ADVERTISEMENT

ಅಧಿಕಾರಿ, ಸಿಬ್ಬಂದಿ ಮನೋಭಾವ ಬದಲಾಗಬೇಕು: ಜಿಲ್ಲಾಧಿಕಾರಿ

ಮನೋಭಾವ ಬದಲಾದರೆ ಸರ್ಕಾರಿ ಸೇವೆಗೆ ಚುರುಕು: ಸಂವಾದದಲ್ಲಿ ಜಿಲ್ಲಾಧಿಕಾರಿ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2024, 16:19 IST
Last Updated 13 ನವೆಂಬರ್ 2024, 16:19 IST
ಕೋಲಾರದಲ್ಲಿ ಬುಧವಾರ ಸಂವಾದದ ಬಳಿಕ ಜಿಲ್ಲಾಧಿಕಾರಿ ಅಕ್ರಂ ಪಾಷಾ ಅವರನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್‌ ನೇತೃತ್ವದಲ್ಲಿ ಸನ್ಮಾನಿಸಲಾಯಿತು
ಕೋಲಾರದಲ್ಲಿ ಬುಧವಾರ ಸಂವಾದದ ಬಳಿಕ ಜಿಲ್ಲಾಧಿಕಾರಿ ಅಕ್ರಂ ಪಾಷಾ ಅವರನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್‌ ನೇತೃತ್ವದಲ್ಲಿ ಸನ್ಮಾನಿಸಲಾಯಿತು    

ಕೋಲಾರ: 'ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ತಮ್ಮ ಕೆಲಸದ ಕಾರ್ಯವೈಖರಿ ಹಾಗೂ ಮನೋಭಾವ ಬದಲಾಯಿಸಿಕೊಂಡರೆ ಸಾರ್ವಜನಿಕರಿಗೆ ಸರ್ಕಾರಿ ಸೇವೆಗಳನ್ನು ತ್ವರಿತಗತಿಯಲ್ಲಿ ನೀಡಬಹುದು, ಸವಲತ್ತುಗಳನ್ನು ಸಕಾಲದಲ್ಲಿ ತಲುಪಿಸಬಹುದು’ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷಾ ಪ್ರತಿಪಾದಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಬುಧವಾರ ಆಯೋಜಿಸಿದ್ದ ಕಂದಾಯ ಇಲಾಖೆ ಕಾರ್ಯಪ್ರಗತಿ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಾನು ಜಿಲ್ಲಾಧಿಕಾರಿಯಾಗಿ ಕೋಲಾರ ಜಿಲ್ಲೆಗೆ ಬಂದಾಗ ಇದ್ದ ಸಿಬ್ಬಂದಿಯನ್ನೇ ಬಳಸಿಕೊಂಡು ಅವರ ಕಾರ್ಯವೈಖರಿ ಹಾಗೂ ಮನ ಪರಿವರ್ತನೆ ಮಾಡಿ ಕಂದಾಯ ಇಲಾಖೆಯ ಸೇವೆಗಳಲ್ಲಿ ಜಿಲ್ಲೆಯನ್ನು ಇಡೀ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿ ನಿಲ್ಲುವಂತೆ ಮಾಡಿದ್ದೇನೆ. ಕಂದಾಯ ಸಚಿವ ಕೃಷ್ಣಬೈರೇಗೌಡರ ಕಾರ್ಯವೈಖರಿಗೆ ತಕ್ಕಂತೆ ಕೆಲಸ ಮಾಡಿ ಅವರಿಂದ ಶಹಬ್ಬಾಸ್‌ಗಿರಿ ಗಿಟ್ಟಿಸಿಕೊಂಡಿದ್ದೇವೆ’ ಎಂದರು.

