ಕೋಲಾರ: ಕೆಸಿ ವ್ಯಾಲಿ ನೀರಿನ ಹರಿವು ಅಕ್ಟೋಬರ್ ಅಂತ್ಯಕ್ಕೆ 100 ಎಂಎಲ್‍ಡಿ ಹೆಚ್ಚಳವಾಗಲಿದೆ. ಡಿಸೆಂಬರ್ ಅಂತ್ಯದೊಳಗೆ 600 ಎಂಎಲ್‍ಡಿ ನೀರು ಹರಿಯುವ ಸಾಧ್ಯತೆ ಇದೆ. ಜಿಲ್ಲೆಯ ಎಲ್ಲ ಕೆರೆ ತುಂಬಿದಲ್ಲಿ ಅಂತರ್ಜಲ ವೃದ್ಧಿಗೆ ಸಹಕಾರಿಯಾಗಲಿದೆ ಎಂದು ಶಾಸಕ ಕೆ.ಆರ್. ರಮೇಶ್ ಕುಮಾರ್ ಹೇಳಿದರು.
ತಾಲ್ಲೂಕಿನ ಎಸ್ ಅಗ್ರಹಾರ ಕೆರೆಗೆ ಭಾನುವಾರ ಬಾಗಿನ ಅರ್ಪಿಸಿ ಮಾತನಾಡಿದರು.
ಯರಗೋಳು ಯೋಜನೆ ಮುಕ್ತಾಯ ಹಂತದಲ್ಲಿದೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಲಿದೆ ಎಂದು ತಿಳಿಸಿದರು.
ಎತ್ತಿನಹೊಳೆ ಕಾಮಗಾರಿ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಕಾಣುತ್ತಿಲ್ಲ. ನೀರು ಸಂಗ್ರಹ, ಭೂ ಸ್ವಾಧೀನಕ್ಕೆ ರೈತರಿಗೆ ಪರಿಹಾರದಲ್ಲಿ ತಾರತಮ್ಯ ಇದೆ. ಏಕರೂಪ ದರ ನಿಗದಿ ಮಾಡಲು ವಿಳಂಬವಾಗಿದೆ. ವರ್ಷಕ್ಕೆ 24 ಟಿಎಂಸಿ ನೀರು ಬರುತ್ತದೆ. ಕೆಸಿ ವ್ಯಾಲಿ ಮೊದಲ ಹಂತ 126 ಕೆರೆ ಎರಡನೇ ಹಂತ 225 ಕೆರೆಗೆ ನೀರು ಬರುತ್ತದೆ ಎಂದರು.
ಕೆರೆಗಳಲ್ಲಿ ನೀರು ತುಂಬುವುದರಿಂದ ಪ್ರವಾಸಿ ತಾಣವಾಗಿಸಲು ಹೆಚ್ಚಿನ ಅನುಕೂಲಗಳಿವೆ. ರೈತರು ಕೆರೆಗಳು ತುಂಬುವವರೆಗೂ ತಾಳ್ಮೆಯಿಂದ ಇರಬೇಕು. ಮೊದಲು ಕೆರೆಗಳಿಗೆ ನೀರು ತುಂಬಿಸಿ ಅಂತರ್ಜಲ ವೃದ್ಧಿಗೆ ಕ್ರಮವಹಿಸಬೇಕು. ಕೈಗಾರಿಕೆ ತ್ಯಾಜ್ಯ ನೀರು ಹೆಚ್ಚಿನ ಶುದ್ಧೀಕರಣ ಅಗತ್ಯ. ಆದರೆ ಕೆಸಿ ವ್ಯಾಲಿ ಗೃಹ ಬಳಕೆ ನೀರು. ಅದನ್ನು ಶುದ್ಧೀಕರಿಸಿಯೇ ಬಿಡಲಾಗಿದೆ. ಇದರ ಬಳಕೆಗೆ ಯಾವುದೇ ಅಡ್ಡಿಯಿಲ್ಲ ಎಂದರು.
ಶಾಸಕ ಕೆ.ಶ್ರೀನಿವಾಸಗೌಡ ಮಾತನಾಡಿ, ಕೆಸಿ ವ್ಯಾಲಿ ನೀರು ಶುದ್ಧವಿಲ್ಲ. ಎಂದು ಅಪಪ್ರಚಾರ ಮಾಡಿದರು, ನೀರು ಹರಿಸುವುದಕ್ಕೆ ತಡೆಯೊಡ್ಡಲು ಕೋರ್ಟ್‌ಗಳಿಗೆ ಹೋದರು. ನಾನು ಅದೇ ನೀರನ್ನು ಎಲ್ಲರ ಮುಂದೆ ಕುಡಿದೆ ಏನೂ ಆಗಲಿಲ್ಲ, ಈ ನೀರಿನಿಂದ ರೈತರಿಗೆ ಅನುಕೂಲವಾಗಿದೆ, ಅಂತರ್ಜಲ ವೃದ್ಧಿಯಾಗಿದೆ. ಕೆಸಿ ವ್ಯಾಲಿ ನೀರಿನಿಂದ ಜಿಲ್ಲೆಯ ಅನೇಕ ಕೆರೆಗಳು ತುಂಬಲಿವೆ ಈಗಾಗಲೇ ಕೋಲಾರ ತಾಲ್ಲೂಕಿನ ಸಾಕಷ್ಟು ಕೆರೆಗಳು ತುಂಬಿ ಹರಿಯುತ್ತಿವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.