ADVERTISEMENT

ಶ್ರೀನಿವಾಸಪುರ: ಒತ್ತುವರಿ ತೆರವಿಗೆ ಅಡ್ಡಿ, ಸಂಸದ ಮುನಿಸ್ವಾಮಿ ವಿರುದ್ಧ ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2023, 23:30 IST
Last Updated 10 ಸೆಪ್ಟೆಂಬರ್ 2023, 23:30 IST
ಶ್ರೀನಿವಾಸಪುರ ಪಟ್ಟಣದಲ್ಲಿ ಭಾನುವಾರ ಪೊಲೀಸರು ಪಥ ಸಂಚಲನ ನಡೆಸಿದರು
ಶ್ರೀನಿವಾಸಪುರ ಪಟ್ಟಣದಲ್ಲಿ ಭಾನುವಾರ ಪೊಲೀಸರು ಪಥ ಸಂಚಲನ ನಡೆಸಿದರು   

ಶ್ರೀನಿವಾಸಪುರ (ಕೋಲಾರ): ತಾಲ್ಲೂಕಿನಲ್ಲಿ ಅರಣ್ಯ ಇಲಾಖೆಯ ಜಮೀನಿನ ಒತ್ತುವರಿ ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸಿದ ಹಾಗೂ ಪ್ರಚೋದನೆ ನೀಡಿದ ಆರೋಪದ ಮೇಲೆ ಕೋಲಾರ ಸಂಸದ ಬಿಜೆಪಿಯ ಎಸ್‌.ಮುನಿಸ್ವಾಮಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ಕೆ.ಎನ್‌.ವೇಣುಗೋಪಾಲ್‌ ಹಾಗೂ ರೈತರು ಸೇರಿದಂತೆ 25 ಮಂದಿ ಮೇಲೆ ಎಫ್‌ಐಆರ್‌ ದಾಖಲಾಗಿದೆ.

ಅರಣ್ಯ ಇಲಾಖೆ ಅಧಿಕಾರಿಗಳು ಶ್ರೀನಿವಾಸಪುರ ಠಾಣೆಯಲ್ಲಿ ದೂರು ನೀಡಿದ್ದು, ಮುನಿಸ್ವಾಮಿ–ಎ1 ಆರೋಪಿಯಾಗಿದ್ದಾರೆ. ಸುಮಾರು 15 ಮಂದಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.

ಅರಣ್ಯ ಇಲಾಖೆ ಅಧಿಕಾರಿಗಳ ಕೆಲಸಕ್ಕೆ ಅಡ್ಡಿ, ನಿಂದನೆ, ಜೀವ ಬೆದರಿಕೆ, ವಾಹನಗಳ ಮೇಲೆ ಕಲ್ಲು ತೂರಾಟ, ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡಿದ ಆರೋಪ, ಅರಣ್ಯ (ಸಂರಕ್ಷಣೆ) ಕಾಯ್ದೆ, ಕರ್ನಾಟಕ ಅರಣ್ಯ ಕಾಯ್ದೆ 1963 ಸೇರಿದಂತೆ ವಿವಿಧ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪ್ರತ್ಯೇಕವಾಗಿ ಎರಡು ಪ್ರಕರಣ ದಾಖಲಾಗಿದೆ. ಜೆಸಿಬಿ ಜಖಂಗೊಳಿಸಿದ್ದಕ್ಕೆ ಜೆಸಿಬಿ ಮಾಲೀಕರು ಕೂಡ ದೂರು ನೀಡಿದ್ದು ಮೂರನೇ ಪ್ರಕರಣ ದಾಖಲಿಸಲಾಗಿದೆ. 

ADVERTISEMENT

ತಾಲ್ಲೂಕಿನ ನಾರಮಾಕನಹಳ್ಳಿ ಗ್ರಾಮದ ಹೊರವಲಯದಲ್ಲಿ ಶನಿವಾರ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸುತ್ತಿದ್ದಾಗ ರೊಚ್ಚಿಗೆದ್ದ ರೈತರು ಜೆಸಿಬಿ ಯಂತ್ರಗಳ ಮೇಲೆ ದಾಳಿ ನಡೆಸಿದ್ದರು. ಕಲ್ಲು ತೂರಿ ಗಾಜು ಒಡೆದು ಹಾಕಿದ್ದರು. 

ಸ್ಥಳಕ್ಕೆ ತೆರಳಿದ್ದ ಮುನಿಸ್ವಾಮಿ, ‘ರೈತರ ಭೂಮಿಯನ್ನು ವಶಕ್ಕೆ ಪಡೆಯಲು ಅರಣ್ಯ ಇಲಾಖೆ ಮುಂದಾದರೆ, ಬೆಳೆ ನಾಶಪಡಿಸಲು ಪ್ರಯತ್ನಿಸಿದರೆ ಜೆಸಿಬಿಗಳನ್ನು ಬಿಡಬೇಡಿ’ ಎಂದಿದ್ದರು.

