ಕೋಲಾರ: ಜಿಲ್ಲೆಯಲ್ಲಿ ಹೆಚ್ಚು ಕೈಗಾರಿಕಾ ಪ್ರದೇಶ ಇರುವುದರಿಂದ ಕಾರ್ಮಿಕರ ಬಹಳ ವರ್ಷಗಳ ಬೇಡಿಕೆಯಾಗಿದ್ದ ಇಎಸ್‌ಐ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಕನಸು ಕೊನೆಗೂ ನನಸಾಗುವ ಹಂತ ತಲುಪಿದೆ.
ತಾಲ್ಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ 100 ಹಾಸಿಗೆಗಳ ಕಾರ್ಮಿಕರ ರಾಜ್ಯ ವಿಮಾ (ಇಎಸ್‌ಐ) ಆಸ್ಪತ್ರೆ ನಿರ್ಮಾಣಕ್ಕೆ ಅ.29ರ ಮಂಗಳವಾರ ಬೆಳಿಗ್ಗೆ ಶಂಕುಸ್ಥಾಪನೆ ನೆರವೇರಲಿದೆ. ಅಂದು ನಡೆಯಲಿರುವ ಕಾರ್ಯಕ್ರಮದಲ್ಲಿ ನವದೆಹಲಿಯಿಂದ ಪ್ರಧಾನಿ ನರೇಂದ್ರ ಮೋದಿ ವರ್ಚುಲ್ ವೇದಿಕೆಯಲ್ಲಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್, ಸಂಸದ ಎಂ.ಮಲ್ಲೇಶ್ ಬಾಬು, ಶಾಸಕರು, ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.
₹ 120 ಕೋಟಿ ವೆಚ್ಚದ ಯೋಜನೆ ಇದಾಗಿದ್ದು, ಕೈಗಾರಿಕಾ ಪ್ರದೇಶದ ಭಾರತ್ ಪೆಟ್ರೋಲಿಯಂ ಬಳಿ ಐದು ಎಕರೆ ಪ್ರದೇಶದಲ್ಲಿ ಸುಸಜ್ಜಿತ ಆಸ್ಪತ್ರೆ ತಲೆ ಎತ್ತಲಿದೆ. 29 ತಿಂಗಳಲ್ಲಿ ಕಾಮಗಾರಿ ಮುಗಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಸ್ಥಾಪನೆಯಾದರೆ ಜಿಲ್ಲೆಯ 80 ಸಾವಿರಕ್ಕೂ ಅಧಿಕ ಕಾರ್ಮಿಕರಿಗೆ ಸಹಾಯವಾಗಲಿದೆ. ಏಕೆಂದರೆ ಜಿಲ್ಲೆಯಲ್ಲಿ ಸರ್ಕಾರದ ಯಾವುದೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲ.
ಜಿಲ್ಲೆಯಲ್ಲಿ ನರಸಾಪುರ, ವೇಮಗಲ್ ಹಾಗೂ ಮಾಲೂರು ಕೈಗಾರಿಕಾ ಪ್ರದೇಶ ಇರುವುದರಿಂದ ಇಎಸ್‌ಐ ಆಸ್ಪತ್ರೆ ನಿರ್ಮಿಸಬೇಕೆಂದು ಹಲವು ವರ್ಷಗಳ ಕೂಗು ಆಗಿದೆ. ಕಾರ್ಮಿಕರು ಅಲ್ಲದೇ, ಸಿಪಿಎಂ, ಸಿಐಟಿಯು ಸೇರಿದಂತೆ ಹಲವಾರು ಕಾರ್ಮಿಕ ಸಂಘಟನೆಗಳು ಹೋರಾಟ ನಡೆಸಿವೆ. ಆರೇಳು ವರ್ಷಗಳ ಹಿಂದೆಯೂ ಯೋಜನೆ ಮಂಜೂರು ಆಗಿದ್ದರೂ ವಿವಿಧ ಕಾರಣಗಳಿಂದ ವಿಳಂಬವಾಗಿದೆ.
