೋಜನೆ ಬಿಟ್ಟರೆ ಕೋಲಾರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಭಿವೃದ್ಧಿ ಅಷ್ಟಾಗಿ ನಡೆದಿಲ್ಲ. ಶುದ್ಧ ಕುಡಿಯುವ ನೀರಿನ ಸಮಸ್ಯೆ ನೀಗಿಲ್ಲ. ಕೆ.ಸಿ.ವ್ಯಾಲಿ ಮೂರನೇ ಹಂತದ ಶುದ್ಧೀಕರಣ ನಡೆಸದೆ ಕೆರೆಗೆ ನೀರು ಹರಿಸುತ್ತಿರುವುದರಿಂದ ಮತ್ತಷ್ಟು ಅನಾಹುತದ ಆತಂಕ ಎದುರಾಗಿದೆ. ಈ ಕೆರೆಗಳ ಪಕ್ಕದಲ್ಲಿರುವ ಕೊಳವೆ ಬಾವಿ ನೀರಿನೊಂದಿಗೆ ಮಿಶ್ರಣವಾಗಿ ದೇಹ ಸೇರುತ್ತಿದೆ. ಕಳೆದ ಬಜೆಟ್‌ನಲ್ಲಿ ಮೂರನೇ ಹಂತದ ಶುದ್ಧೀಕರಣ ಪ್ರಸ್ತಾಪವಾಗಿದ್ದರೂ ಯಾವುದೇ ಪ್ರಗತಿ ಕಂಡಿಲ್ಲ. ಹಣವನ್ನೂ ನಿಗದಿಪಡಿಸಿಲ್ಲ.
ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ. ಈ ಯೋಜನೆ ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ಈ ಕೆಲಸ ತ್ವರಿತಗತಿಯಲ್ಲಿ ನಡೆಯುವಂತೆ ನೋಡಿಕೊಳ್ಳಬೇಕಿದೆ. ರಸ್ತೆಗಳು ಬಹುತೇಕ ಹದಗೆಟ್ಟಿದ್ದು, ಚುನಾವಣಾ ಸನಿಹದಲ್ಲಿ ತೇಪೆ ಹಾಕುವ ಕೆಲಸ ನಡೆದಿದೆ.
ಇನ್ನು ಯರಗೋಳ್ ಜಲಾಶಯ ಉದ್ಘಾಟನೆಗೆ ಕಾಲ ಕೂಡಿ ಬರಲೇ ಇಲ್ಲ. ಈ ಜಲಾಶಯ ಬಂಗಾರಪೇಟೆ ಕ್ಷೇತ್ರದಲ್ಲಿದ್ದರೂ ಕೋಲಾರಕ್ಕೆ ಕುಡಿಯುವ ನೀರು ಪೂರೈಕೆ ಆಗಬೇಕಿದ್ದು, ಇದರ ನಿರ್ಮಾಣದಲ್ಲಿ ನಗರಸಭೆಯ ಪಾಲು ಇದೆ.
ಪ್ರಮುಖವಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಅಗತ್ಯವಿದೆ. ಈಗಿರುವ ಎಸ್‌ಎನ್‌ಆರ್ ಜಿಲ್ಲಾಸ್ಪತ್ರೆ ಮೇಲೆ ವಿಪರೀತ ಒತ್ತಡ ಬೀಳುತ್ತಿದ್ದು, ಸಿಬ್ಬಂದಿ ಕೊರತೆ ಜೊತೆಗೆ ಸಮರ್ಪಕ ಚಿಕಿತ್ಸೆ ಸಿಗದಿರುವ ದೂರುಗಳು ಬರುತ್ತಿವೆ.
