ADVERTISEMENT

ಕೋಲಾರ | ವಸತಿ ಬಡಾವಣೆ; ಜಮೀನು ಕೊಡದಿದ್ದರೆ ಭೂಸ್ವಾಧೀನ

ಅಮಾನಿಕೆರೆ ಗ್ರಾಮದ ಜನರಿಗೆ ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರ ಮನವರಿಕೆ

ಕೆ.ಓಂಕಾರ ಮೂರ್ತಿ
Published 26 ಮೇ 2024, 5:59 IST
Last Updated 26 ಮೇ 2024, 5:59 IST
ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ
ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ   

ಕೋಲಾರ: ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರವು (ಕುಡಾ) ವಸತಿ ಯೋಜನೆಗಾಗಿ ಬಹಳ ವರ್ಷಗಳ ನಂತರ ಹೊಸ ಬಡಾವಣೆ ನಿರ್ಮಾಣಕ್ಕೆ ಪ್ರಯತ್ನ ಹಾಕುತ್ತಿದ್ದು, ಈ ನಿಟ್ಟಿನಲ್ಲಿ ನಗರ ಹೊರವಲಯದ ಅಮಾನಿಕೆರೆ ಗ್ರಾಮದ ಜಮೀನಿನ ಮೇಲೆ ಕಣ್ಣು ನೆಟ್ಟಿದೆ.

ಸಾರ್ವಜನಿಕರಿಂದ ನಿವೇಶನಗಳಿಗೆ ಬೇಡಿಕೆ ಇರುವ ಕಾರಣ ಕಡಿಮೆ ದರದಲ್ಲಿ ನಿವೇಶನ ಹಂಚಿಕೆ ಮಾಡುವ ಸಂಬಂಧ ವಸತಿ ಬಡಾವಣೆ ಯೋಜನೆ ಕೈಗೆತ್ತಿಕೊಳ್ಳಲು ಉದ್ದೇಶಿಸಿದೆ.

ಈ ನಿಟ್ಟಿನಲ್ಲಿ ಪ್ರಾಧಿಕಾರವು ಜಂಟಿ ಯೋಜನೆಗೆ ಮುಂದಾಗಿದೆ. ಭೂಮಾಲೀಕರ ಸಹಭಾಗಿತ್ವದಲ್ಲಿ 50:50 ಅನುಪಾತದ ಒಪ್ಪಂದ ಮಾಡಿಕೊಂಡು ಹೊಸ ಬಡಾವಣೆ ಅಭಿವೃದ್ಧಿ ಅಭಿವೃದ್ಧಿ ಮಾಡಲು ನಿರ್ಧರಿಸಿದೆ.

ADVERTISEMENT

ಅದಕ್ಕಾಗಿ ಎರಡನೇ ಹಂತದಲ್ಲಿ ಅಮಾನಿಕೆರೆ ಗ್ರಾಮದ ಜಮೀನುಗಳಲ್ಲಿ ವಸತಿ ಯೋಜನೆ ರೂಪಿಸಲು ಉದ್ದೇಶಿಸಿದೆ. ಉದ್ದೇಶಿತ ಬಡಾವಣೆಗೆ ಸ್ವ‌ಇಚ್ಛೆಯಿಂದ ಭೂಮಿ ನೀಡಲು ಆಸಕ್ತಿ ಇರುವ ಜಮೀನು ಮಾಲೀಕರು ಪ್ರಾಧಿಕಾರವನ್ನು ಸಂಪರ್ಕಿಸುವಂತೆ ಕೋರಿದೆ.

ಒಂದು ವೇಳೆ ಜಮೀನಿನ ಮಾಲೀಕರು ಸ್ವಇಚ್ಛೆಯಿಂದ ಜಮೀನನ್ನು ಬಿಟ್ಟುಕೊಡಲು ಮುಂದೆ ಬಾರದೆ ಇದ್ದಲ್ಲಿ ಅಮಾನಿಕರೆ ಗ್ರಾಮದ ಜಮೀನುಗಳನ್ನು ಹಂತಹಂತವಾಗಿ ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದಿಂದ ವಸತಿ ಬಡಾವಣೆ ಯೋಜನೆ ಕೈಗೆತ್ತಿಕೊಳ್ಳಲು ಭೂಸ್ವಾಧೀನಪಡಿಸಿಕೊಳ್ಳಲು ಕ್ರಮವಹಿಸಲಾಗುವುದು ಎಂದಿದೆ. ಈ ಸಂಬಂಧ ಜಮೀನುಗಳ ಮಾಲೀಕರಿಗೆ ಪ್ರಕಟಣೆ ಮೂಲಕ ಪ್ರಾಧಿಕಾರ ಮನವರಿಕೆ ಮಾಡಿದೆ.

