ADVERTISEMENT

ಕೆಜಿಎಫ್‌ | ವೇದಿಕೆಯಲ್ಲೇ ಕಣ್ಣೀರು ಹಾಕಿದ ಶಾಸಕಿ ರೂಪಕಲಾ

ಕೆಲ ಮಾಧ್ಯಮಗಳಿಂದ ತನ್ನ ವಿರುದ್ಧ ಅಪಪ್ರಚಾರ: ಎಂ. ರೂಪಕಲಾ ಆರೋಪ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2024, 16:02 IST
Last Updated 17 ಅಕ್ಟೋಬರ್ 2024, 16:02 IST
ಸಮಾರಂಭದಲ್ಲಿ ಕಣ್ಣೀರು ಹಾಕಿದ ಶಾಸಕಿ ರೂಪಕಲಾ
ಸಮಾರಂಭದಲ್ಲಿ ಕಣ್ಣೀರು ಹಾಕಿದ ಶಾಸಕಿ ರೂಪಕಲಾ   

ಕೆಜಿಎಫ್‌: ಕೆಜಿಎಫ್ ನಗರದಲ್ಲಿ ಗುರುವಾರ ಹಮ್ಮಿಕೊಂಡ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಶಾಸಕಿ ಎಂ. ರೂಪಕಲಾ ಶಶಿಧರ್ ಅವರು ಕಣ್ಣೀರು ಹಾಕಿದ ಪ್ರಸಂಗವು ಜರುಗಿತು. 

ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡುವ ವೇಳೆ, ‘ಕೆಲವು ಮಾಧ್ಯಮಗಳಲ್ಲಿ ಹೆಣ್ತನವನ್ನು ಅವಮಾನಿಸುವ ರೀತಿಯಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ. ಸುಳ್ಳು ಪ್ರಚಾರಗಳನ್ನು ಹರಡುವ ಮನಸ್ಥಿತಿಯಿಂದಾಗಿ ಹೆಣ್ಣಿನ ಗೌರವಕ್ಕೆ ಕುಂದು ಬರುತ್ತಿದೆ’ ಎಂದು ಅವರು ಗದ್ಗದಿತರಾದರು. 

ಸೀತೆ ತನ್ನ ಮಕ್ಕಳಾದ ಲವಕುಶ ಜೊತೆಗೆ ಕಾಡಿಗೆ ಹೋದಾಗ, ಮಹರ್ಷಿ ವಾಲ್ಮೀಕಿ ನೀಡಿದ ಗೌರವದ ಘಟನಾವಳಿಗಳನ್ನು  ಶಾಸಕಿ ವಿವರಿಸುತ್ತಿದ್ದರು. ಆಗ ರೂಪಕಲಾ ಅವರ ಕಣ್ಣಾಲಿಗಳಲ್ಲಿ ನೀರು ಬಂದಿತು. ಗಂಟಲು ಬಿಗಿಯಾಗಿ ಅವರ ಬಾಯಿಯಿಂದ ಪದಗಳೇ ಬರಲಿಲ್ಲ. ಆಗ ಸ್ವಲ್ಪ ಸಮಯ ಸುಧಾರಿಸಿಕೊಂಡು ಮಾತು ಮುಂದುವರಿಸಿದರು. 

ADVERTISEMENT

‘ಪ್ರಸ್ತುತ ಸಮಾಜದಲ್ಲಿ ಹೆಣ್ಣಿನ ಅಸಹಾಯಕತೆಯನ್ನು ದುರುಪಯೋಗ ಮಾಡಿಕೊಂಡು ಖುಷಿ ಪಡುವವರಿದ್ದಾರೆ. ರಾಮಾಯಣದಲ್ಲಿ ಸೀತೆ ಮತ್ತು ಮಹಾಭಾರತದಲ್ಲಿ ದ್ರೌಪದಿಯನ್ನು ಅವಮಾನ ಮಾಡಿದವರಿಗೆ ಏನು ಗತಿ ಬಂದಿದೆ ಎಂಬುದನ್ನು ಅರಿತುಕೊಳ್ಳಬೇಕು’ ಎಂದು ಹೇಳಿದರು. 

‘ಒಬ್ಬ ಹೆಣ್ಣಿಗೆ ಅವಮಾವಾದಾಗ, ಆಕೆಯ ಸಹಾಯಕ್ಕೆ ಬರುವ ತಂದೆ ಮತ್ತು ಅಣ್ಣ ಎಲ್ಲಿದ್ದಾರೆ ಎಂದು ಹುಡುಕುತ್ತಾರೆ. ಇಂದಿಗೂ ನಮ್ಮ ಸಮಾಜದಲ್ಲಿ ಈ ಪದ್ಧತಿ ಚಾಲ್ತಿಯಲ್ಲಿದೆ. ಹೆಣ್ಣಿಗೆ ಅವಮಾನ ಮಾಡುತ್ತಿದ್ದೀವಿ ಎಂಬ ಭಾವನೆ ಕೆಲ ಮಾಧ್ಯಮದವರಿಗೆ ಯಾಕೆ ಬರುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಮಾಧ್ಯಮಗಳು ಸಮಾಜ ಕಟ್ಟಬೇಕಾದ ಮಾರ್ಗದರ್ಶಕವಾಗಬೇಕು. ಉದ್ದೇಶಪೂರ್ವಕವಾಗಿ ಅಪಪ್ರಚಾರ ಮಾಡಬಾರದು. ಆದರೆ, ಕೆಲವರಿಗೆ ಅದೇ ವೃತ್ತಿಯಾಗಿರುತ್ತದೆ. ರಾಮಾಯಣದ ಪಾವಿತ್ರ್ಯತೆಯನ್ನು ಮೈಗೂಡಿಸಿಕೊಂಡು ಸಚ್ಚಾರಿತ್ರ್ಯರಾಗಬೇಕು ಎಂದು ತಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿರುವವರನ್ನು ಉದ್ದೇಶಿಸಿ ಪರೋಕ್ಷವಾಗಿ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.