ಕೋಲಾರ ಕ್ಷೇತ್ರಕ್ಕೆ ಏನು ಬೇಕಿದೆ? * ಸಮರ್ಪಕ ಶುದ್ಧ ಕುಡಿಯುವ ನೀರು ಪೂರೈಕೆ * ಯರಗೋಳ್ ಜಲಾಶಯದಿಂದ ನೀರು ಸರಬರಾಜು * ಕೆ.ಸಿ.ವ್ಯಾಲಿ ಮೂರನೇ ಹಂತದ ಶುದ್ಧೀಕರಣ * ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ * ಸರ್ಕಾರಿ ವೈದ್ಯಕೀಯ ಕಾಲೇಜು * ಹೊರ ವರ್ತುಲ ರಸ್ತೆ * ಪ್ರತ್ಯೇಕ ಟೊಮೆಟೊ ಮಾರುಕಟ್ಟೆ * ಟೊಮೆಟೊ ಸಂಸ್ಕರಣಾ ಘಟಕ * ಸರ್ಕಾರಿ ಎಂಜಿನಿಯರಿಂಗ್ ಕಾಲೇಜು * ಕೋಲಾರಮ್ಮ ಕೆರೆ ಅಭಿವೃದ್ಧಿ * ಮಾರುಕಟ್ಟೆ ಅಭಿವೃದ್ಧಿ * ಸುಸಜ್ಜಿತ ಕಟ್ಟಡಕ್ಕೆ ಉಪನೋಂದಣಾಧಿಕಾರಿ ಕಚೇರಿ ಸ್ಥಳಾಂತರ * ಪ್ರವಾಸೋದ್ಯಮ ಕೇಂದ್ರಗಳ ಅಭಿವೃದ್ಧಿ * ಬಾಲಕ ಬಾಲಕಿಯರ ಸರ್ಕಾರಿ ಕಾಲೇಜು ಅಭಿವೃದ್ಧಿ * ಮಹಾನಗರ ಪಾಲಿಕೆಯಾಗಿ ಉನ್ನತೀಕರಣ ನೂತನ ಕಟ್ಟಡ ನಿರ್ಮಾಣ * ಕೈಗಾರಿಕೆ ಪ್ರದೇಶಾಭಿವೃದ್ಧಿ * ಕೋಲಾರ–ಬೆಂಗಳೂರು ನೇರ ರೈಲು ಮಾರ್ಗ
24 ಗಂಟೆ ನೀರು ಪೂರೈಕೆಗೆ ಆದ್ಯತೆ ಹೇಳಿ ಕೆಲಸ ಮಾಡುವುದಲ್ಲ; ಬದಲಾಗಿ ಮಾಡಿದ ಮೇಲೆ ಜನ ಕೆಲಸದ ಬಗ್ಗೆ ಮಾತನಾಡಬೇಕು. ಮುಳಬಾಗಿಲಿನಲ್ಲಿ ಶಾಸಕನಾಗಿದ್ದಾಗ ನಾನು ಮಾಡಿದ ಕೆಲಸಗಳು ಎಲ್ಲರಿಗೂ ಗೊತ್ತಿದೆ. ಅದೇ ರೀತಿ ಕೋಲಾರ ಕ್ಷೇತ್ರದಲ್ಲಿ ಕೆಲಸ ಮಾಡುತ್ತೇನೆ. 24 ಗಂಟೆ ನೀರು ಪೂರೈಕೆ ನನ್ನ ಮೊದಲ ಆದ್ಯತೆ. ಯರಗೋಳ್ ಯೋಜನೆ ಜಾರಿ ಎತ್ತಿನ ಹೊಳೆ ಯೋಜನೆ ಮೂಲಕ ನೀರು ತರಲು ಪ್ರಯತ್ನ ಮಾಡುತ್ತೇನೆ. ಕೆ.ಸಿ.ವ್ಯಾಲಿ ಮೂರನೇ ಹಂತದ ಶುದ್ಧೀಕರಣಕ್ಕೆ ಒತ್ತು ನೀಡುತ್ತೇನೆ. ಕ್ಷೇತ್ರದಲ್ಲಿ ಮಾದರಿ ಸರ್ಕಾರಿ ಶಾಲೆ ನಿರ್ಮಿಸುವುದು ನನ್ನ ಗುರಿ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುತ್ತೇನೆ. ಇವೆಲ್ಲಾ ಸಿದ್ದರಾಮಯ್ಯ ಅವರ ಆದ್ಯತೆಯೂ ಆಗಿತ್ತು. ಈ ಕೆಲಸ ಮಾಡಬೇಕೆಂದು ನನಗೆ ಹೇಳಿದ್ದಾರೆ. ನಗರ ರಿಪೇರಿ ಮಾಡಬೇಕಿದೆ ರಸ್ತೆ ಅಭಿವೃದ್ಧಿಗೆ ಒತ್ತು ನೀಡಬೇಕಿದೆ. ಕೋಲಾರ ಕ್ಷೇತ್ರದ ಜನ ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸುವ ಜೊತೆಗೆ ಅವರ ಋಣ ತೀರಿಸುವ ಕೆಲಸ ಮಾಡುತ್ತೇನೆ –ಕೊತ್ತೂರು ಮಂಜುನಾಥ್ ಕೋಲಾರ ವಿಜೇತ ಅಭ್ಯರ್ಥಿ ಕಾಂಗ್ರೆಸ್
