ADVERTISEMENT

ವರ್ಷವಾದರೂ ಪೂರ್ಣಗೊಳ್ಳದ ‘ಸಿಂಥೆಟಿಕ್‌ ಟ್ರ್ಯಾಕ್‌’!

ಸರ್‌ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣ: ಅಥ್ಲೀಟ್‌ಗಳು ಇನ್ನೆಷ್ಟು ದಿನ ಕಾಯಬೇಕು?

ಕೆ.ಓಂಕಾರ ಮೂರ್ತಿ
Published 12 ಜನವರಿ 2024, 5:42 IST
Last Updated 12 ಜನವರಿ 2024, 5:42 IST
ಕೋಲಾರದ ಎಸ್‌ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಮಂದಗತಿಯಲ್ಲಿ ಸಾಗಿರುವ ಸಿಂಥೆಟಿಕ್‌ ಟ್ರ್ಯಾಕ್‌ ಅಳವಡಿಸುವ ಕಾಮಗಾರಿ
ಕೋಲಾರದ ಎಸ್‌ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಮಂದಗತಿಯಲ್ಲಿ ಸಾಗಿರುವ ಸಿಂಥೆಟಿಕ್‌ ಟ್ರ್ಯಾಕ್‌ ಅಳವಡಿಸುವ ಕಾಮಗಾರಿ   

ಕೋಲಾರ: ಕೋಲಾರ ನಗರದ ಸರ್‌ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಸಿಂಥೆಟಿಕ್‌ ಟ್ರ್ಯಾಕ್‌ ಅಳವಡಿಕೆ ಕಾಮಗಾರಿ ಆರಂಭವಾಗಿ ವರ್ಷವಾಗುತ್ತಾ ಬಂದಿದ್ದು, ಇನ್ನೂ ತೆವಳುತ್ತಾ ಸಾಗಿದೆ.

ರಾಜಧಾನಿ ಬೆಂಗಳೂರಿಗೆ ಸಮೀಪದಲ್ಲೇ ಇರುವ ಜಿಲ್ಲೆಯ ಯಾವುದೇ ಕ್ರೀಡಾಂಗಣದಲ್ಲಿ ಸಿಂಥೆಟಿಕ್‌ ಟ್ರ್ಯಾಕ್‌ ಸೌಲಭ್ಯ ಇಲ್ಲ. ರಾಜ್ಯ, ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವವರು ಸಿಂಥೆಟಿಕ್‌ ಟ್ರ್ಯಾಕ್‌ನಲ್ಲೇ ಅಭ್ಯಾಸ ನಡೆಸಬೇಕು. ಅಂತರ ಜಿಲ್ಲಾ ಮಟ್ಟದ ಕ್ರೀಡಾಕೂಟ ಸಿಂಥೆಟಿಕ್‌ ಟ್ರ್ಯಾಕ್‌ನಲ್ಲೇ ನಡೆಯಬೇಕು. ಈ ಸೌಲಭ್ಯದ ಕೊರತೆಯಿಂದಾಗಿ ಜಿಲ್ಲೆಯಲ್ಲಿ ಯಾವುದೇ ಪ್ರಮುಖ ಕ್ರೀಡಾಕೂಟ ನಡೆಸಲು ಸಾಧ್ಯವಾಗಿಲ್ಲ.

₹ 8.55 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಂಡಿದ್ದರೂ ನಿಗದಿತ ಸಮಯದಲ್ಲಿ ಕಾಮಗಾರಿ ಮುಗಿಸುವಲ್ಲಿ ವೈಫಲ್ಯ ಎದ್ದು ಕಾಣುತ್ತಿದೆ. ಕ್ರೀಡಾ ಇಲಾಖೆ ಹಾಗೂ ಜಿಲ್ಲಾಡಳಿತವು ಕಾಮಗಾರಿಯನ್ನು ಟೆಂಡರ್ ಮೂಲಕ ಗುತ್ತಿಗೆದಾರರಿಗೆ ನೀಡಿದೆ. ಆದರೆ, ಇನ್ನೂ ಪೂರ್ಣ ಹಣ ಬಿಡುಗಡೆಯಾಗಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ.

