ಕೆಜಿಎಫ್: ಬೆಮಲ್ ನಗರ ಸುತ್ತಮುತ್ತ ವಾಸವಿರುವ ಸಾವಿರಾರು ಕೃಷ್ಣಮೃಗಗಳಿಗೆ ಸೂಕ್ತ ವಾಸಸ್ಥಳ ಇಲ್ಲದ ಕಾರಣಕ್ಕೆ ನಾಡಿಗೆ ಬರುವ ಕೃಷ್ಣಮೃಗಗಳು ಬೀದಿ ನಾಯಿಗಳ ದಾಳಿಗೆ ಆಹುತಿಯಾಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ.
ಬೆಮಲ್ ನಗರದಿಂದ ಮೊದಲ್ಗೊಂಡು ಬಡಮಾಕನಹಳ್ಳಿ ಗ್ರಾಮದವರೆಗೆ ಇರುವ ಕಾಡಿನಲ್ಲಿ ಅಪರೂಪದ ಕೃಷ್ಣಮೃಗಗಳ ಸಂತತಿ ಬೆಳೆಯುತ್ತಲೇ ಇದೆ. ದಶಕಗಳ ಹಿಂದೆ ಅಪರೂಪಕ್ಕೆ ಕಾಣಿಸಿಕೊಳ್ಳುತ್ತಿದ್ದ ಕೃಷ್ಣಮೃಗಗಳು ಇತ್ತೀಚಿನ ದಿನಗಳಲ್ಲಿ ಬೆಮಲ್ ನಗರದ ಬೆಮಲ್ ಕಾರ್ಖಾನೆಯ ಹೆಲಿಪ್ಯಾಡ್ ಮೈದಾನದಲ್ಲಿಯೇ ಮೇಯುವುದು ಸಾಮಾನ್ಯ ಎಂಬಂತಾಗಿದೆ.
ರಾಜ್ಯದಲ್ಲಿ ಮಧುಗಿರಿ ಮತ್ತು ರಾಣಿಬೆನ್ನೂರು ಬಳಿ ಅರಣ್ಯ ಇಲಾಖೆಯು ಕೃಷ್ಣಮೃಗಗಳಿಗೆ ತಕ್ಕಮಟ್ಟಿಗೆ ಸೌಲಭ್ಯ ಕಲ್ಪಿಸಿಕೊಟ್ಟಿದೆ. ಆದರೆ, ಈ ಪ್ರದೇಶದಲ್ಲಿ ಯಾವುದೇ ಸೌಲಭ್ಯ ಕಲ್ಪಿಸಿಲ್ಲ. ಬೇಸಿಗೆಯಲ್ಲಿ ದಾನಿಗಳಿಂದ ನೀರು ಪಡೆದು ಅಲ್ಲಲ್ಲಿ ನೀರಿನ ಸಂಗ್ರಹಾಲಯ ಮಾಡುವುದನ್ನು ಬಿಟ್ಟರೆ, ಕೃಷ್ಣಮೃಗಗಳ ರಕ್ಷಣೆ ಮತ್ತು ಅವುಗಳು ಕಾಡು ಬಿಟ್ಟು ನಾಡಿನತ್ತ ಬಾರದಂತೆ ಅಥವಾ ರೈತರ ಜಮೀನಿಗೆ ದಾಳಿ ಮಾಡದಂತೆ ತಡೆಯಲು ಅರಣ್ಯ ಇಲಾಖೆ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬುದು ಸ್ಥಳೀಯರ ಆರೋಪ.
