ಕೋಲಾರ: ಜಿಲ್ಲಾ ಕೇಂದ್ರದಲ್ಲಿರುವ ಏಕೈಕ ಇಂದಿರಾ ಕ್ಯಾಂಟೀನ್ ಪರಿಸ್ಥಿತಿ ಅಧೋಗತಿಗೆ ತಲುಪಿದ್ದು, ಗ್ರಾಹಕರಿಗೆ ಸರಿಯಾಗಿ ತಿಂಡಿ, ಊಟ ಪೂರೈಸಲು ಸಿಬ್ಬಂದಿ ಪರದಾಡುತ್ತಿದ್ದಾರೆ.
ಇಡ್ಲಿ ಹಿಟ್ಟು ತಿರುವ ಗ್ರೈಂಡರ್‌ನ ಕಲ್ಲು ಒಡೆದು ಹೋಗಿದ್ದು, ಕೆಲ ದಿನಗಳಿಂದ ಇಡ್ಲಿ ಮಾಡುವುದೇ ನಿಂತು ಹೋಗಿದೆ. ವಾರದ ಹಿಂದೆ ಇಡ್ಲಿ ಪಾತ್ರೆಯೂ ಇರಲಿಲ್ಲ. ಸಾಂಬಾರ್‌ಗೆ ಕಾರ, ತಿಂಡಿಗೆ ಚಟ್ನಿಯನ್ನು ಹೊರಗಡೆಯಿಂದ ರುಬ್ಬಿಕೊಂಡ ಬರಬೇಕಾದ ಪರಿಸ್ಥಿತಿ ಇದೆ. ಫ್ರಿಜ್ ಬಹಳ ದಿನಗಳಿಂದ ಕೆಟ್ಟು ಹೋಗಿದ್ದು ಸರಿಪಡಿಸುವ ಗೋಜಿಗೆ ಹೋಗಿಲ್ಲ. ಶುದ್ಧ ನೀರಿನ ಫಿಲ್ಟರ್ ಕೂಡ ಕೆಟ್ಟು ಮೂಲೆ ಸೇರಿದೆ. ಹೊರಗಡೆಯಿಂದ ಕ್ಯಾನ್‌ನಲ್ಲಿ ನೀರು ತರಿಸಿ ಗ್ರಾಹಕರಿಗೆ ಪೂರೈಸಲಾಗುತ್ತಿದೆ.
ಈಚೆಗೆ ಆಹಾರ ಪೂರೈಸುವ ಏಜೆನ್ಸಿ ಬದಲಾಗಿದ್ದು, ಹೊಸಬರಿಗೆ ಗುತ್ತಿಗೆ ನೀಡಲಾಗಿದೆ. ಆದರೆ, ಅವರಿಗೆ ಇನ್ನೂ ಅಧಿಕೃತವಾಗಿ ಹಸ್ತಾಂತರವಾಗಿಲ್ಲ. ಹಿಂದೆ ಇದ್ದ ಏಜೆನ್ಸಿಯವರು ತಾವು ಇರಿಸಿದ್ದ ಪಾತ್ರೆಗಳನ್ನೆಲಾ ಕೊಂಡೊಯ್ದಿದ್ದಾರೆ. ಅಡುಗೆ ಸಿಬ್ಬಂದಿಯವರ ಮನವಿ ಮೇರೆಗೆ ಒಂದಿಷ್ಟು ಪಾತ್ರೆ ನೀಡಿದ್ದಾರೆ.
