ADVERTISEMENT

ಕಾಂಗ್ರೆಸ್-ಬಿಜೆಪಿ ಒಂದೇ ನಾಣ್ಯದ ಎರಡು ಮುಖ: ಸಿಪಿಎಂ ಕಾರ್ಯದರ್ಶಿ ನಾರಾಯಣಸ್ವಾಮಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2024, 14:37 IST
Last Updated 15 ಅಕ್ಟೋಬರ್ 2024, 14:37 IST
ಕೋಲಾರ ತಾಲ್ಲೂಕಿನ ಉಪ್ಪುಕುಂಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿದರು
ಕೋಲಾರ ತಾಲ್ಲೂಕಿನ ಉಪ್ಪುಕುಂಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿದರು   

ಕೋಲಾರ: ‘ರಾಜ್ಯದ ಕಾಂಗ್ರೆಸ್ ಮತ್ತು ಕೇಂದ್ರದ ಬಿಜೆಪಿ ಸರ್ಕಾರಗಳು ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ. ಕಾರ್ಪೊರೇಟ್ ಸಂಸ್ಥೆಗಳ ಪರವಾಗಿದ್ದು, ಅವರ ಪರವಾದ ನೀತಿಗಳ ಜಾರಿಯಿಂದ ಸಾಮಾನ್ಯ ಜನರ ಬದುಕು ದುಸ್ತರಗೊಂಡಿದೆ’ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಗಾಂಧಿನಗರ ನಾರಾಯಣಸ್ವಾಮಿ ತಿಳಿಸಿದರು.

ತಾಲ್ಲೂಕಿನ ಉಪ್ಪುಕುಂಟೆ ಗ್ರಾಮದಲ್ಲಿ ಉರಗಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿಪಿಎಂ ಶಾಖಾ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

‘ಬಡವರ, ಕಾರ್ಮಿಕರ ಹಾಗೂ ರೈತ ವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿರುವ ಸರ್ಕಾರಗಳು ಸಾಮಾನ್ಯ ಜನರ ಜೀವನವನ್ನು ಕಷ್ಟಕ್ಕೆ ದೂಡುತ್ತಿವೆ. ಕೇಂದ್ರದಲ್ಲಿ ಹತ್ತು ವರ್ಷಗಳ ಬಿಜೆಪಿಯ ನರೇಂದ್ರ ಮೋದಿ ಆಡಳಿತವು ದೇಶದಲ್ಲಿ ಬದಲಾವಣೆ ತರುವುದಾಗಿ ಹೇಳಿ ಬರೀ ಸುಳ್ಳು ಭಾಷಣೆಗಳ ಮುಖಾಂತರ ದಾರಿ ತಪ್ಪಿಸುತ್ತಿದೆ. ಇದಕ್ಕೆ ರಾಜ್ಯದ ಕಾಂಗ್ರೆಸ್ ಸರ್ಕಾರವು ಪ್ರಶ್ನಿಸುವ ಮನೋಭಾವ ಇಲ್ಲವಾಗಿದೆ’ ಎಂದು ಆರೋಪಿಸಿದರು.

ADVERTISEMENT

‘ದೇಶದಲ್ಲಿ ಕಾರ್ಮಿಕರು ಹಾಗೂ ಎಲ್ಲಾ ದುಡಿಯುವ ವರ್ಗದ ಜನರ ರಕ್ಷಣೆಗೆ ಸಿಪಿ‌ಎಂ ಪಕ್ಷವು ಬದ್ಧವಾಗಿದೆ. ಆಳುವ ಸರ್ಕಾರಗಳ ಜನ ವಿರೋಧಿ ನೀತಿಗಳ ವಿರುದ್ಧ ಹೋರಾಡಲು ಎಲ್ಲರೂ ಸಂಘಟಿತರಾಗಬೇಕು. ಸಾಮಾನ್ಯ ಜನರ ಸಬ್ಸಿಡಿಗಳನ್ನು ಕಡಿತಗೊಳಿಸಲು ಸರ್ಕಾರಗಳು ಮುಂದಾಗಿದ್ದು ಇದರ ವಿರುದ್ಧ ಧ್ವನಿಯಾಗಬೇಕು’ ಎಂದರು.

ಸಮ್ಮೇಳನದ ಧ್ವಜಾರೋಹಣವನ್ನು ಪಕ್ಷದ ಸದಸ್ಯ ಹನುಮಂತಪುರ ರಾಮಾಂಜಿನಪ್ಪ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಖಾ ಕಾರ್ಯದರ್ಶಿ ವಿ.ನಾರಾಯಣರೆಡ್ಡಿ ವಹಿಸಿದ್ದರು. ವೇದಿಕೆಯಲ್ಲಿ ಸಿಪಿಎಂ ತಾಲ್ಲೂಕು ಕಾರ್ಯದರ್ಶಿ ಟಿ.ಎಂ.ವೆಂಕಟೇಶ್, ಜಿಲ್ಲಾ ಸಮಿತಿ ಸದಸ್ಯೆ ಗಂಗಮ್ಮ, ತಾಲ್ಲೂಕು ಸಮಿತಿ ಸದಸ್ಯ ಪಿ.ವಿ ರಮಣ್, ಉಪ್ಪುಕುಂಟೆ ಗ್ರಾಮ ಪಂಚಾಯಿತಿ ಸದಸ್ಯ ಸೀನಪ್ಪ, ಗ್ರಾಮದ ಹಿರಿಯ ಮುಖಂಡ ಮುನಿವೆಂಕಟಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.