ಬಿಜಿಎಂಎಲ್ ಸೈನೈಡ್ ಗುಡ್ಡದ ಮೇಲೆ ದೂಳು ತಡೆಯಲು ಗಿಡ–ಮರಗಳನ್ನು ನೆಡುವ ಅಭಿಯಾನ ಆರಂಭವಾದ ವೇಳೆ ಕೃಷ್ಣ ಮೃಗಗಳಿಗೂ ಅರಣ್ಯಧಾಮ ನಿರ್ಮಿಸಬೇಕು ಎಂಬ ಬೇಡಿಕೆ ಬಂದಿತ್ತು. ಜಿಲ್ಲಾ ಅರಣ್ಯ ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾವ ಕೂಡ ಸಲ್ಲಿಕೆಯಾಗಿತ್ತು. ಪ್ರಸ್ತುತ ಪ್ರಸ್ತಾವ ಯಾವ ಹಂತದಲ್ಲಿದೆ ಎಂಬುದು ಈಗಿನ ಅರಣ್ಯ ಇಲಾಖೆಯ ಅಧಿಕಾರಿಗಳಿಗೂ ಮಾಹಿತಿ ಇಲ್ಲ. ಬೆಮಲ್–ಬೇತಮಂಗಲ ರಸ್ತೆಯಲ್ಲಿ ಆಗಾಗ್ಗೆ ವಾಹನಗಳಿಗೆ ಸಿಲುಕಿ ಕೃಷ್ಣಮೃಗಗಳು ಬಲಿಯಾಗುತ್ತಿವೆ. ಜೊತೆಗೆ ಬೀದಿ ನಾಯಿಗಳ ದಾಳಿಗೆ ಸಿಲುಕಿ ಸಾಯುವ ಸಂಖ್ಯೆ ಹೆಚ್ಚಾಗುತ್ತಲೇ ಇದೆ.
ಕಾಡಿನಲ್ಲಿ ನೀರಿನ ಬವಣೆ ಶುರುವಾಗುತ್ತಿದ್ದಂತೆಯೇ ಅಥವಾ ಮೇವಿನ ಬರ ಕಾಣುತ್ತಿದ್ದಂತೆಯೇ ಬೆಮಲ್ ನಗರ ಸುತ್ತಮುತ್ತ ಇರುವ ಕುಂಟೆಗಳಲ್ಲಿ ನೀರು ಕುಡಿಯಲು ಮತ್ತು ಮೇಯಲು ಕೃಷ್ಣಮೃಗಗಳು ಕಾಡಿನಿಂದ ನಾಡಿಗೆ ಬರುತ್ತಿವೆ. ಈ ಸಂದರ್ಭದಲ್ಲಿ ಅವುಗಳನ್ನು ಅಟ್ಟಿಸಿಕೊಂಡು ಹೋಗುವ ಬೀದಿ ನಾಯಿಗಳು, ಕೃಷ್ಣಮೃಗಗಳನ್ನು ಬೇಟೆಯಾಡುತ್ತಿವೆ ಎನ್ನುತ್ತಾರೆ ಪ್ರಾಣಿಪ್ರಿಯರು.
ಕೋರಮಂಡಲ್ ಬಾಲ್‌ಗಾಟ್ ಪ್ರದೇಶದಲ್ಲಿ ಗುರುವಾರ ಕೂಡ ಒಂದು ಜಿಂಕೆಯು ನಾಯಿ ದಾಳಿಗೆ ಸಿಲುಕಿ ಮೃತಪಟ್ಟಿದೆ. ತಿಂಗಳಿಗೆ ಒಂದು ಅಥವಾ ಎರಡು ಕೃಷ್ಣಮೃಗಗಳು ಶ್ವಾನಗಳ ದಾಳಿಗೆ ಬಲಿಯಾಗುತ್ತಿವೆ. ನಗರದ ತ್ಯಾಜ್ಯವನ್ನು ಬಿಜಿಎಂಎಲ್ ಪ್ರದೇಶದಲ್ಲಿ ಸುರಿಯಲಾಗುತ್ತಿದೆ. ಅದನ್ನು ತಿನ್ನಲು ಬರುವ ನಾಯಿಗಳಿಗೆ ಅಲ್ಲಿಯೇ ಮೇಯುತ್ತಿರುವ ಜಿಂಕೆಗಳು ಸುಲಭವಾಗಿ ತುತ್ತಾಗುತ್ತಿವೆ. ಅವುಗಳಿಗೆ ಸೂಕ್ತ ರಕ್ಷಣೆ ಕೊಡಬೇಕು ಎಂಬ ಬೇಡಿಕೆಗೆ ಸರ್ಕಾರ ಮನಸು ಮಾಡಿಲ್ಲ ಎಂದು ವಾಯ್ಸ್ ಫಾರ್ ವೈಲ್ಡ್ ಲೈಫ್ ಮುಖ್ಯಸ್ಥ ರಾಜಾ ಹೇಳುತ್ತಾರೆ.
