ADVERTISEMENT

ಕೋಲಾರ| ಜಿಲ್ಲೆಯಿಂದ ಮತ್ತೊಬ್ಬ ಸಿ.ಎಂ ನೀಡೋಣ‌: ಕೆ.ಶ್ರೀನಿವಾಸಗೌಡ

20ರಿಂದ ಎರಡು ದಿನ ಸಿದ್ದರಾಮಯ್ಯ ಪ್ರವಾಸ: ಕಾಂಗ್ರೆಸ್ ಮುಖಂಡರಿಂದ ಸಭೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2023, 5:03 IST
Last Updated 11 ಮಾರ್ಚ್ 2023, 5:03 IST
ಕೋಲಾರ ತಾಲ್ಲೂಕಿನ ಮಡಿವಾಳ ಗ್ರಾಮದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಪಕ್ಷದ ಬೂತ್ ಮಟ್ಟದ ಸಭೆಯಲ್ಲಿ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿದರು. ಶಾಸಕ ಕೆ.ಶ್ರೀನಿವಾಸಗೌಡ ಹಾಗೂ ಮುಖಂಡರು ಇದ್ದಾರೆ
ಕೋಲಾರ ತಾಲ್ಲೂಕಿನ ಮಡಿವಾಳ ಗ್ರಾಮದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಪಕ್ಷದ ಬೂತ್ ಮಟ್ಟದ ಸಭೆಯಲ್ಲಿ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿದರು. ಶಾಸಕ ಕೆ.ಶ್ರೀನಿವಾಸಗೌಡ ಹಾಗೂ ಮುಖಂಡರು ಇದ್ದಾರೆ   

ಕೋಲಾರ: ‘ಜಿಲ್ಲೆಯಿಂದ ಮೊದಲ ಮುಖ್ಯಮಂತ್ರಿಯನ್ನು ನೀಡಲಾಗಿದೆ. ಕೋಲಾರ ಕ್ಷೇತ್ರದಲ್ಲಿ ಮುಂಬರುವ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಗೆಲ್ಲಿಸಿ ಮುಂದಿನ ಮುಖ್ಯಮಂತ್ರಿಯನ್ನೂ ನಮ್ಮ ಜಿಲ್ಲೆಯಿಂದಲೇ ನೀಡೋಣ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಹೇಳಿದರು.

ತಾಲ್ಲೂಕಿನ ಮಡಿವಾಳ ಗ್ರಾಮದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಪಕ್ಷದ ಬೂತ್ ಮಟ್ಟದ ಸಭೆಯಲ್ಲಿ ಅವರು ಮಾತನಾಡಿದರು.

‘ಸಿದ್ದರಾಮಯ್ಯ ಅವರನ್ನು ಕೋಲಾರ ಕ್ಷೇತ್ರದ ಜನತೆಸ ಸದಾ ಸ್ಮರಣೆ ಮಾಡಿಕೊಳ್ಳಬೇಕು. ಕೆ.ಸಿ.ವ್ಯಾಲಿ ಯೋಜನೆ ಸೇರಿದಂತೆ ಅನೇಕ ರೈತಪರ ಯೋಜನೆಗಳಿಂದಾಗಿ ಜಿಲ್ಲೆಗೆ ಅನುಕೂಲ ಕಲ್ಪಿಸಿದ್ದಾರೆ’ ಎಂದರು.

ADVERTISEMENT

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ, ‘ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಬೆನ್ನಲ್ಲೇ ದಾರಿ ಹೋಕರೆಲ್ಲಾ ಟೀಕೆ ಮಾಡಲು ಹೊರಟಿದ್ದಾರೆ. ಅವರಿಗೆಲ್ಲ ಮೇ ತಿಂಗಳಲ್ಲಿ ಫಲಿತಾಂಶವೇ ಉತ್ತರವಾಗಬೇಕು’
ಎಂದರು.

‘ಜಿಲ್ಲೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮುಖಂಡರಿಗೆ ಸಿದ್ದರಾಮಯ್ಯ ಅವರನ್ನು ಟೀಕೆ ಮಾಡುವುದು ಪ್ರವೃತ್ತಿಯಾಗಿದೆ. ಈ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳಬೇಡಿ. ಮತದಾರರು ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಜನಪ್ರಿಯ ಯೋಜನೆಗಳನ್ನು ಬೆಂಬಲಿಸಿ ಮತ ಹಾಕುವ ಮೂಲಕವೇ ಉತ್ತರ ಕೊಡಬೇಕು’ ಎಂದರು

‘ಸಿದ್ದರಾಮಯ್ಯ ಮಾರ್ಚ್‌ 20 ಮತ್ತು 21 ರಂದು ಎರಡು ದಿನ ಕ್ಷೇತ್ರದಲ್ಲಿ ಪ್ರವಾಸ ಮಾಡಲಿದ್ದು, 20 ರಂದು ಕ್ಯಾಲನೂರು ಗ್ರಾಮದಲ್ಲಿ ಬೃಹತ್ ಸಭೆ ನಡೆಸಲಾಗುತ್ತಿದೆ’ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ ಮಾತನಾಡಿ, ‘ಸಿದ್ದರಾಮಯ್ಯ ಅವರ ಸಾಧನೆಗಳನ್ನು ಮುಂದಿಟ್ಟುಕೊಂಡು ಪ್ರಚಾರಕ್ಕೆ ತೆರಳುತ್ತಿದ್ದು, ಜನರಿಗೆ ಮನವರಿಕೆ ಮಾಡಿಕೊಡಬೇಕು. ಬಡವರ ಪರವಾಗಿ ಯೋಜನೆಗಳನ್ನು ರೂಪಿಸಲು ಕಾಂಗ್ರೆಸ್‍ನಿಂದ ಮಾತ್ರ ಸಾಧ್ಯವಿದ್ದು, ಈಗಾಗಲೇ ಜಿಲ್ಲೆಯಲ್ಲಿ ಮೂಲ ಕಾಂಗ್ರೆಸ್ಸಿಗರು ಜನತಾ ಪರಿವಾರದ ನಾಯಕರು ಜತೆಯಾಗಿ ಕೆಲಸ ಮಾಡುತ್ತಿದ್ದೇವೆ’ ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಕಡಗಟ್ಟೂರು ದಯಾನಂದ್, ಕೋಚಿಮುಲ್ ಮಾಜಿ ನಿರ್ದೇಶಕ ರಾಮಕೃಷ್ಣೇಗೌಡ, ಸ್ಥಳೀಯ ಮುಖಂಡರಾದ ದೇವರಾಜ್, ಶ್ರೀನಿವಾಸ್, ವೆಂಕಟಸ್ವಾಮಪ್ಪ, ಲಕ್ಷ್ಮಣ್, ಮುನಿರಾಜು, ಬೈರೇಗೌಡ, ಗೋಪಾಲಕೃಷ್ಣ, ಮಲ್ಲಪ್ಪನಹಳ್ಳಿ ಸೋಮಣ್ಣ, ನಾರಾಯಣಸ್ವಾಮಿ, ತಿರುಮಲಪ್ಪ, ಚಂದ್ರಶೇಖರ್, ಡೇವಿಡ್, ರಿಯಾಜ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.