ಕೋಲಾರ: ಕೆ.ಸಿ.ವ್ಯಾಲಿ ಯೋಜನೆ ನೀರನ್ನು ನರಸಾಪುರ ಕೆರೆಯಿಂದ ತಾಲ್ಲೂಕಿನ ಅಮ್ಮೇರಹಳ್ಳಿ ಕೆರೆಗೆ ಹರಿಸಲು ಕಾಲುವೆ ದುರಸ್ತಿ ಕಾಮಗಾರಿ ಆರಂಭಿಸಲಾಗಿದೆ.
ಈಗಾಗಲೇ 3 ಮಾರ್ಗದಲ್ಲಿ ನೀರು ಹರಿಯುತ್ತಿದ್ದು, ನಾಲ್ಕನೇ ಮಾರ್ಗವಾಗಿ ಕೆಂದಟ್ಟಿ ಕೆರೆ ಮೂಲಕ ಅಮ್ಮೇರಹಳ್ಳಿ ಕೆರೆಗೆ ಹರಿಸಲು ಸಿದ್ಧತೆ ಮಾಡಲಾಗುತ್ತಿದೆ. ನರಸಾಪುರ ಕೆರೆಯಲ್ಲಿ ಸಂಗ್ರಹಿಸಿ ಒಂದು ಮಾರ್ಗದಲ್ಲಿ ದೊಡ್ಡವಲ್ಲಬ್ಬಿ ಕೆರೆ ಮೂಲಕ ವೇಮಗಲ್ ಭಾಗದ ಕೆರೆಗಳಿಗೆ ಹರಿಸಲಾಗುತ್ತಿದೆ. ಈಗಾಗಲೇ 20 ಕೆರೆಗಳು ತುಂಬಿ ಹರಿಯುತ್ತಿದ್ದು, ಅಗ್ರಹಾರ ಕೆರೆಗೆ ನೀರು ಬರುತ್ತಿದೆ.
ಮತ್ತೊಂದು ಮಾರ್ಗವಾಗಿ ಸೂಲೂರು, ಪೆಂಪಿಶೆಟ್ಟಿಹಳ್ಳಿ ಮೂಲಕ ತಾಲ್ಲೂಕಿನ ವಿವಿಧ ಕೆರೆಗಳಿಗೆ ಹರಿಸಲಾಗುವುದು. ಅದೇ ರೀತಿ 40 ಎಂಎಲ್‌ಡಿ ನೀರನ್ನು ಮಾಲೂರು ಭಾಗದ ಕೆರೆಗಳಿಗೂ ಸರಬರಾಜು ಮಾಡಲಾಗುತ್ತದೆ.
ಅಮ್ಮೇರಹಳ್ಳಿ ಕೆರೆಯಲ್ಲಿ ಸಂಗ್ರಹವಾಗುವ ಮಳೆ ನೀರನ್ನು ಕೋಲಾರ ನಗರದ ಜನತೆಗೆ ಕುಡಿಯುವ ಉದ್ದೇಶಕ್ಕೆ ಪೂರೈಸಲಾಗುತ್ತಿತ್ತು. ಆದರೆ, ಅನಾವೃಷ್ಟಿ ಕಾರಣಕ್ಕೆ ಅಮ್ಮೇರಹಳ್ಳಿ ಕೆರೆ ಕಳೆದೊಂದು ದಶಕದಿಂದ ಭರ್ತಿಯಾಗಿಲ್ಲ. ಹೀಗಾಗಿ ಕೆರೆಗೆ ಕೆ.ಸಿ ವ್ಯಾಲಿ ಯೋಜನೆ ನೀರು ಹರಿಸಿ ಸುತ್ತಮುತ್ತಲಿನ ರೈತರಿಗೆ ಅನುಕೂಲ ಮಾಡಿಕೊಡಲು ಸರ್ಕಾರ ಯೋಜನೆ ರೂಪಿಸಿದೆ. ಈ ಹಿನ್ನೆಲೆಯಲ್ಲಿ ಮಡೇರಹಳ್ಳಿ ಕೆರೆಯಿಂದ ಅಮ್ಮೇರಹಳ್ಳಿ ಕೆರೆವರೆಗಿನ ನೀರಿನ ಕಾಲುವೆಯನ್ನು ದುರಸ್ತಿ ಮಾಡಲಾಗುತ್ತಿದೆ.