ಬಹಳ ದಿನಗಳಿಂದ ಸ್ವಚ್ಛತೆ ಮಾಡದೆ ಅಡುಗೆ ಕೋಣೆಯಲ್ಲಿ ಚರಂಡಿಯಲ್ಲಿ ಕಟ್ಟಿಕೊಂಡಿರುವ ಕೊಳಚೆ ನೀರು ನಿಂತಿದ್ದು, ವಾಸನೆ ಬರುತ್ತಿದೆ. ಅಡುಗೆಯವರು, ಸಹಾಯಕರು ಮೂಗು ಮುಚ್ಚಿಕೊಂಡೇ ಕೆಲಸದಲ್ಲಿ ತೊಡಗಿರುತ್ತಾರೆ. ಈಚೆಗೆ ಆಹಾರ ಇಲಾಖೆಯು ನೋಟಿಸ್ ಕೂಡ ನೀಡಿದೆ.
‘ಕೋಲಾರ ನಗರಸಭೆ ಗಮನಕ್ಕೆ ಈ ವಿಚಾರ ತಂದಿದ್ದು, ಯಾರೊಬ್ಬರೂ ಬಂದು ಸ್ಪಚ್ಛತೆ ಮಾಡುತ್ತಿಲ್ಲ’ ಎಂದು ಅಸಿಸ್ಟೆಂಟ್ ಮ್ಯಾನೇಜರ್ ಹಾಗೂ ಮುಖ್ಯ ಅಡುಗೆ ಸಿಬ್ಬಂದಿ ಸನ್ನಿ ಸಿಂಗ್ ತಿಳಿಸಿದರು.
ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಗೊತ್ತಿದ್ದರೂ ಆ ಕಡೆ ತಲೆಹಾಕುವವರು ಮಾತ್ರ ಯಾರೂ ಇಲ್ಲ. ಅಡುಗೆ ಸಿಬ್ಬಂದಿ, ಸಹಾಯಕರು ಬಹಳ ದಿನಗಳಿಂದ ಸಮಸ್ಯೆ ಬಗ್ಗೆ ಹೇಳಿಕೊಳ್ಳುತ್ತಿದ್ದು, ಯಾರೂ ಕೇಳಿಸಿಕೊಳ್ಳುತ್ತಿಲ್ಲ.
ಸರ್ಕಾರವು ಗ್ರಾಹಕರಿಗೆ ತಿಂಡಿಗೆ ₹ 5 (ಬೆಳಿಗ್ಗೆ), ಊಟಕ್ಕೆ (ಮಧ್ಯಾಹ್ನ ಹಾಗೂ ರಾತ್ರಿ) ₹ 10 ದರ ವಿಧಿಸುತ್ತಿದೆ. ಏಜೆನ್ಸಿಯವರು ಗುತ್ತಿಗೆ ಪಡೆದು ಆಹಾರ ಪದಾರ್ಥ ಪೂರೈಸುತ್ತಾರೆ. ಒಬ್ಬ ಅಸಿಸ್ಟೆಂಟ್ ಮ್ಯಾನೇಜರ್ ಕೂಡ ಆಗಿರುವ ಮುಖ್ಯ ಅಡುಗೆ ಸಿಬ್ಬಂದಿ ಹಾಗೂ ಇನ್ನಿತರ ಇಬ್ಬರು ಸಹಾಯಕರು ಇದ್ದಾರೆ.
ಆಟೊದವರು, ವ್ಯಾಪಾರಿಗಳು, ಕಾರ್ಮಿಕರು, ಕಾಲೇಜು ವಿದ್ಯಾರ್ಥಿಗಳು, ಪೌರಕಾರ್ಮಿಕರು, ಸರ್ಕಾರಿ ಕೆಲಸಗಳಿಗೆ ದೂರದೂರುಗಳಿಂದ ಬರುವವರು ಹೆಚ್ಚಾಗಿ ಇಂದಿರಾ ಕ್ಯಾಂಟೀನ್ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ.
