ADVERTISEMENT

ಕೋಲಾರ: ದುರಸ್ತಿಗೆ ಕಾದಿವೆ 900 ಶಾಲಾ ಕೊಠಡಿ!

ಜಿಲ್ಲೆಯ ಹಲವು ಶಾಲೆಗಳಲ್ಲಿ ಗೋಡೆ ಬಿರುಕು, ಕಿತ್ತು ಹೋಗಿರುವ ಚಾವಣಿ, ಮಳೆ ಬಂದರು ಕೊಠಡಿಯಲ್ಲಿ ನೀರು

ಕೆ.ಓಂಕಾರ ಮೂರ್ತಿ
Published 19 ಜೂನ್ 2024, 6:38 IST
Last Updated 19 ಜೂನ್ 2024, 6:38 IST
ಕೋಲಾರದ ಗಾಂಧಿನಗರದಲ್ಲಿ ಶಿಥಿಲಗೊಂಡಿರುವ ಸರ್ಕಾರಿ ಶಾಲೆ ಕಟ್ಟಡ
ಕೋಲಾರದ ಗಾಂಧಿನಗರದಲ್ಲಿ ಶಿಥಿಲಗೊಂಡಿರುವ ಸರ್ಕಾರಿ ಶಾಲೆ ಕಟ್ಟಡ   

ಕೋಲಾರ: ಅಲ್ಲಲ್ಲಿ ಬಿರುಕು ಬಿಟ್ಟಿರುವ ಗೋಡೆಗಳು, ಸಿಮೆಂಟು ಕಿತ್ತು ಹೋಗಿರುವ ಚಾವಣಿಗಳು, ಮಳೆ ನೀರು ಸೋರಿ ಬಣ್ಣ ಮಾಸಿರುವ ಕಟ್ಟಡದ ಮುಂಭಾಗ, ಕುಸಿದು ಬಿದ್ದಿರುವ ಸಜ್ಜೆಗಳು, ಅಲ್ಲಲ್ಲಿ ಉದುರುವ ಸಿಮೆಂಟ್‌. ಬಾಗಿಲು, ಕಿಟಕಿ ಇಲ್ಲದ ಶೌಚಾಲಯಗಳು, ಇಟ್ಟಿಗೆ, ಕಲ್ಲು ಮಾಯಾವಾಗಿರುವ ಕಾಂಪೌಂಡ್‌. ಬಹಳ ವರ್ಷಗಳಿಂದ ದುರಸ್ತಿ ಕಾಣದೆ ಪಾಳು ಬಿದ್ದಿರುವ ಕೊಠಡಿಗಳು!

ಜಿಲ್ಲೆಯ ಕೆಲ ಸರ್ಕಾರಿ ಶಾಲೆಗಳಿಗೆ ಕಾಲಿಡುತ್ತಲೇ ನೂರೊಂದು ಸಮಸ್ಯೆಗಳು ಸ್ವಾಗತಿಸುತ್ತವೆ. ಆರು ತಾಲ್ಲೂಕುಗಳಿಂದ ಸುಮಾರು 900 ಶಾಲೆಗಳಲ್ಲಿ ಒಂದಿಲ್ಲೊಂದು ಸಮಸ್ಯೆ. ಸಣ್ಣ ಪ್ರಮಾಣ ಕಾಮಗಾರಿ ಹಾಗೂ ದೊಡ್ಡ ಪ್ರಮಾಣದ ಕಾಮಗಾರಿಗೆ ಕಟ್ಟಡಗಳು ಕಾದಿವೆ. ದುರಸ್ತಿ ಮತ್ತು ಮರುನಿರ್ಮಾಣದ ಕಾರ್ಯ ನಡೆಯಬೇಕಿದೆ.

ದುರಂತವೆಂದರೆ ಹಲವೆಡೆ ಅಪಾಯಕಾರಿ ಕಟ್ಟಡದಲ್ಲೇ ಪಾಠಗಳು ನಡೆಯುತ್ತಿವೆ. ಹಲವಾರು ಕನಸು ಹೊತ್ತ ಚಿಣ್ಣರು ಇದೇ ಕೊಠಡಿಗಳೊಳಗೆ ಓದುತ್ತಿದ್ದಾರೆ. ಈ ಬಗ್ಗೆ ಶಿಕ್ಷಕರೇ ಮರುಕು ವ್ಯಕ್ತಪಡಿಸುತ್ತಾರೆ. ಆದರೆ, ವಿಧಿ ಇಲ್ಲದೇ ಅಲ್ಲೇ  ಕೂರಿಸಿ ಮೇಲೆ ಕೆಳಗೆ ನೋಡುತ್ತಾ ಪಾಠ ಮಾಡುತ್ತಿದ್ದಾರೆ. ಮಕ್ಕಳು ಮನೆಗೆ ಬರುವ ವರೆಗೆ ಪೋಷಕರು ಆತಂಕದಲ್ಲೇ ಕಾಯಬೇಕಿದೆ.

