ADVERTISEMENT

Kochimul: ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ, ಹಾಲು ಉತ್ಪಾದಕರಿಗೆ ₹2 ಕಡಿತದ ಬರೆ

ಕೆ.ಓಂಕಾರ ಮೂರ್ತಿ
Published 4 ಜುಲೈ 2024, 23:36 IST
Last Updated 4 ಜುಲೈ 2024, 23:36 IST
ಕೋಚಿಮುಲ್ ಆಡಳಿತ ಮಂಡಳಿ ಕಚೇರಿ ಕಟ್ಟಡ.
ಕೋಚಿಮುಲ್ ಆಡಳಿತ ಮಂಡಳಿ ಕಚೇರಿ ಕಟ್ಟಡ.   

ಕೋಲಾರ: ರೈತರಿಂದ ಖರೀದಿಸುವ ಹಾಲಿನ ದರವನ್ನು ಲೀಟರ್‌ಗೆ ₹ 2 ಕಡಿತಗೊಳಿಸಿ ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಒಕ್ಕೂಟ (ಕೋಚಿಮುಲ್‌) ಆದೇಶ ಹೊರಡಿಸಿದೆ.

ಈ ಆದೇಶ ಶುಕ್ರವಾರ (ಜುಲೈ 5) ಬೆಳಗ್ಗೆಯಿಂದಲೇ ಜಾರಿಗೆ ಬರಲಿದ್ದು, ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲೆಗಳ ಹೈನುಗಾರರಿಗೆ ಆರ್ಥಿಕ ಹೊಡೆತ ಬೀಳಲಿದೆ. ಗುರುವಾರ (ಜುಲೈ4) ನಡೆದ ಕೋಚಿಮುಲ್‌ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಇದುವರೆಗೆ ಹಾಲು ಉತ್ಪಾದಕರಿಗೆ ಲೀಟರ್‌ ಹಾಲಿಗೆ ₹33.40 ಹಾಗೂ ಸಂಘಗಳಿಗೆ ₹35.85 ಸಿಗುತಿತ್ತು. ಲೀಟರ್‌ಗೆ ₹2 ಕಡಿಮೆ ಆಗಿರುವುದರಿಂದ ಇನ್ನು ಮುಂದೆ ರೈತರಿಗೆ ₹ 31.40 ಹಾಗೂ ಸಂಘಗಳಿಗೆ ₹33.85 ಸಿಗಲಿದೆ.

ADVERTISEMENT

ಗುರುವಾರ (ಜುಲೈ4) ನಡೆದ ಕೋಚಿಮುಲ್‌ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಒಕ್ಕೂಟದ ಹಾಲು ಶೇಖರಣೆ ಹಾಗೂ ಆರ್ಥಿಕ ಪರಿಸ್ಥಿತಿ ಕುರಿತು ಚರ್ಚಿಸಿ ₹ 2 ಕಡಿತಗೊಳಿಸಲಾಗಿದೆ. ಮಳೆಗಾಲದಲ್ಲಿ ಹಾಲಿನ ಉತ್ಪಾದನೆ ಹೆಚ್ಚಾಗಿರುವ ಕಾರಣ ದರ ಕಡಿಮೆ ಮಾಡುವುದು ಸಹಜ ಎಂದು ಕೋಚಿಮುಲ್‌ ಅಧಿಕಾರಿಗಳು ಸರ್ಮಥಿಸಿಕೊಂಡಿದ್ದಾರೆ. ಹಾಲಿನ ಪುಡಿ ದರ ಕಡಿಮೆಯಾಗಿದ್ದು, ಖರೀದಿಸುವವರೂ ಇಲ್ಲ. ಹೀಗಾಗಿ, ಹಾಲು ತಮ್ಮಲ್ಲೇ ಉಳಿಯುತ್ತಿದೆ ಎಂದಿದ್ದಾರೆ.

‘ಜುಲೈ 5ರಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ. ಈ ವಿಚಾರವನ್ನು ಹಾಲು ಉತ್ಪಾದಕರಿಗೆ ಮನವರಿಕೆ ಮಾಡಬೇಕು. ಹಾಲು ಶೇಖರಣೆ ಮತ್ತು ಗುಣಮಟ್ಟ ಹೆಚ್ಚಿಸಲು ಕ್ರಮ ವಹಿಸಬೇಕು’ ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಗೋಪಾಲಮೂರ್ತಿ ಹೊರಡಿಸಿರುವ ಸುತ್ತೋಲೆ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಮತ್ತೆ ಹಾಲಿನ ದರ ಕಡಿತಗೊಳಿಸಿರುವುದಕ್ಕೆ ಜಿಲ್ಲೆಯ ಹೈನುಗಾರರು, ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತರಿಂದ ಖರೀದಿಸುವ ಹಾಲಿನ ದರದಲ್ಲಿ ಲೀಟರ್‌ಗೆ ₹ 2 ಕಡಿತ ಮಾಡಿರುವ ಆದೇಶವನ್ನು ಕೂಡಲೇ ವಾಪಸ್ ಪಡೆದು ಒಕ್ಕೂಟದಲ್ಲಿ ನಡೆಯುತ್ತಿರುವ ದುಂದುವೆಚ್ಚಗಳಿಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದ್ದಾರೆ.

