ಕೋಲಾರ: ಜಿಲ್ಲಾ ಸರ್ಕಾರಿ ನೌಕರರ ಸಂಘದ ಚುನಾವಣೆ ಸಂಬಂಧ ಅವಿರೋಧ ಆಯ್ಕೆ ಹೊರತುಪಡಿಸಿ ಉಳಿದ 11 ಇಲಾಖೆಗಳ 16 ಸ್ಥಾನಗಳಿಗೆ ಶನಿವಾರ ಮತದಾನ ನಡೆಯಲಿದೆ. 39 ಮಂದಿ ಕಣದಲ್ಲಿದ್ದಾರೆ.
ಮತದಾನಕ್ಕಾಗಿ ನಗರದ ಮೆಥೋಡಿಸ್ಟ್ ಶಾಲೆಯಲ್ಲಿ ವ್ಯವಸ್ಥೆ ಮಾಡಿದ್ದು, ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದೆ. ಸಂಜೆಯೇ ಮತ ಎಣಿಕೆ ನಡೆಸಿ ಫಲಿತಾಂಶ ಘೋಷಿಸಲಾಗುತ್ತದೆ.
ಜಿಲ್ಲಾ ಚುನಾವಣಾಧಿಕಾರಿಯಾಗಿ ಸಹಕಾರ ಸಂಘಗಳ ನಿವೃತ್ತ ಸಹಾಯಕ ನಿಬಂಧಕ ಸಿ.ವಿನಾಗರಾಜಗೌಡ, ಸಹಾಯಕ ಚುನಾವಣಾಧಿಕಾರಿಯಾಗಿ ನಿವೃತ್ತ ಸಹಕಾರ ಅಭಿವೃದ್ಧಿ ಅಧಿಕಾರಿ ವೆಂಕಟೇಶಪ್ಪ ಕಾರ್ಯನಿರ್ವಹಿಸುತ್ತಿದ್ದಾರೆ. ಈಗಾಗಲೇ ಸಂಘಕ್ಕೆ 50 ಮಂದಿ ಅವಿರೋಧ ಆಯ್ಕೆಯಾಗಿದ್ದಾರೆ.
ಪ್ರಾಥಮಿಕ ಶಾಲಾ ವಿಭಾಗದ 4 ಸ್ಥಾನಗಳಿಗೆ 13 ಮಂದಿ ಕಣದಲ್ಲಿದ್ದರೆ, ಪ್ರೌಢಶಾಲಾ ವಿಭಾಗದ 2 ಸ್ಥಾನಗಳಿಗೆ ನಾಲ್ವರು ಸ್ಪರ್ಧೆಯಲ್ಲಿದ್ದಾರೆ. ಉಳಿದಂತೆ ಕೃಷಿ ಇಲಾಖೆ ತಾಂತ್ರಿಕೇತರ ಒಂದು ಸ್ಥಾನಕ್ಕೆ ಇಬ್ಬರು ಹಾಗೂ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಒಂದು ಹುದ್ದೆಗೆ ಇಬ್ಬರು ಕಣದಲ್ಲಿದ್ದಾರೆ.
ಜಿಲ್ಲಾ ಪಂಚಾಯಿತಿ ಕಚೇರಿಯ ಒಂದು ಕ್ಷೇತ್ರದಲ್ಲಿ ಇಬ್ಬರು ಹಾಗೂ ಗ್ರಾಮೀಣಾಭಿವೃದ್ದಿ ಪಂಚಾಯತ್ ರಾಜ್ ಇಲಾಖೆಯ ಉಳಿಕೆ ಸಿಬ್ಬಂದಿ ಕ್ಷೇತ್ರದಲ್ಲಿ ಒಂದು ಸ್ಥಾನಕ್ಕೆ ಮೂವರು ಸ್ಪರ್ಧೆಯಲ್ಲಿದ್ದಾರೆ.
ಸಮಾಜ ಕಲ್ಯಾಣ ಇಲಾಖೆಯ ಒಂದು ಕ್ಷೇತ್ರಕ್ಕೆ ಇಬ್ಬರು, ವೈದ್ಯಕೀಯ ಶಿಕ್ಷಣ ಮತ್ತು ಜಿಲ್ಲಾಸ್ಪತ್ರೆಯ 2 ಕ್ಷೇತ್ರಗಳಿಗೆ ಐವರು, ತೋಟಗಾರಿಕಾ ಇಲಾಖೆಯ ಒಂದು ಕ್ಷೇತ್ರಕ್ಕೆ ಇಬ್ಬರು ಕಣದಲ್ಲಿದ್ದಾರೆ. ಖಜಾನೆ ಇಲಾಖೆಯ ಒಂದು ಸ್ಥಾನಕ್ಕೆ ಇಬ್ಬರು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಡಳಿತ ಕಚೇರಿಗಳ ಕ್ಷೇತ್ರಕ್ಕೆ ಇಬ್ಬರು ಸೇರಿದಂತೆ ಒಟ್ಟು 16 ಕ್ಷೇತ್ರಗಳಿಗೆ 30 ಮಂದಿ ಕಣದಲ್ಲಿದ್ದಾರೆ.
ಚುನಾವಣಾ ಕಣದಲ್ಲಿರುವ ಪ್ರಮುಖರೆಂದರೆ ನಿಕಟಪೂರ್ವ ಅಧ್ಯಕ್ಷರಾದ ಕೆ.ಬಿ.ಅಶೋಕ್, ಕೆ.ಎನ್.ಮಂಜುನಾಥ್, ಹಾಲಿ ಖಜಾಂಚಿ ಕೆ.ವಿಜಯ್, ಗ್ರಾಮೀಣಾಭಿವೃದ್ಧಿ ಇಲಾಖೆಯ ಇಂದಿರಮ್ಮ, ಜಿಲ್ಲಾಸ್ಪತ್ರೆ ಕ್ಷೇತ್ರದಲ್ಲಿ ಎಚ್.ನಾರಾಯಣಪ್ಪ, ಬಿ.ಕೆ.ಚಂದ್ರಕಲಾ, ಪ್ರೌಢಶಾಲಾ ಕ್ಷೇತ್ರದಲ್ಲಿ ಆನಂದ್‍ಕುಮಾರ್, ಗೋಪಾಲ್, ಪ್ರಾಥಮಿಕ ಶಾಲಾ ವಿಭಾಗದಲ್ಲಿ ವೆಂಕಟಾಚಲಪತಿ, ಅನಿಲ್ ಕುಮಾರ್, ಯು.ಗೋವಿಂದ, ಭಾಗ್ಯಲಕ್ಷ್ಮಮ್ಮ. ಸ್ಪರ್ಧಿಗಳ ಪ್ರಚಾರದ ಭರಾಟೆ ಜೋರಾಗಿದೆ.
ಪ್ರಾಥಮಿಕ ವಿಭಾಗದ 4 ಕ್ಷೇತ್ರಗಳಿಗೆ 13 ಮಂದಿ ಕಣದಲ್ಲಿದ್ದರೆ, ಪ್ರೌಢಶಾಲಾ ಕ್ಷೇತ್ರದ 2 ಕ್ಷೇತ್ರಗಳಿಗೆ ನಾಲ್ವರು ಕಣದಲ್ಲಿದ್ದಾರೆ. ಎಲ್ಲಾ ನೌಕರರು ತಪ್ಪದೇ ಮತ ಚಲಾಯಿಸಬೇಕೆಂದು ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‍ಬಾಬು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.