ADVERTISEMENT

‘ಅಧಿಕಾರಿಗಳು, ಸಿಬ್ಬಂದಿಯಲ್ಲಿ ಹಿಂದೆ ಇದ್ದ ಕೆಂಪು ಪಟ್ಟಿ (ರೆಡ್‌ ಟೇಪಿಸಂ) ಧೋರಣೆ ಬದಲಾಯಿಸಿದ್ದು, ವಿವಿಧ ಸೇವೆ ನೀಡುವುದರಲ್ಲಿ ಕೊನೆಯ ಸ್ಥಾನದಲ್ಲಿದ್ದ ಜಿಲ್ಲೆ ಈಗ ಅಗ್ರಸ್ಥಾನಕ್ಕೆ ಬಂದಿದೆ. ಅದಕ್ಕಾಗಿ ಯಾರೊಬ್ಬರಿಗೂ ಷೋಕಾಸ್‌ ನೋಟಿಸ್‌ ಕೊಟ್ಟಿಲ್ಲ, ಒಬ್ಬರನ್ನೂ ಅಮಾನತುಗೊಳಿಸಿಲ್ಲ. ಆದರೆ, ಅವರಿಂದ ಒತ್ತಡ ಹಾಕಿ ಕೆಲಸ ತೆಗೆಸಿದ್ದೇನೆ’ ಎಂದು ಹೇಳಿದರು.

‘ಕಂದಾಯ ಇಲಾಖೆಯಡಿ ಅಟಲ್ ಜನಸ್ನೇಹಿ‌ ಸೇವಾ ಕೇಂದ್ರದಲ್ಲಿ ಸಾರ್ವಜನಿಕರಿಗೆ 45 ರೀತಿಯ ಸೇವೆ ನೀಡುತ್ತೇವೆ. ವಿಳಂಬದಿಂದಾಗಿ ಹಿಂದೆ 26 ಸ್ಥಾನಕ್ಕಿಂತ ಮೇಲೆ ಹೋಗಿರಲಿಲ್ಲ. ತಿಂಗಳಿಗೆ ಕೇವಲ 20 ಸಾವಿರ ಮಂದಿಗೆ ಸೇವೆ ನೀಡಲಾಗುತಿತ್ತು. ಈಗ 50 ಸಾವಿರ ಮಂದಿಗೆ ನೀಡುತ್ತಿದ್ದು, ಶೇ 150ರಷ್ಟು ಏರಿಕೆ ಆಗಿದೆ. ಇದೊಂದು ಅದ್ಭುತ ಬದಲಾವಣೆ. ಸತತ ಎಂಟು ತಿಂಗಳಿನಿಂದ ಜಿಲ್ಲೆಯು ರಾಜ್ಯದಲ್ಲಿ ಮೊದಲ ಸ್ಥಾನ ‌ಪಡೆಯುತ್ತಿದೆ. ಸಕಾಲ ಯೋಜನೆಯಡಿ 31 ಇಲಾಖೆಗಳಲ್ಲಿ 600 ಸೇವೆಗಳಿದ್ದು, ವಿಳಂಬವಿಲ್ಲದೆ 80 ಸಾವಿರ ರೀತಿಯ ಸೇವೆಗಳನ್ನು ಸಕಾಲದಲ್ಲಿ ನೀಡುತ್ತಿದ್ದೇವೆ. 29ನೇ ಸ್ಥಾನದಲ್ಲಿದ್ದ ಜಿಲ್ಲೆ ಈಗ ಎರಡನೇ ‌ಸ್ಥಾನಕ್ಕೇರಿದೆ’ ಎಂದು ಮಾಹಿತಿ ನೀಡಿದರು.

