ADVERTISEMENT

ಶಿಕ್ಷಕ ಹುದ್ದೆ ತೊರೆದು ಸಂಗೀತದಲ್ಲೇ ಬದುಕು!

ಜನಪದ ಹಾಡುಗಳಿಗೆ ಜೀವ ತುಂಬಿದ ಸುಗಟೂರಿನ ಗೋ.ನಾ.ಸ್ವಾಮಿ

ಕೆ.ಓಂಕಾರ ಮೂರ್ತಿ
Published 19 ಜುಲೈ 2024, 6:22 IST
Last Updated 19 ಜುಲೈ 2024, 6:22 IST
ಗೋ.ನಾ.ಸ್ವಾಮಿ
ಗೋ.ನಾ.ಸ್ವಾಮಿ   

ಕೋಲಾರ: ಜನಪದ ಹಾಡುಗಳಿಗೆ ಜೀವ ತುಂಬಲು ಶಿಕ್ಷಕ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆದು ಹೊರಬಂದ ಗೋ.ನಾ.ಸ್ವಾಮಿ (ಗೋವಿಂದಪ್ಪ) ಈಗ ದೇಶ, ವಿದೇಶಗಳಲ್ಲಿ ಹಾಡುಗಾರಿಕೆ ಮೂಲಕ ಜನಪದ ಸೊಗಡು ಹರಡುತ್ತಿದ್ದಾರೆ.

ತಾಲ್ಲೂಕಿನ ಸುಗಟೂರು ಗ್ರಾಮದ ಇವರು ಸುಮಾರು 500 ಜನಪದ ಹಾಡುಗಳ ಮೂಲಕ ಜನರ ಮನಸ್ಸುಗಳನ್ನು ಆವರಿಸಿಕೊಂಡಿದ್ದಾರೆ. ಶಿಕ್ಷಕ ವೃತ್ತಿ ಅಲ್ಲದೇ; ಗಾಯಕ, ಗೀತ ರಚನೆಗಾರ, ನಿರೂಪಕ, ಸಂಗೀತ ಸಂಯೋಜನೆಕಾರನಾಗಿಯೂ ಗುರುತಿಸಿಕೊಂಡಿದ್ದಾರೆ.

ತಾಯಿ ಹಾಡುತ್ತಿದ್ದ ಸೋಬಾನೆಗಳಿಂದಲೇ ಸ್ಫೂರ್ತಿ ಪಡೆದು 44 ವರ್ಷಗಳಿಂದ ಹಾಡುಗಾರಿಕೆಯಲ್ಲಿ ತೊಡಗಿರುವ ಇವರು ಸುಮಾರು 64 ದೇಶಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದಾರೆ. ಅಮೆರಿಕದಲ್ಲಿ ಮುಂದಿನ ತಿಂಗಳು ನಡೆಯಲಿರುವ ‘ಅಕ್ಕ’ ಸಮ್ಮೇಳನಕ್ಕೂ ಆಹ್ವಾನ ಬಂದಿದ್ದು, ಸಿದ್ಧತೆ ನಡೆಸುತ್ತಿದ್ದಾರೆ.