ಈ ಸಂಬಂಧ ಸೋಮಯಾಜಲಹಳ್ಳಿ ಉಪ ವಲಯ ಅರಣ್ಯಾಧಿಕಾರಿ ನವೀನ್‌ ಕುಮಾರ್‌, ‘ಮುನಿಸ್ವಾಮಿ ಕಾರಿನಲ್ಲಿ ಬಂದು ಪ್ರಚೋದಿಸಿದ್ದಾರೆ. ವಿವಿಧ ಗ್ರಾಮಗಳ 100ರಿಂದ 150 ಮಂದಿ ವಾಹನಗಳಲ್ಲಿ ಬಂದು ದಾಳಿ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಜೆಸಿಬಿಗಳಿಗೆ ಕಲ್ಲು ಹೊಡೆದು ಚಾಲಕರನ್ನು ಎಳೆದು ಕೆಳಗೆ ತಳ್ಳಿದ್ದಾರೆ. ನಮ್ಮ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಲು ಬೆನ್ನಟ್ಟಿಕೊಂಡು ಬಂದಿದ್ದು, ನಾವು ಓಡಿದೆವು. ನಮ್ಮ ಮೇಲೂ ಕಲ್ಲು ಬಿದ್ದಿದ್ದು ಗಾಯಗಳಾಗಿವೆ. ಉಪವಲಯ ಅರಣ್ಯಾಧಿಕಾರಿ ಮಂಜುನಾಥ್‌, ವನಪಾಲಕ ನಾಗರಾಜ ಅವರಿಗೂ ಕಲ್ಲೇಟು ಬಿದ್ದಿದೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪಾಳ್ಯ ಗ್ರಾಮದ ಗೋಪಾಲರೆಡ್ಡಿ, ಶಾಮಲಾ, ಲಕ್ಷ್ಮಣರೆಡ್ಡಿ, ರೋಣೂರಿನ ಚಂದ್ರಶೇಖರ್‌, ಹರೀಶ, ಸೊಣ್ಣಪ್ಪ ರೆಡ್ಡಿ, ನಾರಮಾಕನಹಳ್ಳಿಯ ನಾಗರಾಜ, ಚಂದ್ರ, ಶಿವರೆಡ್ಡಿ, ಕೆ.ನಾರಾಯಣಸ್ವಾಮಿ, ವೆಂಕಟರಾಮರೆಡ್ಡಿ, ಪ್ರಬಾಲ್‌ ಎನ್‌.ಎಸ್‌., ಬಂಗಾರಪೇಟೆಯ ಚಂದ್ರರೆಡ್ಡಿ, ಸಂದೀಪ, ಶ್ರೀನಿವಾಸಪುರ ನಗರದ ಶಿವಮೂರ್ತಿ, ಹೆಬ್ಬಟ್ಟದ ಆನಂದ, ದ್ವಾರಸಂದ್ರದ ಮುನಿವೆಂಕಟರೆಡ್ಡಿ, ನಾಗೇನಹಳ್ಳಿಯ ಮಧು, ಕೇತಗಾನಹಳ್ಳಿಯ ಶಿವ, ಅರುಣ, ಅರಮಕಲಾಹಳ್ಳಿಯ ಮುನಿಸ್ವಾಮಿ, ಚಿಕ್ಕನೇಮಹಳ್ಳಿಯ ನಾರಾಯಣಸ್ವಾಮಿ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.

ತಾಲ್ಲೂಕಿನಲ್ಲಿ ಸುಮಾರು 3 ಸಾವಿರ ಎಕರೆಯಷ್ಟು ಅರಣ್ಯ ಪ್ರದೇಶ ಒತ್ತುವರಿ ಆಗಿರುವ ಬಗ್ಗೆ ದೂರುಗಳಿದ್ದು, ಅರಣ್ಯ ಇಲಾಖೆಯು 15 ದಿನಗಳಿಂದ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಂಡಿದೆ. ಈಗಾಗಲೇ 500ಕ್ಕೂ ಅಧಿಕ ಎಕರೆ ತೆರವುಗೊಳಿಸಲಾಗಿದೆ. 

ಜಿಲ್ಲಾ ಪೊಲೀಸರು ಶ್ರೀನಿವಾಸಪುರ ಪಟ್ಟಣದಲ್ಲಿ ಬಿಗಿ ಭದ್ರತೆ ಕೈಗೊಂಡಿದ್ದು, ಪಥ ಸಂಚಲನ ನಡೆಸಿದರು. ಸುಮಾರು 200 ಪೊಲೀಸರನ್ನು ನಿಯೋಜಿಸಲಾಗಿದೆ.

