ADVERTISEMENT

ಗುಡ್ಡಗಾಡು ಓಟ: ಭರವಸೆ ಮೂಡಿಸಿದ ಅಭಿಷೇಕ್‌

ರಾಷ್ಟ್ರಮಟ್ಟದ ಸ್ಪರ್ಧೆಗೆ ಏಕಲವ್ಯನಂತೆ ಸಿದ್ಧತೆ l ಬೇಕಿದ ಸಹಾಯ, ತರಬೇತಿ

ಕೃಷ್ಣಮೂರ್ತಿ
Published 24 ಡಿಸೆಂಬರ್ 2022, 5:12 IST
Last Updated 24 ಡಿಸೆಂಬರ್ 2022, 5:12 IST
ಅಭಿಷೇಕ್
ಅಭಿಷೇಕ್   

ಕೆಜಿಎಫ್‌: ಮೈನಿಂಗ್ ಕಾಲೊನಿಯ ಯುವಕ ಎ. ಅಭಿಷೇಕ್‌ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಸಾಧನೆ ಮಾಡುವ ಭರವಸೆ ಮೂಡಿಸಿದ್ದಾರೆ.

ಪ್ರತಿನಿತ್ಯ ಕೆಲಸಕ್ಕಾಗಿ ಬೆಂಗಳೂರಿಗೆ ಪ್ರಯಾಣ ಮಾಡುವ ಆನಂದ್ ಭಾಸ್ಕರ್ ಅವರ ಪುತ್ರ ಅಭಿಷೇಕ್‌ ಶಾಲಾ ಮಟ್ಟದಿಂದಲೂ ಆಥ್ಲೆಟಿಕ್ ಬಗ್ಗೆ ಅತೀವ ಪ್ರೀತಿ. 7ನೇ ತರಗತಿಯಲ್ಲಿಯೇ ಅಥ್ಲೆಟಿಕ್‌ನಲ್ಲಿ ವಿಭಾಗ ಮಟ್ಟದವರೆವಿಗೂ ಭಾಗವಹಿಸಿದ್ದಾರೆ. ಪ್ರೌಢಶಾಲೆ ಓದುವಾಗ ಬೆಮಲ್‌ ಪ್ರೌಢಶಾಲೆಯನ್ನು ಪ್ರತಿನಿಧಿಸಿ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿ ಬಹುಮಾನ ಗಳಿಸಿದ್ದರು. ನಂತರ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಸಮಯದಲ್ಲಿ ಕೂಡ ಶಾಲೆಯ ಮಹತ್ವದ ಕ್ರೀಡಾ ಪ್ರತಿನಿಧಿಯಾಗಿ, ಹಲವಾರು ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ಬಿ.ಕಾಂ ವ್ಯಾಸಂಗ ಮಾಡುತ್ತಿರುವ ಅಭಿಷೇಕ್‌ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕೋಲಾರದಲ್ಲಿ ಏರ್ಪಡಿಸಿದ್ದ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ 4ನೇ ಸ್ಥಾನ ಪಡೆದಿದ್ದರು.

ADVERTISEMENT

2017 ರಲ್ಲಿ ರೋಟರಿ ಕ್ಲಬ್ ಏರ್ಪಡಿಸಿದ್ದ 10 ಕಿ.ಮೀ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಗಳಿಸಿದ್ದರು. ಈ ವರ್ಷ ನಗರದಲ್ಲಿ ನಡೆದ ಮ್ಯಾರಥಾನ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.

ಗುಡ್ಡಗಾಡು ಓಟಕ್ಕೆ ಸೀಮಿತವಾಗದ ಅಭಿಷೇಕ್‌ ಉತ್ತಮ ಫುಟ್‌ಬಾಲ್‌ ಆಟಗಾರ ಕೂಡ. ಚಾಂಪಿಯನ್ ರೀಫ್ಸ್‌ ಹೌಗ್ರೌಂಡ್ಸ್‌ ಫುಟ್‌ಬಾಲ್ ಆಟಗಾರರ ಜೊತೆ ಹಲವಾರು ಫುಟ್‌ಬಾಲ್‌ ‌ಪಂದ್ಯಗಳಲ್ಲಿ ಭಾಗವಹಿಸಿದ್ದಾರೆ.

ಮಾರ್ಗದರ್ಶನ ಅಗತ್ಯ

ನುರಿತ ಕೋಚ್‌ ಮಾರ್ಗದರ್ಶನ ಮತ್ತು ತರಬೇತಿ ಏಕಲವ್ಯನಂತೆ ಸಾಧನೆ ಮಾಡುತ್ತಿದ್ದಾರೆ. ಅಖಿಲ ಭಾರತ ಮಟ್ಟದ ಅಂತರ ವಿಶ್ವ ವಿದ್ಯಾಲಯ ಗುಡ್ಡಗಾಡು ಓಟದ ಸ್ಪರ್ಧೆಗೆ ಅಣಿಯಾಗುತ್ತಿದ್ದಾರೆ. ಜನವರಿ 10 ರಂದು ನಡೆಯಲಿರುವ ಆಯ್ಕೆ ಪ್ರಕ್ರಿಯೆಯಲ್ಲಿ ಯಶಸ್ವಿಯಾಗುವ ಭರವಸೆಯನ್ನು ಹೊಂದಿದ್ದಾರೆ. ಇವರಿಗೆ ಅಗತ್ಯ ಮಾರ್ಗದರ್ಶನ ಹಾಗೂ ಸಹಾಯ ಅಗತ್ಯವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.