ADVERTISEMENT

ಕಳೆದ ವರ್ಷ ಗಣರಾಜ್ಯೋತ್ಸವ ದಿನ ಶಂಕುಸ್ಥಾಪನೆ ನೆರವೇರಿಸಿದ್ದ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಮುನಿರತ್ನ ‘ನಿಗದಿಪಡಿಸಿದ 9 ತಿಂಗಳ ಸಮಯದೊಳಗೆ ಕಾಮಗಾರಿ ಮುಗಿಸದಿದ್ದರೆ ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂಬ ಮುಚ್ಚಳಿಕೆಯನ್ನು ಗುತ್ತಿಗೆದಾರರಿಂದ ಬರೆಸಿಕೊಳ್ಳಲಿದ್ದೇವೆ’ ಎಂದಿದ್ದರು. ಆದರೆ, ಕಾಮಗಾರಿ ಕುಂಟುತ್ತಾ ಸಾಗಿದ್ದು, ಜಲ್ಲಿ ಹಾಕಿ ಬಿಟ್ಟಿದ್ದಾರೆ. ಇನ್ನೂ ಟಾರ್‌ ಹಾಕಿ ಸಿಂಥೆಟಿಕ್‌ ಟ್ರ್ಯಾಕ್‌ ಅಳವಡಿಸುವ ಕಾಮಗಾರಿ ನಡೆಯಬೇಕಿದೆ. ಸಿಂಥೆಟಿಕ್‌ ಟ್ರ್ಯಾಕ್‌ ಸಾಮಗ್ರಿಯನ್ನು ಜರ್ಮನಿಯಿಂದ ತರಿಸಿದ್ದಾರೆ.

‘ಜಿಲ್ಲಾಧಿಕಾರಿ ಅಕ್ರಂ ಪಾಷ ಕೂಡ ಕ್ರೀಡಾಂಗಣಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮುಗಿಸಲು ಸೂಚನೆ ನೀಡಿದ್ದಾರೆ. ಮಾರ್ಚ್‌ ವೇಳೆಗೆ ಕಾಮಗಾರಿ ಮುಗಿಸುವುದಾಗಿ ಗುತ್ತಿಗೆದಾರರು ಭರವಸೆ ನೀಡಿದ್ದಾರೆ. ಎಷ್ಟು ಅನುದಾನ ಖರ್ಚಾಗಿದೆ, ಎಷ್ಟು ಅನುದಾನ ಬೇಕಿದೆ ಎಂಬ ವಿಚಾರ ಗೊತ್ತಿಲ್ಲ. ಇಲಾಖೆಯ ಕೇಂದ್ರ ಕಚೇರಿ ಮೂಲಕ ಟೆಂಡರ್‌ ನೀಡಿ ಕಾಮಗಾರಿ ಕೈಗೊಳ್ಳಲಾಗಿದೆ’ ಎಂದು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಆರ್‌.ಗೀತಾ ‘ಪ್ರಜಾವಾಣಿ’ಗೆ ತಿಳಿಸಿದರು.