ಕಳೆ ನಾಶಕ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಶ್ರೀನಿವಾಸಪುರ ತಾಲ್ಲೂಕಿನ ಪಾಳ್ಯ ನಿವಾಸಿ ಶಾಮಲಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ
ಕಳೆ ನಾಶಕ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಶ್ರೀನಿವಾಸಪುರ ತಾಲ್ಲೂಕಿನ ಪಾಳ್ಯ ನಿವಾಸಿ ಲಕ್ಷ್ಮಿದೇವಮ್ಮ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ
ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯರ ಆರೋಗ್ಯ ವಿಚಾರಿಸಲು ಶ್ರೀನಿವಾಸಪುರದ ಸರ್ಕಾರಿ ಆಸ್ಪತ್ರೆಗೆ ಭಾನುವಾರ ಸಂಸದ ಎಸ್.ಮುನಿಸ್ವಾಮಿ ಭೇಟಿ  ನೀಡಿದರು
ಎಂ.ನಾರಾಯಣ

ಗುಂಡಿಕ್ಕಿ ಕೊಂದರೂ ಹೋರಾಟ ಕೈಬಿಡಲ್ಲ: ಸಂಸದ

‘ಬಂಧಿಸಿ ಜೈಲಿಗೆ ಹಾಕಿದರೂ ಗುಂಡಿಕ್ಕಿ ಕೊಂದರೂ ರೈತರ ಪರ ಹೋರಾಟ ನಿರಂತರವಾಗಿ ನಡೆಯಲಿದೆ. ಪ್ರಕರಣ ಹಾಕಿಸಿಕೊಂಡು ಪ್ರಾಣ ಕೊಡಲು ಸಿದ್ಧ’ ಎಂದು ಸಂಸದ ಎಸ್‌.ಮುನಿಸ್ವಾಮಿ ತಿಳಿಸಿದರು.

ಭಾನುವಾರ ಶ್ರೀನಿವಾಸಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ‘ಬಿ.ಎಸ್‌.ಯಡಿಯೂರಪ್ಪ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಪಕ್ಷದ ಮುಖಂಡರು ರೈತರ ನಾಯಕರಿಗೆ ಮಾಹಿತಿ ನೀಡಲಾಗಿದೆ. ರೈತರಿಗೆ ಸಮಸ್ಯೆ ಆದಾಗ ಎಲ್ಲ ರೈತರು ಒಗ್ಗೂಡಬೇಕು’ ಎಂದರು.

‘ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ರೈತರ ಮೇಲೆ ಹಾಕಿರುವ ಸುಳ್ಳು ಮೊಕದ್ದಮೆ ವಾಪಸ್‌ ಪಡೆಯವರೆಗೆ ಒತ್ತುವರಿ ತೆರವು ಕಾರ್ಯಾಚರಣೆ ನಿಲ್ಲುವವರೆಗೆ ಹೋರಾಟ ಮುಂದುವರಿಯಲಿದೆ’ ಎಂದು ಹೇಳಿದರು.

‘ಅರಣ್ಯ ಇಲಾಖೆ ರೈತರಿಗೆ ನೋಟಿಸ್‌ ನೀಡಿ ಸಮಯ ಕೊಡಬೇಕು. ರೈತರಿಗೆ ಸರ್ಕಾರವೇ ಆರ್‌ಟಿಸಿ ಕೊಟ್ಟಿದೆ. ಈ ಸಂಬಂಧ ತಹಶೀಲ್ದಾರ್‌ ಉಪವಿಭಾಗಾಧಿಕಾರಿ ಜಿಲ್ಲಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಆರ್‌ಟಿಸಿ ರದ್ದು ಮಾಡಿ ಜಮೀನಿನಲ್ಲಿ ಬೆಳೆದಿರುವ ಬೆಳೆಗೆ ಪರಿಹಾರ ನೀಡಿ ಆಮೇಲೆ ಒತ್ತುವರಿ ತೆರವುಗೊಳಿಸಲಿ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ರೈತರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ’ ಎಂದು ದೂರಿದರು. ಈ ನಡುವೆ ಯಡಿಯೂರಪ್ಪ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿರುವ ಮುನಿಸ್ವಾಮಿ ಹೋರಾಟಕ್ಕೆ ಬರುವಂತೆ ಮನವಿ ಮಾಡಿಕೊಂಡಿದ್ದಾರೆ.