ಈ ಬಗ್ಗೆ ಗ್ರಾಮಸ್ಥರು, ರೈತರು ಆತಂಕಗೊಂಡಿದ್ದಾರೆ. ಪ್ರಾಧಿಕಾರವು ಎಚ್ಚರಿಕೆ ನೀಡುತ್ತಿದೆ ಎಂಬ ಭಾವಿಸಿದ್ದು, ಜಮೀನು ಕಳೆದುಕೊಳ್ಳುವ ಸಂಬಂಧ ಭಯಭೀತರಾಗಿದ್ದಾರೆ. 

‘ಈ ಬಗ್ಗೆ ಭಯಪಡುವ ಅಗತ್ಯವಿಲ್ಲ. ನಾವು ಯಾರಿಗೂ ಎಚ್ಚರಿಕೆ ನೀಡುತ್ತಿಲ್ಲ. ಬದಲಾಗಿ ಮನವರಿಕೆ ಮಾಡುತ್ತಿದ್ದೇವೆ. ವಸತಿ ಯೋಜನೆಗೆ ರೈತರೇ ಮುಂದೆ ಬಂದು ಜಮೀನು ಬಿಟ್ಟುಕೊಟ್ಟರೆ ಒಳ್ಳೆಯದು. ಕೋಲಾರ ಅಭಿವೃದ್ಧಿ ಆಗುವುದರ ಜೊತೆಗೆ ರೈತರಿಗೂ ಅನುಕೂಲವಾಗಲಿದೆ. ನಾವೇ ಬಡಾವಣೆ ಅಭಿವೃದ್ಧಿಪಡಿಸಿ 50:50 ಅನುಪಾತದಲ್ಲಿ ರೈತರಿಗೆ ನಿವೇಶನ ನೀಡುತ್ತೇವೆ’ ಎಂದು ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶ್ರೀಕಾಂತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಹಂತ ಒಂದರಲ್ಲಿ ಅಭಿವೃದ್ಧಿಪಡಿಸಿದ ಟಮಕ ಬಡಾವಣೆ ಬಳಿಕ ಪ್ರಾಧಿಕಾರದಿಂದ ಯಾವುದೇ ವಸತಿ ಯೋಜನೆ ಕೈಗೆತ್ತಿಕೊಂಡಿಲ್ಲ. ಹಿಂದೆ ನಿವೇಶನ ಕೋರಿ ಎರಡು ಸಾವಿರ ಅರ್ಜಿಗಳು ಬಂದಿದ್ದವು. ಆದರೆ, ಟಮಕ ಬಡಾವಣೆಯೇ ಸರಿಯಾಗಿ ಅಭಿವೃದ್ಧಿ ಆಗಿಲ್ಲವೆಂದು ಸಾರ್ವಜನಿಕರು ಹಣದ ಸಮೇತ ಅರ್ಜಿ ವಾಪಸ್‌ ಪಡೆದಿದ್ದರು.

ಈಚೆಗೆ ಖಾಸಗಿ ಬಡಾವಣೆಗಳು ದೊಡ್ಡಮಟ್ಟದಲ್ಲಿ ತಲೆಎತ್ತುತ್ತಿವೆ. ಆದರೆ, ಪ್ರಾಧಿಕಾರದಿಂದ ವಸತಿ ಯೋಜನೆ ಅಭಿವೃದ್ಧಿಪಡಿಸಲು ಸಾಧ್ಯವಾಗಿಲ್ಲ. ಈ ಬಗ್ಗೆ ಪ್ರಾಧಿಕಾರ ಟೀಕೆಗೂ ಗುರಿಯಾಗಿದೆ.

‘ಪ್ರಾಧಿಕಾರದಿಂದ ಕಡೆಯ ಬಡಾವಣೆ ಮಾಡಿ ನಿರ್ಮಿಸಿ 30 ವರ್ಷಗಳಾಗಿದೆ. ನಾನು ಬಂದ ಮೇಲೆ ಟಮಕ ಬಡಾವಣೆಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದೇನೆ. ಇನ್ನೂ ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸ ಆಗಬೇಕಿದೆ’ ಎಂದರು.

‘ಈಚೆಗೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಎಲ್ಲಾ ಪ್ರಾಧಿಕಾರಿಗಳ ಜೊತೆ ಸಭೆ ನಡೆಸಿದರು. ಪ್ರತಿ ಪ್ರಾಧಿಕಾರದಿಂದ ಒಂದಾದರೂ ನಿವೇಶನ ಮಾಡಲು ಯೋಜನೆ ರೂಪಿಸುವಂತೆ ನಿರ್ದೇಶನ ನೀಡಿದ್ದಾರೆ’ ಎಂದು ತಿಳಿಸಿದರು.

50:50 ಸಹಭಾಗಿತ್ವ ಬದಲು ರೈತರಿಂದ ಭೂಮಿ ಒಮ್ಮೆಲೇ ಖರೀದಿಸಿ ಬಡಾವಣೆ ನಿರ್ಮಿಸಲು ಕೆಲವರು ಸಲಹೆ ನೀಡಿದ್ದಾರೆ.

