ಕೋಲಾರ: ಒಂದು ಕಾಲದಲ್ಲಿ ಭದ್ರಕೋಟೆ ಎನಿಸಿದ್ದ ಕೋಲಾರ ಮೀಸಲು ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಸತತ ಎರಡನೇ ಬಾರಿ ಮಕಾಡೆ ಮಲಗಿದೆ. ಇತ್ತ ಬಿಜೆಪಿ ಜೊತೆಗಿನ ಮೈತ್ರಿ ತಂತ್ರ ಯಶಸ್ವಿಯಾಗಿದ್ದು, ಜೆಡಿಎಸ್ ಗೆಲುವಿನ ಕೇಕೆ ಮೊಳಗಿಸಿದೆ.
ಭಾರಿ ಕುತೂಹಲ ಮೂಡಿಸಿದ್ದ ಈ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ಜೆಡಿಎಸ್‌ನ ಎಂ.ಮಲ್ಲೇಶ್ ಬಾಬು ಅವರು ಆಡಳಿತರೂಢ ‘ಕೈ’ ಪಾಳಯಕ್ಕೆ ಸಡ್ಡೊಡೆದು ಗೆಲುವು ಸಾಧಿಸಿದ್ದಾರೆ. ಈ ಹಿಂದೆ ಬಂಗಾರಪೇಟೆ ವಿಧಾನಸಭೆ ಕ್ಷೇತ್ರದಲ್ಲಿ ಸತತ ಎರಡು ಬಾರಿ ಸೋಲು ಕಂಡಿದ್ದ ಅವರಿಗೆ ಈ ಗೆಲುವು ರಾಜಕೀಯ ಪುನರ್ ಜನ್ಮ ನೀಡಿದೆ. ಹೀಗಾಗಿ, ಅನುಕಂಪದ ಗೆಲುವು ಎಂದೂ ವಿಶ್ಲೇಷಿಸಲಾಗುತ್ತಿದೆ.
ಮೊದಲ ಬಾರಿ ಸಂಸತ್ ಪ್ರವೇಶಿಸಲು ಸಿದ್ಧರಾಗಿರುವ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಕೆ.ವಿ.ಗೌತಮ್ ಅವರನ್ನು 71,388 ಮತಗಳಿಂದ ಸೋಲಿಸಿದ್ದಾರೆ. ಮಲ್ಲೇಶ್ ಬಾಬು 6,91,481 (ಶೇ 51.02) ಮತ ಪಡೆದರೆ, ಪರಾಭವಗೊಂಡ ಗೌತಮ್ 6,20,093 (ಶೇ 45.76) ಮತ ಗಳಿಸಿದ್ದಾರೆ.
ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಭಾರಿ ಬಿಗಿ ಭದ್ರತೆಯಲ್ಲಿ ಮಂಗಳವಾರ ನಡೆದ ಮತ ಎಣಿಕೆಯಲ್ಲಿ ಯಾವುದೇ ಹಂತದಲ್ಲೂ ಕಾಂಗ್ರೆಸ್ ಮುನ್ನಡೆ ಕಾಣಲಿಲ್ಲ. ಇತ್ತ ಮೈತ್ರಿ ಅಭ್ಯರ್ಥಿ ನಿರಂತರ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶ ಕಂಡರು.
ಒಂಬತ್ತು ಸುತ್ತಿನ ಅಂತ್ಯಕ್ಕೆ ಮಲ್ಲೇಶ್ ಬಾಬು 67,408 ಮತಗಳಿಂದ ಭರ್ಜರಿ ಮುನ್ನಡೆ ಕಾಯ್ದುಕೊಂಡಿದ್ದರು. ಆದರೆ, 10ನೇ ಸುತ್ತಿನಿಂದ ನಿಧಾನವಾಗಿ ಅಂತರ ತಗ್ಗುತ್ತಾ ಸಾಗಿತು. ಒಂದು ಹಂತದಲ್ಲಿ ಅವರ ಮುನ್ನಡೆ ಕೇವಲ 2,278ಮತಗಳಿಗೆ ಬಂದಿತ್ತು. ನಂತರ ಸುತ್ತುಗಳಲ್ಲಿ ಮತ್ತೆ ಚೇತರಿಸಿಕೊಂಡರು, ಆನಂತರ ಅವರದ್ದೇ ಪ್ರಾಬಲ್ಯ. ಇತ್ತ ಸೋಲು ಖಚಿತವಾಗುತ್ತಿದ್ದಂತೆ ಕೆ.ವಿ.ಗೌತಮ್ ಅವರು ಮತ ಕೇಂದ್ರದಿಂದ ನಿರಾಸೆಯಿಂದ ಹೊರಟರು.