‘ಜಿಲ್ಲೆಯ ಹೆಚ್ಚಿನ ರೈತರಿಗೆ ಹೈನುಗಾರಿಕೆಯೇ ಜೀವಾಳ. ಇದನ್ನೇ ನಂಬಿಕೊಂಡು ಲಕ್ಷಾಂತರ ಕುಟುಂಬಗಳು ಬದುಕಿವೆ. ಏಕಾಏಕಿ ₹ 2 ಕಡಿಮೆ ಮಾಡಿರುವ ಒಕ್ಕೂಟ ಈಗ ರೈತರಿಗೆ ಬರೆ ಎಳೆದಿದೆ. ಹಿಂಡಿ, ಬೂಸಾ ಸೇರಿದಂತೆ ಪಶು ಆಹಾರ ಬೆಲೆ ಮಾತ್ರ ಕಡಿಮೆ ಆಗಿಲ್ಲ. ಮೊದಲೇ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಬೆಲೆ ಇಳಿಕೆಯಿಂದ ತೊಂದರೆ ಆಗಿದೆ. ಹೈನುಗಾರಿಕೆಗೆ ಹಿನ್ನೆಡೆಯಾಗಲಿದೆ. ₹ 5 ಪ್ರೋತ್ಸಾಹಧನವೂ ಸರಿಯಾಗಿ ಸಿಗುತ್ತಿಲ್ಲ’ ಎಂದು ಕೋಲಾರ ತಾಲ್ಲೂಕಿನ ತೊಟ್ಲಿ ಗ್ರಾಮದ ಟಿ.ವಿ.ರಮೇಶ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೈನುಗಾರಿಕೆಯನ್ನೇ ನಂಬಿ ಜೀವನ ಸಾಗಿಸುತ್ತಿರುವವರಿಗೆ ಈ ನಿರ್ಧಾರದಿಂದ ಹೊಡೆತ ಬಿದ್ದಿದೆ ಎಂದು ಹಲವು ಹೈನುಗಾರರು ಅಲವತ್ತುಕೊಂಡಿದ್ದಾರೆ

ರೈತರಿಗೆ ಸರ್ಕಾರವು ಪ್ರತಿ ಲೀಟರ್‌ ಹಾಲಿಗೆ ₹ 5 ಪ್ರೋತ್ಸಾಹಧನ ನೀಡುತ್ತಿದೆ. ಆದರೆ, ಹಲವು ತಿಂಗಳಿಂದ ಈ ಹಣವೂ ಸಿಕ್ಕಿಲ್ಲ ಎಂಬುದು ಗೊತ್ತಾಗಿದೆ. 

ಗ್ರಾಹಕರಿಗೂ ಹೊರೆ, ರೈತರಿಗೂ ಬರೆ

ಕೆಎಂಎಫ್‌ ಈಚೆಗೆ ಹಾಲಿನ ಮಾರಾಟ ದರವನ್ನು ಪ್ರತಿ ಪ್ಯಾಕೆಟ್‌ ಮೇಲೆ ₹ 2 ಹೆಚ್ಚಿಸಿರುವುದರಿಂದ ಗ್ರಾಹಕರಿಗೆ ಹೊರೆಯಾಗಿದೆ. ಅದಕ್ಕೆ ಹೆಚ್ಚುವರಿಯಾಗಿ 50 ಎಂ.ಎಲ್‌ ಹಾಲು ನೀಡುತ್ತಿರುವುದಾಗಿ ಸರ್ಕಾರ ಸಮರ್ಥಿಸಿಕೊಳ್ಳುತ್ತಿದೆ. ಆ ಹೆಚ್ಚುವರಿ ಹಣವನ್ನು ರೈತರಿಗೆ ವರ್ಗಾಯಿಸಿ ಎಂಬುದಾಗಿ ವಿರೋಧ ಪಕ್ಷಗಳು, ರೈತ ಸಂಘಟನೆಗಳು ಒತ್ತಾಯಿಸುತ್ತಿವೆ. ಆದರೆ, ಸರ್ಕಾರವೇನು ಅಂಥ ಕ್ರಮ ಕೈಗೊಂಡಿಲ್ಲ. ಬದಲಾಗಿ ರೈತರಿಂದ ಖರೀದಿಸುವ ದರವನ್ನೇ ಕಡಿತಗೊಳಿಸಿ ಬರೆ ಎಳೆಯಲಾಗಿದೆ ಎಂದು ಹೈನುಗಾರರು, ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದರ ಕಡಿತ ತಾತ್ಕಾಲಿಕ

