ಕೋಲಾರ: ‘ಕೆ.ಸಿ ವ್ಯಾಲಿ ಯೋಜನೆಯಲ್ಲಿ ಗುರುತಿಸಿರುವ ಜಿಲ್ಲೆಯ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಸಂಕಲ್ಪ ಮಾಡಿದ್ದೇವೆ. ಇದಕ್ಕೆ ರೈತರು ಸಹಕಾರ ನೀಡಬೇಕು’ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಮನವಿ ಮಾಡಿದರು.
ಕೆ.ಸಿ ವ್ಯಾಲಿ ನೀರು ಹರಿಯುತ್ತಿರುವ ತಾಲ್ಲೂಕಿನ ಎಸ್.ಅಗ್ರಹಾರ ಕೆರೆ ಹಾಗೂ ಜನ್ನಘಟ್ಟ ಕೆರೆಯಂಗಳದಲ್ಲಿನ ಪಂಪ್‌ಹೌಸ್‌ಗೆ ಬುಧವಾರ ಭೇಟಿ ನೀಡಿ ಮಾತನಾಡಿ, ‘ಕೆ.ಸಿ ವ್ಯಾಲಿ ಯೋಜನೆಯಿಂದ ಮೊದಲ ಹಂತದಲ್ಲಿ ಜಿಲ್ಲೆಯ 126 ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. 2ನೇ ಹಂತದಲ್ಲಿ ಹೆಚ್ಚುವರಿಯಾಗಿ 137 ಕೆರೆಗಳಿಗೆ ನೀರು ಹರಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.
‘ರೈತರು ಕೆ.ಸಿ ವ್ಯಾಲಿ ಯೋಜನೆ ಕಾಲುವೆಯಿಂದ ಅಕ್ರಮವಾಗಿ ನೀರಿನ ಸಂಪರ್ಕ ಪಡೆದಿರುವುದರಿಂದ ಮುಂದಿನ ಕೆರೆಗಳಿಗೆ ನೀರು ಹರಿಯುತ್ತಿಲ್ಲ. ಅಕ್ರಮ ಸಂಪರ್ಕಗಳ ಕಾರಣಕ್ಕೆ ನೀರಿನ ಹರಿವು ಕಡಿಮೆಯಾಗಿದೆ. ಇದೀಗ ಈ ಎಲ್ಲಾ ಸಮಸ್ಯೆ ಬಗೆಹರಿದಿದೆ. ಎಲ್ಲಾ ತಾಲ್ಲೂಕುಗಳ ಕೆರೆಗಳಿಗೆ ನೀರು ಹರಿಸಲು ರೈತರು ಸಹಕಾರ ನೀಡಬೇಕು’ ಎಂದು ಕೋರಿದರು.
‘ಅಂತರ್ಜಲ ವೃದ್ಧಿಗಾಗಿ ಕೆ.ಸಿ ವ್ಯಾಲಿ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಈ ವೇಳೆಗಾಗಲೇ 400 ಎಂಎಲ್‌ಡಿ ನೀರು ಹರಿಸಬೇಕಿತ್ತು. ನೀರಿನ ಹರಿವು ಹೆಚ್ಚಿಸುವ ಸಂಬಂಧ ಈಗಾಗಲೇ ಮೂರ್ನಾಲ್ಕು ಸಭೆ ನಡೆಸಿದ್ದು, ಸೆಪ್ಟೆಂಬರ್ ಒಳಗೆ ನಿರೀಕ್ಷಿತ ಮಟ್ಟದಲ್ಲಿ ನೀರು ಹರಿಯಲಿದೆ’ ಎಂದು ಭರವಸೆ ನೀಡಿದರು.