‘ಕೇಂದ್ರ ಸರ್ಕಾರದ ಪಿಎಂ ಕಿಸಾನ್ (ರೈತರಿಗೆ ವರ್ಷಕ್ಕೆ ₹ 6000) ಯೋಜನೆಯಡಿ ಆರ್‌ಟಿ‌ಸಿಗೆ ಖಾತೆ ಜೋಡಣೆ ಶೇ 70 ಆಗಿತ್ತು‌. ಈಗ ಈ ಯೋಜನೆಯಡಿ ಶೇ 98 ಪ್ರಗತಿ ಆಗಿದ್ದು, ರೈತರ ಖಾತೆಗೆ ನೇರ ಹಣ ಹೋಗುತ್ತಿದೆ. ಫ್ರೂಟ್ಸ್ ಐಡಿ ಪರಿಷ್ಕೃತ ಮಾಡಿ ಎಲ್ಲಾ ರೈತರ ಖಾತೆ ಪರಿಷ್ಕೃತಗೊಳಿಸಲಾಗಿದೆ. ಬೆಳೆ ಹಾನಿ, ಬರಗಾಲ ಸಂಬಂಧ ಪರಿಹಾರ ಪಡೆಯಲು ಫ್ರೂಟ್ಸ್‌ ಐಡಿ ನೆರವಾಗುತ್ತದೆ. ಇದರಲ್ಲಿ ಶೇ 95 ಪ್ರಗತಿ ಆಗಿದ್ದು, ಹಿಂದೆ ರೈತರೇ ‌ಬೇರೆ, ಅವರ ಖಾತೆಯೇ ಬೇರೆ ಆಗಿರುತಿತ್ತು. ಯಾರೋ ಪರಿಹಾರ ಪಡೆಯುತ್ತಿದ್ದರು. ಈಗ ನೇರವಾಗಿ ಫಲಾನುಭವಿಗಳ ಖಾತೆಗೆ ಪರಿಹಾರ ಹೋಗುತ್ತಿದೆ’ ಎಂದರು.

‘ಜಿಲ್ಲೆಯಲ್ಲಿ 10 ಲಕ್ಷ ಆರ್‌ಟಿಸಿ ಇವೆ. ಈವರೆಗೆ 9.2 ಲಕ್ಷ ಆರ್‌ಟಿಸಿಗಳಿಗೆ ಆಧಾರ್‌ ಜೋಡಣೆ ಮಾಡಲಾಗಿದೆ.‌ ಪರಿಹಾರ ನೀಡುವಾಗ ಮಾಹಿತಿ ಸಿಗುತ್ತಿದ್ದು, ಮೋಸ ಮಾಡುವುದು ನಿಂತಿದೆ. ಜಿಲ್ಲೆ‌ಯಲ್ಲಿ ಶೇ 92 ಆಧಾರ್‌ ಜೋಡಣೆಯೊಂದಿಗೆ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ’ ಎಂದು ತಿಳಿಸಿದರು.

‘ಸರ್ಕಾರಿ ಜಮೀನು ಸಂರಕ್ಷಣೆಗೆ ಲ್ಯಾಂಡ್ ಬೀಟ್ ಯೋಜನೆ ಮಾಡಿದ್ದೇವೆ. ಗೋಮಾಳ, ಕೆರೆ ಸೇರಿದಂತೆ ಜಿಲ್ಲೆಯಲ್ಲಿ 34 ಸಾವಿರ ಸರ್ಕಾರಿ ಸ್ವತ್ತು ಇವೆ. ಈಗ ಲ್ಯಾಂಡ್ ಬೀಟ್ ಮೂಲಕ ಜಿಯೊ ಫೆನ್ಸಿಂಗ್‌ ಮಾಡಲಾಗಿದೆ. ಪೊಲೀಸರ ಬೀಟ್‌ ರೀತಿ ಕಂದಾಯ ಅಧಿಕಾರಿಗಳು ಆ್ಯಪ್ ಹಿಡಿದು ಲ್ಯಾಂಡ್ ಬೀಟ್ ಮಾಡುತ್ತಾರೆ. ಒತ್ತುವರಿ ಆಗಿದ್ದರೆ ತೆರವುಗೊಳಿಸುತ್ತಾರೆ. ಇದರಲ್ಲೂ ಜಿಲ್ಲೆ ಅಗ್ರಸ್ಥಾನದಲ್ಲಿದೆ’ ಎಂದು ನುಡಿದರು.