ADVERTISEMENT

‘ತುಮಕೂರು ಜಿಲ್ಲೆಯ ಶಿರಾದಲ್ಲಿ ಶಿಕ್ಷಕ ವೃತ್ತಿಯಲ್ಲಿ ತೊಡಗಿದ್ದ ನನಗೆ 2005ರಲ್ಲಿ ಮುಖ್ಯೋಪಾಧ್ಯಾಯನಾಗಿ ಬಡ್ತಿ ಲಭಿಸಿತು. ಅಲ್ಲಿ ನನ್ನ ಸಂಗೀತದ ಬದುಕಿಗೆ ಮಹತ್ವದ ತಿರುವು ಲಭಿಸಿತಾದರೂ ಹಾಡುಗಾರಿಕೆಗೆ ಏನೋ ಅಡ್ಡಿಯಾಗುತ್ತಿದೆ ಎನಿಸತೊಡಗಿತು. ಶಿಕ್ಷಕ ವೃತ್ತಿಯಲ್ಲಿ ತೊಡಗಿಸಿಕೊಂಡು ಗಾಯನಕ್ಕೆ ಹೆಚ್ಚಿನ ಕಾಲಾವಕಾಶ ಕೊಡಲು ಆಗುತ್ತಿರಲಿಲ್ಲ. ಜನಪದ ಗಾಯನದಲ್ಲಿ ಹೆಸರು ಮಾಡಿ ತಾಯಿ ಹೆಸರು ಉಳಿಸಬೇಕೆಂದು 2007ರಲ್ಲೇ ಶಿಕ್ಷಕ ವೃತ್ತಿಗೆ ವಿಆರ್‌ಎಸ್‌ ನೀಡಿದೆ. ಬೆಂಗಳೂರಿಗೆ ಬಂದು ಜನಪದ ಹಾಡುಗಾರಿಕೆಯಲ್ಲಿ ತೊಡಗಿಸಿಕೊಂಡೆ. ಅಳಿದು ಹೋಗುತ್ತಿರುವ ಜನಪದ ಗೀತ ಪ್ರಕಾರವನ್ನು ಉಳಿಸಬೇಕೆಂಬ ಛಲವೂ ನನ್ನಲ್ಲಿತ್ತು. 2009ರಲ್ಲಿ ಮೊದಲ ಬಾರಿ ವಿದೇಶಕ್ಕೆ(ಬಹ್ರೈನ್‌) ಹೋಗಿ ಜಾನಪದ ಹಾಡು ಹಾಡಿದ್ದೆ. ಹಳ್ಳಿಯಲ್ಲಿ ಕೂಲಿ ಮಾಡುತ್ತಿದ್ದ ಕುಟುಂಬದ ಹುಡುಗನಾದ ನಾನು ಈಗ ಅಕ್ಕ ಸಮ್ಮೇಳನಕ್ಕೆ ಹೋಗುತ್ತಿದ್ದೇನೆ’ ಎಂದು ಗೋ.ನಾ.ಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ರಾಜ್ಯ ಸರ್ಕಾರದ ಕೆಂಪೇಗೌಡ ಪ್ರಶಸ್ತಿ, ಅರಣ್ಯ ಇಲಾಖೆ ಕೊಡುವ ವನಮಿತ್ರ ಪ್ರಶಸ್ತಿ, ಮುಂಬೈ ಕನ್ನಡಿಗರು ಕೊಡುವ ಜನಪದ ಸಿರಿ ಪ್ರಶಸ್ತಿ, ಕಾಸರಗೋಡಿನ ಗಡಿನಾಡು ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಲ್ಲದೇ, ಸುಗಟೂರಿನ ಜಾತ್ರೆಯಲ್ಲಿ 19 ವರ್ಷಗಳಿಂದ ಉಚಿತವಾಗಿ ಸಂಗೀತ ಕಾರ್ಯಕ್ರಮ ನೀಡುತ್ತಿದ್ದಾರೆ.

‘ನನ್ನದು ಮಾಲೂರು ತಾಲ್ಲೂಕು ಟೇಕಲ್‌ ಹೋಬಳಿಯ ಯಲುವಗುಳಿ ಗ್ರಾಮ. ತಂದೆ, ತಾಯಿ, ಇಬ್ಬರು ಅಕ್ಕಂದಿರು, ಒಬ್ಬ ಅಣ್ಣ ಕೂಲಿ ಮಾಡಿ ಬದುಕುತಿದ್ದರು. ತಾಯಿ ತೀರಿ ಹೋದ ಮೇಲೆ ಮಾವನ ಮನೆ (ತಾಯಿಯ ಅಣ್ಣ) ಸುಗಟೂರಿಗೆ ನನ್ನನ್ನು ಓದಲು ಕಲಿಸಿದರು. ತಾಯಿಯ ಗಾಯನದಿಂದ ಪ್ರಭಾವಿತನಾದ ನಾನು 5ನೇ ತರಗತಿಯಲ್ಲಿ ಓದುವಾಗ ಹಾಡುತ್ತಿದ್ದೆ. ಸುಗಟೂರಿನಲ್ಲಿ ಎಸ್‌ಎಸ್‌ಎಲ್‌ಸಿ ಮುಗಿಸಿದೆ. ಬಳಿಕ ಟಿಸಿಎಚ್‌ ಮುಗಿಸುತ್ತಿದ್ದಂತೆ ಶಿಕ್ಷಕ ಕೆಲಸ ಲಭಿಸಿತು. ಆಗ ನನಗೆ 19 ವರ್ಷ’ ಎಂದು 54 ವರ್ಷ ವಯಸ್ಸಿನ ಅವರು ಹೇಳಿದರು.

