ADVERTISEMENT

ಕಾಂಗ್ರೆಸ್‌ನಿಂದ ದ್ವೇಷ ರಾಜಕಾರಣ: ಸಂಸದ ಎಂ.ಮಲ್ಲೇಶ್‍ ಬಾಬು

ನೈತಿಕ ಹೊಣೆ ಹೊತ್ತು ಸಿ.ಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಲಿ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2024, 16:54 IST
Last Updated 3 ಅಕ್ಟೋಬರ್ 2024, 16:54 IST
ಮಲ್ಲೇಶ್‌ ಬಾಬು
ಮಲ್ಲೇಶ್‌ ಬಾಬು   

ಕೋಲಾರ: ‘ನಾವು ಮೈಸೂರಿನ ಮುಡಾ ಪ್ರಕರಣದ ಬಗ್ಗೆಯಷ್ಟೇ ಮಾತನಾಡಿ ತನಿಖೆಗೆ ಆಗ್ರಹಿಸಿದ್ದೆವು. ಆ ಬಳಿಕ ಕಾಂಗ್ರೆಸ್ ದ್ವೇಷ ರಾಜಕಾರಣ ಆರಂಭಿಸಿದ್ದು, ಯಾವುದೋ ವಿಚಾರಗಳನ್ನು ಹುಡುಕಿ ಹೊರ ಹಾಕುತ್ತಿದೆ’ ಎಂದು ಸಂಸದ ಎಂ.ಮಲ್ಲೇಶ್‍ ಬಾಬು ಟೀಕಿಸಿದರು.

ನಗರ ಹೊರವಲಯದ ಜಿಲ್ಲಾಡಳಿತ ಭವನದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.

‘ಈ ಹಿಂದೆ ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪ ಆರೋಪದಲ್ಲಿ ಸಿಲುಕಿದಾಗ ಅಧಿಕಾರದಲ್ಲಿರುವುದರಿಂದ ವಿಚಾರಣೆ ಸರಿಯಾಗಿ ನಡೆಯುವುದಿಲ್ಲ, ರಾಜೀನಾಮೆ ನೀಡಬೇಕೆಂದು ಸಿದ್ದರಾಮಯ್ಯ ಅವರೇ ಒತ್ತಾಯಿಸಿದ್ದರು. ಈಗ ಅದೇ ಮಾತು ಅವರಿಗೂ ಅನ್ವಯವಾಗುತ್ತದೆ. ತನಿಖೆ ಮುಗಿದು, ಆರೋಪದಿಂದ ಮುಕ್ತರಾದರೆ ಪುನಃ ಅಧಿಕಾರ ಸ್ವೀಕರಿಸಲಿ’ ಎಂದರು.

ADVERTISEMENT

‘ಎಫ್‌ಐಆರ್‌ ಆದವರೆಲ್ಲಾ ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದಿರುವ ಜಿ.ಟಿ.ದೇವೇಗೌಡ ಅವರದ್ದು ವೈಯಕ್ತಿಕ ಹೇಳಿಕೆ. ಮುಖ್ಯಮಂತ್ರಿ ಆಗಿರುವುದರಿಂದ ತನಿಖೆ ಸರಿಯಾಗಿ ನಡೆಯಲ್ಲ ಎಂಬ ಕಾರಣಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂಬುದ ನನ್ನ ಹಾಗೂ ಪಕ್ಷದ ನಿಲುವು. ಕುಮಾರಸ್ವಾಮಿ ಹಾಗೂ ನಿರ್ಮಲಾ ಸೀತಾರಾಮನ್‌ ಮೇಲೂ ಎಫ್‌ಐಆರ್‌ ದಾಖಲಾಗಿದ್ದು, ಅವರು ಕೇಂದ್ರ ಸಚಿವರು. ರಾಜ್ಯದ ಆಡಳಿತದಲ್ಲಿ ಅವರ ಪಾತ್ರ ಇರುವುದಿಲ್ಲ’ ಎಂದು ತಿಳಿಸಿದರು.

‘ಮುಡಾ ವಿಚಾರವಾಗಿ ಜಾರಿ ನಿರ್ದೇಶನಾಲಯ (ಇ.ಡಿ) ಎಫ್‍ಐಆರ್ ದಾಖಲಿಸಿಲ್ಲ, ಲೋಕಾಯುಕ್ತದ ಎಫ್‍ಐಆರ್ ಆಧಾರದ ಮೇಲೆ ತನಿಖೆಗೆ ಮುಂದಾಗಿದೆ. ಹಣ ದುರುಪಯೋಗ ಆಗಿದೆಯೇ, ಇಲ್ಲವೇ ಎನ್ನುವುದನ್ನು ಪರಿಶೀಲಿಸಲಿದೆ. ಊಹಾಪೋಹಗಳು ಬೇಡ. ತನಿಖೆಯ ಬಳಿಕ ಸತ್ಯಾಂಶ ಹೊರ ಬರಲಿದೆ. ಮುಖ್ಯಮಂತ್ರಿ ಪತ್ನಿ ಈಗ ನಿವೇಶನ ವಾಪಸ್ ನೀಡಿದ್ದಾರೆ ಎಂದರೆ ಏನೋ ಸಮಸ್ಯೆಯಾಗಿದೆ ಎಂದೇ ಅರ್ಥ’ ಎಂದರು.