‌‌ಮೂರು ಕಾಮಗಾರಿಗಳನ್ನು ಪ್ರತ್ಯೇಕವಾಗಿ ಕೊಡಲಾಗಿದೆ. ಸಿಂಥೆಟಿಕ್‌ ಟ್ರ್ಯಾಕ್‌ ಅಳವಡಿಕೆಗೆ ಬೇಸ್‌ ಹಾಗೂ ಚರಂಡಿ ಕಾಮಗಾರಿಯನ್ನು ₹ 2.07 ಕೋಟಿಗೆ ಟೆಂಡರ್‌ ನೀಡಲಾಗಿತ್ತು. ಟ್ರ್ಯಾಕ್‌ ಮಧ್ಯೆ ನೈಸರ್ಗಿಕ ಹುಲ್ಲು ಹಾಸಿನ ಫುಟ್‌ಬಾಲ್ ಅಂಕಣ, ನೀರಿನ ತೊಟ್ಟಿ, ಚೈನ್‌ ಲಿಂಕ್‌ ಫೆನ್ಸಿಂಗ್‌ ನಿರ್ಮಾಣ ಕಾಮಗಾರಿಯನ್ನು ₹ 2.41 ಕೋಟಿ ಮೊತ್ತಕ್ಕೆ ಟೆಂಡರ್‌ ಕೊಡಲಾಗಿತ್ತು. ₹ 5.60 ಕೋಟಿ ವೆಚ್ಚದಲ್ಲಿ 400 ಕಿ.ಮೀ ಸಿಂಥೆಟಿಕ್‌ ಟ್ರ್ಯಾಕ್‌ ಅಳವಡಿಸುವ ಕಾಮಗಾರಿಯನ್ನು ಹೈದರಾಬಾದ್‌ನ ಕಂಪನಿಯೊಂದಕ್ಕೆ ನೀಡಲಾಗಿತ್ತು. 

1 ಲಕ್ಷ ಲೀಟರ್‌ ನೀರು ಹಿಡಿದಿಡುವ ಸಾಮರ್ಥ್ಯದ ತೊಟ್ಟಿ ನಿರ್ಮಿಸಲಾಗುತ್ತದೆ. ಫುಟ್‌ಬಾಲ್‌ ಅಂಕಣ 109.35 x70.96 ಮೀಟರ್‌ ವಿಸ್ತೀರ್ಣ ಹೊಂದಿರಲಿದೆ. ಅಥ್ಲೆಟಿಕ್‌ ಟ್ರ್ಯಾಕ್‌ ಜೊತೆಗೆ ಲಾಂಗ್‌ ಜಂಪ್‌, ಸ್ಟೀಪಲ್‌ ಚೇಸ್‌ ಅಂಕಣ ಕೂಡ ನಿರ್ಮಾಣ ಮಾಡಲಾಗುತ್ತದೆ. ಗುತ್ತಿಗೆದಾರರೇ ಸಿಂಥೆಟಿಕ್‌ ಟ್ರ್ಯಾಕ್‌ ನಿರ್ವಹಣೆ ಮಾಡಲಿದ್ದಾರೆ. 

ಈಗಾಗಲೇ ಮಧ್ಯದಲ್ಲಿ ಲಾನ್‌ ಅಳವಡಿಸಿ, ಸ್ಪಿಂಕ್ಲರ್‌ ಹಾಕಿದ್ದಾರೆ. ವಾಕಿಂಗ್‌ ಪಾಥ್‌ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಕ್ರೀಡಾಂಗಣಕ್ಕೆ 10 ಫ್ಲಡ್‌ಲೈಟ್‌ ಹಾಕಲಿದ್ದಾರೆ.

ಆವರಣದಲ್ಲಿ ಸಿಂಥೆಟಿಕ್‌ ಟ್ರ್ಯಾಕ್‌ಗೆ ಸಂಬಂಧಿಸಿದ ಸಾಮಗ್ರಿ
ಕೋಲಾರದ ಎಸ್‌ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಮಂದಗತಿಯಲ್ಲಿ ಸಾಗಿರುವ ಸಿಂಥೆಟಿಕ್‌ ಟ್ರ್ಯಾಕ್‌ ಅಳವಡಿಸುವ ಕಾಮಗಾರಿ

ಸಿಂಥೆಟಿಕ್‌ ಟ್ರ್ಯಾಕ್‌ ಅಳವಡಿಸುವ ಕಾಮಗಾರಿ ಶೇ 70ರಷ್ಟು ಮುಗಿದಿದೆ. ಅನುದಾನ ಬರುವುದು ವಿಳಂಬ ಹಾಗೂ ಮಳೆ ಕಾರಣ ಕೆಲಕಾಲ ಕಾಮಗಾರಿ ಸ್ಥಗಿತಗೊಂಡಿತ್ತು