‘ಶಿರಾದಲ್ಲಿ ಶಿಕ್ಷಕ ವೃತ್ತಿ ಆರಂಭವಾಯಿತು. ಅಲ್ಲೇ ಸಂಗೀತ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ನಾನೇ ರಚಿಸಿದ ಜನಪದ ಹಾಡು ಹಾಡುತ್ತಿದ್ದೆ. ಇದೇ ರೀತಿ 450ಕ್ಕೂ ಅಧಿಕ ಹಾಡು ಬರೆದಿದ್ದೇನೆ. ಮಧುರ ಅಲೆಗಳು ನನ್ನ ಮೊದಲ ಧ್ವನಿಸುರುಳಿ (ಆಲ್ಬಂ). ಅಮ್ಮನ ಮನೆಯಿಂದ ಧ್ವನಿ ಸುರುಳಿಯನ್ನು 22 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಕ್ಯಾಸೆಟ್‌ ಮಾಡಿ ಮಾರಾಟ ಮಾಡಿದ್ದರಿಂದ ಹಣವೂ ಬಂತು. ಕೋವಿಡ್‌ಗೆ ಮೊದಲು ಕೋಲಾರಕ್ಕೆ ಎಸ್‌.ಬಿ.ಬಾಲಸುಬ್ರಹ್ಮಣ್ಯಂ ಅವರನ್ನೂ ಆಹ್ವಾನಿಸಿ ಸಂಗೀತ ಕಾರ್ಯಕ್ರಮ ನೀಡಿದ್ದೆವು’ ಎಂದರು.

Highlights - ಸುಮಾರು 500 ಜನಪದ ಹಾಡುಗಳ ಗಾಯನ 64 ದೇಶಗಳಲ್ಲಿ ಸಂಗೀತ ಕಾರ್ಯಕ್ರಮ ಕೋಲಾರ ತಾಲ್ಲೂಕಿನ ಸುಗಟೂರಿನ ಗಾಯಕ

Quote - ತಾಯಿಯೇ ಸ್ಫೂರ್ತಿ ಜನಪದ ಸಂಗೀತವೇ ನನ್ನ ಬದುಕು.‌ ಆತ್ಮವಿಶ್ವಾಸವಿದ್ದರೆ ಯಾವುದೇ ಸಾಧನೆ ಮಾಡಬಹುದು. ಹಲವು ಅಡೆತಡೆಯೇ ನಡುವೆ ಜನಪದ ಗಾಯಕನಾಗಿ ಗುರುತಿಸಿಕೊಂಡಿದ್ದೇನೆ ಗೋ.ನಾ.ಸ್ವಾಮಿ ಜನಪದ ಕಲಾವಿದ ಹಾಡುಗಾರ

Cut-off box - ತಾಯಿಯ ಸೋಬಾನೆ ತೋರಿದ ಹಾದಿ ತಾಯಿ ಜಯಮ್ಮ ವಿವಿಧ ಊರುಗಳಲ್ಲಿ ಮದುವೆಗಳಿಗೆ ಹೋಗಿ ಸೋಬಾನೆ ಹಾಡುತ್ತಿದ್ದರು. ಆಗ ಗೋ.ನಾ.ಸ್ವಾಮಿ ಅವರಿಗೆ 5 ವರ್ಷ. ಇವರೂ ಹಾಡು ಗುನುಗುತ್ತಾ ಅಮ್ಮನ ಮಡಿಲಲ್ಲಿ ಮಲಗಿ ನಿದ್ದೆ ಹೋಗುತ್ತಿದ್ದರು. 32ನೇ ವಯಸ್ಸಿಗೆ ಅಮ್ಮ ತೀರಿಕೊಂಡರು. ಆಗ ಗೋ.ನಾ.ಸ್ವಾಮಿ ಅವರಿಗೆ 10 ವರ್ಷ. ‘ಅಮ್ಮನ ಸೋಬಾನೆ ಹಾಡುಗಳೇ ನನ್ನ ಸಂಗೀತದ ಆಸಕ್ತಿಗೆ ದಾರಿ ತೋರಿದವು’ ಎಂದು ಅವರು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.