ADVERTISEMENT

ಕೋಲಾರ: 2 ತಿಂಗಳಿಂದ ಅಂತರಗಂಗೆ ಟ್ರೆಕ್ಕಿಂಗ್‌ ಸ್ಥಗಿತ!

ಸದ್ಯದಲ್ಲೇ ಹೊಸ ರೂಪದಲ್ಲಿ ಪುನರಾರಂಭ; ಟಿಕೆಟ್‌ ಅಕ್ರಮ ತಡೆಗೆ ಅರಣ್ಯ ಇಲಾಖೆಯಿಂದ ಕ್ರಮ

ಕೆ.ಓಂಕಾರ ಮೂರ್ತಿ
Published 15 ಅಕ್ಟೋಬರ್ 2024, 6:24 IST
Last Updated 15 ಅಕ್ಟೋಬರ್ 2024, 6:24 IST
ಕೋಲಾರದ ಅಂತರಗಂಗೆ ಬೆಟ್ಟದಲ್ಲಿ ಚಾರಣ
ಕೋಲಾರದ ಅಂತರಗಂಗೆ ಬೆಟ್ಟದಲ್ಲಿ ಚಾರಣ   

ಕೋಲಾರ: ಎರಡೂವರೆ ತಿಂಗಳಿಂದ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಅಂತರಗಂಗೆ ಬೆಟ್ಟದ ಚಾರಣ (ಟ್ರೆಕ್ಕಿಂಗ್‌) ಸ್ಥಗಿತಗೊಂಡಿದ್ದು, ಪ್ರವಾಸಿಗರಿಗೆ ಭಾರಿ ನಿರಾಸೆ ಉಂಟು ಮಾಡಿದೆ.

ರಾಜ್ಯವಲ್ಲದೇ; ತಮಿಳುನಾಡು, ಕೇರಳ ಹಾಗೂ ಆಂಧ್ರಪ್ರದೇಶ ದಿಂದಲೂ ಚಾರಣಿಗರು ಈ ಸಂಬಂಧ ವಿಚಾರಿಸುತ್ತಿದ್ದು, ಕೋಲಾರ ನಗರದಲ್ಲಿ ಪ್ರವಾಸೋದ್ಯಮ ಕಲರವನ್ನು ಸ್ವಲ್ಪಮಟ್ಟಿಗೆ ತಗ್ಗಿಸಿದೆ. ಆಗಸ್ಟ್‌ 1ರಿಂದಲೇ ಸ್ಥಗಿತಗೊಂಡಿದ್ದು, ಸದ್ಯದಲ್ಲೇ ಪುನರಾರಂಭ ಮಾಡುವ ಸುಳಿವನ್ನು ಅರಣ್ಯ ಇಲಾಖೆ ನೀಡಿದೆ.

ಆನ್‌ಲೈನ್‌ ಟಿಕೆಟ್‌ ಬುಕ್ಕಿಂಗ್‌ಗೆ ಅರಣ್ಯ ಇಲಾಖೆಯೇ ‘ಅರಣ್ಯ ವಿಹಾರ’ (https://aranyavihaara.karnataka.gov.in/) ಎಂಬ ಹೊಸ ವೆಬ್‌ಸೈಟ್‌ ಅಭಿವೃದ್ಧಿಪಡಿಸಿದೆ. ಅಕ್ರಮ ತಡೆಗೆ ಆದ್ಯತೆ ನೀಡಲಾಗಿದ್ದು, ಟಿಕೆಟ್‌ನ ಕ್ಯೂಆರ್‌ ಕೋಡ್‌ ಪರೀಕ್ಷಿಸಲು ಆ್ಯಪ್‌ ಕೂಡ ರೂಪಿಸಲಾಗಿದೆ.

ADVERTISEMENT

ಈ ಹಿಂದೆಯೂ ಆನ್‌ಲೈನ್‌ನಲ್ಲಿ ಟಿಕೆಟ್‌ ಬುಕ್ಕಿಂಗ್ ಇತ್ತಾದರೂ ಹಲವಾರು ಲೋಪದೋಷಗಳಿದ್ದವು. ಅಲ್ಲದೇ, ಅಂತರಗಂಗೆ ಬೆಟ್ಟದ ಚಾರಣದ ಪ್ರವೇಶ ದ್ವಾರದಲ್ಲಿ ಕೆಲ ಗಾರ್ಡ್‌ಗಳು ಹಣ ಪಡೆದು ಚಾರಣಕ್ಕೆ ಅವಕಾಶ ನೀಡುತ್ತಿರುವ ಬಗ್ಗೆ ದೂರುಗಳು ಬಂದಿದ್ದವು. ನಕಲಿ ಟಿಕೆಟ್‌ ಬಳಸಿ ಚಾರಣಕ್ಕೆ ಹೋಗುವುದು, ಸಿಬ್ಬಂದಿಯೇ ನಕಲಿ ಟಿಕೆಟ್‌ ಮಾಡಿಸಿ ಚಾರಣಿಗರಿಗೆ ಒಳ ಹೋಗಲು ಅವಕಾಶ ನೀಡುತ್ತಿದ್ದಾರೆ ಎಂಬ ದೂರುಗಳು ಇದ್ದವು.