ಈ ಮೀಸಲು ಕ್ಷೇತ್ರದಲ್ಲಿ 2019ರಲ್ಲಿ ಮೊದಲ ಬಾರಿ ಕಾಂಗ್ರೆಸ್‌ಗೆ ಆಘಾತ ಎದುರಿಸಿತ್ತು. ಸತತ ಏಳು ಬಾರಿ ಗೆದ್ದು ಎಂಟನೇ ಬಾರಿ ಕಣಕ್ಕಿಳಿದಿದ್ದ ಕೆ.ಎಚ್.ಮುನಿಯಪ್ಪ ಅವರನ್ನು ಬಿಜೆಪಿಯ ಎಸ್.ಮುನಿಸ್ವಾಮಿ ಸುಮಾರು 2 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದರು. ಆಗ ಕಾಂಗ್ರೆಸ್ ಪಕ್ಷವು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿತ್ತು. ಅದು ಕೂಡ ಸೋಲಿಗೆ ಕಾರಣ ಎಂದು ಆಗ ವಿಶ್ಲೇಷಿಸಲಾಗಿತ್ತು. ಆದರೆ, ಈ ಬಾರಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದ ಜೆಡಿಎಸ್‌ಗೆ ಪ್ಲಸ್ ಪಾಯಿಂಟ್ ಆಗಿದೆ.
ಮಲ್ಲೇಶ್ ಬಾಬು ಕೋಲಾರ, ಬಂಗಾರಪೇಟೆ, ಮಾಲೂರು, ಶ್ರೀನಿವಾಸಪುರ, ಮುಳಬಾಗಿಲು, ಚಿಂತಾಮಣಿ ವಿಧಾನಸಭಾ ಕ್ಷೇತ್ರಗಳಲ್ಲಿ ಮೇಲುಗೈ ಸಾಧಿಸಿದ್ದಾರೆ. ಗೌತಮ್ ಅವರಿಗೆ ಕೆಜಿಎಫ್ ಹಾಗೂ ಶಿಡ್ಲಘಟ್ಟ ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಲಭಿಸಿದೆ.
ಅಂಚೆ ಮತ ಗಳಿಕೆಯಲ್ಲೂ ಮಲ್ಲೇಶ್ ಬಾಬು ಮೇಲುಗೈ ಸಾಧಿಸಿದ್ದಾರೆ. ಅವರು 2,296 ಮತ ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ 1,393 ಮತ ಗಿಟ್ಟಿಸಿಕೊಂಡಿದ್ದಾರೆ.
ಕೋಲಾರ ಮೀಸಲು ಕ್ಷೇತ್ರದ ಫಲಿತಾಂಶ
ಎಂ.ಮಲ್ಲೇಶ್ ಬಾಬು (ಜೆಡಿಎಸ್–ಬಿಜೆಪಿ); 691481 (ಶೇ 51.02) ಕೆ.ವಿ.ಗೌತಮ್ (ಕಾಂಗ್ರೆಸ್); 620093 (ಶೇ 45.76) ಗೆಲುವಿನ ಅಂತರ; 71388
ಕೋಲಾರ ಲೋಕಸಭೆ ಕ್ಷೇತ್ರದಲ್ಲಿ ಮತದಾನವಾಗಿದ್ದ ವಿವರ
ಪುರುಷರು; 680900 (ಶೇ 79.75)
ಮಹಿಳೆಯರು; 670678 (ಶೇ 76.84)
ಲಿಂಗತ್ವ ಅಲ್ಪಸಂಖ್ಯಾತರು; 68 (ಶೇ 32.23)
ಒಟ್ಟು ಮತದಾನ: 1351646 (ಶೇ 78.27)
ಕೋಲಾರ ಲೋಕಸಭಾ ಕ್ಷೇತ್ರದ ಕಣದಲ್ಲಿದ್ದ ಅಭ್ಯರ್ಥಿಗಳು ಪಡೆದ ಮತ (ಅಭ್ಯರ್ಥಿಗಳು; ಪಕ್ಷ; ಮತಗಳು; ಶೇ )
ಎಂ.ಮಲ್ಲೇಶ್ ಬಾಬು; ಜೆಡಿಎಸ್; 691481; 51.02
ಕೆ.ವಿ.ಗೌತಮ್; ಕಾಂಗ್ರೆಸ್; 620093; 45.76
ಸುಮನ್ ಎಚ್.ಎನ್.; ಪಕ್ಷೇತರ; 6487; 0.48
ಹೋಳೂರು ಶ್ರೀನಿವಾಸ; ಪಕ್ಷೇತರ; 6163; 0.45
ಎಸ್.ಬಿ. ಸುರೇಶ್; ಬಿಎಸ್‌ಪಿ; 4732; 0.35
ಕೆ.ಆರ್.ದೇವರಾಜ; ಡಿಜೆಪಿ; 4597; 0.34
ಎಂ. ವೆಂಕಟಸ್ವಾಮಿ; ಪಕ್ಷೇತರ; 3354; 0.25
