ಕೋಲಾರ: ‘ಜಿಲ್ಲೆಯಲ್ಲಿ ಸರ್ಕಾರ ಹಾಗೂ ರೈತರಿಗೆ ಸೇರಿದ 600 ಎಕರೆಗೂ ಹೆಚ್ಚು ಜಾಗ ವಕ್ಫ್‌ಗೆ ವರ್ಗಾವಣೆ ಆಗಿರುವ ದಾಖಲೆ ಲಭ್ಯವಾಗಿದ್ದು, ಇನ್ನಷ್ಟು ಮಾಹಿತಿ ಕಲೆಹಾಕಿ ರಾಜ್ಯ ಬಿಜೆಪಿ ಮುಖಂಡರ ನೇತೃತ್ವದಲ್ಲಿ ಶೀಘ್ರದಲ್ಲೇ ಅಹೋರಾತ್ರಿ ಧರಣಿ ನಡೆಸಲಾಗುವುದು’ ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಅಧಿಕಾರಿಗಳ ಮೇಲೆ ಒತ್ತಡ ತಂದು ರಾತ್ರೋರಾತ್ರಿ ವಕ್ಫ್ ಬೋರ್ಡ್‍ಗೆ ರೈತರ ಜಮೀನು, ದೇವಾಲಯ, ಸ್ಮಶಾನ, ಶಾಲೆಯ ಜಾಗಗಳ ಖಾತೆ ವರ್ಗಾವಣೆ ಮಾಡುವ ಕೆಲಸ ನಡೆಯುತ್ತಿದೆ. ಈ ಬಗ್ಗೆ ರೈತರಿಂದಲೂ ದೂರುಗಳು ಬಂದಿವೆ. ಜಿಲ್ಲೆಯ ಯಾವ ತಾಲ್ಲೂಕಿನಲ್ಲಿ ಎಷ್ಟು ಜಮೀನು ವರ್ಗಾವಣೆ ಆಗಿದೆ ಎನ್ನುವ ಬಗ್ಗೆ ಮಾಹಿತಿ ಪಡೆದು, ಪೂರ್ವಭಾವಿ ಸಭೆ ನಡೆಸಿ ಧರಣಿಗೆ ದಿನ ನಿಗದಿ ಮಾಡಲಾಗುವುದು. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ, ಛಲವಾದಿ ನಾರಾಯಣಸ್ವಾಮಿ ಅವರನ್ನು ಆಹ್ವಾನಿಸಲಾಗುವುದು’ ಎಂದರು.
‘ಜಿಲ್ಲೆಯಲ್ಲಿ ಈ ಹಿಂದೆ ಜಮೀರ್ ಪಾಷಾ ಜಿಲ್ಲಾಧಿಕಾರಿ ಆಗಿದ್ದಾಗ ವಕ್ಫ್ ಬೋರ್ಡ್‍ಗೆ ರೈತರ ಜಮೀನು ಸೇರ್ಪಡೆ ಮಾಡುವ ಕೆಲಸಕ್ಕೆ ನಡೆದಿತ್ತು. ಕೊನೆಗೆ ರಾಜಕಾರಣಕ್ಕೆ ಬಂದು ಅವರು ಸತ್ತು ಮಣ್ಣಾದರು. ಇದಾದ ಬಳಿಕ ಜನರ ಆಶೀರ್ವಾದವಿಲ್ಲದೇ ಹಿಂಬಾಗಿಲಿನಿಂದ ವಿಧಾನ ಪರಿಷತ್ ಸದಸ್ಯರಾಗಿರುವ ನಸೀರ್ ಅಹ್ಮದ್ ಅವರು ಅಕ್ರಂ ಪಾಷಾ ಅವರನ್ನು ಜಿಲ್ಲಾಧಿಕಾರಿಯನ್ನಾಗಿ ವರ್ಗಾವಣೆ ಮಾಡಿಸಿಕೊಂಡು ಸರ್ಕಾರಿ ಹಾಗೂ ರೈತರ ಜಮೀನು ಹುಡುಕಿಸಿ ವಕ್ಫ್‌ಗೆ ನೀಡುತ್ತಿದ್ದಾರೆ. ಕೋಲಾರ ಕ್ಷೇತ್ರದಲ್ಲಿ ಪಕ್ಷದ ಉಳಿದವರನ್ನು ಬದಿಗೆ ಸರಿಸಿ ಚುನಾವಣೆಗೆ ನಿಲ್ಲುವ ಇರಾದೆ ಹೊಂದಿರಬಹುದು. ಕೋಲಾರ ತಾಲ್ಲೂಕಿನಲ್ಲೇ ಈವರೆಗೆ ವಕ್ಫ್‌ಗೆ 218 ಎಕರೆ ಸೇರಿಸಿದ್ದಾರೆ’ ಎಂದು ಆರೋಪಿಸಿದರು.