‘ಖಾತೆಗಳ ಬದಲಾವಣೆಯಲ್ಲಿ ವಿಳಂಬ ತಪ್ಪಿಸಲು ಸತತ ಪ್ರಯತ್ನ ಹಾಕಲಾಗಿದೆ. ತ್ವರಿತಗತಿಯಲ್ಲಿ ಖಾತೆ ಮಾಡಿಕೊಡುತ್ತಿದ್ದೇವೆ. ಕಚೇರಿಗೆ ಬಾರದೆ ಆನ್‌ಲೈನ್‌ನಲ್ಲಿಯೇ ಈ ಸೇವೆ ಪಡೆಯಬಹುದಾಗಿದೆ’ ಎಂದರು.

‘ಶಾಲೆಗಳ ದಾಖಲೆ ಅಪ್ಡೇಟ್ ಮಾಡಿದ್ದು, ರಾಜ್ಯದಲ್ಲಿ ಈ ಕಾರ್ಯ ಮಾಡಿದ ಮೊದಲ ಜಿಲ್ಲೆ ಕೂಡ. 1,953 ಶಾಲೆಗಳಿದ್ದು, ಮೂರು ತಿಂಗಳಲ್ಲಿ 1,600 ಶಾಲೆಗಳಿಗೆ ಖಾತೆ,‌ ಇ ಸೊತ್ತು, ಆರ್‌ಟಿಸಿ ಮಾಡಿಕೊಟ್ಟೆವು. ಶಿಕ್ಷಣ ಇಲಾಖೆಗೆ ಕಳುಹಿಸಿಕೊಟ್ಟಾಗ ಇದು ಮಾದರಿಯಾಗಿದ್ದು, ಇಡಿ ರಾಜ್ಯಕ್ಕೆ ವಿಸ್ತರಣೆ‌ ಮಾಡುವುದಾಗಿ ಹೇಳಿ ಅಭಿನಂದನೆ ‌ಸಲ್ಲಿಸಿದ್ದಾರೆ. 650 ಅಂಗನವಾಡಿಗಳಿಗೆ ಖಾತೆ ಮಾಡಿಕೊಟ್ಟಿದ್ದು, 400 ನಿವೇಶನ ನೀಡಲಾಗಿದೆ. ನಾಳೆ ಯಾರೂ ಒತ್ತುವರಿ ಮಾಡಬಾರದು ಎಂಬುದು ನಮ್ಮ ಉದ್ದೇಶ’ ಎಂದು ತಿಳಿಸಿದರು.

‘ಕೆಜಿಎಫ್‌ನಲ್ಲಿ ರಿಸರ್ವ್‌ ಪೊಲೀಸ್‌ಗೆ 100 ಎಕರೆ ಜಾಗ ಕೊಡಲಾಗಿದೆ. ಕೈಗಾರಿಕಾ ಪ್ರದೇಶಕ್ಕೆ ಕೆಐಎಡಿಬಿಗೆ 600 ಎಕರೆ ಜಾಗ ಕೊಡಲಾಗಿದೆ. 300 ಎಕರೆಯನ್ನು ಟೌನ್‌ಶಿಪ್‌ಗೆ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.

‘ಬಗರ್‌ ಹುಕುಂನಡಿ ಈಗ ಆನ್‌ಲೈನ್‌ನಲ್ಲಿ ಅರ್ಜಿ ಪ್ರಕ್ರಿಯೆ ನಡೆಯುತ್ತಿದೆ. ಈ ಸಂಬಂಧ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಭೂಮಂಜೂರಾತಿಗೆ 68 ಸಾವಿರ ಅರ್ಜಿಗಳು ಬಂದಿದ್ದು, ವಿವಿಧ ಕಾರಣಕ್ಕೆ 28 ಸಾವಿರ ಅರ್ಜಿ ತಿರಸ್ಕರಿಸಲಾಗಿದೆ. ಸ್ಯಾಟಲೈಟ್ ಇಮೇಜ್ ಮೂಲಕ ಎಷ್ಟು ವರ್ಷಗಳಿಂದ ಉಳುಮೆ ಮಾಡುತ್ತಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ ಭೂ ಮಂಜೂರಾತಿ ಮಾಡಬಹುದು’ ಎಂದರು.