ಮಳೆಗಾಲದಲ್ಲಿ ಹಾಲಿನ ಸಂಗ್ರಹ ಪ್ರಮಾಣ ಹೆಚ್ಚಾದಾಗ ರೈತರಿಂದ ಖರೀದಿಸುವ ಹಾಲಿನ ದರ ಕಡಿತಗೊಳಿಸುವುದು, ಬೇಸಿಗೆಯಲ್ಲಿ ಹಾಲಿನ ಉತ್ಪಾದನೆ ಕಡಿಮೆಯಾದಾಗ ಹೆಚ್ಚು ದರ ನೀಡುವುದು ಸಹಜ. ಇನ್ನಿತರ ಒಕ್ಕೂಟಗಳಲ್ಲಿ ಈ ಹಿಂದೆಯೇ ಕಡಿತಗೊಳಿಸಿವೆ. ನಾವು ಈಗ ದರ ಕಡಿತಗೊಳಿಸಿದ್ದು, ಈ ಕಡಿತ ತಾತ್ಕಾಲಿಕ ಅಷ್ಟೆ. ಉತ್ತಮ ಕಾಲ ಕೂಡಿ ಬಂದರೆ ಮತ್ತೆ ಹೆಚ್ಚಿಸುತ್ತೇವೆ. ಉಳಿದ ಒಕ್ಕೂಟಗಳಿಗೆ ಹೋಲಿಸಿದರೆ ನಮ್ಮಲ್ಲೇ ರೈತರಿಗೆ ಸಿಗುವ ದರ ಹೆಚ್ಚು.

ಕಳೆದ ವರ್ಷಕ್ಕೆ ಹೋಲಿಸಿದರೆ ಸರಾಸರಿ ₹ 5 ಹೆಚ್ಚಿಸಿದ್ದೇವೆ. ಹಾಲು ಸಂಗ್ರಹವಾಗುವ ಪ್ರಮಾಣ ನೋಡಿಕೊಂಡು ದರ ಹೆಚ್ಚಿಸಲು ಮುಂದಿನ ದಿನಗಳಲ್ಲಿ ಕ್ರಮ ವಹಿಸುತ್ತೇವೆ. ನಮ್ಮಲ್ಲಿ ಸದ್ಯ ನಿತ್ಯ 12.50 ಲಕ್ಷ ಲೀಟರ್‌ ಹಾಲು ಸಂಗ್ರಹವಾಗುತ್ತಿದೆ. 1.25 ಲಕ್ಷ ಕೆ.ಜಿ ಮೊಸರು ಸಿಗುತ್ತಿದೆ. ಹೆಚ್ಚು ಹಾಲು ಸಂಗ್ರಹ ಕಾರಣ ಹಾಲಿನ ಪೌಡರ್‌ ತಯಾರಿಸಲು ಬಳಕೆ ಮಾಡುತ್ತಿದ್ದೇವೆ. ಆದರೆ, ಮಾರುಕಟ್ಟೆಯಲ್ಲಿ ಪೌಡರ್‌ ದರ ಕಡಿಮೆ ಇದೆ. ಇದರಿಂದ ಒಕ್ಕೂಟಕ್ಕೆ ನಷ್ಟವಾಗುತ್ತದೆ. ಎಲ್ಲರ ಹಿತದೃಷ್ಟಿಯಿಂದ ದರ ಕಡಿತ ನಿರ್ಧಾರ ಕೈಗೊಳ್ಳಲಾಗಿದೆ

-ಗೋಪಾಲಮೂರ್ತಿ, ವ್ಯವಸ್ಥಾಪಕ ನಿರ್ದೇಶಕ, ಕೋಚಿಮುಲ್‌, ಕೋಲಾರ

ಕೋಲಾರ ತಾಲ್ಲೂಕಿನ ಚಿಟ್ನಹಳ್ಳಿಯ ಡೇರಿಗೆ ಗುರುವಾರ ರೈತರೊಬ್ಬರು ಹಾಲು ಪೂರೈಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.