ಕೋಲಾರ: ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸ್ಥಾನಕ್ಕೆ ನಡೆಯುವ ದ್ವೈವಾರ್ಷಿಕ ಚುನಾವಣೆಯ ಕಾವು ಜೋರಾಗಿದ್ದು, ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಹಾಗೂ ಪಕ್ಷೇತರರು ಶಿಕ್ಷಕ ಮತದಾರರ ಮನಗೆಲ್ಲಲು ನಾನಾ ಕಸರತ್ತು ನಡೆಸುತ್ತಿದ್ದಾರೆ.
ಜೂನ್ 3 ರಂದು ಮತದಾನ ನಡೆಯಲಿದ್ದು, ಆಗ್ನೇಯ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಗೆ ಕೋಲಾರ ಸೇರಿದಂತೆ ಐದು ಜಿಲ್ಲೆಗಳು ಸೇರಿವೆ.
ಶುಕ್ರವಾರ ನಾಮಪತ್ರ ಪರಿಶೀಲನೆ ನಡೆದಿದ್ದು, ಉಮೇದುವಾರಿಕೆ ವಾಪಸಾತಿಗೆ ಮೇ 20 ಕೊನೆಯ ದಿನವಾಗಿದೆ. ಒಟ್ಟು ಒಂಬತ್ತು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಸದ್ಯ ಈ ಕ್ಷೇತ್ರವನ್ನು ಬಿಜೆಪಿಯ ವೈ.ಎ.ನಾರಾಯಣಸ್ವಾಮಿ ಪ್ರತಿನಿಧಿಸುತ್ತಿದ್ದಾರೆ. 18 ವರ್ಷಗಳಿಂದ ಈ ಕ್ಷೇತ್ರವನ್ನು ಹಿಡಿತದಲ್ಲಿಟ್ಟುಕೊಂಡಿದ್ದಾರೆ. ಮೊದಲ ಬಾರಿ ಪಕ್ಷೇತರರಾಗಿ ಗೆಲುವು ಸಾಧಿಸಿದ ಅವರು ನಂತರ ಬಿಜೆಪಿ ಸೇರಿದರು. ಇದೇ ಜಿಲ್ಲೆಯ ಅವರು ಮತ್ತೊಮ್ಮೆ ತಮ್ಮ ಅದೃಷ್ಟ ಪರೀಕ್ಷಿಸಲು ಕಣಕ್ಕಿಳಿದಿದ್ದಾರೆ. ಈ ಬಾರಿ ಅವರಿಗೆ ಲೋಕಸಭೆ ಚುನಾವಣೆ ಮಾದರಿಯಲ್ಲಿ ಮೈತ್ರಿ ಪಕ್ಷ ಜೆಡಿಎಸ್‌ನ ಬೆಂಬಲವೂ ಇದೆ.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ರಾಜ್ಯ ಗೊಲ್ಲ ಸಂಘದ ಅಧ್ಯಕ್ಷ ಡಿ.ಟಿ.ಶ್ರೀನಿವಾಸ್ ಅಖಾಡದಲ್ಲಿದ್ದಾರೆ. ಹಿರಿಯೂರು ಕ್ಷೇತ್ರದ ಮಾಜಿ ಶಾಸಕಿಯೂ ಆಗಿರುವ ಪೂರ್ಣಿಮಾ ಅವರ ಪತಿ ಶ್ರೀನಿವಾಸ್. ಅವರು ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಈಚೆಗೆ ಕಾಂಗ್ರೆಸ್‌ಗೆ ಸೇರಿ ಮತ್ತೆ ಅಖಾಡಕ್ಕೆ ಧುಮುಕಿದ್ದಾರೆ.
ಪಕ್ಷೇತರ ಅಭ್ಯರ್ಥಿ ಹಾಗೂ ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಸಂಘದ (ರುಪ್ಸ ಕರ್ನಾಟಕ) ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ, ಮತ್ತೊಬ್ಬ ಪಕ್ಷೇತರ ಅಭ್ಯರ್ಥಿ ವಿನೋದ್ ಶಿವರಾಜ್ ಸೇರಿದಂತೆ 9 ಮಂದಿ ಕಣದಲ್ಲಿದ್ದಾರೆ.
ಬೇಸಿಗೆ ರಜೆಯಲ್ಲಿರುವ ಶಿಕ್ಷಕರನ್ನು ಭೇಟಿಯಾಗಲು ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಮನೆಮನೆಗೆ ತೆರಳುತ್ತಿದ್ದಾರೆ.
ಪ್ರಮುಖವಾಗಿ ಶಿಕ್ಷಕರ ವಿಧಾನ ಪರಿಷತ್ ಕ್ಷೇತ್ರದ ಚುನಾವಣೆಗೆ ಯಾವುದೇ ರಾಜಕೀಯ ಪಕ್ಷದ ಚಿಹ್ನೆ ಇರಲ್ಲ.