ಅರಣ್ಯಧಾಮಕ್ಕೆ ಪ್ರಸ್ತಾವನೆ
ಸಲ್ಲಿಕೆ ಕೃಷ್ಣಮೃಗಗಳ ಸುರಕ್ಷತೆಗೆ ಬಡಮಾಕನಹಳ್ಳಿ ರಕ್ಷಿತ ಅರಣ್ಯಧಾಮ ಮಾಡಲು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವ ಕಳಿಸಲಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದ ಹಂತದಲ್ಲಿ ತೀರ್ಮಾನವಾಗಬೇಕಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ತಾಲ್ಲೂಕಿನ ಇನ್ನೊಂದು ಭಾಗದಲ್ಲಿ ಆಗುತ್ತಿರುವ ಆನೆ ದಾಳಿಗಳನ್ನು ತಡೆಯಲು ಸೋಲಾರ್ ಬೇಲಿ ಅಳವಡಿಸಬೇಕು ಎಂದು ಸರ್ಕಾರದ ಮೇಲೆ ಒತ್ತಡ ಹೇರಲಾಗಿತ್ತು. ಇದರಿಂದಾಗಿ ಇತ್ತೀಚಿನ ದಿನಗಳಲ್ಲಿ ಆನೆಗಳು ನೇರವಾಗಿ ನಾಡಿನೊಳಗೆ ನುಗ್ಗುವುದು ಕಡಿಮೆಯಾಗಿದೆ. ಆದರೆ ಜಿಂಕೆಗಳ ರಕ್ಷಣೆಗೆ ಒತ್ತಡಗಳು ಬಾರದ ಕಾರಣ ಸರ್ಕಾರವೂ ಮೌನಕ್ಕೆ ಶರಣಾಗಿದೆ ಎಂಬುದು ಪ್ರಾಣಿಪ್ರಿಯರ ಆರೋಪವಾಗಿದೆ.
ಕೃತಕ ಅರಣ್ಯ ಮಾಯ: ಸಂಕಷ್ಟ
ಈಚೆಗೆ ಬೆಮಲ್ ಸುತ್ತಮುತ್ತಲಿನ ಪ್ರದೇಶವನ್ನು ಕೈಗಾರಿಕೆ ಅಭಿವೃದ್ಧಿ ಮಾಡಲು ಕೆಐಎಡಿಬಿಗೆ ಹಸ್ತಾಂತರಿಸಲಾಗಿದೆ. ಇದರಿಂದಾಗಿ ಬೆಮಲ್ ಸಂಸ್ಥೆ ಬೆಳೆಸಿದ್ದ ಕೃತಕ ಅರಣ್ಯ ಮಾಯವಾಗಿದೆ. ಅದರಲ್ಲಿದ್ದ ಮರಗಳನ್ನು ಹರಾಜು ಹಾಕಿದ್ದರಿಂದ ನೂರಾರು ಎಕರೆ ಮರಗಿಡಗಳಿಂದ ಕೂಡಿದ ಜಾಗ ಇದೀಗ ಬಟಾಬಯಲಾಗಿದೆ. ತನ್ನ ಅವಾಸ ಸ್ಥಾನ ಸ್ಥಾನಪಲ್ಲಟವಾಗಿದ್ದರಿಂದ ಕೃಷ್ಣಮೃಗಗಳು ಬೆಮಲ್ ಬಿಜಿಎಂಎಲ್ ಕಾಲೊನಿಗಳಿಗೆ ಬರುತ್ತಿವೆ. ರಾಮಸಾಗರ ಕೆರೆಯವರೆಗೆ ತಮ್ಮ ವ್ಯಾಪ್ತಿಯನ್ನು ಹಿಗ್ಗಿಸಿಕೊಂಡಿವೆ ಎನ್ನುತ್ತಾರೆ ಸ್ಥಳೀಯರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.