ಕೋಲಾರ: ‘ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನು ಕಣಕ್ಕಿಳಿಸುವುದಾಗಿ ಹೇಳಿ ನನಗೆ ಕೊನೆ ಗಳಿಗೆಯಲ್ಲಿ ರಮೇಶ್ ಕುಮಾರ್ ನಂಬಿಕೆ ದ್ರೋಹ ಮಾಡಿದರು. ಇದೀಗ ಎಂಎಲ್‍ಸಿ ಆಗಲು ಹೊರಟಿದ್ದಾರೆ. ನನ್ನನ್ನು ಎಂಎಲ್‍ಸಿ ಮಾಡುವುದಾಗಿ ಹೇಳಿದ್ದನ್ನು ಮರೆತಿದ್ದಾರೆ’ ಎಂದು ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಬೇಸರ ವ್ಯಕ್ತಪಡಿಸಿದರು.
ನಗರದದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ತಮಗೆ ಯಾವುದೇ ಸ್ಥಾನ ಬೇಡ ಎಂದು ಹೇಳಿಕೊಂಡಿದ್ದ ರಮೇಶ್‍ಕುಮಾರ್ ಈಗ ಎಂಎಲ್‍ಸಿ ಆಗಲು ಸಿದ್ದರಾಮಯ್ಯ ಅವರ ಹಿಂದೆ ಬಿದ್ದಿದ್ದಾರೆ. ಈ ಮಹಾನುಭಾವನನ್ನು ನಂಬಿ ನಾನು ಮೋಸ ಹೋದೆ. ಈತ ಬರೀ ಸ್ವಾಮಿ ಅಲ್ಲ; ಮಹಾಸ್ವಾಮಿ’ ಎಂದು ಲೇವಡಿ ಮಾಡಿದರು.
‘ಇವರಿಗಿಂತ ಮೊದಲು ಶಾಸಕನಾದವನು ನಾನು. ಹಿಂದೆ ಸಂಪುಟದಲ್ಲಿ ಸಚಿವನಾಗಿದ್ದೆ. ಈ ಮಹಾಸ್ವಾಮಿಗೆ ಸ್ಥಾನ ಸಿಗಲಿಲ್ಲ. ಒಕ್ಕಲಿಗ ಸಚಿವನಾದ, ಬ್ರಾಹ್ಮಣನಾಗಿ ತನಗೆ ಅವಕಾಶ ಸಿಗಲಿಲ್ಲವೆಂದು ಅಂದೇ ಒಳಗೊಳಗೆ ದ್ವೇಷ ಕಾರತೊಡಗಿದರು’ ಎಂದು ಕಿಡಿಕಾರಿದರು.
‘ಕ್ಷೇತ್ರ ತ್ಯಾಗ ಮಾಡಲು ಸಿದ್ಧನಿದ್ದ ನನಗೆ ಸಿದ್ದರಾಮಯ್ಯ ವರುಣಾ ಕ್ಷೇತ್ರಕ್ಕೆ ಹೋದಾಗ ಅವಕಾಶ ನೀಡಬೇಕಾಗಿತ್ತು. ಆದರೆ, ಇವನ್ಯಾರನ್ನೋ ತಂದು ಇಲ್ಲಿ ನಿಲ್ಲಿಸಿ ಗೆಲ್ಲಿಸಬೇಕಾಗಿತ್ತಾ’ ಎಂದು ಪ್ರಶ್ನೆ ಮಾಡಿದರು.
‘ನನ್ನನ್ನು ಎಂಎಲ್‍ಸಿ ಮಾಡಿ ಮಂತ್ರಿ ಮಾಡಿದರೆ ತಪ್ಪೇನು, ಮಂತ್ರಿ ಸ್ಥಾನ ಇವರಪ್ಪನ ಆಸ್ತಿನಾ’ ಎಂದು ಪ್ರಶ್ನಿಸಿದ ಅವರು, ‘ಎಂಎಲ್‍ಸಿ ಸಿಗದಿದ್ದರೆ ಪಕ್ಷ ಬಿಡಲ್ಲ. ನಾನು ಆ ಮಟ್ಟದಲ್ಲಿ ರಾಜಕಾರಣ ಮಾಡಿಲ್ಲ. ಇಫ್ಕೋ, ಕ್ರಿಬ್ಕೋ ಮತ್ತಿತರ ಸಂಸ್ಥೆಗಳಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಕೆಲಸ ಮಾಡಿದ್ದೇನೆ, ಈಗಲೂ 7ನೇ ಬಾರಿ ಆಯ್ಕೆಯಾಗಿದ್ದೇನೆ’ ಎಂದರು.
‘ಸೋಲಿಸಿ ಬಿಟ್ಟರೆಂದು ರಮೇಶ್ ಕುಮಾರ್ ಕಣ್ಣೀರು ಹಾಕಿದರು. ಅದೆಲ್ಲಾ ಕಳ್ಳ ಕಣ್ಣೀರು’ ಎಂದು ವ್ಯಂಗ್ಯವಾಡಿದರು.
‘ಪಾತಾಳ ತಲುಪಿದ್ದ ಡಿಸಿಸಿ ಬ್ಯಾಂಕ್ ಅನ್ನು ಬ್ಯಾಲಹಳ್ಳಿ ಗೋವಿಂದಗೌಡ ಅಧಿಕಾರಕ್ಕೆ ಬಂದ ಮೇಲೆ ಒಂದು ಮಟ್ಟಕ್ಕೆ ತಂದಿದ್ದರು. ಇದೀಗ ಇದೇ ಮಹಾಸ್ವಾಮಿ ಬ್ಯಾಂಕ್ ಮುಗಿಸುತ್ತಿದ್ದಾರೆ’ ಎಂದು ಹರಿಹಾಯ್ದರು.
‘ದೇವೇಗೌಡರು ಪ್ರಧಾನ ಮಂತ್ರಿಯಂತಹ ಉನ್ನತ ಹುದ್ದೆಗೇರಿ ಗೌರವ ಉಳಿಸಿಕೊಂಡಿದ್ದರು. ಇದೀಗ ಈ ಪ್ರಜ್ವಲ್, ರೇವಣ್ಣ ಅವರ ಪತ್ನಿ ಸೇರಿ ಅವರ ಗೌರವಕ್ಕೆ ಮಸಿ ಬಳಿದರು' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.