ADVERTISEMENT

ಜಿಲ್ಲೆಯಲ್ಲಿ ಸುಮಾರು 1,933 ಸರ್ಕಾರಿ ಶಾಲೆಗಳಿವೆ. 1ರಿಂದ 10ನೇ ತರಗತಿಗೆ ವರೆಗೆ ಸುಮಾರು 82,810 ಮಕ್ಕಳು ಓದುತ್ತಿದ್ದಾರೆ. ಸರ್ಕಾರಿ, ಅನುದಾನಿತ, ಅನುದಾನ ರಹಿತಿ ಶಾಲೆಗಳಲ್ಲಿ ಓದುತ್ತಿರುವ ಒಟ್ಟು 2.18 ಲಕ್ಷ ಮಕ್ಕಳು ಇದ್ದಾರೆ. ಅದರಲ್ಲಿ ಮುಳಬಾಗಿಲು ಹಾಗೂ ಕೆಜಿಎಫ್‌ನಲ್ಲಿ ತಾಲ್ಲೂಕಿನಲ್ಲಿ ಹೆಚ್ಚು ಶಾಲೆಗಳು ದುರಸ್ತಿಗೆ ಕಾದಿವೆ.

ಕೋಲಾರ ನಗರದಲ್ಲಿ ಜಿಲ್ಲಾಡಳಿತ ಕಚೇರಿಗೆ ಹೋಗುವ ದಾರಿ ಸಮೀಪದಲ್ಲೇ ಇರುವ ಗಾಂಧಿನಗರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಒಮ್ಮೆ ಭೇಟಿ ಕೊಡಿ. ಸರ್ಕಾರಿ ಶಾಲೆಗಳಲ್ಲಿನ ಸಮಸ್ಯೆಯ ಕರಾಳತೆ ಬಾಗಿಲು ತೆರೆದುಕೊಳ್ಳುತ್ತದೆ.

ಮಾಸಿದ ಫಲಕದೊಂದಿಗೆ ಈ ಶಾಲೆ ತಮ್ಮನ್ನು ಸ್ವಾಗತಿಸುತ್ತದೆ. ಪರಿಶಿಷ್ಟರು, ಬಡ‌ವರು, ರೈತರ ಮಕ್ಕಳು ಈ ಶಾಲೆ ಅವಲಂಬಿಸಿದ್ದಾರೆ. ಸುಮಾರು 130 ಮಕ್ಕಳು ಈ ಶಾಲೆಯಲ್ಲಿ ಓದುತ್ತಿದ್ದಾರೆ. ಶಾಲಾ ಕೊಠಡಿಗಳ ಪರಿಸ್ಥಿತಿ ಮಾತ್ರ ಚಿಂತಾಜನಕ.

ತೀರಾ ಹದಗೆಟ್ಟಿರುವುದರಿಂದ ಶಿಕ್ಷಕರೇ ಸೇರಿಕೊಂಡು ತಮ್ಮ ಜೇಬಿನ ಹಣ ಹಾಕಿಕೊಂಡು ಒಂದಿಷ್ಟು ಗಿಲಾವ್‌ ಮಾಡಿಸಿ ಸುಣ್ಣ ಬಣ್ಣ ಮೆತ್ತಿಸಿದ್ದಾರೆ.