ಉದ್ಯಮಿ ವಿಜಯತಾತ ಎಂಬುವರು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ದೂರು ನೀಡಿರುವುದರ ಕುರಿತು, ‘ಆರೋಪ ಮಾಡಿರುವುದನ್ನು ಸಾಬೀತುಪಡಿಸಲಿ. ಹೇಳಿಕೆ ನೀಡಿದ ಮಾತ್ರಕ್ಕೆ ನಿಜ ಆಗುವುದಿಲ್ಲ’ ಎಂದು ನುಡಿದರು.

ಕೋಲಾರ ನಗರದ ಹೊರ ವರ್ತುಲ ರಸ್ತೆಗೆ ಬಂದಿದ್ದ ಕೇಂದ್ರ ಸರ್ಕಾರದ ಅನುದಾನ ವಾಪಸ್ ಹೋಗಿರುವುದಕ್ಕೆ ಪ್ರತಿಕ್ರಿಯಿಸಿ, ‘ರಾಜ್ಯ ಸರ್ಕಾರವು ಭೂಸ್ವಾಧೀನಪಡಿಸಿಕೊಂಡು ಸಹಕರಿಸಿದರೆ ಅನುಕೂಲವಾಗಲಿದೆ. ಆ ಪ್ರಕ್ರಿಯೆಯಾಗದೆ ಕೇಂದ್ರದ ಮೇಲೆ ಆರೋಪ ಮಾಡುವುದು ಸರಿಯಲ್ಲ’ ಎಂದರು.

ಮುಡಾ ಪ್ರಕರಣ ವಿಚಾರಣೆ ಹಂತದಲ್ಲಿದ್ದು ತನಿಖೆ ಮುಗಿಯುವವರೆಗೆ ರಾಜೀನಾಮೆ ನೀಡುವುದು ಸೂಕ್ತ. ಸಿ.ಎಂ ಆಗಿರುವುದರಿಂದ ಇಲಾಖೆ ಮೇಲೆ ಒತ್ತಡ ಹಾಕುತ್ತಾರೆಂಬುದು ನಮ್ಮ ಅಭಿಪ್ರಾಯ
ಎಂ.ಮಲ್ಲೇಶ್‌ ಬಾಬು ಸಂಸದ

ಜನವರಿಯೊಳಗೆ ಜಿಲ್ಲೆಗೆ ಸಿಹಿ ಸುದ್ದಿ

‘ಬೆಂಗಳೂರಿನಲ್ಲಿ ಎಂಎಸ್‍ಎಂಇ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕೋಲಾರಕ್ಕೆ ಏನು ಬೇಕಾದರೂ ಮಾಡಿಕೊಡುವ ಭರವಸೆ ನೀಡಿದ್ದಾರೆ. ಜನವರಿಯೊಳಗೆ ಜಿಲ್ಲೆಯ ಜನರಿಗೆ ಸಿಹಿಸುದ್ದಿ ಸಿಗಲಿದೆ. ದಸರಾ ಬಳಿಕ ಜಿಲ್ಲೆಯಲ್ಲಿ ಬಿಜೆಪಿ ಜೆಡಿಎಸ್ ಸೇರಿ ಕಾರ್ಯಕ್ರಮ ನಡೆಸಲಾಗುತ್ತಿದ್ದು ಎಚ್.ಡಿ.ಕುಮಾರಸ್ವಾಮಿ ಭಾಗವಹಿಸಲಿದ್ದಾರೆ’ ಎಂದು ಮಲ್ಲೇಶ್ ಬಾಬು ಹೇಳಿದರು. ‘ಕೆಜಿಎಫ್ ಭಾಗಕ್ಕೆ ಕೈಗಾರಿಕೆಗಳನ್ನು ತರಲು ನಾವು ಬದ್ಧರಾಗಿದ್ದೇವೆ. ಕೈಗಾರಿಕೆ ಅಭಿವೃದ್ಧಿಗೆ 2-3 ವರ್ಷ ಬೇಕಾಗಿದೆ. ಅದಕ್ಕೆ ಮೊದಲು ಕೆಜಿಎಫ್ ನಗರ ಅಭಿವೃದ್ಧಿಯಾಗಬೇಕಿದೆ. ವಸತಿ ಹೋಟೆಲ್ ಸೇರಿದಂತೆ ಎಲ್ಲ ಸೌಕರ್ಯಗಳಿದ್ದರೆ ಮಾತ್ರವೇ ಬೇರೆಯವರು ಈ ಭಾಗಕ್ಕೆ ಬರಲು ಸಾಧ್ಯವಾಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.