ಸಿಬ್ಬಂದಿ ಕೊರತೆ ಬಗ್ಗೆ ಮಾತನಾಡಿ, ‘ಕಂದಾಯ ಇಲಾಖೆಯಲ್ಲಿ ಶೇ 25 ಸಿಬ್ಬಂದಿ ಕೊರತೆ ಇದೆ. ಆದರೆ, ಮನೋಭಾವ ಬದಲಾಯಿಸಿ ಇರುವ ಸಿಬ್ಬಂದಿಯಲ್ಲಿಯೇ ಕೆಲಸ ಮಾಡಿಸುತ್ತಿದ್ದೇವೆ’ ಎಂದರು.

‘ಗಾಂಧಿ ಭವನಕ್ಕೆ ಟಮಕದಲ್ಲಿ ಉಚಿತವಾಗಿ ಸಿಎ ನಿವೇಶನ ‌ಕೊಡಲಾಗುವುದು. ಈಗ ಇರುವ ಜಾಗದಲ್ಲಿ ನಿರ್ಮಿಸುವ ನಿರ್ಧಾರ ಕೈಬಿಡಲಾಗಿದೆ’ ಎಂದು ಹೇಳಿದರು.

‘ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಕ್ರಮ ವಹಿಸಲಾಗಿದೆ. ಹಿಂದೆ 6ನೇ ಸ್ಥಾನದಲ್ಲಿದ್ದ ಜಿಲ್ಲೆ, ಈಗ 20ನೇ ಸ್ಥಾನಕ್ಕೆ ಕುಸಿದಿದೆ. ಆದರೆ, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಉತ್ತಮ ಫಲಿತಾಂಶ ಬಂದಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಶಾಲೆಗೆ ಭೇಟಿ ನೀಡುತ್ತೇನೆ’ ಎಂದು ಭರವಸೆ ನೀಡಿದರು.

‘ಎಪಿಎಂಸಿ ಮಾರುಕಟ್ಟೆ ನಿರ್ಮಾಣ ಮಾಡಲು ಚಲುವನಹಳ್ಳಿ ಕೆರೆಯ 36 ಎಕರೆ ಜಮೀನು ಕೊಡಲಾಗುವುದು. ಸುತ್ತಮುತ್ತಲಿನ ಜಾಗವೂ ಸಿಗಲಿದೆ’ ಎಂದರು.

ಇಬ್ಬರು ಹೆಚ್ಚುವರಿ ಎಸಿ: ‘ಜಿಲ್ಲೆಯಲ್ಲಿ ಕಂದಾಯ ಇಲಾಖೆಯ ಸಂಬಂಧಿಸಿದಂತೆ ಒಟ್ಟು 19 ಸಾವಿರ ಕೇಸ್‌ ಇದ್ದು, 16 ಸಾವಿರ ಕೇಸ್‌ಗಳನ್ನು ವರ್ಷದಲ್ಲಿ ವಿಲೇವಾರಿ ಮಾಡಲಾಗಿದೆ. ತಹಶೀಲ್ದಾರ್ ಕೋರ್ಟ್‌ನಲ್ಲಿ ಮೂರು ಸಾವಿರ ಕೇಸ್‌ಗಳಿವೆ. ಹೆಚ್ಚುವರಿ ಇಬ್ಬರು ಉಪವಿಭಾಗಾಧಿಕಾರಿಗಳು ಬರಲಿದ್ದು, ಶೀಘ್ರದಲ್ಲೇ ಪ್ರಕರಣ ವಿಲೇವಾರಿ ಮಾಡಲಾಗುವುದು’ ಎಂದು ಜಿಲ್ಲಾಧಿಕಾರಿ ವಿವರಿಸಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಖಜಾಂಚಿ ಎ.ಜಿ.ಸುರೇಶ್ ‌ಕುಮಾರ್ ಸ್ವಾಗತಿಸಿದರು. ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ‌ವಿ.ಮುನಿರಾಜು, ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್ ಹಾಗೂ ಪತ್ರಕರ್ತರು ಪಾಲ್ಗೊಂಡಿದ್ದರು.