ಈಡೇರದ ಭರವಸೆ ಜಿಲ್ಲೆಯವರೇ ಈ ಹಿಂದೆ ವೈದ್ಯಕೀಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರೂ ಇದುವರೆಗೆ ಕೋಲಾರಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಆಗಿಲ್ಲ. 2016ರ ಬಜೆಟ್‌ನಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದರೂ ಈಡೇರಿಲ್ಲ. 2017ರ ಬಜೆಟ್‌ನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಘೋಷಣೆಯಾಗಿದ್ದರೂ ಇದುವರೆಗೆ ಕೈಗೂಡಿಲ್ಲ. ಕೋಲಾರದಿಂದ ಬೇರ್ಪಟ್ಟು ಹೊಸದಾಗಿ ಸ್ಥಾಪನೆಯಾದ ಪಕ್ಕದ ಚಿಕ್ಕಬಳ್ಳಾಪುರ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಲಭಿಸಿದೆ. ಆದರೆ ಜಿಲ್ಲೆಯ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಕೋಲಾರಕ್ಕೇ ಇನ್ನೂ ಸಿಕ್ಕಿಲ್ಲ. ಹೀಗಾಗಿ ಈ ಎರಡು ವಿಚಾರಗಳಿಗೆ ಹೊಸ ಶಾಸಕರು ಒತ್ತು ಕೊಡಬೇಕು ಎಂಬುದು ಕ್ಷೇತ್ರದ ಜನರ ಒತ್ತಾಯ.
ಹೊಸ ಟೊಮೆಟೊ ಮಾರುಕಟ್ಟೆ ಕೋಲಾರ ಕ್ಷೇತ್ರದ ರೈತರ ಪ್ರಮುಖ ಬೇಡಿಕೆಗಳೆಂದರೆ ಹೊಸದಾಗಿ ಎಪಿಎಂಸಿ ಮಾರುಕಟ್ಟೆ ಸ್ಥಾಪನೆ. ಈಗಿರುವ ಮಾರುಕಟ್ಟೆ ಕಿಷ್ಕಿಂದೆ ಆಗಿದೆ. ಟೊಮೆಟೊಗೆ ಪ್ರತ್ಯೇಕ ಮಾರುಕಟ್ಟೆ ವ್ಯವಸ್ಥೆ ಸಂಸ್ಕರಣಾ ಹಾಗೂ ಶಿಥಲೀಕರಣ ಘಟಕ ಬೇಕಿದೆ. ದೇಶ ವಿದೇಶಗಳಿಗೆ ಮಾವು ಹಾಗೂ ಟೊಮೆಟೊ ರಫ್ತಾಗುತ್ತಿದೆ. ಆದರೆ ಸಂರಕ್ಷಣೆಗೆ ಸರಿಯಾದ ವ್ಯವಸ್ಥೆ ಇಲ್ಲವಾಗಿದೆ. ಎಪಿಎಂಸಿ ಮಾರುಕಟ್ಟೆಗೆ ಈಗಾಗಲೇ ಜಾಗ ನೋಡಿದ್ದರೂ ಕೇಂದ್ರ ಅರಣ್ಯ ಇಲಾಖೆಯಿಂದ ಹಸಿರು ನಿಶಾನೆ ಸಿಗಬೇಕಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.