ADVERTISEMENT

ಕೋಲಾರ | ವಿವಾಹಿತೆಯ ಆತ್ಮಹತ್ಯೆ ಪ್ರಕರಣ; ಪತಿ ಮನೆ ಪಕ್ಕದಲ್ಲೇ ಅಂತ್ಯಕ್ರಿಯೆ!

ವರದಕ್ಷಿಣೆ ಕಿರುಕುಳ ಆರೋಪ, ಮನೆ ಮುಂದೆ ಶವವಿಟ್ಟು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2024, 22:30 IST
Last Updated 25 ಆಗಸ್ಟ್ 2024, 22:30 IST
ಕೋಲಾರ ತಾಲ್ಲೂಕಿನ ತೂರಾಂಡಹಳ್ಳಿ ಗ್ರಾಮದಲ್ಲಿ ಭಾನುವಾರ ಪೊಲೀಸರ ಸಮ್ಮುಖದಲ್ಲಿ ಪತಿ ಉಲ್ಲಾಸ್‌ಗೌಡ ಮನೆ ಪಕ್ಕದಲ್ಲೇ ಮಾನಸಾ ಅವರ ಅಂತ್ಯಕ್ರಿಯೆಗೆ ನಡೆದ ಸಿದ್ಧತೆ
ಕೋಲಾರ ತಾಲ್ಲೂಕಿನ ತೂರಾಂಡಹಳ್ಳಿ ಗ್ರಾಮದಲ್ಲಿ ಭಾನುವಾರ ಪೊಲೀಸರ ಸಮ್ಮುಖದಲ್ಲಿ ಪತಿ ಉಲ್ಲಾಸ್‌ಗೌಡ ಮನೆ ಪಕ್ಕದಲ್ಲೇ ಮಾನಸಾ ಅವರ ಅಂತ್ಯಕ್ರಿಯೆಗೆ ನಡೆದ ಸಿದ್ಧತೆ   

ಕೋಲಾರ: ನಗರ ಹೊರವಲಯದ ಸಹಕಾರ ನಗರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ನವ ವಿವಾಹಿತೆ ಮಾನಸಾ (24) ಅವರ ಪೋಷಕರು, ಭಾನುವಾರ ಅಳಿಯ ಉಲ್ಲಾಸ್‌ಗೌಡ ಮನೆ ಮುಂದೆ ಪುತ್ರಿಯ ಶವವಿಟ್ಟು ಪ್ರತಿಭಟನೆ ನಡೆಸಿದರು. ಬಳಿಕ ಆತನ ಮನೆ ಪಕ್ಕದಲ್ಲೇ ಅಂತ್ಯಕ್ರಿಯೆ ನಡೆಸಿದರು.

ಅಳಿಯ ಹಾಗೂ ಆತನ ಪೋಷಕರು ನೀಡಿದ ವರದಕ್ಷಿಣೆ ಕಿರುಕುಳದಿಂದಲೇ ಪುತ್ರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರಿದರು.

ಮಾನಸಾ ಪತಿ ಉಲ್ಲಾಸ್‍ಗೌಡ ಅವರ ತೂರಾಂಡಹಳ್ಳಿ ಗ್ರಾಮದ ನಿವಾಸದ ಗೇಟ್‌ ಮುಂದೆಯೇ ಅಂತ್ಯಕ್ರಿಯೆ ನಡೆಸಲು ಮುಂದಾದರು. ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳು ಹೋರಾಟಗಾರರೂ ಇದ್ದರು. ಈ ಹಂತದಲ್ಲಿ ಪೊಲೀಸರು ಹಾಗೂ ಮಾನಸಾ ಕಡೆಯವರ ನಡುವೆ ವಾಗ್ವಾದ ನಡೆಯಿತು, ಕ್ರಮಕ್ಕೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ಉಲ್ಲಾಸ್‌ಗೌಡ ಹಾಗೂ ಅವರ ಕುಟುಂಬದವರು ಇರಲಿಲ್ಲ. ನ್ಯಾಯ ಕೊಡಿಸುವ ಭರವಸೆಯನ್ನು ಪೊಲೀಸರು ನೀಡಿದ ಬಳಿಕ ಪತಿ ಮನೆಯ ಪಕ್ಕದಲ್ಲಿ ಅಂತ್ಯಸಂಸ್ಕಾರ ನಡೆಸಿದರು.

ADVERTISEMENT

ಒಂದು ವರ್ಷದ ಹಿಂದೆ ಮಾನಸಾ ಹಾಗೂ ಉಲ್ಲಾಸ್‍ಗೌಡ ವಿವಾಹವಾಗಿದ್ದರು. ಅವರು ಬೆಂಗಳೂರಿನ ಗಿರಿನಗರದಲ್ಲಿ ವಾಸವಿದ್ದರು.