ಈ ಶಾಲೆಯ ಸಜ್ಜೆಗಳೇ ಕುಸಿದು ಹೋಗಿವೆ, ಸಿಮೆಂಟು ಕಿತ್ತು ಹೋಗಿರುವ ಚಾವಣಿ ಕೆಳಗೆ ಕುಳಿತು ಮಧ್ಯಾಹ್ನದ ಬಿಸಿಯೂಟ ಸವಿಯುತ್ತಾರೆ. ಬಿಸಿಯೂಟದ ಅಡುಗೆ ಮನೆ ಬಿರುಕು ಬಿಟ್ಟಿದೆ. ಸೋರುತ್ತಿವೆ ಎಂದು ಮೂರ್ನಾಲ್ಕು ಕೊಠಡಿಗಳಿಗೆ ಬೀಗ ಹಾಕಿದ್ದಾರೆ. ಎತ್ತ ಕಣ್ಣು ಹಾಯಿಸಿದರೂ ಗೋಡೆಗಳಲ್ಲಿ ಬಿರುಕು. ಹಲವಾರು ವರ್ಷಗಳಿಂದ ಇದೇ ಪರಿಸ್ಥಿತಿ ಇದ್ದರೂ ಯಾರೂ ಕೇಳುವವರು ಇಲ್ಲ. ಇನ್ನು ಶಿಕ್ಷಕರು ಏನು ಮಾಡುತ್ತಾರೆ?

ದುರಸ್ತಿಗೆ ತುರ್ತು ಕ್ರಮ ಕೈಗೊಳ್ಳಬೇಕಿದ್ದು ನಿರ್ಲಕ್ಷ್ಯ ವಹಿಸಿದರೆ ಅನಾಹುತ ಸಂಭವಿಸುವ ಅಪಾಯ ಕಣ್ಣೆದುರಿಗಿದೆ. ಇದು ಈ ಒಂದು ಶಾಲೆಯ ಪರಿಸ್ಥಿತಿ ಮಾತ್ರವಲ್ಲ; ಹಲವು ಶಾಲೆಗಳ ಕೊಠಡಿಗಳಲ್ಲಿ ಇದೇ ಹಣೆಬರಹ.

2022ರಲ್ಲಿ ನಿರಂತರ ಮಳೆಯಿಂದ ಕೋಲಾರ ತಾಲ್ಲೂಕಿನ ದೊಡ್ಡಹಸಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿಯ ಗೋಡೆ ಕುಸಿದಿತ್ತು. ಮಕ್ಕಳು ಆ ಸಂದರ್ಭದಲ್ಲಿ ಶಾಲೆಯಲ್ಲಿ ಬಚಾವ್‌ ಆದರು. ಇನ್ನು ಕೋಲಾರ ನಗರದ ಕುರುಬರಪೇಟೆ ಶಾಲೆ ಕೊಠಡಿಯೊಳಗೆ ಮಳೆ ನೀರು ಸೋರುತ್ತಿದ್ದರೂ ಪಾಠ ಮಾಡಿದ್ದು ಟೀಕೆಗೆ ಗುರಿಯಾಗಿತ್ತು. ಬಂಗಾರಪೇಟೆ ತಾಲ್ಲೂಕಿನ ಬೂದಿಕೋಟೆ ಹೋಬಳಿಯ ಗರುಡಕೆಂಪನಹಳ್ಳಿ ಸರ್ಕಾರಿ ಶಾಲೆ ಕೊಠಡಿ ಚಾವಣಿ ಶಿಥಿಲಗೊಂಡು ಸೋರುತ್ತಿದ್ದು, ನಿತ್ಯ ನೆಲ ಸ್ವಚ್ಛಗೊಳಿಸಿ ಪಾಠ ಮಾಡಲಾಗಿತ್ತು.

ಕೆಲ ಶಾಲೆಗಳು ಬಣ್ಣದ ಸ್ಪರ್ಶ ಕಂಡು ಹಲವು ವರ್ಷಗಳೇ ಕಳೆದಿವೆ. ಮಳೆಗಾಲದಲ್ಲಿ ಕೊಠಡಿಗಳ ಒಳಗಡೆ ಕಾಲಿಡಲು ಆಗುವುದಿಲ್ಲ. ಮೂಲಸೌಕರ್ಯ ವಂಚಿತ ಮತ್ತು ಶಿಥಿಲಾವಸ್ಥೆಯಲ್ಲಿರುವ ಕೊಠಡಿಗಳಲ್ಲಿ ಆತಂಕದ ವಾತಾವರಣದಲ್ಲೇ ಮಕ್ಕಳ ಆಟ–ಪಾಠ ನಡೆಯುತ್ತಿದೆ.

ದುರಸ್ತಿ ಕಾರ್ಯಗಳು ಮಳೆಗಾಲಕ್ಕೂ ಮುನ್ನವೇ ನಡೆದರೆ ಒಳಿತು ಎಂಬ ಅಭಿಪ್ರಾಯ ಸಾರ್ವಜನಿಕರದ್ದು.

ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ (ಸಿಎಸ್‌ಆರ್‌) ಜಿಲ್ಲೆಯ ಶಾಲಾ ಕೊಠಡಿಗಳನ್ನು ರಿಪೇರಿ ಮಾಡಿಸುವುದಾಗಿ ಜನಪ್ರತಿನಿಧಿಗಳು ವರ್ಷದಿಂದ ಭಾಷಣ ಮಾಡುತ್ತಲೇ ಇದ್ದಾರೆ. ಆದರೆ, ಅದು ಈಡೇರಿಲ್ಲ. ಇತ್ತ ಡಿಡಿಪಿಐ ಕೃಷ್ಣಮೂರ್ತಿ ಅವರ ಪ್ರಯತ್ನದಿಂದ ಜಿಲ್ಲೆಗೆ ಸದ್ಯದಲ್ಲೇ ₹ 6.33 ಕೋಟಿ ಅನುದಾನ ಬಿಡುಗಡೆಯಾಗುವ ನಿರೀಕ್ಷೆ ಇದ್ದು, ಒಂದಿಷ್ಟು ಶಾಲೆಗಳು ರಿಪೇರಿ ಭಾಗ್ಯ ಕಾಣುವ ಆಶಯ ಜನರದ್ದು.

ಸರ್ಕಾರಿ ಶಾಲಾ ಕಟ್ಟಡದ ಚಾವಣಿಯ ಸಿಮೆಂಟ್‌ ಕಿತ್ತು ಹೋಗಿದ್ದು ಅಪಾಯಕ್ಕೆ ಆಹ್ವಾನ ನೀಡುವಂತಿದೆ
ಶಿಥಿಲಗೊಂಡಿರುವ ಸರ್ಕಾರಿ ಶಾಲೆ ಕಟ್ಟಡದ ಅವ್ಯವಸ್ಥೆ
ಸರ್ಕಾರಿ ಶಾಲೆ ಕಟ್ಟಡದ ದುಸ್ಥಿತಿ
ಕೋಲಾರದ ಗಾಂಧಿನಗರ ಸರ್ಕಾರಿ ಶಾಲೆ ಕಟ್ಟಡದ ಚಾವಣಿಯ ಸಿಮೆಂಟ್‌ ಕಿತ್ತು ಬರುತ್ತಿದ್ದು ಅದರಡಿಯೇ ಬಿಸಿಯೂಟ ಸೇವನೆಯಲ್ಲಿ ತೊಡಗಿದ್ದ ವಿದ್ಯಾರ್ಥಿಗಳು

ಸರ್ಕಾರಿ ಶಾಲಾ ಕೊಠಡಿಗಳ ಸ್ಥಿತಿ ಅಯೋಮಯ ಅಪಾಯ‌ಕ್ಕೆ ಮುನ್ನ ಕೊಠಡಿಗಳ ದುರಸ್ತಿ ನಡೆಯುವುದೇ? ಕೆಲ ಶಾಲೆಗಳಲ್ಲಿ ದೊಡ್ಡ ಪ್ರಮಾಣ, ಕೆಲವೆಡೆ ಸಣ್ಣ ಪ್ರಮಾಣದ ದುರಸ್ತಿ ಬಾಕಿ

2024–25ನೇ ಸಾಲಿನಲ್ಲಿ ಜಿಲ್ಲೆಯ 342 ಶಾಲಾ ಕೊಠಡಿ ದುರಸ್ತಿಗೆ ಕ್ರಿಯಾ ಯೋಜನೆ

ಸಾಮಾನ್ಯ ಕ್ಷೇತ್ರ; ಶಾಲೆ; ಕೊಠಡಿ; ಅನುದಾನ (₹ ಲಕ್ಷಗಳಲ್ಲಿ) ಕೋಲಾರ; 20; 35; 54.22 ಮಾಲೂರು; 20; 23; 54.22 ಶ್ರೀನಿವಾಸಪುರ; 19; 22; 54.22 ಒಟ್ಟು; 59; 80; 1.62 (ಕೋಟಿ) ****** ಎಸ್‌ಸಿ ಕ್ಷೇತ್ರ; ಶಾಲೆ; ಕೊಠಡಿ; ಅನುದಾನ (₹ ಕೋಟಿ) ಬಂಗಾರಪೇಟೆ; 22; 56; 1.57 ಕೆಜಿಎಫ್‌; 32; 83; 1.57 ಮುಳಬಾಗಿಲು; 45; 123; 1.57 ಒಟ್ಟು; 99; 262; 4.71 (ಕೋಟಿ)

