ADVERTISEMENT

ಗ್ಯಾಸ್ ರೀಫಿಲಿಂಗ್ ದಂಧೆ; ಕಠಿಣ ಕ್ರಮ

ಏಜೆನ್ಸಿಯವರ ಪರವಾನಗಿ ರದ್ದು; ಸಭೆಯಲ್ಲಿ ಜಿಲ್ಲಾಧಿಕಾರಿ ಅಕ್ರಂ ಪಾಷಾ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2024, 13:55 IST
Last Updated 24 ಜುಲೈ 2024, 13:55 IST
ಕೋಲಾರದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಅಕ್ರಂ ಪಾಷಾ ನೇತೃತ್ವದಲ್ಲಿ ಗ್ಯಾಸ್‌ ಏಜೆನ್ಸಿ ಮಾಲೀಕರು ಹಾಗೂ ಅಧಿಕಾರಿಗಳು ಸಭೆ ನಡೆಯಿತು
ಕೋಲಾರದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಅಕ್ರಂ ಪಾಷಾ ನೇತೃತ್ವದಲ್ಲಿ ಗ್ಯಾಸ್‌ ಏಜೆನ್ಸಿ ಮಾಲೀಕರು ಹಾಗೂ ಅಧಿಕಾರಿಗಳು ಸಭೆ ನಡೆಯಿತು   

ಕೋಲಾರ: ಜಿಲ್ಲೆಯಲ್ಲಿ ಗ್ಯಾಸ್ ರೀಫಿಲಿಂಗ್ ದಂಧೆಯು ಅಕ್ರಮವಾಗಿ ನಡೆಯುತ್ತಿದ್ದು, ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷಾ ಎಚ್ಚರಿಕೆ ನೀಡಿದರು.

ಜಿಲ್ಲಾಡಳಿತ ಭವನದ ಕಚೇರಿಯಲ್ಲಿ ಮಂಗಳವಾರ ಅಕ್ರಮ ರೀಫಿಲಿಂಗ್ ದಂಧೆ ಸಂಬಂಧ ಗ್ಯಾಸ್ ಏಜೆನ್ಸಿಗಳ ಮಾಲೀಕರೊಂದಿಗಿನ ಸಭೆಯಲ್ಲಿ ಅಧಕ್ಷತೆ ವಹಿಸಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ ಅಡುಗೆ ಅನಿಲಕ್ಕೆ ಸಂಬಂಧಿಸಿದ ಯಾವುದೇ ಅಕ್ರಮ ವಹಿವಾಟು ನಡೆಯಬಾರದು. ಅಂತಹ ಪ್ರಕರಣ ಕಂಡುಬಂದರೆ ಯಾವುದೇ ಒತ್ತಾಯಕ್ಕೆ ಮಣಿಯದೆ ‌ತಪ್ಪಿತಸ್ಥರ ಮೇಲೆ ಕಠಿಣ ಕ್ರಮಕೈಗೊಳ್ಳಲಾಗುವುದು. ಏಜೆನ್ಸಿಯವರ ಪರವಾನಗಿ ರದ್ದು ಮಾಡಲಾಗುವುದು. ಮಾಲೀಕರ ವಿರುದ್ಧ ವೈಯಕ್ತಿಕವಾಗಿ ಪ್ರಕರಣ ದಾಖಲಿಸಿ ಶಿಕ್ಷೆಗೆ ಗುರಿ ಮಾಡಲಾಗುವುದು’ ಎಂದರು.

ADVERTISEMENT

‘ಇಂತಹ ಕೃತ್ಯಗಳು ಸಮಾಜದಲ್ಲಿ ಅಘಾತಕಾರಿ ಬೆಳವಣಿಗೆಯಾಗಿದ್ದು, ಸಾರ್ವಜನಿಕರು ಈ ಬಗ್ಗೆ ಮಾಹಿತಿ ತಿಳಿದ ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು’ ಎಂದು ಮನವಿ ಮಾಡಿದರು.

‘ಖಾಸಗಿ ಏಜೆನ್ಸಿಯವರ ಕುರಿತು ಸರ್ವೇ ಮಾಡಿ ಮಾಹಿತಿ ಪಡೆದು ಕ್ರಮಕೈಗೊಳ್ಳಬೇಕು. ಆಹಾರ ಇಲಾಖೆ ಹಾಗೂ ಆಯಿಲ್ ಕಂಪನಿಗಳು ಸಹಕಾರದೊಂದಿಗೆ ಈ ಕೆಲಸವನ್ನು ನಿರ್ವಹಿಸಬೇಕು’ ಎಂದು ಅವರು ಆಹಾರ ಇಲಾಖೆಯ ಉಪನಿರ್ದೇಶಕಿ ಲತಾ ಅವರಿಗೆ ನಿರ್ದೇಶನ ನೀಡಿದರು.