ಹೀಗಾಗಿ, ಚಾರಣದ ಪ್ರವೇಶ ದ್ವಾರದಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲು, ಆ್ಯಪ್‌ ಮೂಲಕ ಕ್ಯೂಆರ್ ಕೋಡ್‌ ಪರಿಶೀಲನೆ ಹಾಗೂ ಕೆಎಸ್‌ಆರ್‌ಟಿಸಿ ಮಾದರಿಯಲ್ಲಿ ಸಂಚಾರಿ ವಿಚಕ್ಷಣ ದಳ ರಚಿಸಲು ಅರಣ್ಯ ಇಲಾಖೆ ಮುಂದಾಗಿದೆ.

‘ಒಂದೆರಡು ದಿನಗಳಲ್ಲಿ ಅಂತರಗಂಗೆ ಚಾರಣ ಪುನರಾರಂಭಿಸಲಾಗುವುದು. ಈ ಬಗ್ಗೆ ಸರ್ಕಾರವೇ ಅಭಿವೃದ್ಧಿಪಡಿಸಿರುವ ವೆಬ್‌ಸೈಟ್‌ನಲ್ಲಿ ಪ್ರಕ್ರಿಯೆ ನಡೆಯುತ್ತಿದೆ. ಜಿಲ್ಲೆಯಲ್ಲಿ ಚಾರಣಿಗರಿಂದ ಸಂಗ್ರಹವಾಗುವ ಹಣ ಡಿಸಿಎಫ್‌ ಖಾತೆಗೆ ಬರಲಿದೆ. ಈ ಸಂಬಂಧ ಬ್ಯಾಂಕ್‌ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಅಲ್ಲದೇ, ಚಾರಣ ಪ್ರವೇಶದ್ವಾರದಲ್ಲಿ ಇಲಾಖೆಯಿಂದ ಅಧಿಕಾರಿಯನ್ನು ನಿಯೋಜಿಸಿ ನಿಗಾ ಇಡಲಾಗುವುದು’ ಎಂದು ಡಿಸಿಎಫ್‌ ವಿ.ಏಡುಕೊಂಡಲು ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರತಿ ದಿನ ಬೆಳಿಗ್ಗೆ ಹಾಗೂ ಸಂಜೆ ಸೇರಿ 300 ಚಾರಣಿಗರಿಗೆ ಮಾತ್ರ ಅವಕಾಶ ಇರುತ್ತದೆ. ಒಂದು ಮೊಬೈಲ್‌ ಸಂಖ್ಯೆಗೆ 10 ಟಿಕೆಟ್‌ ಬುಕ್ಕಿಂಗ್‌ಗೆ ಅವಕಾಶ ಇರುತ್ತದೆ. ಪ್ರವೇಶ ದ್ವಾರದ ಬಳಿ ಟಿಕೆಟ್‌ ಅಲ್ಲದೇ, ಆಧಾರ್‌ ಅಥವಾ ಇತರ ಗುರುತಿನ ಚೀಟಿ  ತೋರಿಸುವುದನ್ನು ಕಡ್ಡಾಯ ಮಾಡಲಾಗಿದೆ’ ಎಂದರು.