ವರದಕ್ಷಿಣೆ ಹಾಗೂ ಮಾನಸಿಕ ಕಿರುಕುಳದ ದೂರು ಬಂದಾಗ ಹಿರಿಯರು ಹಲವಾರು ಸಲ ರಾಜಿ ಸಂಧಾನ ನಡೆಸಿದ್ದರು. ಆನಂತರ ಪತಿ ಕುಟುಂಬದವರು ಮಾನಸಾ ಅವರನ್ನು ತವರು ಮನೆಗೆ ಕಳುಹಿಸಿದ್ದರು ಎನ್ನಲಾಗಿದೆ. ವಿಚ್ಚೇದನ ಪಡೆದುಕೊಳ್ಳುವ ಉದ್ದೇಶದಿಂದ ವಕೀಲರ ಕಡೆಯಿಂದ ನೋಟಿಸ್ ಕೂಡ ಬಂದಿತ್ತು ಎಂಬುದು ಗೊತ್ತಾಗಿದೆ. ಇದರಿಂದ ಬೇಸತ್ತು ಮಾನಸಾ, ಶನಿವಾರ ಡೆತ್‌ ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು.

ಕೋಲಾರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಮಾನಸಾ ಎಂಬ ವಿವಾಹಿತೆಯು ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವರದಕ್ಷಿಣಿ ಕಿರುಕುಳದಿಂದ ಸಾವು ಸಂಭವಿಸಿರುವ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಪತಿ ಉಲ್ಲಾಸ್‌, ಅವರ ಅಪ್ಪ, ಅಮ್ಮ ಹಾಗೂ ಮಾವಂದಿರು ಸೇರಿದಂತೆ ಐವರ ಮೇಲೆ ಪೋಷಕರು ದೂರು ನೀಡಿದ್ದಾರೆ. ಈ ವಿಚಾರವಾಗಿ ತಂಡ ರಚಿಸಿ ಆರೋಪಿಗಳನ್ನು ಬಂಧಿಸಲು ಕಾರ್ಯಾಚರಣೆ ನಡೆಸಿದ್ದೇವೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌ ಬಿ. ತಿಳಿಸಿದರು.

ಪತಿ ಮನೆ ಮುಂದೆ ಯುವತಿಯ ಪೋಷಕರು ಪ್ರತಿಭಟನೆ ನಡೆಸಿದ ಸಂಬಂಧ ಪ್ರತಿಕ್ರಿಯಿಸಿ, ‘ಇದು ಕುಟುಂಬದ ವೈಯಕ್ತಿಕ ವಿಚಾರ. ಮನವೊಲಿಸಿ ಅಂತ್ಯಕ್ರಿಯೆ ನಡೆಸಲಾಗಿದೆ. ಅವರಿಗೆ ನ್ಯಾಯ ದೊರಕಿಸಿ ಕೊಡುವ ಭರವಸೆ ನೀಡಿದ್ದೇವೆ’ ಎಂದರು.

ಕೋಲಾರ ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್‌ ಕಾಂತರಾಜ್‌ ಹಾಗೂ ಪಿಎಸ್‌ಐ ವಿ.ಭಾರತಿ ಘಟನಾ ಸ್ಥಳಕ್ಕೆ ‌ಭೇಟಿ ನೀಡಿ ಪೋಷಕರ ಮನವೊಲಿಸಿದರು. ಈ ಸಂದರ್ಭದಲ್ಲಿ ವಿ.ಗೀತಾ, ಗಾಂಧಿನಗರ ನಾರಾಯಣಸ್ವಾಮಿ, ಶಾಂತಮ್ಮ ಸೇರಿದಂತೆ ಹಲವಾರು ಹೋರಾಟಗಾರರು ಇದ್ದರು. 

ಉಲ್ಲಾಸ್‌ಗೌಡ ಮನೆ ಮುಂದೆ ಮಾನಸಾ ಪೋಷಕರು ಹಾಗೂ ಪೊಲೀಸರ ನಡುವೆ ನಡೆದ ವಾಗ್ವಾದ
ನಿಖಿಲ್‌ ಬಿ.
ಮಾನಸಾ

ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ ಮಾನಸಾ ಕೋಲಾರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ಪತಿ ಸೇರಿದಂತೆ ಐವರ ಮೇಲೆ ದೂರು ದಾಖಲು, ಪತ್ತೆಗೆ ಕಾರ್ಯಾಚರಣೆ

ಪತಿ ಕಡೆಯವರ ಕಿರುಕುಳದಿಂದಲೇ ಮಾನಸಾ ಆತ್ಮಹತ್ಯೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ತನಿಖೆ ನಡೆಸಿ ಬೇರೆ ಕಾರಣವಿದೆಯೇ ಎಂಬುದನ್ನೂ ಪತ್ತೆ ಹಚ್ಚುತ್ತೇವೆ
ನಿಖಿಲ್‌ ಬಿ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಡೆತ್‌ನೋಟ್‌ನಲ್ಲಿ ಏನಿತ್ತು?

‘ನನ್ನ ಸಾವಿಗೆ ಯಾರೂ ಕಾರಣರಲ್ಲ ನನ್ನ ಜೀವನ ಉಲ್ಲಾಸ್ ಕುಟುಂಬದಿಂದ ಮುಗಿದಿದೆ. ದಯವಿಟ್ಟು ನನ್ನ ಒಡವೆಯನ್ನು ನನ್ನ ಮನೆಗೆ ವಾಪಸ್ ಮಾಡಿ ಧನ್ಯವಾದಗಳು’ ಎಂದು ಮಾನಸಾ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.