ರಿಪೇರಿಗೆ ₹ 6.33 ಕೋಟಿ ಅನುದಾನ

ಜಿಲ್ಲೆಯಲ್ಲಿ ಒಟ್ಟು 1266 ಶಾಲಾ ಕೊಠಡಿಗಳು ದುರಸ್ತಿಗೆ ಕಾದಿದ್ದವು. ಅದರಲ್ಲಿ ಕಳೆದ ವರ್ಷ 300ಕ್ಕೂ ಅಧಿಕ ಕೊಠಡಿಗಳನ್ನು ರಾಜ್ಯ ವಲಯ ಕಾರ್ಯಕ್ರಮಗಳಲ್ಲಿ ದುರಸ್ತಿ ಮಾಡಲಾಗಿದೆ. ಸದ್ಯ ಸುಮಾರು 900 ಕೊಠಡಿಗಳು ದುರಸ್ತಿಗೆ ಬಾಕಿ ಇವೆ. ಈ ಸಾಲಿನಲ್ಲಿ 342 ಶಾಲಾ ಕೊಠಡಿ ದುರಸ್ತಿಗೆ ಕ್ರಿಯಾ ಯೋಜನೆ ಸಲ್ಲಿಸಲಾಗಿದೆ. ಪರಿಶಿಷ್ಟ ಜಾತಿಯ (ಎಸ್‌ಸಿ) ಮೂರು ಕ್ಷೇತ್ರಗಳ ಶಾಲಾ ಕೊಠಡಿ ದುರಸ್ತಿಗೆ ತಲಾ ₹ 1.57 ಕೋಟಿ ಅನುದಾನ ಸಿಗಲಿದೆ. ಮೂರು ಸಾಮಾನ್ಯ ಕ್ಷೇತ್ರಗಳ ಶಾಲಾ ಕೊಠಡಿ ರಿಪೇರಿಗೆ ತಲಾ ₹ 54.22 ಲಕ್ಷ ಅನುದಾನ ಸೇರಿ ಒಟ್ಟು ₹ 6.33 ಕೋಟಿ ಲಭಿಸಲಿದೆ. ಕ್ರಿಯಾ ಯೋಜನೆ ಕಳುಹಿಸಿಕೊಟ್ಟಿದ್ದು ಆದೇಶ ಬಂದ ತಕ್ಷಣ ಕಾಮಗಾರಿ ಶುರುವಾಗಲಿದೆ –ಕೃಷ್ಣಮೂರ್ತಿ ಡಿಡಿಪಿಐ ಕೋಲಾರ

ಕೆಲವೆಡೆ ಶಿಕ್ಷಕರ ಹಣದಿಂದ ದುರಸ್ತಿ

ಜಿಲ್ಲೆಯ ಕೆಲ ಶಾಲೆಗಳಲ್ಲಿ ದುರಸ್ತಿಗೆ ಕಾದು ಸಾಧ್ಯವಾಗದ ಕಾರಣ ಶಿಕ್ಷಕರೇ ತಮ್ಮ ಹಣ ಹಾಕಿಕೊಂಡು ದುರಸ್ತಿ ಮಾಡಿಕೊಂಡಿದ್ದಾರೆ. ಬಿರುಕುಗಳಿಗೆ ಸಿಮೆಂಟ್‌ ತುಂಬುವುದು ಸುಣ್ಣ ಬಣ್ಣ ಬಳಿಸುವುದು ಕಾಂಪೌಂಡ್‌ ಶೌಚಾಲಯ ರಿಪೇರಿ ಕೆಲಸ ಮಾಡಿಸಿದ್ದಾರೆ. ಇನ್ನು ಕೆಲವೆಡೆ ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆಯಡಿ (ಸಿಎಸ್‌ಆರ್‌) ಕಟ್ಟಣ ನಿರ್ಮಾಣ ನಡೆಯುತ್ತಿದೆ. ಇನ್ನು ಕೆಲವೆಡೆ ದಾನಿಗಳು ಹಿರಿಯ ವಿದ್ಯಾರ್ಥಿಗಳು ಕೊಠಡಿ ಶೌಚಾಲಯ ನಿರ್ಮಿಸಿಕೊಟ್ಟಿದ್ದಾರೆ. ಕೋಲಾರದ ಗಾಂಧಿನಗರದ ಶಿಕ್ಷಕರೂ ಇದೇ ರೀತಿಯ ಕೆಲಸ ಮಾಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.