Highlights - ಕಂದಾಯ ಇಲಾಖೆಯಲ್ಲಿ ಶೇ 25 ಸಿಬ್ಬಂದಿ ಕೊರತೆ ವಿವಿಧ ಸೇವೆ ನೀಡುವುದರಲ್ಲಿ ಜಿಲ್ಲೆಯು ರಾಜ್ಯದಲ್ಲೇ ಮುಂಚೂಣಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಸಂವಾದ

Quote - ಸಂಘಟನೆಯವರು ರಾಜಕಾರಣಿಗಳು ನನ್ನ ಬಗ್ಗೆ ಏನು ಹೇಳುತ್ತಾರೆ ಎಂಬುದಕ್ಕೆ ಗಮನ ಕೊಡಲ್ಲ. ಒತ್ತಡ ಬರೋದು ಸಹಜ. ಕಾನೂನಿನಂತೆ ಕೆಲಸ ಮಾಡುತ್ತಿದ್ದು ಸಿಬ್ಬಂದಿಗೂ ಅದೇ ಸೂಚನೆ ನೀಡಿದ್ದೇನೆ ಅಕ್ರಂ ಪಾಷಾ ಜಿಲ್ಲಾಧಿಕಾರಿ

Cut-off box - ಕೆರೆ ಒತ್ತುವರಿ–ಸಮೀಕ್ಷೆಗೆ ನಿರ್ಧಾರ 'ಜಿಲ್ಲೆಯಲ್ಲಿ ಕೆರೆ‌ಗಳ ಒತ್ತುವರಿ ಆಗಿರುವ ಬಗ್ಗೆ ಸಭೆ ನಡೆಸಿದ್ದು ತೆರವಿಗೆ ಕ್ರಮ ವಹಿಸಲಾಗುವುದು. ಒತ್ತುವರಿ ಪತ್ತೆಗೆ ಸಮೀಕ್ಷೆ ನಡೆಸಲಾಗುವುದು. ಈ ಸಂಬಂಧ ಕಾರ್ತಪಡೆ ಸಮಿತಿ ರಚಿಸಲಾಗಿದೆ. ಬಳಿಕ ಕೆರೆಗಳಿಗೆ ಬಯೋ ಫೆನ್ಸಿಂಗ್ ಮಾಡಿ ಸಂರಕ್ಷಣೆ ಮಾಡಲಾಗುವುದು’ ಎಂದು ಅಕ್ರಂ ಪಾಷಾ ತಿಳಿಸಿದರು.

Cut-off box - ಭೂದಾಖಲೆ ಸುರಕ್ಷತಾ ಯೋಜನೆ ‘ಕಂದಾಯ ಇಲಾಖೆಯಲ್ಲಿ ಭೂದಾಖಲೆ‌ ಸುರಕ್ಷತಾ ಯೋಜನೆ ಅನುಷ್ಠಾನಕ್ಕೆ ಸಿದ್ಧತೆ ನಡೆಸಲಾಗಿದೆ. ಈ ಸಂಬಂಧ ಕೋಲಾರದಲ್ಲಿ ಪ್ರಾಯೋಗಿಕವಾಗಿ ಯೋಜನೆ ಜಾರಿ ಮಾಡಲಾಗಿದೆ. ಈ ವ್ಯವಸ್ಥೆಯಡಿ ಸಾರ್ವಜನಿಕರು ಆನ್‌ಲೈನ್‌ನಲ್ಲಿ ತಮ್ಮ ಅರ್ಜಿಗಳನ್ನು ನೋಡಬಹುದು ಉಳಿದವರೂ ನೋಡಬಹುದು. ಎಲ್ಲವೂ ಪಾರದರ್ಶಕವಾಗಿರಲಿದೆ. ಅಪ್‌ಲೋಡ್‌ ಮಾಡುವ ಕೆಲಸ ಮುಗಿದ ಮೇಲೆ ಜನರು ತಮ್ಮ ದಾಖಲೆಗಳನ್ನು ಮನೆಯಿಂದಲೇ ಪ್ರಿಂಟ್‌ಔಟ್‌ ಪಡೆಯಬಹುದು’ ಎಂದು ಅಕ್ರಂ ಪಾಷಾ ಹೇಳಿದರು.