ನಾವು ಅಮಾನಿಕೆರೆ ಗ್ರಾಮದ ಜನರಿಗೆ ಯಾವುದೇ ಬೆದರಿಕೆ ಹಾಕಿಲ್ಲ. ಬದಲಾಗಿ ವಸತಿ ಯೋಜನೆ ಕೈಗೆತ್ತಿಕೊಳ್ಳುವುದರಿಂದ ಉಂಟಾಗುವ ಅನುಕೂಲ ಅಭಿವೃದ್ಧಿ ಬಗ್ಗೆ ಮನವರಿಕೆ ಮಾಡಿದ್ದೇವೆ
ಶ್ರೀಕಾಂತ್‌ ಆಯುಕ್ತ ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರ

50:50 ಅನುಪಾತದಲ್ಲಿ ಅಭಿವೃದ್ಧಿ

‘ಕನಿಷ್ಠ 50 ಎಕರೆ ಜಮೀನು ಸಿಕ್ಕರೆ ಪ್ರಾಧಿಕಾರದಿಂದ ಹೊಸ ಬಡಾವಣೆ ಅಭಿವೃದ್ಧಿ ಮಾಡಬಹುದು. ಜನರೇ ಮುಂದೆ ಬಂದು ತಮ್ಮ ಜಮೀನು ಬಿಟ್ಟುಕೊಟ್ಟರೆ ಅನುಕೂಲ’ ಎಂದು ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ಶ್ರೀಕಾಂತ್‌ ತಿಳಿಸಿದರು. ‘ಈ ವಿಚಾರವಾಗಿ ತಿಳಿದವರು ಮುಂದೆ ಬರಬೇಕು. ಮಧ್ಯಸ್ಥಿಕೆ ವಹಿಸಿ ಗ್ರಾಮಸ್ಥರಿಗೆ ಮನವರಿಕೆ ಮಾಡಿ ಜಮೀನು ನೀಡಿದರೆ 50:50 ಅನುಪಾತದಡಿ ಅಭಿವೃದ್ಧಿಪಡಿಸಬಹುದು’ ಎಂದರು. ‘1 ಎಕರೆ ಜಮೀನು ಸಿಕ್ಕರೆ 30X40 ವಿಸ್ತೀರ್ಣದ ಅಂದಾಜು 20 ನಿವೇಶನ ಅಭಿವೃದ್ಧಿಪಡಿಸಬಹುದು. ಆಗ ಪ್ರಾಧಿಕಾರಕ್ಕೆ 10 ನಿವೇಶನ ಹಾಗೂ ರೈತರಿಗೆ 10 ನಿವೇಶನ ಸಿಗುತ್ತದೆ. ಅಭಿವೃದ್ಧಿಯ ಸಂಪೂರ್ಣ ವೆಚ್ಚವನ್ನು ಪ್ರಾಧಿಕಾರ ಭರಿಸುತ್ತದೆ. ಜೊತೆಗೆ ಸುತ್ತಲಿನ ರಸ್ತೆ ಪ್ರದೇಶ ಅಭಿವೃದ್ಧಿಯಾಗುತ್ತದೆ’ ಎಂದು ಹೇಳಿದರು.

ಹೆಚ್ಚು ಮೊತ್ತಕ್ಕೆ ಖಾಸಗಿಯವರು ಖರೀದಿ

ಕೋಲಾರ ಸುತ್ತಮುತ್ತ ಈಗ ಭೂಮಿಗೆ ಚಿನ್ನದ ಬೆಲೆ ಬಂದಿದೆ. ಖಾಸಗಿ ಬಡಾವಣೆ ನಿರ್ಮಾಣಕ್ಕೆ ವಾಣಿಜ್ಯ ಉದ್ದೇಶಕ್ಕೆ ಅಪಾರ್ಟ್‌ಮೆಂಟ್‌ ನಿರ್ಮಾಣಕ್ಕೆ ಬಿಲ್ಡರ್ಸ್‌ಗಳು ರಿಯಲ್‌ ಎಸ್ಟೇಟ್‌ನವರು ರೈತರಿಂದ ಜಮೀನು ಖರೀದಿಗೆ ವಿವಿಧ ಅಮಿಷವೊಡ್ಡುತ್ತಿದ್ದಾರೆ. ನಗಾರಭಿವೃದ್ಧಿ ಪ್ರಾಧಿಕಾರಕ್ಕಿಂತ ಎರಡುಪಟ್ಟು ಹೆಚ್ಚು ಹಣ ನೀಡಿ ಖರೀದಿಸುತ್ತಿದ್ದಾರೆ. 70:30ರ ಅನುಪಾತದಲ್ಲಿ ಹೊಸ ಬಡಾವಣೆ ಅಭಿವೃದ್ಧಿಪಡಿಸಲು ಮುಂದೆ ಬರುತ್ತಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.