ADVERTISEMENT

ಮುಳಬಾಗಿಲು | ಮೇವಿನ ಸಮಸ್ಯೆ: ಕುರಿಗಾಹಿಗಳ ವಲಸೆ

ಮೇವಿಗಾಗಿ ಕುರಿಗಾಹಿಗಳು ವಲಸೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2024, 6:44 IST
Last Updated 27 ಮಾರ್ಚ್ 2024, 6:44 IST
ಮುಳಬಾಗಿಲು ತಾಲ್ಲೂಕಿನ ಎಚ್.ಕೋಡಿಹಳ್ಳಿಯ ಕುರಿಗಾಹಿಗಳು ದೂರದ ಹೆಬ್ಬಣಿ ಗ್ರಾಮದ ಕೆರೆಯಲ್ಲಿ ಕುರಿಗಳನ್ನು ಮೇಯಿಸುತ್ತಿರುವುದು
ಮುಳಬಾಗಿಲು ತಾಲ್ಲೂಕಿನ ಎಚ್.ಕೋಡಿಹಳ್ಳಿಯ ಕುರಿಗಾಹಿಗಳು ದೂರದ ಹೆಬ್ಬಣಿ ಗ್ರಾಮದ ಕೆರೆಯಲ್ಲಿ ಕುರಿಗಳನ್ನು ಮೇಯಿಸುತ್ತಿರುವುದು   

ಮುಳಬಾಗಿಲು: ತಾಲ್ಲೂಕಿನಲ್ಲಿ ಹೆಚ್ಚಾಗುತ್ತಿರುವ ಬರಗಾಲ ಹಾಗೂ ಬಿಸಿಲಿನಿಂದಾಗಿ ಜಾನುವಾರುಗಳಿಗೆ ಮೇವಿನ ಸಮಸ್ಯೆ ಉಲ್ಭಣವಾಗಿದೆ.

ತಾಲ್ಲೂಕಿನಲ್ಲಿ ಕೆರೆ ಕುಂಟೆಗಳು ತುಂಬಿ ಸುಮಾರು ನಾಲ್ಕು ವರ್ಷಗಳು ಕಳೆದಿದ್ದು, ಭೂಮಿಯ ಮೇಲಿನ ತೇವಾಂಶ ಸಂಪೂರ್ಣವಾಗಿ ಭತ್ತಿ ಹೋಗಿವೆ. ಇದರಿಂದ ಜಾನುವಾರುಗಳಿಗೆ ಈಗಾಗಲೇ ಮೇವಿನ ಸಮಸ್ಯೆ ಏರ್ಪಟ್ಟಿದ್ದು, ಕುರಿಗಳಿಗೆ ಮೇವಿಲ್ಲದೆ ಕುರಿಗಾಹಿಗಳು ದೂರದ ಊರುಗಳಿಗೆ ಹೋಗಿ ಮೇಯಿಸುವ ಪರಿಸ್ಥಿತಿ ಎದುರಾಗಿದೆ.

ನಂಗಲಿ, ಮುಳಬಾಗಿಲಿನ ಇಂಡ್ಲುಕೆರೆ, ಸೋಮೇಶ್ವರ ಪಾಳ್ಯದ ಕೆರೆ ಮತ್ತಿತರ ಕೆಲವು ಕೆರೆಗಳಲ್ಲಿ ಸ್ವಲ್ಪಮಟ್ಟಿಗೆ ನೀರಿದೆ. ಆದರೆ, ಉಳಿದ  ಎಲ್ಲಾ ಕೆರೆಗಳಲ್ಲಿ ನೀರು ಇಂಗಿ ಹೋಗಿವೆ. ಕೆಲವು ಕಡೆ ಕೆರೆಯ ತೂಬು ಹಾಳಾಗಿ ಕೆರೆಗಳು ತುಂಬಿದಾಗ ಕೆರೆ ಕಟ್ಟೆಯೇ ನಾಶವಾಗಿದೆ. ಇದರಿಂದ ಅನೇಕ ಕೆರೆಗಳಲ್ಲಿ ನೀರಿಲ್ಲದೆ ಬಣಗುಡುತ್ತಿವೆ. ಇದರಿಂದ ಜಾನುವಾರುಗಳಿಗೆ ಮೇವಿಲ್ಲದೆ ಪರಿತಪಿಸುವ ಪರಿಸ್ಥಿತಿ ಎದುರಾಗಿದೆ.