‘ನರಸಾಪುರ ಕೆರೆಯಿಂದ ಪಂಪ್ ಮೂಲಕ ನೀರು ಮೇಲೆತ್ತಿ ನಂತರ ಚುಂಚದೇನಹಳ್ಳಿ, ಮಡೇರಹಳ್ಳಿ ಹಾಗೂ ಅಮ್ಮೇರಹಳ್ಳಿ ಕೆರೆಗೆ ಹರಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದ್ದು, ಆ.25ರಿಂದ ನೀರು ಹರಿಸಲಾಗುವುದು’ ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ನಗರಕ್ಕೆ ನೀರು ಬಿಡುವುದಿಲ್ಲ: ‘ಅಮ್ಮೇರಹಳ್ಳಿ ಕೆರೆಗೆ ಸದ್ಯದಲ್ಲೇ ಕೆ.ಸಿ ವ್ಯಾಲಿ ನೀರು ಬರಲಿದೆ. ಹೀಗಾಗಿ ಇನ್ನು ಮುಂದೆ ಅಮ್ಮೇರಹಳ್ಳಿ ಕೆರೆಯಿಂದ ಕೋಲಾರ ನಗರಕ್ಕೆ ಕುಡಿಯುವುದಕ್ಕಾಗಿ ನೀರು ಬಿಡುವುದಿಲ್ಲ. ಕೆರೆಯ ಸುತ್ತಮುತ್ತ ಕೊರೆದಿರುವ ಕೊಳವೆ ಬಾವಿಗಳ ನೀರನ್ನು ನಗರಕ್ಕೆ ಮನೆ ಬಳಕೆಗೆ ಪೂರೈಸಲು ವ್ಯವಸ್ಥೆ ಮಾಡಲಾಗುವುದು’ ಎಂದು ಶಾಸಕ ಕೆ.ಶ್ರೀನಿವಾಸಗೌಡಹೇಳಿದರು.
‘ಇದೇ ನೀರನ್ನು ಕೋಲಾರಮ್ಮ ಕೆರೆಗೂ ಬಿಡಲಾಗುವುದು. ಕೆರೆಗೆ ನೀರು ಹರಿಸಿ ಅಲ್ಲಿ ಮಕ್ಕಳಿಗೆ ಆಟವಾಡಲು ಅನುಕೂಲ ಆಗುವಂತೆ ಸಮೀಪದಲ್ಲೇ ಉದ್ಯಾನ ನಿರ್ಮಿಸಲಾಗುವುದು. ಒತ್ತುವರಿ ತೆರವುಗೊಳಿಸಿ ಕೆರೆಯ ಸುತ್ತಲೂ ತಂತಿ ಬೇಲಿ ಹಾಕಿ ಕೆರೆ ಸಂರಕ್ಷಿಸಲಾಗುವುದು’ ಎಂದು ವಿವರಿಸಿದರು.
ಎತ್ತಿನಹೊಳೆ ನೀರು: ಒಂದೂವರೆ ವರ್ಷದಲ್ಲಿ ಜಿಲ್ಲೆಗೆ ಎತ್ತಿನ ಹೊಳೆ ನೀರು ಬರಲಿದೆ. ಈ ನೀರಿನಲ್ಲಿ ಜಿಲ್ಲೆಯ ಆಯ್ಧ ಕೆರೆಗಳನ್ನು ತುಂಬಿಸಿ ಎಲ್ಲಾ ಪ್ರಮುಖ ಪಟ್ಟಣಗಳು ಮತ್ತು ಗ್ರಾಮಾಂತರ ಪ್ರದೇಶದ ಹಳ್ಳಿಗಳಿಗೆ ಪೈಪ್‌ಲೈನ್ ಮೂಲಕ ನೀರು ಕೊಡಲಾಗುವುದು. ಈ ಸಂಬಂಧ ಈಗಾಗಲೇ ಯೋಜನೆ ರೂಪಿಸಲಾಗಿದೆ’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.