‘ಯಾರು ಏನೂ ಮಾಡಲು ಆಗದು. ವಕ್ಫ್‌ಗೆ ಕಾನೂನು ತಿದ್ದುಪಡಿಯಾಗುವುದು ಶತಃಸಿದ್ಧ. ಟಿಪ್ಪು ಮತಾಂಧ ಆಗಿದ್ದಂತೆಯೇ ಸಿದ್ದರಾಮಯ್ಯ ಒಂದು ಸಮುದಾಯ ಓಲೈಕೆಗೆ ಮುಂದಾಗಿದ್ದಾರೆ. ಇಡೀ ದೇಶದಲ್ಲಿ ಕಾಂಗ್ರೆಸ್ ಮುಳುಗಿದೆ. ರಾಜ್ಯದಲ್ಲೂ ಮುಳುಗುವ ಮುನ್ನ ಎಚ್ಚೆತ್ತುಕೊಳ್ಳಿ’ ಎಂದರು.
‘ಇಷ್ಟೆಲ್ಲಾ ಜಮೀನು ವಕ್ಫ್ ಪಾಲಾಗಿದ್ದರೂ ಏನು ಮಾಡಿಲ್ಲವೆಂದು ಜಿಲ್ಲಾಧಿಕಾರಿ ಹೇಳುತ್ತಾರೆ. ಅವರು ನಕಲಿ ಜಿಲ್ಲಾಧಿಕಾರಿ. ಅವರ ಬಗ್ಗೆ ಕಾಂಗ್ರೆಸ್‌ನ ಕೆಲಸ ಶಾಸಕರೇ ಅಸಮಾಧಾನಗೊಂಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ಆಟ ಕೂಡ ನಡೆಯುತ್ತಿಲ್ಲ, ಅವರ ಸಮುದಾಯದವರಿಗೆ ಎರಡು ಎಕರೆ ಜಾಗ ನೀಡಲು ಅವರಿಗೆ ಸಾಧ್ಯವಾಗಲಿಲ್ಲ. ಜಿಲ್ಲಾಧಿಕಾರಿ ಹೇಳಿದ್ದನ್ನು ಕೇಳಿಕೊಂಡು ಕೆಲವರು ಕಿವಿಯಲ್ಲಿ ಹೂ ಇಟ್ಟುಕೊಂಡು ಬರುವುದು ಸರಿಯಲ್ಲ. ವಕ್ಫ್ ಆಸ್ತಿ ಹಿಂದೆ ಎಷ್ಟಿತ್ತು, ಈಗ ಎಷ್ಟಾಗಿದೆ ಎನ್ನುವುದನ್ನು ನೋಡಿದರೆ ಎಲ್ಲವೂ ಅರ್ಥವಾಗುತ್ತದೆ. ಮುಂದೆ ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕು. ಇದಕ್ಕೆ ಜಿಲ್ಲೆಯ ವಿವಿಧ ಸಂಘಟನೆಗಳ ಮುಖಂಡರು ಕೈ ಜೋಡಿಸಬೇಕು’ ಎಂದು ಮನವಿ ಮಾಡಿದರು.
ಮಾಜಿ ಶಾಸಕ ವೈ.ಸಂಪಂಗಿ ಮಾತನಾಡಿ, 'ಯಾವುದೇ ಸರ್ಕಾರ ಇಷ್ಟೊಂದು ಕಠೋರವಾಗಿ ನಡೆದುಕೊಂಡಿಲ್ಲ. ಜಿಲ್ಲಾಧಿಕಾರಿ ಒಂದು ಧರ್ಮಕ್ಕೆ ಸೀಮಿತವಾಗಿ ರೈತರ ಜಮೀನನ್ನು ವಕ್ಫ್ ಎಂದು ನಮೂದಿಸುತ್ತಿದ್ದಾರೆ. ಧರ್ಮಗಳ ಮಧ್ಯೆ ಸಂಘರ್ಷಕ್ಕೆ ದಾರಿ ಮಾಡಿಕೊಡುತ್ತಿದ್ದಾರೆ' ಎಂದು ಆರೋಪಿಸಿದರು.
