ಕೋಲಾರ: ನಗರದ ಎಸ್‌ಎನ್‌ಆರ್ ಜಿಲ್ಲಾಸ್ಪತ್ರೆಯಲ್ಲಿ ನಿತ್ಯ ಸಾವಿರಕ್ಕೂ ಅಧಿಕ ಹೊರರೋಗಿಗಳು ಹಾಗೂ 250ಕ್ಕೂ ಅಧಿಕ ಒಳರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ಸಿಬ್ಬಂದಿ ಕೊರತೆಯಿಂದ ಹಲವು ಸಮಸ್ಯೆಗಳು ಉದ್ಭವಿಸಿವೆ.
283ಹುದ್ದೆಗಳು ಮಂಜೂರಾಗಿದ್ದರೂ ಸದ್ಯ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವವಸಿಬ್ಬಂದಿ ಸಂಖ್ಯೆ ಕೇವಲ 120.
ನರ್ಸ್, ಫಾರ್ಮಸಿಸ್ಟ್, ಪ್ರಯೋಗಾಲಯ ತಜ್ಞರು ಹಾಗೂ ‘ಡಿ’ ಗ್ರೂಪ್ ನೌಕರರ ಕೊರತೆ ಕಾಡುತ್ತಿದೆ. ರೇಡಿಯೊಲಾಜಿಸ್ಟ್ ಒಬ್ಬರೂ ಇಲ್ಲ. ಇದರಿಂದ ಇನ್ನುಳಿದ ಸಿಬ್ಬಂದಿ ಮೇಲೆ ಹೆಚ್ಚು ಒತ್ತಡ ಉಂಟಾಗುತ್ತಿದ್ದು, ಪರೀಕ್ಷೆಗಳು, ಚಿಕಿತ್ಸೆ ಪ್ರಕ್ರಿಯೆ ವಿಳಂಬವಾಗುತ್ತಿದೆ.
ರೋಗಿಗಳ ಸ್ಥಳಾಂತರ, ವಾರ್ಡ್ ಹಾಗೂ ಶೌಚಾಲಯಗಳ ಸ್ವಚ್ಛತೆಗೂ ಸಮಸ್ಯೆ ಉಂಟಾಗಿದೆ. ಎಲ್ಲಾ ಸೇರಿ ಶೇ 50ಕ್ಕೂ ಅಧಿಕ ಸಿಬ್ಬಂದಿ ಕೊರತೆ ಎದುರಾಗಿದೆ.
‘ಭಾರತೀಯ ಸಾರ್ವಜನಿಕ ಆರೋಗ್ಯ ಗುಣಮಟ್ಟ ಸಂಸ್ಥೆ ಪ್ರಕಾರ 500 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯಲ್ಲಿ 634 ಸಿಬ್ಬಂದಿ ಇರಬೇಕು. ನಾವು ಅನುಮತಿ ಗಿಟ್ಟಿಸಿಕೊಂಡ ಸಮಯದಲ್ಲಿ 265 ಹಾಸಿಗೆ ಸಾಮರ್ಥ್ಯವಿತ್ತು. ಆ ಸಂಖ್ಯೆಯನ್ನು ಪರಿಗಣಿಸಿದರೂ 268 ಸಿಬ್ಬಂದಿ ಇರಬೇಕಿತ್ತು. ಈಗ ಕೇವಲ 120 ಮಂದಿ ಇದ್ದಾರೆ. ಹುದ್ದೆ ಭರ್ತಿಗೆ ಪ್ರಸ್ತಾವ ಕಳುಹಿಸಲಾಗಿದೆ. ತಜ್ಞ ವೈದ್ಯರ ಸಮಸ್ಯೆ ಇಲ್ಲ’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವಿಜಯಕುಮಾರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
‘ಕ್ರಿಟಿಕಲ್ ಕೇರ್ ಘಟಕಕ್ಕೆ 50 ಹಾಸಿಗೆ ಮಂಜೂರಾಗಿದೆ. ಇದಕ್ಕೆ ಸಿಬ್ಬಂದಿ ಭರ್ತಿ ಮಾಡಲು ಮನವಿ ಮಾಡಿದ್ದೇವೆ. 5 ತಜ್ಞ ವೈದ್ಯರು, 12 ಡ್ಯೂಟಿ ವೈದ್ಯರು, 66 ಸ್ಟಾಫ್ ನರ್ಸ್, 18 ಮಂದಿ ಸಹಾಯಕರು ಬರಲಿದ್ದು, ಆಗ ಉಳಿದ ಸಿಬ್ಬಂದಿ ಮೇಲೆ ಒತ್ತಡ ತುಸು ಕಡಿಮೆಯಾಗಲಿದೆ’ ಎಂದರು.
ಈ ಆಸ್ಪತ್ರೆಗೆ ಗಡಿ ಪ್ರದೇಶದ ಗ್ರಾಮಗಳು, ಚಿಕ್ಕಬಳ್ಳಾಪುರ ಜಿಲ್ಲೆಯಿಂದಲೂ ರೋಗಿಗಳು ಬರುತ್ತಿದ್ದು, ಅಗಾಧ ಒತ್ತಡ ಇದೆ. ವಿವಿಧ ಪರೀಕ್ಷೆ ಮಾಡಿಸಿಕೊಳ್ಳಲು ಇಡೀ ದಿನ ಕಾದು ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಬಂದೊದಗಿದೆ.
12 ಮಂದಿ ಪ್ರಯೋಗಾಲಯ ತಜ್ಞರ ಅಗತ್ಯವಿದೆ. ಆದರೆ, ಈಗಿರುವುದು ಒಬ್ಬರೇ ಕಾಯಂ ಸಿಬ್ಬಂದಿ. ಆರು ಮಂದಿಯನ್ನು ಹೊರಗುತ್ತಿಗೆಯಲ್ಲಿ ನೇಮಿಸಿಕೊಳ್ಳಲಾಗಿದೆ. ಭದ್ರತಾ ಸಿಬ್ಬಂದಿ ಕೊರತೆಯೂ ಇದೆ.
500 ಹಾಸಿಗೆ ಸಾಮರ್ಥ್ಯದ ಈ ಆಸ್ಪತ್ರೆಯಲ್ಲಿ ನಿತ್ಯ ಶೇ 80ಕ್ಕಿಂತ ಅಧಿಕ ಹಾಸಿಗೆಗಳು ಭರ್ತಿಯಾಗಿರುತ್ತವೆ. ಮಾಸಿಕ 500 ಹೆರಿಗೆ, 400 ಸಾಮಾನ್ಯ ಶಸ್ತ್ರಚಿಕಿತ್ಸೆಗಳು ನಡೆಯುತ್ತವೆ
ತಿಂಗಳ ಹಿಂದೆ ಆಸ್ಪತ್ರೆ ಪರಿಶೀಲನೆಗೆಂದು ದಿಢೀರ್ ಭೇಟಿ ನೀಡಿದ್ದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಶೀಘ್ರವೇ ಸಿಬ್ಬಂದಿ ಭರ್ತಿಗೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ, ಆ ನಂತರ ಯಾವುದೇ ಪ್ರಕ್ರಿಯೆ ನಡೆದಿಲ್ಲ.
ಈಚೆಗೆ ತಾಯಿ ಹಾಗೂ ಮಕ್ಕಳ ಆಸ್ಪತ್ರೆಯಲ್ಲಿ ಬಿಸಿನೀರು ಇಲ್ಲದ್ದು ಸದ್ದು ಮಾಡಿತ್ತು. ಹೀಗಾಗಿ, ಜಿಲ್ಲಾಧಿಕಾರಿ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಮೂಲ ಸೌಲಭ್ಯ ಒದಗಿಸುವಂತೆ ಸೂಚನೆ ನೀಡಿದ್ದರು.
ಪಾರ್ಕಿಂಗ್ ಅವ್ಯವಸ್ಥೆ
ಒಮ್ಮೊಮ್ಮೆ ಆಂಬುಲೆನ್ಸ್‌ಬಂದು ಹೋಗಲೂ ಜಾಗವಿಲ್ಲದಂತೆ ವಾಹನಗಳು ಆಸ್ಪತ್ರೆಯ ಆವರಣದಲ್ಲಿ ನಿಂತಿರುತ್ತವೆ. ಸಾರ್ವಜನಿಕರು ಕೂಡ ಎಲ್ಲಿಬೇಕೆಂದರಲ್ಲಿ ವಾಹನ ನಿಲುಗಡೆ ಮಾಡುವುದು ಕಂಡುಬರುತ್ತಿದ್ದು, ಅವ್ಯವಸ್ಥೆಯ ಆಗರವಾಗಿದೆ. ಸ್ಥಳದ ಕೊರತೆಯೇ ಇದಕ್ಕೆ ಮುಖ್ಯ ಕಾರಣ. ಜೊತೆಗೆ ಆವರಣದಲ್ಲಿ ಅಂಗಡಿ ಮಳಿಗೆಗಳು ಹೆಚ್ಚಿವೆ.
ಆಸ್ಪತ್ರೆ ಎದುರು ಪರದಾಟ
ಆಸ್ಪತ್ರೆ ಎದುರು ರೋಗಿಗಳ ಸಂಬಂಧಿಕರು ಹಾಗೂ ಪುಟ್ಟ ಮಕ್ಕಳುಬಿಸಿಲಿನಲ್ಲೇ ಎಲ್ಲಿಬೇಕೆಂದರಲ್ಲಿ ಕುಳಿತಿರುತ್ತಾರೆ. ಆಸ್ಪತ್ರೆ ಜಗುಲಿ, ಮೆಟ್ಟಿಲು, ರಸ್ತೆ ಬದಿ, ಪಾರ್ಕಿಂಗ್ ಸ್ಥಳದಲ್ಲೋ ಕುಳಿತು ಊಟ ಮಾಡುತ್ತಿರುತ್ತಾರೆ, ಮಗುವಿಗೆ ಹಾಲು ಕುಡಿಸುತ್ತಿರುತ್ತಾರೆ.
ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ
ಹುದ್ದೆ; ಮಂಜೂರು; ಭರ್ತಿ; ಖಾಲಿ
ವೈದ್ಯರು; 41; 33+12*; 00
‘ಬಿ’ ವೃಂದ; 7; 05; 02
‘ಸಿ’ ವೃಂದ; 143; 66; 77
‘ಡಿ’ ವೃಂದ; 95; 17; 78*
* 12 ವೈದ್ಯರು–ಗ್ರಾಮೀಣ ಸೇವೆ ಎರವಲು
* ‘ಡಿ’ ದರ್ಜೆ ನೌಕರರು–ಹೊರಗುತ್ತಿಗೆಯಲ್ಲಿ ನೇಮಕ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.