ಬಂಗಾರಪೇಟೆ: ಜಿಲ್ಲೆಯಲ್ಲಿ ಅತಿ ವಿಸ್ತೀರ್ಣವಾದ ರೈಲ್ವೆ ಜಂಕ್ಷನ್ ಜತೆಗೆ ರೈಲ್ವೆ ಗೂಡ್ಸ್‌ಶೆಡ್ ಇರುವುದು ಪಟ್ಟಣದಲ್ಲೇ ಎನ್ನುವುದು ವಿಶೇಷ.
ಜಿಲ್ಲೆಯ ಎಲ್ಲ ಎಫ್ಸಿಐ ಗೋದಾಮುಗಳಿಗೆ ಇಲ್ಲಿನ ಗೂಡ್ಸ್ ಶೆಡ್ ಮೂಲಕವೇ ಹಲವು ದಶಕದಿಂದ ಪಡಿತರ ಅಕ್ಕಿ, ರಾಗಿ, ಗೋಧಿ ಸಾಗಣೆ ಮಾಡಲಾಗುತ್ತಿದೆ.
ಪಟ್ಟಣದ ರೈಲ್ವೆ ಜಂಕ್ಷನ್‌ನಲ್ಲಿ ಲೇಬೈ-1, ಲೇಬೈ-2 ಹಾಗೂ ಗೂಡ್ಸ್‌ಶೆಡ್-1 ಹೆಸರಿನಡಿ ಮೂರು ಕಡೆ ಸರಕುಗಳನ್ನು ಅನ್ಲೋಡ್ ಮಾಡಲು ವ್ಯವಸ್ಥೆ ಮಾಡಲಾಗಿದೆ. ಸದರಿ ಜಾಗದಲ್ಲಿ ಕ್ರಮವಾಗಿ 12, 20,10 ವ್ಯಾಗನ್ ಸೇರಿದಂತೆ ಒಟ್ಟು 42 ವ್ಯಾಗನ್ ನಿಲ್ಲಿಸಲಾಗುತ್ತದೆ. 42 ವ್ಯಾಗನ್ ಜತೆ 2 ರೈಲ್ವೆ ಎಂಜಿನ್, 1 ಬ್ರೇಕ್ ವ್ಯಾನ್ ನಿಲ್ಲಿಸುವ ಸಾಮರ್ಥ್ಯ ಹೊಂದಿದೆ.
ಹಿಂದೆ ತಿಂಗಳಿಗೆ ಐದಾರು ಬಾರಿ ಸರಕುಗಳ ಸಾಗಣೆ ಆಗುತ್ತಿದ್ದು, ಈಗ ಸಂಖ್ಯೆ 10ಕ್ಕೆ ಏರಿದೆ. ಕೋವಿಡ್ ಸಂದರ್ಭ ಇಡೀ ಜಿಲ್ಲೆಗೆ ಆಹಾರ ಧಾನ್ಯ, ಬರಗಾಲದಲ್ಲಿ ಜಾನುವಾರುಗೆ ಮೇವು, ನೀರು ಸಾಗಿಸಿದ್ದು ಕೂಡ ಇಲ್ಲಿನ ಗೂಡ್ಸ್‌ಶೆಡ್ ಮೂಲಕವೇ ಎನ್ನುವುದು ಗಮನಾರ್ಹ.
ಚಿನ್ನದ ಗಣಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಕಚ್ಚಾವಸ್ತುಗಳನ್ನು ಈ ಗೂಡ್ಸ್ ಶೆಡ್ ಮೂಲಕವೇ ಸಾಗಿಸಲಾಗುತ್ತಿತ್ತು. ಪ್ರಸ್ತುತ ರಾಜಸ್ಥಾನ್, ಉತ್ತರ ಪ್ರದೇಶದಿಂದ ಪಡಿತರ ಸೇರಿದಂತೆ ಹಲವು ಸರಕುಗಳನ್ನು ಸಾಗಿಸಲಾಗುತ್ತಿದೆ.