‘ಸರ್ಕಾರದ ಕ್ರಮ ಖಂಡನೀಯ. ಇವರಿಗೆ ಸರ್ವಾಧಿಕಾರ ಕೊಟ್ಟವರು ಯಾರು? ರಾಜ್ಯ ಸರ್ಕಾರವು ಕೂಡಲೇ ಶ್ವೇತಪತ್ರ ಹೊರಡಿಸಲಿ’ ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ವಕ್ತಾರ ಎಸ್.ಬಿ.ಮುನಿವೆಂಕಟಪ್ಪ, ಪ್ರಧಾನ ಕಾರ್ಯದರ್ಶಿ ಓಂಶಕ್ತಿ ಚಲಪತಿ, ಅಪ್ಪಿ ರಾಜು, ಮುಖಂಡರಾದ ಮಾಗೇರಿ ನಾರಾಯಣಸ್ವಾಮಿ, ಅಪ್ಪಿ ನಾರಾಯಣಸ್ವಾಮಿ, ಕೆಂಬೋಡಿ ನಾರಾಯಣಸ್ವಾಮಿ, ಬಾಲಾಜಿ, ತಿಮ್ಮರಾಯಪ್ಪ, ಮಮತಮ್ಮ, ಸಿ.ಡಿ.ರಾಮಚಂದ್ರ, ಸಾ.ಮಾ.ಬಾಬು, ವೆಂಕಟೇಶ್, ಓಹಿಲೇಶ್, ಮಂಜುನಾಥ್, ಮಹೇಶ್, ಕಪಾಲಿ ಶಂಕರ್, ರಾಜೇಶ್ ಸಿಂಗ್ ಇದ್ದರು.
ಭಾರತಲ್ಲಿ ಇರುವುದು ಸಂವಿಧಾನ. ಇಲ್ಲಿ ಷರಿಯಾ ಕಾನೂನು ನಡೆಯಲ್ಲ. ಕುಮ್ಮಕ್ಕು ಕೊಡುವರು ಪಾಕಿಸ್ತಾನ ಬಾಂಗ್ಲಾದೇಶಕ್ಕೆ ಹೋಗಲಿಎಸ್.ಮುನಿಸ್ವಾಮಿ ಮಾಜಿ ಸಂಸದ
ಜಿಲ್ಲಾಧಿಕಾರಿಯದ್ದು ವಿದಾಯ ಸಂವಾದ
‘ಈಚೆಗೆ ನಡೆದ ಸಂವಾದದಲ್ಲಿ ಜಿಲ್ಲಾಧಿಕಾರಿಯು ತಮ್ಮ ಸಾಧನೆಗಳ ಬಗ್ಗೆ ಹೇಳಿಕೊಂಡಿದ್ದಾರೆ. ಅದು ಕೋಲಾರದಿಂದ ಅವರ ವಿದಾಯದ ಸಂವಾದವಾಗಿದೆ. ವಾರದಲ್ಲಿ ವರ್ಗಾವಣೆ ಆಗಲಿದ್ದಾರೆ. ಜಿಲ್ಲೆಯಲ್ಲಿ ಬೇರೆಬೇರೆ ಸಮುದಾಯದವರು ಇಷ್ಟು ಜನಸಂಖ್ಯೆ ಇದ್ದರೂ ಸಮುದಾಯ ಭವನ ಸ್ಮಶಾನ ಶಾಲೆ ಅಂಗನವಾಡಿ ಆಟದ ಮೈದಾನ ನೀಡಲು ಮಾತ್ರ ಜಾಗದ ಕೊರತೆ ಎದ್ದು ಕಾಣುತ್ತಿದೆ. 500 ಶಾಲೆಗಳು ಸೋರುತ್ತಿವೆ. ಆದರೆ 218 ಎಕರೆಯನ್ನು ಒಂದು ಸಮುದಾಯಕ್ಕೆ ನೀಡಿದ್ದಾರೆ. ಅವರಿಗೆ ನಾಚಿಕೆ ಆಗುವುದಿಲ್ಲವೇ? ಗಣಪತಿ ವಿಗ್ರಹ ಹಿಂದೂ ದೇವಾಲಯಗಳ ಮಂಟಪಗಳು ಅವರ ಕಣ್ಣಿಗೆ ಕಾಣಲಿಲ್ಲವೇ’ ಎಂದು ಮುನಿಸ್ವಾಮಿ ಪ್ರಶ್ನಿಸಿದರು.
ಕೋಲಾರಮ್ಮ ಕೆರೆಯಲ್ಲಿ ಲೂಟಿ ಆರೋಪ
‘ಕೋಲಾರಮ್ಮ ಕೆರೆ ಕಾಮಗಾರಿ ಹಾಗೂ ನಗರಸಭೆ ಉಪಕರಣ ಖರೀದಿಯಲ್ಲಿ ಲೂಟಿ ಮಾಡಿ ಮುಸ್ಲಿಂ ಸಮುದಾಯದ ಪರ ಕೆಲಸ ಮಾಡಿದ್ದೇ ಈಗಿನ ಜಿಲ್ಲಾಧಿಕಾರಿ ಸಾಧನೆ. ಬೆಂಗಳೂರಿನಿಂದ ಕರೆದುಕೊಂಡು ಬಂದು ವಿವಿಧ ಇಲಾಖೆಗಳ ಕಾಮಗಾರಿಯನ್ನು ಟೆಂಡರ್ ನೀಡಿದ್ದಾರೆ’ ಎಂದು ಮುನಿಸ್ವಾಮಿ ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.