ADVERTISEMENT

ಕೆಲವು ಕಡೆ ದೂರದ ಊರುಗಳಿಗೆ ಹೋಗಿ ಕುರಿಗಳನ್ನು ಮೇಯಿಸಿಕೊಂಡು ಬರುತ್ತಿದ್ದರೆ. ಇನ್ನೂ ಕೆಲವು ಕಡೆ ಒಣ ಭೂಮಿಯಲ್ಲಿ ಒಣಗಿ ಹೋಗಿರುವ ಮೇವನ್ನು ಮೇಯಿಸಿಕೊಂಡು ಬರುತ್ತಿದ್ದಾರೆ. 

ತಾಲ್ಲೂಕಿನ ಎಚ್.ಕೋಡಿಹಳ್ಳಿ ಗ್ರಾಮದ ಮುರಳಿ ಹಾಗೂ ಮತ್ತಿತರರು ಸುಮಾರು 100 ಕುರಿಗಳನ್ನು ಸಾಗಿಸಿಕೊಂಡು ವಲಸೆ ಹೋಗಿದ್ದು, ಹೆಬ್ಬಣಿ ಕೆರೆಯಲ್ಲಿ ಮೇಯಿಸುತ್ತಿದ್ದ ದೃಶ್ಯ ಕಂಡು ಬಂದಿತು. 

ಎಚ್.ಕೋಡಿಹಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕುರಿಗಳಿಗೆ ಮೇವು ಇಲ್ಲದೆ, ಜಾನುವಾರುಗಳಿಗೆ ಕುಡಿಯಲು ನೀರು ಸಿಗುತ್ತಿಲ್ಲ. ಹಾಗಾಗಿ ಕೋಡಿಹಳ್ಳಿಯಿಂದ ಹೆಬ್ಬಣಿ ಗ್ರಾಮಕ್ಕೆ ಕುರಿಗಾಹಿಗಳು ವಲಸೆ ಹೋಗಲಾಗಿದೆ ಎಂಬುದು ಕುರಿಗಾಹಿಗಳ ಅಳಲಾಗಿದೆ.

ಹಸುಗಳ ಮೇವಿಗೆ ಹೆಚ್ಚಿದ ಬೇಡಿಕೆ: ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಹೈನುಗಾರಿಕೆ ನಂಬಿ ಜೀವನ ಮಾಡುತ್ತಿದ್ದಾರೆ. ಆದರೆ, ಈ ಬಾರಿ ಮಳೆ ಇಲ್ಲದೆ ಕೊಳವೆಬಾವಿ ಇರುವವರ ಜಮೀನಿನಲ್ಲಿ ಹಾಕಿರುವ ಜೋಳ ಅಥವಾ ಸೀಮೆ ಹುಲ್ಲನ್ನು ಖರೀದಿಸಿ ಜಾನುವಾರುಗಳನ್ನು ಮೇಯಿಸುವಂತಾಗಿದೆ.

ಮುಷ್ಟೂರು ಗ್ರಾಮದ ಬಳಿ ಜಾನುವಾರುಗಳಿಗೆ ಮಾರಲು ಬೆಳೆಸಿರುವ ಜೋಳದ ಹುಲ್ಲು 

ಅಂಕಿ ಅಂಶಗಳ ಪ್ರಕಾರ ತಾಲ್ಲೂಕಿನಲ್ಲಿ ಜಾನುವಾರುಗಳಿಗೆ ಮೇವಿನ ಸಮಸ್ಯೆ ಇಲ್ಲ. ಆದರೆ ಕೆಲವು ಕಡೆಗಳಲ್ಲಿ ಹಸಿರು ಮೇವು ಸಿಗದೆ ಇರುವ ಕಾರಣದಿಂದ ಕೆಲವು ಕುರಿಗಾಹಿಗಳು ಬೇರೆ ಊರುಗಳ ಕಡೆಗೆ ಮೇಯಿಸಲು ವಲಸೆ ಹೋಗಬಹುದಷ್ಟೇ

-ಬಿ.ಆರ್.ಮುನಿವೆಂಕಟಪ್ಪ ತಹಶೀಲ್ದಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.