Cut-off box - ರೈತರ ಜಮೀನು ಪಹಣಿಯಲ್ಲಿ ‘ವಕ್ಫ್‌’ ನಮೂದಾಗಿಲ್ಲ ‘ಜಿಲ್ಲೆಯಲ್ಲಿ ಯಾವುದೇ ಸರ್ಕಾರಿ ಜಾಗದ ಖಾತೆಯಲ್ಲಿ ವಕ್ಫ್‌ ಎಂದು ನಮೂದಾಗಿಲ್ಲ ಖಾತೆ ವರ್ಗಾವಣೆ ಆಗಿಲ್ಲ. ಯಾವುದೇ ರೈತರಿಗೆ ಈ ಸಂಬಂಧ ತೊಂದರೆಯಾಗಿರುವ ದೂರು ಬಂದಿಲ್ಲ. ಯಾವುದೇ ರೈತರ ಜಮೀನಿನ ಪಹಣಿಯಲ್ಲಿ ವಕ್ಫ್‌ ಎಂದು ನಮೂದಾಗಿಲ್ಲ. ಬದಲಾಗಿ ಈ ಜಾಗ ಕೊಡಲು ಆಗುವುದಿಲ್ಲವೆಂದು ಎಲ್ಲಾ ತಹಶೀಲ್ದಾರ್‌ಗಳು ವಕ್ಫ್‌ಗೆ ಹಿಂಬರಹ ಬರೆದು ಕೊಟ್ಟಿದ್ದಾರೆ. ಮುದುವಾಡಿ ಸರ್ಕಾರಿ ಶಾಲೆಯದ್ದು ವಕ್ಫ್‌ ಜಾಗ. ಆದರೂ ಶಾಲೆಗೇ ಖಾತೆ ಮಾಡಿಕೊಡಲಾಗಿದೆ’ ಎಂದು ಅಕ್ರಂ ಪಾಷಾ ಸ್ಪಷ್ಟಪಡಿಸಿದರು.

Cut-off box - ಅಧಿಕಾರಿಗಳಿಗೆ ವರ್ಗಾವಣೆ ಸಹಜ ‘ಯಾವುದೇ ಅಧಿಕಾರಿಗೆ ವರ್ಗಾವಣೆ ಸಹಜ. ಒಂದೇ ಕಡೆ ಶಾಶ್ವತವಾಗಿ ಇರಲು ಆಗಲ್ಲ. ಅದಕ್ಕೆ ಸಿದ್ಧರಾಗಿರಬೇಕು. ಕಂದಾಯ ಇಲಾಖೆಯಲ್ಲಿ ಉತ್ತಮ ಕೆಲಸ ನಡೆದಿದ್ದು ನಗರಾಭಿವೃದ್ಧಿ ‌ಇಲಾಖೆ ಸವಾಲಾಗಿದೆ’ ಎಂದು ಅಕ್ರಂ ಪಾಷಾ ಹೇಳಿದರು. ತಮ್ಮ ವರ್ಗಾವಣೆ ಬಗ್ಗೆ ಮಾತುಗಳು ಕೇಳಿ ಬರುತ್ತಿದೆಯೆಲ್ಲಾ ಎಂಬ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.