‘ಐದು ಎಕರೆ ಜಾಗವನ್ನು ನೋಂದಾಯಿಸಲಾಗಿದೆ. ಕಾರ್ಮಿಕರಿಗೆ, ಅವರ ಕುಟುಂಬದವರಿಗೆ ಉಚಿತ ಚಿಕಿತ್ಸೆ ಸಿಗಲಿದೆ. ವಿಶೇಷ ಯೋಜನೆಯಡಿ ಇತರರು ನಿಗದಿತ ಶುಲ್ಕ ನೀಡಿ ಚಿಕಿತ್ಸೆ ಪಡೆಯಬಹುದು. ಆಸ್ಪತ್ರೆ ನಿರ್ಮಾಣಕ್ಕೆ ₹ 120 ಕೋಟಿ ಅನುದಾನ ನಿಗದಿಪಡಿಸಿದ್ದು, ಹಂತಹಂತವಾಗಿ ಬಿಡುಗಡೆಯಾಗಲಿದೆ’ ಎಂದು ಕೇಂದ್ರ ಸರ್ಕಾರದ ಕಾರ್ಮಿಕ ರಾಜ್ಯ ವಿಮಾ ನಿಗಮದ (ಇಎಸ್‌ಐಸಿ) ಜಿಲ್ಲಾ ಅಧೀಕ್ಷಕ ಕೆಜಿಎಫ್‌ನ ರವಿ ಚಂದ್ರಶೇಖರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಕೇಂದ್ರ ಹಾಗೂ ರಾಜ್ಯ ಸಹಯೋಗದಲ್ಲಿ ಕೈಗೆತ್ತಿಗೊಂಡಿರುವ ಯೋಜನೆ ಇದಾಗಿದೆ. 29ರಂದು ಬೆಂಗಳೂರು ಗ್ರಾಮಾಂತರದ ಬೊಮ್ಮಸಂದ್ರದಲ್ಲಿ ಕೂಡ 100 ಹಾಸಿಗೆಗಳ ಇಎಸ್ಐ ಆಸ್ಪತ್ರೆ ಸ್ಥಾಪನೆಗೆ ಶಂಕುಸ್ಥಾಪನೆ ನಡೆಯಲಿದೆ. ಅದನ್ನೂ ಪ್ರಧಾನಿ ಮೋದಿ ವರ್ಚುವಲ್ ವೇದಿಕೆಯಲ್ಲಿ ಉದ್ಘಾಟಿಸಲಿದ್ದಾರೆ. ರಾಮನಗರ ಜಿಲ್ಲೆಯ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲೂ ಇಎಸ್‌ಐ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಬೇಕಿತ್ತು. ಆದರೆ, ಉಪಚುನಾವಣಾ ನೀತಿ ಸಂಹಿತೆ ಕಾರಣ ಅದು ನೆರವೇರುತ್ತಿಲ್ಲ ಎಂಬುದು ಗೊತ್ತಾಗಿದೆ.
ಇಎಸ್‌ಐ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇದಾಗಿದ್ದು ಎಲ್ಲಾ ತರಹದ ಚಿಕಿತ್ಸಾ ಸೌಲಭ್ಯ ಇರಲಿದೆ. 29 ತಿಂಗಳಲ್ಲಿ ಕಾಮಗಾರಿ ಮುಗಿಯಲಿದೆ. ಕಾರ್ಮಿಕರಿಗೆ ಕುಟುಂಬದವರಿಗೆ ಉಚಿತ ಚಿಕಿತ್ಸೆ ಸಿಗಲಿದೆರವಿ ಚಂದ್ರಶೇಖರ್, ಜಿಲ್ಲಾ ಅಧೀಕ್ಷಕ ಕಾರ್ಮಿಕ ರಾಜ್ಯ ವಿಮಾ ನಿಗಮ ಕೆಜಿಎಫ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.