ಉಗಿಬಂಡಿ ಸಂಚರಿಸುತ್ತಿದ್ದ ಕಾಲದಿಂದಲೂ ಅಂದರೆ 1901ರಿಂದ ಇಲ್ಲಿ ಗೂಡ್ಸ್‌ಶೆಡ್ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಮಾಹಿತಿಯಿದೆ. ಆ ಸಂದರ್ಭ ರೈಲ್ವೆ ಎಂಜಿನ್ ಅನ್ನು ಬೇಕಾದ ದಿಕ್ಕಿಗೆ ತಿರುಗಿಸಲು ಟೇಬಲ್ ಟರ್ನೌಟ್ ವ್ಯವಸ್ಥೆ ಇತ್ತು. (ರೈಲ್ವೆ ಗೂಡ್ಸ್ ಎಂಜಿನ್ ಅನ್ನು ಟರ್ನೌಟ್ ಟೇಬಲ್ ಮೇಲೆ ನಿಲ್ಲಿಸಿ, ಆ ಟೇಬಲ್ ಅನ್ನು ಕಾರ್ಮಿಕರ ಸಹಾಯದಿಂದ ಮತ್ತೊಂದೆಡೆಗೆ ತಿರುಗಿಸುವ ಸ್ಥಳ) ನಂತರ ಮೀಟರ್‌ಗೇಜ್ ಈಗ ಬ್ರಾಡ್ ಗೇಜ್ ಆಗಿ ಬದಲಾಗಿದೆ.
ಪ್ರತಿ ವ್ಯಾಗನ್‌ನಲ್ಲಿ 50ಕೆಜಿ ತೂಕದ 1,250 ರಿಂದ 1,300 ಮೂಟೆ ತುಂಬಬಹುದಾಗಿದೆ. ಅಥವಾ 64 ಟನ್ ತೂಕ ಭರ್ತಿ ಮಾಡುವ ಸಾಮರ್ಥ್ಯ ಇರುತ್ತದೆ. 60ಕ್ಕಿಂತ ಹೆಚ್ಚು ಕಾರ್ಮಿಕರು ಇಲ್ಲಿ ಲೋಡಿಂಗ್, ಅನ್ಲೋಡಿಂಗ್ ಕೆಲಸದಲ್ಲಿ ತೊಡಗಿದ್ದಾರೆ.
ಗೂಡ್ಸ್‌ಶೆಡ್ ವ್ಯಾಗನ್ ನಿಲ್ಲಿದ ಮೇಲೆ ಸರಕುಗಳನ್ನು ಇಳಿಸಿಕೊಳ್ಳಲು 8 ಗಂಟೆ ಸಮಯಾವಕಾಶ ನೀಡಲಾಗುತ್ತದೆ. ಅದಕ್ಕಿಂತ ಹೆಚ್ಚ ಸಮಯ ಹಿಡಿದರೆ ಪ್ರತಿ ವ್ಯಾಗನ್‌ಗೆ ನಿಗದಿತ ಶುಲ್ಕ ಕಟ್ಟಬೇಕಾಗುತ್ತದೆ.
ಸದ್ಬಳಕೆಗೆ ಸಲಹೆ ರಮೇಶ್ ಗೌಡ ಪಟ್ಟಣದಲ್ಲಿ ಸ್ಟೇಷನ್ ಮಾಸ್ಟರ್ ಆಗಿದ್ದ ಸಂದರ್ಭ ಮೇಲಧಿಕಾರಿಗಳ ಸೂಚನೆ ಮೇರೆಗೆ ಇಲಾಖೆಯೊಂದಿಗೆ ಪತ್ರ ವ್ಯವಹಾರ ನಡೆಸಿ ಕೋಲಾರದ ಟೊಮೆಟೊ ಶ್ರೀನಿವಾಸಪುರದ ಮಾವು ಹೌರ ಹಾಗೂ ಗೌಹಾವಾಟಿ ಸಾಗಣೆ ವ್ಯವಸ್ಥೆ ಮಾಡಿದ್ದರು. ಕಿಸಾನ್ ಸ್ಪೆಷಲ್ ಯೋಜನೆಯಡಿ ರೈತರಿಗೆ ಶೇ50ರ ರಿಯಾಯಿತಿ ದರದಲ್ಲಿ ಸರಕು ಸಾಗಾಣಿಕೆ ಮಾಡುವ ಯೋಜನೆ ಕುರಿತು ಅರಿವು ಮೂಡಿಸಿದ್ದರು. ಅದು ಅನುಷ್ಠಾನ ಕೂಡ ಆಗಿದ್ದು ಇಂದಿಗೂ ಆ ಯೋಜನೆ ಜಾರಿಯಲ್ಲಿದೆ. ರೈತರು ಸದ್ಬಳಕೆ ಮಾಡಿಕೊಳ್ಳಬೇಕು ಎನ್ನುತ್ತಾರೆ ಅವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.