ಅಡುಗೆ ಸಿಬ್ಬಂದಿಯ ಸಂಬಳವನ್ನೇ ಕೊಟ್ಟಿಲ್ಲ: ಸನ್ನಿ ಸಿಂಗ್ ಎಂಬುವರು ಮುಖ್ಯ ಅಡುಗೆ ಸಿಬ್ಬಂದಿಯಾಗಿ ಈ ಇಂದಿರಾ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ, ಮೂರ್ನಾಲ್ಕು ತಿಂಗಳಿಂದ ಅವರಿಗೆ ಸಂಬಳವನ್ನೇ ಕೊಟ್ಟಿಲ್ಲವಂತೆ. ಬಿಹಾರ ಮೂಲದ ಇವರು ಇದೇ ಕ್ಯಾಂಟೀನ್ ಕಟ್ಟಡದಲ್ಲಿ ವಾಸ್ತವ್ಯ ಹೂಡಿದ್ದಾರೆ.
ಹೊಸ ಏಜೆನ್ಸಿ–ಹೊಸ ಮೆನು
ಇಂದಿರಾ ಕ್ಯಾಂಟೀನ್ ನಿರ್ವಹಿಸುತ್ತಿದ್ದ ಏಜೆನ್ಸಿ ಬದಲಾಗಿದ್ದು ಶುಕ್ರವಾರ (ನ.15) ಹೊಸಬರಿಗೆ ಜವಾಬ್ದಾರಿ ಹಸ್ತಾಂತರವಾಗಲಿದೆ. ಫ್ರಿಜ್ ನೀರಿನ ಫಿಲ್ಟರ್ ಗ್ರೈಂಡರ್ ರಿಪೇರಿ ಮಾಡಿ ಕೊಡಲಿದ್ದೇವೆ. ಪಾತ್ರೆಗಳ ವ್ಯವಸ್ಥೆಯನ್ನೂ ಮಾಡಿ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು. ಆಹಾರ ಪದಾರ್ಥ ಪೂರೈಕೆಯಲ್ಲೂ ಯಾವುದೇ ಸಮಸ್ಯೆ ಆಗುವುದಿಲ್ಲ. ಅಲ್ಲದೇ ಹೊಸ ಮೆನು ಜಾರಿಗೆ ಬರಲಿದೆ. ಮುದ್ದೆ ಚಪಾತಿ ಪೂರಿ ದೋಸೆ ಕೇಸರಿ ಬಾತ್ ಸೇರಿದಂತೆ ವಿವಿಧ ಖಾದ್ಯಗಳನ್ನು ಮಾಡಿ ಪೂರೈಸಲಾಗುತ್ತದೆ ಅಂಬಿಕಾ ಯೋಜನಾ ನಿರ್ದೇಶಕಿ ಜಿಲ್ಲಾ ನಗರಾಭಿವೃದ್ಧಿ ಕೋಶ ಕೋಲಾರ
ಹೆಚ್ಚಿಗೆ ಊಟ ತಿಂಡಿ ಲೆಕ್ಕಾಚಾರದ ಆರೋಪ
ಕೋಲಾರದ ಇಂದಿರಾ ಕ್ಯಾಂಟೀನ್ ಆಹಾರ ತಯಾರಿಸುವ ಗುತ್ತಿಗೆದಾರರು ನಿತ್ಯ 300 ಊಟ ತಿಂಡಿ ನೀಡುತ್ತಿದ್ದು 1 ಸಾವಿರ ಊಟ ತಿಂಡಿ ವಿತರಿಸಿರುವುದಾಗಿ ಸರ್ಕಾರದಿಂದ ಬಿಲ್ ಮಾಡಿಸಿಕೊಳ್ಳುತ್ತಿದ್ದರು. ಇದರಲ್ಲಿ ಅಧಿಕಾರಿಗಳ ಕೈವಾಡವೂ ಇದೆ ಎಂದು ಕೋಲಾರ ನಗರಸಭೆಯ ಕೆಲ ಸದಸ್ಯರು ಈಚೆಗೆ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಆರೋಪಿಸಿದ್ದರು.
