ADVERTISEMENT

ಬೆಂಗಳೂರು ಬಳಿಕ ಕೋಲಾರದಲ್ಲೇ ಅಧಿಕ

ಮೇ ತಿಂಗಳಲ್ಲಿ ಈ ವರೆಗೆ ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆ, ತಗ್ಗಿದ ಬಿಸಿಲ ಧಗೆ

ಕೆ.ಓಂಕಾರ ಮೂರ್ತಿ
Published 14 ಮೇ 2024, 19:56 IST
Last Updated 14 ಮೇ 2024, 19:56 IST
ಕೋಲಾರ ಜಿಲ್ಲೆಯಲ್ಲಿ ವಾರದಿಂದ  ಮಳೆಯಾಗುತ್ತಿದ್ದು ಜನರಿಗೆ, ಧರೆಗೆ ತಂಪೆರೆಯುತ್ತಿದೆ
ಕೋಲಾರ ಜಿಲ್ಲೆಯಲ್ಲಿ ವಾರದಿಂದ  ಮಳೆಯಾಗುತ್ತಿದ್ದು ಜನರಿಗೆ, ಧರೆಗೆ ತಂಪೆರೆಯುತ್ತಿದೆ   

ಕೋಲಾರ: ಏಪ್ರಿಲ್‌ ತಿಂಗಳಲ್ಲಿ ಒಂದೂ ಹನಿ ಮಳೆ ಕಾಣದ ಕೋಲಾರ ಜಿಲ್ಲೆಯಲ್ಲಿ ಮೇ ತಿಂಗಳಲ್ಲಿ ಈವರೆಗೆ ದಾಖಲೆಯ ಮಳೆ‌ಯಾಗಿದೆ.

ಈ ತಿಂಗಳು ಈವರೆಗೆ 6.7 ಸೆ.ಮೀ (67 ಮಿ.ಮೀ) ಮಳೆಯಾಗಿದ್ದು, ಶೇ 176ರಷ್ಟು ಹೆಚ್ಚಳವಾಗಿದೆ. ಈ ಅವಧಿಯಲ್ಲಿ ಜಿಲ್ಲೆಯ ವಾಡಿಕೆ ಮಳೆ 2.4 ಸೆ.ಮೀ (24 ಮಿ.ಮೀ.).

ರಾಜ್ಯದಲ್ಲಿ ಈ ಅವಧಿಯಲ್ಲಿ ಬೆಂಗಳೂರು ನಗರ (7.7 ಸೆ.ಮೀ) ಬಳಿಕ ಕೋಲಾರ ಜಿಲ್ಲೆಯಲ್ಲಿ ಅತ್ಯಧಿಕ ಮಳೆಯಾಗಿದ್ದು, ಬಿಸಿಲ ಧಗೆಗೆ ಕಂಗೆಟ್ಟಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ADVERTISEMENT

ಈ ವರ್ಷ ಜನವರಿಯಿಂದ ಮೇ 13ರವರೆಗೆ ಜಿಲ್ಲೆಯಲ್ಲಿ ಒಟ್ಟು 7.1 ಸೆ.ಮೀ (71 ಮಿ.ಮೀ) ಮಳೆಯಾಗಿದೆ. ಈ ಅವಧಿಯ ವಾಡಿಕೆ ಮಳೆ ಶೇ 6.9 ಸೆ.ಮೀ (69 ಮಿ.ಮೀ.) ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಮಳೆ ಆಗುತ್ತಲೇ ಇದೆ. ಮುಳಬಾಗಿಲು ತಾಲ್ಲೂಕಿನ ಹನುಮನಹಳ್ಳಿಯಲ್ಲಿ 13 ಸೆ.ಮೀ ಮಳೆಯಾಗಿತ್ತು. 

ಒಣಗುತ್ತಿದ್ದ ಕೆರೆ ಕಟ್ಟೆಗಳಿಗೆ ಇದರಿಂದ ಮತ್ತೆ ಜೀವಕಳೆ ಬಂದಿದೆ. ಬಿರು ಬಿಸಲಿನಿಂದ ಹೈರಾಣಾಗಿದ್ದ ಜನರಿಗೂ ಮಳೆ ತಂಪೆರೆದಿದೆ. ಪ್ರಾಣಿ, ಪಕ್ಷಿಗಳಿಗೆ ನೀರಿನ ಕೊರತೆ ನೀಗಿಸಿದೆ. ಕೆಲವು ಭಾಗದಲ್ಲಿ ಮಳೆಯಾಶ್ರಿತ ಬೆಳೆ ಬೆಳೆಯಲು ರೈತರು ಭೂಮಿಯನ್ನು ಹದ ಮಾಡುವಲ್ಲಿ ನಿರತರಾಗಿದ್ದಾರೆ. ಇನ್ನು ಕೆಲವರು ಮುಂಗಾರು ಹಂಗಾಮಿಗೆ ಜಮೀನು ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. ಶ್ರೀನಿವಾಸಪುರದಲ್ಲಿ ರೈತರು ಸಂಪ್ರದಾಯದಂತೆ ಹೊನ್ನೇರು ಕಟ್ಟಿ ಜಮೀನು ಹಾಗೂ ಎತ್ತುಗಳಿಗೆ ಪೂಜೆ ಸಲ್ಲಿಸಿದ್ದಾರೆ.