‘ಗೃಹ ಬಳಕೆ ಸಿಲಿಂಡರ್ ಹಾಗೂ ಆಹಾರ ಇಲಾಖೆ ಎಪಿಎಲ್., ಬಿಪಿಎಲ್ ಹಾಗೂ ಅಂತ್ಯೋದಯ ಫಲಾನುಭವಿಗಳನ್ನು ತುಲನೆ ಮಾಡಿದಾಗ ಗೃಹ ಬಳಕೆ ಅನಿಲ ದುರ್ಬಳಕೆ ಪ್ರಕರಣ ಕಂಡುಬರುತ್ತಿದೆ. ಈ ಕೆಲಸವನ್ನು ಇಂದಿನಿಂದಲೇ ಆರಂಭಿಸಬೇಕು. ಅನಧಿಕೃತ ಹಾಗೂ ಕಾನೂನು ಬಾಹಿರ ಚಟುವಟಿಕೆಗಳನ್ನು ಕಂಡುಹಿಡಿಯಲು ಜಾಗೃತ ದಳಗಳು ಕಟ್ಟುನಿಟ್ಟಾಗಿ ಕರ್ತವ್ಯ ನಿರ್ವಹಿಸಬೇಕು’ ಎಂದು ಸೂಚಿಸಿದರು.

ಆಹಾರ ಇಲಾಖೆಯ ಲತಾ ಮಾತನಾಡಿ, ‘ಜಿಲ್ಲೆಯಲ್ಲಿ ಒಟ್ಟು 4,56,095 ಗ್ಯಾಸ್ ಸಂಪರ್ಕಗಳಿವೆ. ತಾಲ್ಲೂಕುವಾರು ಬಂಗಾರಪೇಟೆಯಲ್ಲಿ 3 ಏಜೆನ್ಸಿಗಳಿದ್ದು, ಒಟ್ಟು 54,851, ಕೋಲಾರದಲ್ಲಿ 8 ಏಜೆನ್ಸಿಗಳಿದ್ದು, ಒಟ್ಟು 1,34,450, ಮಾಲೂರುನಲ್ಲಿ 8 ಏಜೆನ್ಸಿಗಳಿದ್ದು, ಒಟ್ಟು 82,306, ಮುಳಬಾಗಿಲಿನಲ್ಲಿ 6 ಏಜೆನ್ಸಿಗಳಿದ್ದು, ಒಟ್ಟು 63,459, ಶ್ರೀನಿವಾಸಪುರದಲ್ಲಿ 5 ಏಜೆನ್ಸಿಗಳಿದ್ದು, 48,016 ಹಾಗೂ ಕೆ.ಜಿ.ಎಫ್‍ನಲ್ಲಿ 5 ಏಜೆನ್ಸಿಗಳಿದ್ದು, 73,013 ಗ್ಯಾಸ್ ಸಂಪರ್ಕ ಹೊಂದಿದ್ದಾರೆ’ ಎಂದು ಮಾಹಿತಿ ನೀಡಿದರು.

ಕೋಲಾರದಲ್ಲಿ Agni, Go Gas, Total Gas ಸೇರಿದಂತೆ 260 ಸಿಲಿಂಡರ್‌ಗಳು, ಮಾಲೂರಲ್ಲಿ XT Rates-Total Energies ಸೇರಿದಂತೆ 300 ಸಿಲಿಂಡರುಗಳು, ಕೆ.ಜಿ.ಎಫ್‍ನಲ್ಲಿ Home HP, HP Commercial, BPC and Jyothi ಸೇರಿದಂತೆ 136 ಹಾಗೂ ಕೋಲಾರದಲ್ಲಿ Indane, HP, BPC Jyothi ಸೇರಿದಂತೆ 23 ಪ್ರಕರಣಗಳನ್ನು ಅಂದರೆ ಜಿಲ್ಲೆಯಲ್ಲಿ ಒಟ್ಟು 719 ಪ್ರಕರಣಗಳನ್ನು ಆಯಾ ಠಾಣಾ ವ್ಯಾಪ್ತಿಯಲ್ಲಿ ದಾಖಲಿಸಲಾಗಿದೆಯೆಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲೆಯಲ್ಲಿ ಎಲ್ಲಾ ತಾಲ್ಲೂಕುಗಳು 41 ಏಜೆನ್ಸಿ ಮಾಲೀಕರು, ಇಂಡಿಯನ್ ಆಯಿಲ್, ಎಚ್.ಪಿ, ಬಿ.ಪಿ ಗ್ಯಾಸ್ ಕಂಪನಿಯ ಅಧಿಕಾರಿಗಳು ಮತ್ತು ಆಹಾರ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.