ಆರ್.ರಂಜಿತ್ ಕುಮಾರ್; ಪಕ್ಷೇತರ; 2118; 0.16
ಎಸ್.ಎನ್.ನಾರಾಯಣಸ್ವಾಮಿ ವಿ; ಪಕ್ಷೇತರ; 1985; 0.15
ಡಿ.ಗೋಪಾಲಕೃಷ್ಣ; ಎಸ್ಪಿ–ಇಂಡಿಯಾ; 1669; 0.12
ದೇವರಾಜ; ಯುಪಿಪಿ; 1354; 0.1
ಎಂ.ಎಸ್.ಬದರಿನಾರಾಯಣ; ಪಕ್ಷೇತರ; 1116; 0.08
ಮಹೇಶ್ ಎ.ವಿ; ಕೆಆರ್‌ಎಸ್; 1065; 0.08
ತಿಮ್ಮರಾಯಪ್ಪ; ಆರ್‌ಪಿಐ–ಕರ್ನಾಟಕ; 864; 0.06
ಆರ್.ರಾಜೇಂದ್ರ; ಪಕ್ಷೇತರ; 751; 0.06
ಎಂ.ಮುನಿಗಂಗಪ್ಪ; ಪಕ್ಷೇತರ; 604; 0.04
ಎಂ.ಸಿ.ಹಳ್ಳಿ ವೇಣು; ವಿಸಿಕೆ; 521; 0.04
ಕೃಷ್ಣಯ್ಯ ಎನ್; ಪಕ್ಷೇತರ; 443; 0.03
ನೋಟಾ; –; 5831; 0.43
ಮತ ಎಣಿಕೆ ವೇಳೆ ಪ್ರಮುಖ ವಿದ್ಯಮಾನಗಳು
ಮತ ಎಣಿಕೆ ವೇಳೆ ಮಲ್ಲೇಶ್ ಬಾಬು ಒಂದು ಹಂತದಲ್ಲಿ ಸುಮಾರು 50 ಸಾವಿರ ಮತಗಳಿಂದ ಮುಂದಿದ್ದರೂ ಮುಸ್ಲಿಮರು ಹೆಚ್ಚಿರುವ ಪ್ರದೇಶಗಳ ಮತಗಳ ರೌಂಡ್‌ಗಳ ಬಗ್ಗೆ ಆತಂಕ ವ್ಯಕ್ತಪಡಿಸಿದರು.
ಹಿನ್ನಡೆ ವೇಳೆ ಕಾಂಗ್ರೆಸ್‌ನ ಕೆ.ವಿ.ಗೌತಮ್ ಮರದ ಕೆಳಗೆ ಬೇಸರದಿಂದ ಕುಳಿತಿದ್ದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಲಕ್ಷ್ಮಿನಾರಾಯಣ ಸಮಾಧಾನಪಡಿಸುತ್ತಿದ್ದರು.
ಆರಂಭದಿಂದ ನಿರಂತರ ಮುನ್ನಡೆ ಕಾಯ್ದುಕೊಂಡ ಮಲ್ಲೇಶ್ ಬಾಬು.
10ನೇ ಸುತ್ತಿನಿಂದ ಮಲ್ಲೇಶ್ ಬಾಬು ಮುನ್ನಡೆ ತಗ್ಗುತ್ತಾ ಸಾಗಿತು.
ಒಂದು ಹಂತದಲ್ಲಿ ಮಲ್ಲೇಶ್ ಬಾಬು ಮುನ್ನಡೆ 2278ಕ್ಕೆ ತಗ್ಗಿತ್ತು.
ಮತ್ತೆ ಮಲ್ಲೇಶ್ ಬಾಬು ಚೇತರಿಕೊಂಡು ಮುನ್ನಡೆ ದಾಖಲಿಸಿದರು.
ಗೆಲುವನ್ನು ಅಷ್ಟೇನೂ ಸಂಭ್ರಮಿಸದ ಮಲ್ಲೇಶ್ ಬಾಬು.
ಮತ ಎಣಿಕೆ ಕೇಂದ್ರದಿಂದ ಹೊರಗೆ ಬಂದ ಅವರನ್ನು ಮೇಲೆತ್ತಿ ಸಂಭ್ರಮಿಸಿದ ಕಾರ್ಯಕರ್ತರು.
ಬಂಗಾರಪೇಟೆ ರಸ್ತೆಯಲ್ಲಿ ಜಮಾಯಿಸಿದ ಕಾರ್ಯಕರ್ತರು ಅಭಿಮಾನಿಗಳು.
ನೋಟಾಕ್ಕೆ ಐದನೇ ಸ್ಥಾನ!
ಕೋಲಾರ ಕ್ಷೇತ್ರದಲ್ಲಿ ನೋಟಾಕ್ಕೆ ಐದನೇ ಸ್ಥಾನ ಲಭಿಸಿದೆ. ಕ್ಷೇತ್ರದಲ್ಲಿ ಒಟ್ಟು 18 ಸ್ಪರ್ಧಿಗಳು ಕಣದಲ್ಲಿದ್ದರು. ಅವರಲ್ಲಿ ಜೆಡಿಎಸ್‌ನ ಎಂ.ಮಲ್ಲೇಶ್ ಬಾಬು (691481) ಕಾಂಗ್ರೆಸ್‌ನ ಕೆ.ವಿ.ಗೌತಮ್ (620093) ಪಕ್ಷೇತರರಾದ ಸುಮನ್ ಎಚ್.ಎನ್. (6487) ಹಾಗೂ ಹೋಳೂರು ಶ್ರೀನಿವಾಸ (6163) ನಂತರದ ಸ್ಥಾನದಲ್ಲಿ ನೋಟಾ (5831) ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.