ADVERTISEMENT

ಶ್ರೀನಿವಾಸಪುರ: ಕನ್ನಡ ಧ್ವಜಾರೋಹಣ ಮಾಡದ್ದಕ್ಕೆ ಆಕ್ರೋಶ

ಶ್ರೀನಿವಾಸಪುರ: ಗದ್ದಲ, ಬಹಿಷ್ಕಾರದ ನಡುವೆ ಕರ್ನಾಟಕ ರಾಜ್ಯೋತ್ಸವ ಆಚರಣೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2024, 16:01 IST
Last Updated 1 ನವೆಂಬರ್ 2024, 16:01 IST
ಶ್ರೀನಿವಾಸಪುರದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಚಾಲನೆ ನೀಡಿದರು
ಶ್ರೀನಿವಾಸಪುರದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಚಾಲನೆ ನೀಡಿದರು   

ಶ್ರೀನಿವಾಸಪುರ: ಪಟ್ಟಣದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವವು ವಿವಿಧ ಕನ್ನಡ ಸಂಘಟನೆಗಳ ಮುಖಂಡರ ಗದ್ದಲ, ವಿರೋಧ, ಆಕ್ರೋಶ ಬಹಿಷ್ಕಾರದ ನಡುವೆಯೇ ನಡೆಯಿತು.

ಕರ್ನಾಟಕ ರಾಜ್ಯೋತ್ಸವ ದಿನ ಕನ್ನಡ ದ್ವಜಾರೋಹಣ ಮಾಡದಿರುವುದಕ್ಕೆ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವಿರುದ್ಧ ಕನ್ನಡ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದವು,

ಕಾರ್ಯಕ್ರಮದಲ್ಲಿ ಭುವನೇಶ್ವರಿ ದೇವಿಯ ಭಾವಚಿತ್ರ ಕೂಡ ಇಲ್ಲದಿರುವುದನ್ನು ಕಂಡ ಆಕ್ಷೇಪ ವ್ಯಕ್ತಪಡಿಸಿದವು.

ADVERTISEMENT

‘ನಾವೇ ಬೇರೆ ರಾಜ್ಯದಲ್ಲಿ ಇದ್ದೇವೆಯೇ? ತಮಗೆ ಇಷ್ಟ ಬಂದ ರೀತಿಯಲ್ಲಿ ಆಚರಣೆ ಮಾಡುವುದು ಎಷ್ಟು ಸರಿ?’ ಎಂದು ಕನ್ನ್ಡ ಸಂಘಟನೆಗಳ ಪದಾಧಿಕಾರಿಗಳು ಶಾಸಕ ವೆಂಕಟಶಿವಾರೆಡ್ಡಿ ಎದುರೇ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು. ಶಾಸಕರು ಮಧ್ಯ ಪ್ರವೇಶಿಸಿದಾಗ ಅವರ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಬಹಳಷ್ಟು ಇಲಾಖೆಗಳ ಅಧಿಕಾರಿಗಳು ಗೈರಾಗಿರುವುದರ ವಿರುದ್ಧವೂ ಬೇಸರ ವ್ಯಕ್ತಪಡಿಸಿದರು.

ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮಾತನಾಡಿ, ‘ಕನ್ನಡ ಭಾಷೆ ಉಳಿವಿಗಾಗಿ ಅನೇಕ ಮಹನೀಯರು ಹೋರಾಡಿದ್ದಾರೆ. ಅವರನ್ನು ಇಂದಿನ ಯುವ ಪೀಳಿಗೆ ನೆನೆಸಿಕೊಳ್ಳುವ ಕೆಲಸ ಮಾಡಬೇಕು. ಕರ್ನಾಟಕ ರಾಜ್ಯೋತ್ಸವ ಒಂದು ದಿನಕ್ಕೆ ಸೀಮಿತವಾಗದೇ ವರ್ಷಪೂರ್ತಿ ಆಚರಿಸುವಂತಾಗಬೇಕು’ ಎಂದರು.

‘ಶ್ರೀನಿವಾಸಪುರ ತಾಲ್ಲೂಕು ಗಡಿಪ್ರದೇಶವಾಗಿದ್ದು, ಅನೇಕ ವಿಷಯಗಳಲ್ಲಿ ಹಿಂದುಳಿದಿದೆ. ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ನಾನು ಅನೇಕ ಯೋಜನೆ ಹಮ್ಮಿಕೊಂಡಿದ್ದೇನೆ’ ಎಂದು ಹೇಳಿದರು,

‘ನನ್ನ ಈ ಚಿಂತನೆಗೆ ಕೆಲವರು ಅಡ್ಡಪಡಿಸುತ್ತಿದ್ದಾರೆ. ದಯವಿಟ್ಟು ಅಂಥ ಕೆಲಸ ಮಾಡಬೇಡಿ’ ಎಂದು ವಿನಂತಿಸಿದರು.

ಧ್ವಜಾರೋಹಣ ಕುರಿತು ತಹಶೀಲ್ದಾರ್ ಸರ್ಕಾರದ ಸುತ್ತೋಲೆ ತೋರಿಸಿದ್ದು ಅದರಲ್ಲಿ, ‘ರಾಜ್ಯಕ್ಕೆ ಪ್ರತ್ಯೇಕ ನಾಡಧ್ವಜ ಹೊಂದುವ ವಿಷಯ ಪ್ರಸ್ತುತ ಕೇಂದ್ರ ಸರ್ಕಾರದ ಮುಂದಿದೆ. ನಾಡಧ್ವಜದ ಬಗ್ಗೆ ಅಂತಿಮ ನಿರ್ಣಯ ನಿರೀಕ್ಷಿಸುವಂತೆ ತಿಳಿಸಿ ಕಡತ ಹಿಂದಿರುಗಿಸಿದೆ’ ಎಂದಿದೆ.

ಈ ವೇಳೆಯಲ್ಲಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ತಹಶೀಲ್ದಾರ್ ಜಿ.ಎನ್.ಸುಧೀಂದ್ರ, ಇಒ ಎ.ಎನ್.ರವಿ, ಬಿಇಒ ಬಿ.ಸಿ.ಮುನಿಲಕ್ಷ್ಮಯ್ಯ, ಪುರಸಭೆ ಅಧ್ಯಕ್ಷ ಬಿ.ಆರ್.ಭಾಸ್ಕರ್, ಉಪಾಧ್ಯಕ್ಷೆ ಸುನಿತಾ, ಸದಸ್ಯರಾದ ಆನಂದ್, ಎನ್‌ಎನ್‌ಆರ್ ನಾಗರಾಜ್, ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಪುರಸಭೆ ಕಂದಾಯ ನಿರೀಕ್ಷಕ ಎನ್ ಶಂಕರ್, ಪೊಲೀಸ್ ನಿರೀಕ್ಷಕ ಎಂ.ಬಿ.ಗೊರವನಕೊಳ್ಳ, ಕಾರ್ಯಕ್ರಮದ ಮುಖ್ಯ ಅತಿಥಿ ಬಿ.ಆರ್.ಶ್ರುತಿ, ಕೃಷಿ ಸಹಾಯಕ ನಿದೇರ್ಶಕ ಕೆ.ಸಿ.ಮಂಜುನಾಥ್, ಟಿಪಿಒ ವೆಂಕಟಸ್ವಾಮಿ, ಪುರಸಭೆ ನಾಮನಿದೇರ್ಶಕ ಹೇಮಂತ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.