ಸದ್ಯ ಪ್ರಜ್ವಲ್ ರೇವಣ್ಣ ಪ್ರಕರಣ ಹಾಗೂ ಪೆನ್ ಡ್ರೈವ್ ಪ್ರಕರಣ ಬಹಳ ಸದ್ದು ಮಾಡುತ್ತಿವೆ. ಇದು ಈ ಚುನಾವಣೆ ಮೇಲೆ ಯಾವ ರೀತಿ ಪರಿಣಾಮ ಬೀರಬಹುದೆಂಬ ಕುತೂಹಲವಿದೆ. ಮೈತ್ರಿ ಪಕ್ಷದ ಅಭ್ಯರ್ಥಿಗೆ ಹೊಡೆತ ನೀಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಇನ್ನು ಕಾಂಗ್ರೆಸ್ ಅಭ್ಯರ್ಥಿಗೆ ಗ್ಯಾರಂಟಿ ಯೋಜನೆಗಳು ಈ ಚುನಾವಣೆಯಲ್ಲಿ ಫಲ ನೀಡುತ್ತವೆಯೇ ಎಂಬ ಪ್ರಶ್ನೆಯೂ ಮೂಡಿದೆ. ಅವರದ್ದೇ ಪಕ್ಷದ ಸರ್ಕಾರ ಅಧಿಕಾರದಲ್ಲಿರುವ ಕಾರಣ ಪ್ರತಿಷ್ಠೆಯಾಗಿಯೂ ಮಾರ್ಪಟ್ಟಿದೆ. ಕಣದಲ್ಲಿರುವ ಪಕ್ಷೇತರ ಅಭ್ಯರ್ಥಿಗಳು ರಾಷ್ಟ್ರೀಯ ಪಕ್ಷಗಳ ವೋಟು ಕೀಳಲಿದ್ದಾರೆಯೋ ಇಲ್ಲವೇ ತಾವೇ ಕಮಾಲ್ ಮಾಡುತ್ತಾರೋ ಎಂಬ ಕುತೂಹಲವೂ ಹೆಚ್ಚಿದೆ.
ಪಕ್ಷೇತರ ಅಭ್ಯರ್ಥಿಗಳು ಹಾಲಿ ಸದಸ್ಯ ನಾರಾಯಣಸ್ವಾಮಿ ಕಾರ್ಯವೈಖರಿ ಟೀಕಿಸುತ್ತಾ, ರಾಜ್ಯ ಕಾಂಗ್ರೆಸ್ ಸರ್ಕಾರದ ಶಿಕ್ಷಣ ನೀತಿಗಳನ್ನು ದೂಷಿಸುತ್ತಾ ಪ್ರಚಾರದಲ್ಲಿ ತೊಡಗಿದ್ದಾರೆ.
ಜೂನ್ 1ಕ್ಕೆ ಬಹಿರಂಗ ಪ್ರಚಾರ ಮುಗಿಯಲಿದೆ. ಜೂನ್ 3 ರಂದು ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ಜೂನ್ 6 ರಂದು ಬೆಂಗಳೂರಿನ ಆರ್.ಸಿ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ.
ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಮತದಾರರ ನೋಂದಣಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಜಿಲ್ಲಾಧಿಕಾರಿ ಸಹಾಯಕ ಮತದಾರರ ನೋಂದಣಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಾರೆ. ಹಾಲಿ ಸದಸ್ಯ ವೈ.ಎ.ನಾರಾಯಣಸ್ವಾಮಿ ಅವಧಿ ಮುಂದಿನ ತಿಂಗಳು (ಜೂನ್) ಕೊನೆಗೊಳ್ಳಲಿದೆ.
5 ಜಿಲ್ಲೆ 34 ತಾಲ್ಲೂಕು ವ್ಯಾಪ್ತಿ
ಅಗ್ನೇಯ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಗೆ ಕೋಲಾರ ಚಿಕ್ಕಬಳ್ಳಾಪುರ ತುಮಕೂರು ಚಿತ್ರದುರ್ಗ ಸೇರಿದಂತೆ ದಾವಣಗೆರೆ ( ದಾವಣಗೆರೆ ಹರಿಹರ ಜಗಳೂರು) ಸೇರಿದಂತೆ ಒಟ್ಟು 5 ಜಿಲ್ಲೆಗಳ 34 ತಾಲ್ಲೂಕುಗಳ ಬರುತ್ತವೆ. ಸುಮಾರು 466 ಕಿ.ಮೀ ಸುತ್ತಳತೆ ಹೊಂದಿದೆ. ಈ ಜಿಲ್ಲೆಗಳ ಶಿಕ್ಷಕರು ಮತದಾನದ ಹಕ್ಕು ಹೊಂದಿದ್ದಾರೆ. ಒಟ್ಟು 23514 ಮತದಾರರು ನೋಂದಣಿಯಾಗಿದ್ದಾರೆ. ಕೋಲಾರ ಜಿಲ್ಲೆಯಲ್ಲಿ 2128 ಪುರುಷರು 2014 ಮಹಿಳೆಯರು ಸೇರಿ ಒಟ್ಟು 4142 ಮತದಾರರು ಇದ್ದಾರೆ.