ಕಾನೂನಿನ ಪ್ರಕಾರ ಕ್ರಮ: ಎಸ್ಪಿ ಎಚ್ಚರಿಕೆ

‘ಅರಣ್ಯ ಇಲಾಖೆ ಅಧಿಕಾರಿಗಳಾಗಲಿ ಪೊಲೀಸರಾಗಲಿ ಸರ್ಕಾರಿ ಕೆಲಸ ಮಾಡುವ ಸಂದರ್ಭದಲ್ಲಿ ಸಾರ್ವಜನಿಕರು ಯಾವುದೇ ಸಮಸ್ಯೆ ಉಂಟಾದರೂ ಕಾನೂನಿನ ರೂಪದಲ್ಲಿ ಬಗೆಹರಿಸಿಕೊಳ್ಳಬೇಕು. ನ್ಯಾಯಾಲಯಕ್ಕೆ ಹೋಗಬಹುದು. ರೊಚ್ಚಿಗೆದ್ದು ಕಾನೂನು ಕೈಗೆ ತೆಗೆದುಕೊಂಡರೆ ಕಾನೂನಿನ ಪ್ರಕಾರವೇ ಕ್ರಮ ಎದುರಿಸಬೇಕಾಗುತ್ತದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ನಾರಾಯಣ ಎಚ್ಚರಿಕೆ ನೀಡಿದರು.

ಶ್ರೀನಿವಾಸಪುರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ ‘ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಅರಣ್ಯ ಪ್ರದೇಶ ಒತ್ತುವರಿ ಆಗಿರುವ ಬಗ್ಗೆ ಸುಪ್ರೀಂ ಕೋರ್ಟ್‌ ಹಾಗೂ ಹೈಕೋರ್ಟ್‌ ತೀರ್ಪಿನ ಮೇಲೆ ಡಿಸಿಎಫ್‌ ಕಳೆದ 15 ದಿನಗಳಿಂದ ಒತ್ತುವರಿ ತೆರವುಗೊಳಿಸುತ್ತಿದ್ದಾರೆ. ಈಗಾಗಲೇ 500ಕ್ಕೂ ಅಧಿಕ ಎಕರೆ ತೆರವುಗೊಳಿಸಿದ್ದು ಮನವಿ ಮೇರೆಗೆ ಪೊಲೀಸ್‌ ರಕ್ಷಣೆ ನೀಡಿದ್ದೆವು’ ಎಂದರು.

‘ಅಕ್ರಮಕೂಟ ಕಟ್ಟಿಕೊಂಡು ದಾಳಿ ಮಾಡಿದ್ದು ತಪ್ಪು. ಸಂಸದ ಮುನಿಸ್ವಾಮಿ ಹಾಗೂ ಮುಖಂಡರ ಮೇಲೆ ಎರಡು ಎಫ್‌ಐಆರ್‌ ಆಗಿದೆ. ‌ಜೆಸಿಬಿ ಜಖಂಗೊಳಿಸಿದ್ದಕ್ಕೆ ಜೆಸಿಬಿ ಮಾಲೀಕರು ಪ್ರಕರಣ ದಾಖಲಿಸಿದ್ದಾರೆ. ಸಾಕ್ಷ್ಯಾಧಾರ ಸಂಗ್ರಹಿಸುತ್ತಿದ್ದು ನಿಷ್ಪಕ್ಷವಾಗಿ ತನಿಖೆ ನಡೆಸುತ್ತಿದ್ದೇವೆ’ ಎಂದು ಹೇಳಿದರು.

‘ಆತ್ಮಹತ್ಯೆಗೆ ಯತ್ನಿಸಿದವರ ಹೇಳಿಕೆಯನ್ನೂ ಪಡೆಯುತ್ತೇವೆ. ಆತ್ಮಹತ್ಯೆ ಪ್ರಯತ್ನ ತಪ್ಪು. ಅವರ ಮೇಲೂ ಪ್ರಕರಣ ದಾಖಲಾಗಿದೆ’ ಎಂದರು.

ಅರಣ್ಯ ಇಲಾಖೆ ಅಧಿಕಾರಿಗಳು ನೀಡಿದ ದೂರಿನ ಮೇಲೆ ಪ್ರತ್ಯೇಕವಾಗಿ ಮೂರು ಕ್ರಿಮಿನಲ್‌ ಪ್ರಕರಣ ದಾಖಲಿಸಿದ್ದೇವೆ. 15 ಮಂದಿ ಬಂಧಿಸಿದ್ದು ಪ್ರಕರಣ ಸಂಬಂಧ ತನಿಖೆ ನಡೆಸುತ್ತಿದ್ದೇವೆ.
–ಎಂ.ನಾರಾಯಣ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೋಲಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.