ಕೆಲವೊಮ್ಮೆ ಬಿರುಗಾಳಿ, ಸಿಡಿಲು ಹಾಗೂ ಆಲಿಕಲ್ಲು ಸಮೇತ ಮಳೆಯಾಗಿದೆ. ಇದರಿಂದ ಜಿಲ್ಲೆಯ ಹಲವೆಡೆ ನಷ್ಟವೂ ಸಂಭವಿಸಿದೆ. ಕೋಲಾರ, ಮುಳಬಾಗಿಲು, ಬಂಗಾರಪೇಟೆ, ಕೆಜಿಎಫ್‌ ಹಾಗೂ ಬೇತಮಂಗಲದ ಕೆಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಮನೆಗಳು ಜಲಾವೃತಗೊಂಡಿವೆ. ಮಾಲೂರು, ಕೋಲಾರ ಸೇರಿದಂತೆ ವಿವಿಧೆಡೆ ವಿದ್ಯುತ್‌ ಕಂಬಗಳು, ಮರಗಳು ನೆಲಕ್ಕುರುಳಿ ಹಲವೆಡೆ ವಿದ್ಯುತ್‌ ಅಡಚಣೆ ಉಂಟಾಗಿದೆ. ಕೋಲಾರ ನಗರದಲ್ಲಿ ಮೇ 7 ಹಾಗೂ 8ರಂದು 24 ಗಂಟೆ ವಿದ್ಯುತ್‌ ಅಡಚಣೆ ಉಂಟಾಗಿತ್ತು. ಇಡೀ ಕೋಲಾರ ನಗರ ಕತ್ತಲಲ್ಲಿ ಮುಳುಗಿತ್ತು.

ಕೋಲಾರ, ಕೆಜಿಎಫ್‌ ಹಾಗೂ ಬೇತಮಂಗಲದ ವಿವಿಧೆಡೆ ಬಿರುಗಾಳಿ ಮಳೆಗೆ ಬಾಳೆ ಹಾಗೂ ಪಪ್ಪಾಯಿ ನೆಲಕಚ್ಚಿದೆ. ಲಕ್ಷಾಂತರ ರೂಪಾಯಿ ನಷ್ಟವಾಗಿದ್ದು, ಪರಿಹಾರಕ್ಕೆ ರೈತರು ಒತ್ತಾಯಿಸಿದ್ದಾರೆ. ಬಂಗಾರಪೇಟೆಯಲ್ಲಿ ಸಿಡಿಲು ಬಡಿದು ಎರಡು ಹಸುಗಳು ಮೃತಪಟ್ಟಿವೆ. ಮುಂದಿನ ದಿನಗಳಲ್ಲಿಯೂ ಜಿಲ್ಲೆಯಲ್ಲಿ ಮಳೆ ಬರುವ ಮುನ್ಸೂಚನೆಯನ್ನು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನೀಡಿದೆ.

ಕೋಲಾರ ಜಿಲ್ಲೆಯಲ್ಲಿ ಮಳೆ ಕಾರಣ ತಾಪಮಾನ 34 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ 
ಕೋಲಾರ ಜಿಲ್ಲೆಯಲ್ಲಿ ವಾರದಿಂದ ಮಳೆ ಕಾರಣ ಹಲವೆಡೆ ಮನೆಗಳು ಜಲಾವೃತಗೊಂಡಿವೆ ಕೆಲವೆಡೆ ನಷ್ಟ ಸಂಭವಿಸಿದೆ

Highlights - ಈ ತಿಂಗಳಲ್ಲಿ 6.7 ಸೆ.ಮೀ ಮಳೆ ಶೇ 176ರಷ್ಟು ಮಳೆ ಪ್ರಮಾಣ ದಾಖಲು ಏಪ್ರಿಲ್‌ನಲ್ಲಿ ಜಿಲ್ಲೆಯಲ್ಲಿ ಒಂದನಿಯೂ ಬೀಳದ ಮಳೆ

Cut-off box - ಮೇನಲ್ಲಿ ಅತಿ ಹೆಚ್ಚು ಮಳೆಯಾದ ಜಿಲ್ಲೆಗಳು (ಸೆ.ಮೀ) ಜಿಲ್ಲೆ; ವಾಡಿಕೆ; ಬಿದ್ದ ಮಳೆ; ಪ್ರಮಾಣ ಬೆಂಗಳೂರು ನಗರ; 3.3; 7.7; ಶೇ 119 ಕೋಲಾರ; 2.4; 6.7; ಶೇ 176 ಮೈಸೂರು; 4.6; 6.6; ಶೇ 45 ಹಾಸನ; 3.5; 5.9; ಶೇ 67 ಕೊಡಗು; 4.9; 5.9; ಶೇ 19 ತುಮಕೂರು; 2.5; 5.7; ಶೇ 122 * ಮೇ 13ರವರೆಗಿನ ಮಳೆ ಮಾಹಿತಿ

Cut-off box - ಬಿಸಿಲಿ ಧಗೆಗೆ ತತ್ತರಿಸಿದ್ದವರಿಗೆ ತಂಪು ಕೋಲಾರ ಜಿಲ್ಲೆಯಲ್ಲಿ ಮೇ 1ರಂದು 43.5 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿ ಜನ ತತ್ತರಿಸಿ ಹೋಗಿದ್ದರು. ಕಳೆದ ಏಳೆಂಟು ವರ್ಷಗಳಲ್ಲಿ ಇದು ಅತ್ಯಧಿಕ ತಾಪಮಾನವಾಗಿತ್ತು. ಮನೆಯೊಳಗೂ ಇರಲಾಗದ ಹೊರಗೂ ಹೋಗಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ವಾರದಿಂದೀಚೆಗೆ ಮಳೆ ಬರುತ್ತಿರುವುದರಿಂದ ತಾಪಮಾನ ತಗ್ಗಿದೆ. 34 ಡಿಗ್ರಿ ಸೆಲ್ಸಿಯಸ್‌ಗೆ ಬಂದಿಳಿದಿದೆ. ಕಾದ ಭುವಿಗೆ ವರುಣ ತಂಪೆರೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.