ADVERTISEMENT

ಕೋಲಾರ: ಅರ್ಧ ತಾಸು ಮಳೆ ಅಬ್ಬರ

ಬಿರುಗಾಳಿಗೆ ನೆಲಕಚ್ಚಿದ ಬಾಳೆ ಬೆಳೆ; ಶ್ರೀನಿವಾಸಪುರದ ಹೊದಲಿಯಲ್ಲಿ 3.6 ಸೆ.ಮೀ. ಮಳೆ

​ಪ್ರಜಾವಾಣಿ ವಾರ್ತೆ
Published 12 ಮೇ 2024, 15:31 IST
Last Updated 12 ಮೇ 2024, 15:31 IST
ಜೋರು ಮಳೆಯಿಂದ ಕೋಲಾರ ತಾಲ್ಲೂಕಿನ ಜಂಗಂಬಸಾಪುರ ಗ್ರಾಮದಲ್ಲಿ ನೆಲಕ್ಕೊರಗಿದ ಬಾಳೆ ಬೆಳೆ
ಜೋರು ಮಳೆಯಿಂದ ಕೋಲಾರ ತಾಲ್ಲೂಕಿನ ಜಂಗಂಬಸಾಪುರ ಗ್ರಾಮದಲ್ಲಿ ನೆಲಕ್ಕೊರಗಿದ ಬಾಳೆ ಬೆಳೆ   

ಕೋಲಾರ: ಜಿಲ್ಲೆಯ ವಿವಿಧೆಡೆ ಭಾನುವಾರ ಮಧ್ಯಾಹ್ನ ಜೋರು ಮಳೆಯಾಗಿದ್ದು, ತಾಪಮಾನವನ್ನು ಮತ್ತಷ್ಟು ತಗ್ಗಿಸಿದೆ.

ಮಧ್ಯಾಹ್ನ ಮೋಡ ಕವಿದ ವಾತಾವರಣವಿತ್ತು. 3 ಗಂಟೆ ಸುಮಾರಿಗೆ ಗುಡುಗು ಸಮೇತ ಮಳೆ ಅಬ್ಬರ ಶುರುವಾಯಿತು. ಅರ್ಧ ತಾಸು ಬಿರುಗಾಳಿ ಸಮೇತ ಧಾರಾಕಾರ ಮಳೆ ಸುರಿಯಿತು.

ವಾರದಿಂದ ಜಿಲ್ಲೆಯಲ್ಲಿ ಮಳೆ ಆಗುತ್ತಲೇ ಇದೆ. ಒಣಗುತ್ತಿದ್ದ ಕೆರೆ ಕಟ್ಟೆಗಳಿಗೆ ಇದರಿಂದ ಮತ್ತೆ ಜೀವಕಳೆ ಬಂದಿದೆ. ಬಿರು ಬಿಸಲಿನಿಂದ ಹೈರಾಣಾಗಿದ್ದ ಜನರಿಗೂ ಮಳೆ ತಂಪೆರೆದಿದೆ. ಪ್ರಾಣಿ, ಪಕ್ಷಿಗಳಿಗೆ ನೀರಿನ ಕೊರತೆ ನೀಗಿಸಿದೆ. ಕೆಲವು ಭಾಗದಲ್ಲಿ ಮಳೆಯಾಶ್ರಿತ ಬೆಳೆ ಬೆಳೆಯಲು ರೈತರು ಭೂಮಿಯನ್ನು ಹದ ಮಾಡುವಲ್ಲಿ ನಿರತರಾಗಿದ್ದಾರೆ.

ADVERTISEMENT

ಶ್ರೀನಿವಾಸಪುರ ತಾಲ್ಲೂಕಿನ ಹೊದಲಿಯಲ್ಲಿ 3.6 ಸೆ.ಮೀ. (36 ಮಿ.ಮೀ.) ಮಳೆಯಾಗಿದ್ದು, ಕೋಲಾರ ಜಿಲ್ಲೆಯಲ್ಲಿ ಅತ್ಯಧಿಕ ಮಳೆ ಬಿದ್ದ ಪ್ರದೇಶವಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮೂಲಗಳು ತಿಳಿಸಿವೆ.