ದಡ್ಡನಲ್ಲ: ‘ಕೆ.ಸಿ ವ್ಯಾಲಿ ಯೋಜನೆ ವ್ಯಾಪ್ತಿಯ ನೀರಿನ ಕಾಲುವೆಯಲ್ಲಿ ಚೆಕ್‌ಡ್ಯಾಂಗಳು ಅವೈಜ್ಞಾನಿಕವಾಗಿವೆ ಎಂದು ಅಧಿಕಾರಿಗಳು ಹೇಳುತ್ತಾರೆ. ಅಧಿಕಾರಿಗಳ ಮಾತು ನಂಬಲು ನಾನು ದಡ್ಡನಲ್ಲ. ಮಳೆ ನೀರು ಇಂಗಿಸುವ ಉದ್ದೇಶಕ್ಕೆ ಚೆಕ್‌ಡ್ಯಾಂ ನಿರ್ಮಿಸಲಾಗಿದೆ. ಇದು ತಪ್ಪಲ್ಲ. ಅಧಿಕಾರಿಗಳು ಈಗ ಚೆಕ್‌ಡ್ಯಾಂ ಒಡೆಯುತ್ತೇವೆ ಎಂದರೆ ಸಹಿಸಲ್ಲ’ ಎಂದು ಹೇಳಿದರು.
‘ಬೆಂಗಳೂರಿನಲ್ಲಿ 18 ಟಿಎಂಸಿ ಕೊಳಚೆ ನೀರು ಲಭ್ಯವಿದ್ದು, ಇದನ್ನು ಸಂಸ್ಕರಿಸಿ ಬಳಕೆ ಮಾಡಬಹುದು. ಸದ್ಯ ಕೇವಲ 4 ಟಿಎಂಸಿ ನೀರು ಸಂಸ್ಕರಿಸಿ ಬಳಸಲಾಗುತ್ತಿದೆ. ಮುಂದೆ ನೆಲಮಂಗಲ, ಮಾಗಡಿ ಪ್ರದೇಶಕ್ಕೆ ಸಂಸ್ಕರಿಸಿದ ನೀರು ನೀಡಲು ಯೋಜನೆ ರೂಪಿಸಲಾಗುವುದು’ ಎಂದು ಮಾಹಿತಿ ನೀಡಿದರು.
ಉತ್ತಮ ಕಾರ್ಯ: ‘ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಲಾಕ್‌ಡೌನ್ ಮುಂದುವರಿಸಿದರೆ ಪರಿಸ್ಥಿತಿ ಏನಾಗುತ್ತದೆ ಎಂಬುದನ್ನು ಅರಿಯಬೇಕು. ಜೀವ ಉಳಿಸಲು ಪ್ರಯತ್ನ ಮಾಡಿದ್ದೇವೆ. ಜೀವನ ರೂಪಿಸಿಕೊಳ್ಳಲು ನೆರವು ನೀಡಬೇಕಿದೆ’ ಎಂದರು.
‘ಹೊರ ರಾಜ್ಯಗಳಿಂದ ಬಂದವರಲ್ಲಿ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡಿದೆ. ಹೊರ ರಾಜ್ಯದಿಂದ ಬಂದವರ ಆರೋಗ್ಯ ತಪಾಸಣೆ ಮಾಡಿ ಕ್ವಾರಂಟೈನ್ ಮಾಡಲಾಗುತ್ತಿದೆ. ಸೋಂಕಿತರಿಗೆ ಚಿಕಿತ್ಸೆ ನೀಡಿ ಗುಣಮುಖರಾಗಿಸುವುದು ಸರ್ಕಾರದ ಜವಾಬ್ದಾರಿ’ ಎಂದು ತಿಳಿಸಿದರು.
ಸಂಸದ ಎಸ್.ಮುನಿಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಆರ್.ಚೌಡರೆಡ್ಡಿ, ವೈ.ಎ.ನಾರಾಯಣಸ್ವಾಮಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಉಪ ವಿಭಾಗಾಧಿಕಾರಿ ಸೋಮಶೇಖರ್, ತಹಶೀಲ್ದಾರ್ ಶೋಭಿತಾ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.