ಅಂತರಗಂಗೆ ಬೆಟ್ಟದಲ್ಲಿ ವಾರಾಂತ್ಯದ ದಿನಗಳಲ್ಲಿ ಬೆಳ್ಳಂ ಬೆಳಿಗ್ಗೆಯೇ ಚಾರಣಿಗರ ಕಲರವ ಕೇಳಿಬರುತಿತ್ತು. ಹೆಚ್ಚಿನ ಚಟುವಟಿಕೆಗಳು ನಡೆಯುತ್ತಿದ್ದವು. ಬೆಂಗಳೂರಿನಿಂದ ಐ.ಟಿ, ಬಿ.ಟಿ ಉದ್ಯೋಗಿ
ಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ವಾರಾಂತ್ಯದಲ್ಲಿ ಒಬ್ಬರಿಗೆ ₹ 450ರವರೆಗೆ ಪ್ರವೇಶ ಶುಲ್ಕ ಇತ್ತು. ಇದರಿಂದ ಅರಣ್ಯ ಇಲಾಖೆಗೆ ಹೆಚ್ಚಿನ ಆದಾಯವೂ ಬರುತಿತ್ತು. ಸ್ಥಳೀಯ ವ್ಯಾಪಾರಸ್ಥರಿಗೂ
ಲಾಭವಾಗುತಿತ್ತು. ಈಗ ಆ ಎಲ್ಲಾ ಚಟುವಟಿಕೆಗಳಿಗೆ ಬ್ರೇಕ್‌ ಬಿದ್ದಿದೆ.

ಕೋಲಾರದ ಅಂತರಗಂಗೆ ಕ್ಷೇತ್ರ

'ಅಂತರಗಂಗೆ ಬೆಟ್ಟದ ಚಾರಣ ಒಂದೆರಡು ದಿನಗಳಲ್ಲಿ ಪುನರಾರಂಭವಾಗಲಿದೆ. ಇನ್ನುಮುಂದೆ ಯಾವುದೇ ಅಕ್ರಮಕ್ಕೆ ಆಸ್ಪದ ಇರುವುದಿಲ್ಲ. ಈ ಸಂಬಂಧ ನಿಗಾ ಇಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ'

-ವಿ.ಏಡುಕೊಂಡಲು, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ, ಕೋಲಾರ

----

ಅಕ್ರಮವಾಗಿ ಚಾರಣಿಗರ ಪ್ರವೇಶ

ಬೆಟ್ಟದಲ್ಲಿ ಪಾಪರಾಜನಹಳ್ಳಿ ಕಡೆಯಿಂದ ವಾಮಮಾರ್ಗದಲ್ಲಿ ಚಾರಣಿಗರನ್ನು ಕರೆತರುವ ದೂರುಗಳಿದ್ದವು. ಕೆಲವರು ಹಣ ಪಡೆದು ಪ್ರವಾಸಿಗರನ್ನು ಕರೆ ತರುವುದು ಮಧ್ಯದಲ್ಲಿ ಬೆದರಿಕೆ ಹಾಕಿ ಹೆಚ್ಚಿನ ಮೊತ್ತ ವಸೂಲಿ ಮಾಡುವುದು ತಾವೇ ಗೈಡ್‌ಗಳು ಎಂದು ಹೇಳಿ ಕರೆತರುತ್ತಿದ್ದ ಬಗ್ಗೆ ಅರಣ್ಯ ಇಲಾಖೆಗೆ ದೂರುಗಳು ಬಂದಿವೆ. ಹೀಗಾಗಿ ಆ ಭಾಗದಲ್ಲಿ ಬೇಲಿ ನಿರ್ಮಿಸಿ ನಿಗಾ ಇಡಲು ಇಲಾಖೆಯು ಯೋಜನೆ ರೂಪಿಸಿದೆ.

ಮೂಲಸೌಲಭ್ಯ ಕೊರತೆ

ಅಂತರಗಂಗೆ ದೇಗುಲ ಬಳಿ ಪ್ರವಾಸಿಗರಿಗೆ ಮೂಲ ಸೌಲಭ್ಯದ ಕೊರತೆ ಕಾಡುತ್ತಿದೆ. ಶೌಚಾಲಯವಿದ್ದರೂ ನಿರ್ವಹಣೆ ಇಲ್ಲವಾಗಿದೆ. ವಾಹನ ನಿಲುಗಡೆಗೆ ಬೇಕಾಬಿಟ್ಟಿ ಶುಲ್ಕ ವಿಧಿಸುತ್ತಿರುವ ದೂರುಗಳಿವೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯೇ ಇಂಟರ್‌ಪ್ರಿಟೇಷನ್‌ ಸೆಂಟರ್‌ ನಿರ್ಮಿಸುತ್ತಿದ್ದು ಸದ್ಯದಲ್ಲೇ ಕಾಮಗಾರಿ ಮುಗಿಯಲಿದೆ. ಈ ಮೂಲಕ ಪ್ರವಾಸಿಗರಿಗೆ ಉತ್ತಮ ಸೌಲಭ್ಯ ಸಿಗಲಿದೆ ಎಂದು ಡಿಸಿಎಫ್‌ ವಿ.ಏಡುಕೊಂಡಲು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.