ಶ್ರೀನಿವಾಸಪುರ ತಾಲ್ಲೂಕಿನ ಸೋಮಯಾಜಪಲ್ಲಿಯಲ್ಲಿ 3.3 ಸೆ.ಮೀ., ಬಂಗಾರಪೇಟೆ ತಾಲ್ಲೂಕಿನ ಕೊಪ್ಪದಲ್ಲಿ 2.4 ಸೆ.ಮೀ., ಮಾಲೂರು ತಾಲ್ಲೂಕಿನ ಶಿವರಾಪಟ್ಟಣದಲ್ಲಿ 1.9 ಸೆ.ಮೀ. ಹಾಗೂ ಕೋಲಾರ ತಾಲ್ಲೂಕಿನ ಜನಘಟ್ಟದಲ್ಲಿ 1.9 ಸೆ.ಮೀ ಮಳೆಯಾಗಿದೆ. ಮುಂದಿನ ಎರಡು ದಿನ ಜಿಲ್ಲೆಯ ವಿವಿಧೆಡೆ ಮಳೆಯಾಗುವ ಮುನ್ಸೂಚನೆ ಇದೆ

ಬಿರುಗಾಳಿ ಸಹಿತ ಮಳೆಗೆ ಹಲವೆಡೆ ನಷ್ಟವೂ ಸಂಭವಿಸಿದೆ. ಕೋಲಾರ ನಗರದ ಕೆಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಮನೆಗಳು ಜಲಾವೃತಗೊಂಡಿವೆ. ಹಲವೆಡೆ ವಿದ್ಯುತ್‌ ಅಡಚಣೆ ಉಂಟಾಯಿತು.

ಜೋರು ಮಳೆಯಿಂದ ಕೋಲಾರ ತಾಲ್ಲೂಕಿನ ಜಂಗಂಬಸಾಪುರ ಗ್ರಾಮದ ಸರ್ವೆ ನಂಬರ್ 7 ಮತ್ತು 8ರಲ್ಲಿ‌ ಸುಮಾರು ಮೂರು ಎಕರೆಯಲ್ಲಿ ಬಸವರಾಜು ಎಂಬ ರೈತ ಬೆಳೆದಿದ್ದ‌ ಬಾಳೆ ಬೆಳೆ ನೆಲಕಚ್ಚಿದೆ. ಪಪ್ಪಾಯಿ ಬೆಳೆಯೂ ನಷ್ಟವಾಗಿದೆ.

ವಾರದ ನಂತರ ಕಟಾವು ಮಾಡಬೇಕಿದ್ದ ಬಾಳೆ ಬೆಳೆಯು ಬಾಳೆ ಕೊನೆಯ ಸಮೇತ ನೆಲಕ್ಕೊರಗಿದೆ. ಸುಮಾರು ₹ 3ಲಕ್ಷ ನಷ್ಟವಾಗಿದೆ ಎಂದು ಅವರು ದೂರಿದ್ದು, ಜಿಲ್ಲಾಡಳಿತ ಕೂಡಲೇ ನಷ್ಟ ಪರಿಹಾರ ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ.

ಜೋರು ಮಳೆಯಿಂದ ಕೋಲಾರ ತಾಲ್ಲೂಕಿನ ಜಂಗಂಬಸಾಪುರ ಗ್ರಾಮದಲ್ಲಿ ನೆಲಕ್ಕೊರಗಿದ ಪಪ್ಪಾಯಿ ಬೆಳೆ

Highlights - ಮುಂದಿನ ಎರಡು ದಿನ ಮಳೆ ಮುನ್ಸೂಚನೆ ವಾರದಿಂದ ಜಿಲ್ಲೆಯಲ್ಲಿ ಮಳೆ ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.