ಕೋಲಾರ: ‘ಬಿಜೆಪಿಯವರು ಕಾಡುಗಳ್ಳ ವೀರಪ್ಪನ್ ವಂಶಸ್ಥರು. ವೀರಪ್ಪನ್ ಮಗಳು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರಲಿಲ್ಲವೇ? ಅಂಥವರನ್ನು ಪಕ್ಷದಲ್ಲಿಟ್ಟುಕೊಂಡು ನಮಗೆ ಉಪದೇಶ ನೀಡುತ್ತಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಟೀಕಿಸಿದ್ದಾರೆ.
‘ವೀರಪ್ಪನ್ ಹೆಂಡತಿ, ಮಗಳು ಸದ್ಯ ಯಾವ ಪಕ್ಷದಲ್ಲಿದ್ದಾರೆ? ಬಿಜೆಪಿಯಲ್ಲಿ ಅಲ್ಲವೇ? ಅಂಥವರನ್ನು ಪಕ್ಷದ ಅಭ್ಯರ್ಥಿಗಳನ್ನಾಗಿ ಮಾಡಿಕೊಂಡ ಬಿಜೆಪಿಯವರ ಆರೋಪಗಳಿಗೆ ನಾವು ಏಕೆ ಉತ್ತರ ನೀಡಬೇಕು’ ಎಂದು ಪ್ರಶ್ನಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನೂರಾರು ದಿನ ಜೈಲಿನಲ್ಲಿ ಇದ್ದವರು, ಬೇಲ್ (ಜಾಮೀನು) ಮೇಲೆ ಇರುವವರು ಬಿಜೆಪಿಯವರು’ ಎಂದರು.
‘ಮೊಸಳೆ ಕಣ್ಣೀರು ಸುರಿಸುವ ಕ್ಷುಲ್ಲಕ ಬಿಜೆಪಿ ವ್ಯಕ್ತಿಗಳಿಗೆ ಉತ್ತರ ನೀಡಬೇಕಾದ ಅವಶ್ಯ ನಮಗೆ ಇಲ್ಲ. ರಾಮಾಯಣ ಬರೆದದ್ದು ಮಹರ್ಷಿ ವಾಲ್ಮೀಕಿ ಅಲ್ಲ ಎಂದು ಬಿಜೆಪಿಯ ಮಹಾನ್ ನಾಯಕರೊಬ್ಬರು ಹೇಳಿದ್ದಾರೆ ಎಂದರೆ ಅವರ ಮನಃಸ್ಥಿತಿ ಹೇಗೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ’ ಎಂದು ಹೇಳಿದರು.
'ರಾಜ್ಯದಲ್ಲಿ ನಡೆಯಲಿರುವ ಮೂರು ಉಪ ಚುನಾವಣೆಗಳಲ್ಲಿಯೂ ನಾವೇ ಗೆಲ್ಲುತ್ತೇವೆ. ಒಂದೆರೆಡು ದಿನಗಳಲ್ಲಿ ಅಭ್ಯರ್ಥಿಗಳ ಘೋಷಣೆಯಾಗಲಿದೆ ಎಂದು ಬೈರತಿ ಸುರೇಶ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.