ಜಿಲ್ಲೆಯಲ್ಲಿ ಒಟ್ಟು 7 ಮತ ಕೇಂದ್ರ
ಜಿಲ್ಲೆಯಲ್ಲಿ ಒಟ್ಟು 7 ಮತ ಕೇಂದ್ರ ಸ್ಥಾಪಿಸಿದ್ದು ಶ್ರೀನಿವಾಸಪುರ ಕೋಲಾರ ಮುಳಬಾಗಿಲು ಮಾಲೂರು ಬಂಗಾರಪೇಟೆ ತಾಲ್ಲೂಕುಗಳಲ್ಲಿ ಆಯಾ ತಾಲ್ಲೂಕು ಕಚೇರಿಯಲ್ಲಿ ಹಾಗೂ ಕೆಜಿಎಫ್‍ನಲ್ಲಿ ನಗರಸಭೆ ಕಚೇರಿಯಲ್ಲಿ ತಲಾ ಒಂದು ಹಾಗೂ ಕೋಲಾರ ತಾಲ್ಲೂಕು ಕಚೇರಿಯಲ್ಲಿ ಒಂದು ಹೆಚ್ಚುವರಿ ಮತ ಕೇಂದ್ರ ಸ್ಥಾಪಿಸಲಾಗಿದೆ.
ಬ್ಯಾಲೆಟ್ ಪೇಪರ್ ಮೂಲಕ ಮತ
ಈ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಮೂಲಕ ಮತ ಚಲಾಯಿಸಲಾಗುತ್ತದೆ. ಯಾವುದೇ ಪಕ್ಷದ ಚಿಹ್ನೆ ಇರುವುದಿಲ್ಲ. ಚುನಾವಣಾ ಆಯೋಗ ನಿಗದಿಪಡಿಸಿರುವ ನೇರಳೆ ಬಣ್ಣದ ಪೆನ್ ಮೂಲಕವೇ ಯಾವ ಅಭ್ಯರ್ಥಿಗೆ ಎಷ್ಟನೇ ಪ್ರಾಶಸ್ತ್ಯದ ಮತ ಚಲಾಯಿಸುತ್ತಾರೆ ಎಂಬುದನ್ನು ಅಂಕಿಯಲ್ಲಿ ಬರೆಯಬೇಕು. ಇಲ್ಲವಾದರೆ ಅದು ತಿರಸ್ಕೃತಗೊಳ್ಳುವ ಸಾಧ್ಯತೆ ಇರುತ್ತದೆ. ಶಾಹಿಯನ್ನು ಎಡಗೈನ ಮಧ್ಯದ ಬೆರಳಿಗೆ ಹಚ್ಚಲಾಗುತ್ತದೆ.
ಆಗ್ನೇಯ ಶಿಕ್ಷಕರ ಕ್ಷೇತ್ರ ವ್ಯಾಪ್ತಿಯ ಜಿಲ್ಲೆಗಳಲ್ಲಿ ಮತದಾರರು
ಜಿಲ್ಲೆ; ಪುರುಷರು, ಮಹಿಳೆಯರು; ಒಟ್ಟು
ಚಿಕ್ಕಬಳ್ಳಾಪುರ; 2,074; 1,436; 3,510
ಚಿತ್ರದುರ್ಗ; 3,238; 1,377; 4,615
ಕೋಲಾರ; 2,128; 2,014; 4,142
ತುಮಕೂರು; 4,675; 2,624; 7,299
ದಾವಣಗೆರೆ; 2,564; 1,384; 3,948
ಒಟ್ಟು; 14,679; 8,835; 23,514
******
ಆಗ್ನೇಯ ಶಿಕ್ಷಕರ ಕ್ಷೇತ್ರ: ಕೋಲಾರ ಜಿಲ್ಲೆಯಲ್ಲಿ ಶಿಕ್ಷಕ ಮತದಾರರು
ತಾಲ್ಲೂಕು; ಮತದಾರರು
ಶ್ರೀನಿವಾಸಪುರ; 663
ಮುಳಬಾಗಿಲು; 575
ಕೋಲಾರ; 1,437
ಮಾಲೂರು; 458
ಬಂಗಾರಪೇಟೆ; 400
ಕೆಜಿಎಫ್; 609
ಒಟ್ಟು; 4,142
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.