ಕೆಜಿಎಫ್: ಬೆಳೆಯುವ ಪೈರು ಮೊಳಕೆಯಲ್ಲಿಯೇ ಎಂಬಂತೆ ನಗರದ ಬಾಲಕಿ ಎಂ.ಆರ್. ಹರ್ಷಿತ ಹಾಕಿಯಲ್ಲಿ ಭರವಸೆ ಮೂಡಿಸಿದ್ದಾರೆ.
ಬಡ ಕುಟುಂಬ ಸಂಕಷ್ಟದ ನಡುವೆ ಬೆಳೆಯುತ್ತಿರುವ ಹರ್ಷಿತ ತನ್ನ ಪ್ರತಿಭೆ ಮೂಲಕ ರಾಷ್ಟ್ರೀಯ ಮಟ್ಟದ ಹಾಕಿ ತಂಡಕ್ಕೆ ಆಯ್ಕೆಯಾಗಿದ್ದಾರೆ. ಪಿಯು ಮಂಡಳಿ ಆಯೋಜಿಸುತ್ತಿರುವ ಕ್ರೀಡೆಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇತ್ತೀಚಿಗೆ ಕಲಬುರಗಿಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಆಡುವ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.
ಹೋಟೆಲ್ ಕಾರ್ಮಿಕನ ಪುತ್ರಿ ಸಣ್ಣ ವಯಸ್ಸಿನಲ್ಲಿಯೇ ಹಾಕಿಯಲ್ಲಿ ಸಾಧನೆ ಮಾಡಲು ಸಜ್ಜಾಗಿದ್ದಾರೆ.
ನಗರದ ಸಂತ ಥೆರೇಸಾ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯು ಓದುತ್ತಿರುವ ಹರ್ಷಿತ ಅವರ ತಂದೆ ಆರ್.ಮೂರ್ತಿ ರಾಬರ್ಟಸನ್‌ಪೇಟೆಯ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ತಾಯಿ ಗೀತಾ ಗೃಹಿಣಿ. ಇವರಿಬ್ಬರ ಪ್ರೋತ್ಸಾಹ ಮತ್ತು ಕೋಚ್ ಗಳಾದ ಜಾವೆದ್, ಸುರೇಶ್, ಶಿಕ್ಷಣ ಇಲಾಖೆಯ ಬಾಬು ಅವರ ಬೆಂಬಲ ಹರ್ಷಿತ ಅವರನ್ನು ಹಾಕಿಯಲ್ಲಿ ಸಾಧನೆ ಮಾಡುವ ಹುರುಪು ತುಂಬಿದೆ.
ಕೋವಿಡ್ ಸಂದರ್ಭದಲ್ಲಿ ಪ್ರೌಢಶಿಕ್ಷಣ ಕಲಿಯುವ ವೇಳೆ ರಾಜ್ಯ ಮಟ್ಟದ ಹಾಕಿ ಸ್ಪರ್ಧೆಯಲ್ಲಿ ತೋರಿದ ಪ್ರತಿಭೆಯಿಂದ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗುವ ಅವಕಾಶ ಸಿಕಿತ್ತು. ಆದರೆ ಪ್ರೌಢಶಾಲಾ ವಿದ್ಯಾರ್ಥಿನಿಯಾದ ಕಾರಣ ವಯಸ್ಸು ಕಡಿಮೆ ಎಂದು ಆಯ್ಕೆ ಆಗಿರಲಿಲ್ಲ ಎಂದು ಸಂತ ಥೆರೇಸಾ ಪಿಯು ಕಾಲೇಜು ಪ್ರಾಂಶುಪಾಲೆ ಕ್ಲಾರಾ ಡಿ ಸೋಜ ಹೇಳುತ್ತಾರೆ.
8ನೇ ತರಗತಿಗೆ ಬರುವಷ್ಟರಲ್ಲಿ ತನ್ನ ಆದ್ಯತೆಯನ್ನು ಹಾಕಿಗೆ ಬದಲಾಯಿಸಿಕೊಂಡರು. ನಗರದ ಐಡಿಯಲ್ ಸ್ಪೋರ್ಟ್ಸ್ ಅಕಾಡಮಿಯ ತರಬೇತಿಯಿಂದ ಹಾಕಿಯಲ್ಲಿ ನೈಪುಣ್ಯ ಗಳಿಸಿದ್ದಾರೆ. ಈಗ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಲು ಅಣಿ ಆಗುತ್ತಿದ್ದಾರೆ.
ಹಾಕಿಯಲ್ಲಿ ರೈಟ್ ಇನ್ನರ್ ಸ್ಥಾನದಲ್ಲಿ ಆಡುವ ಹರ್ಷಿತ ಅವರಿಗೆ ಧನರಾಜ್ ಪಿಳ್ಳೈ ಮತ್ತು ಅಲೆಕ್ಸ್ ಡಾನ್ಸಂ ಪ್ರೇರಣೆ. ಅವರಂತೆ ತಾನೂ ಕೂಡ ಹಾಕಿ ಪಟು ಆಗಬೇಕು ಎಂಬ ಆಸೆ ಹೊತ್ತಿದ್ದಾರೆ. ತನ್ನ ಎಲ್ಲಾ ಸಾಧನೆಗೆ ಅಪ್ಪ–ಅಮ್ಮ ಮತ್ತು ಕೋಚ್‌ಗಳೇ ಕಾರಣ ಎನ್ನುತ್ತಾಋಎ ಹರ್ಷಿತ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.