ಈ ಸಂಬಂಧ ಕ್ಯಾಂಟೀನ್‌ನ ಅಡುಗೆ ಸಿಬ್ಬಂದಿಯನ್ನು ವಿಚಾರಿಸಿದರೆ ‘ನಾವು ತಿಂಗಳಿಗೊಮ್ಮೆ ಕಳುಹಿಸುತ್ತಿದ್ದ ಪಟ್ಟಿಯನ್ನು ನಗರಸಭೆಯವರೇ ಕಡಿತಗೊಳಿಸಿ ಬಿಲ್ ಮಾಡುತ್ತಿದ್ದರು’ ಎಂದರು.
ಈ ಸಂಬಂಧ ನಿತ್ಯ ಕ್ಯಾಂಟೀನ್‌ನ ಬುಕ್‌ನಲ್ಲಿ ನಮೂದಾಗಿರುವ ಟೋಕನ್‌ಗಳ ಸಂಖ್ಯೆ ಪಟ್ಟಿಯನ್ನೂ ಮುಂದಿಟ್ಟರು. ಪ್ರತಿ ದಿನ ಸಾವಿರ ಟೋಕನ್ ವಿತರಿಸಿರುವುದು ಅದರಲ್ಲಿ ನಮೂದಾಗಿದೆ. ಇಷ್ಟು ಊಟ ಮಾಡುತ್ತಾರೆಯೇ ಎಂದು ಕೇಳಿದರೆ ‘ಸುತ್ತಮುತ್ತ ಕಾಲೇಜುಗಳಿದ್ದು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ರಾತ್ರಿ ಊಟ ಮಾತ್ರ ಕಡಿಮೆ’ ಎಂದು ಹೇಳಿದರು.
ಆಹಾರ ಧಾನ್ಯ ಪೂರೈಕೆಯೂ ಸ್ಥಗಿತ
ಈವರೆಗೆ ಇಂದಿರಾ ಕ್ಯಾಂಟೀನ್ ನಿರ್ವಹಿಸುತ್ತಿದ್ದ ಏಜೆನ್ಸಿಯ (ಗುತ್ತಿಗೆದಾರರು) ಅವಧಿ ಮುಗಿದು ಹಲವು ದಿನಗಳಾಗಿದ್ದು. ಆಹಾರ ಪದಾರ್ಥ ಪೂರೈಕೆಯೂ ನಿಂತು ಹೋಗಿದೆ. ಅಡುಗೆ ಸಿಬ್ಬಂದಿಯವರೇ ನಿತ್ಯ ಐದಾರು ಕೆ.ಜಿ ಅಕ್ಕಿ ಹಾಗೂ ಇನ್ನಿತರ ಅಗತ್ಯ ಪದಾರ್ಥ ಖರೀದಿಸಿ ತಂದು ಕ್ಯಾಂಟೀನ್‌ಗೆ ಬಂದವರಿಗೆ ಊಟ ತಿಂಡಿ ಬಡಿಸುತ್ತಿದ್ದಾರೆ. ಇದೂ ಸಾಲುತ್ತಿಲ್ಲ. ಹಲವರು ಗ್ರಾಹಕರು ಬಂದು ವಾಪಸ್ ಹೋಗುತ್ತಿದ್ದಾರೆ. ಅಡುಗೆ ಸಿಲಿಂಡರ್ ಕೇವಲ ಒಂದು ಇದ್ದು ಅಡುಗೆ ಸಿಬ್ಬಂದಿ ತಮ್ಮ ಮನೆಯ ಸಿಲಿಂಡರ್ ತರುತ್ತಿದ್ದಾರೆ. ಸದ್ಯ ಹೊಸ ಏಜೆನ್ಸಿಯರು ನಿರ್ವಹಣೆ ಜವಾಬ್ದಾರಿಯನ್ನು ಯಾವಾಗ ಕೈಗೆತ್ತಿಕೊಳ್ಳುತ್ತಾರೆ ಎಂಬುದನ್ನು ಅಡುಗೆ ಸಿಬ್ಬಂದಿ ಎದುರು ನೋಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.