-ಆರ್‌.ಗೀತಾ ಸಹಾಯಕ ನಿರ್ದೇಶಕಿ ಕ್ರೀಡಾ ಇಲಾಖೆ ಕೋಲಾರ

ಕಾಮಗಾರಿ ಆರಂಭವಾಗಿ ವರ್ಷವಾಗುತ್ತಾ ಬಂದಿದ್ದು ಸರಿಯಾಗಿ ಕೆಲಸ ನಡೆಯುತ್ತಿಲ್ಲ. ಮಂದಗತಿಯಲ್ಲಿ ಕಾಮಗಾರಿ ಕೈಗೊಂಡಿದ್ದಾರೆ. ಕ್ರೀಡಾಕೂಟ ನಡೆಸಲು ಸಾಧ್ಯವಾಗುತ್ತಿಲ್ಲ

- ಎನ್‌.ಮುನಿಯಪ್ಪ ಅಧ್ಯಕ್ಷ ಕೋಲಾರ ಜಿಲ್ಲಾ ಅಥ್ಲೆಟಿಕ್ಸ್‌ ಅಸೋಸಿಯೇಷನ್‌

ಕ್ರೀಡಾಳು ಪದಾಧಿಕಾರಿಗಳ ಆಕ್ರೋಶ

ಕಾಮಗಾರಿ ವಿಳಂಬವಾಗಿ ನಡೆಯುತ್ತಿರುವ ಬಗ್ಗೆ ಉದಯೋನ್ಮುಖ ಕ್ರೀಡಾಪಟುಗಳು ಹಿರಿಯ ಕ್ರೀಡಾಪಟುಗಳು ಜನಪ್ರತಿನಿಧಿಗಳು ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಜಿಲ್ಲಾ ಕೇಂದ್ರವಾಗಿದ್ದರೂ ಜಿಲ್ಲಾ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ಆಗದಿರುವುದು ನೋವಿನ ವಿಷಯವಾಗಿದೆ. ಕಾಮಗಾರಿ ಬಹಳ ವಿಳಂಬವಾಗಿ ನಡೆಯುತ್ತಿದೆ. ಈ ಸಂಬಂಧ ಜಿಲ್ಲಾ ಆಡಳಿತವನ್ನು ಸಂಪರ್ಕಿಸಿ ಬೇಗ ಮುಗಿಸಿಕೊಡುವಂತೆ ಮನವಿ ಸಲ್ಲಿಸಿದ್ದೇವೆ. ಕ್ರೀಡಾಂಗಣ ಇಲ್ಲದೆ ಯಾವುದೇ ರೀತಿಯ ಕ್ರೀಡಾಕೂಟಗಳನ್ನೂ ಏರ್ಪಡಿಸಲು ಸಾಧ್ಯವಾಗುತ್ತಿಲ್ಲ’ ಎಂದು ಜಿಲ್ಲಾ ಅಥ್ಲೆಟಿಕ್‌ ಅಸೋಸಿಯೇಷನ್‌ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು.

ಗಣರಾಜ್ಯೋತ್ಸವಕ್ಕೆ ಸಿದ್ಧತೆ

ಸರ್‌ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿಯೇ ಜ.26ರಂದು ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮ ನಡೆಸಲು ಸಿದ್ಧತೆಗಳು ನಡೆಯುತ್ತಿವೆ. ಕಾಮಗಾರಿ ಕಾರಣ ವಿವಿಧ ದಿನಾಚರಣೆಗಳನ್ನು ವರ್ಷದಿಂದ ಜೂನಿಯರ್‌ ಕಾಲೇಜು ಮೈದಾನಕ್ಕೆ ಸ್ಥಳಾಂತರಿಸಲಾಗಿತ್ತು. ‘ಈ ಬಾರಿ ಗಣರಾಜ್ಯೋತ್ಸವಕ್ಕೆ ಕ್ರೀಡಾಂಗಣ ಬಿಟ್ಟುಕೊಡುವಂತೆ ಗುತ್ತಿಗೆದಾರರಿಗೆ ಕೇಳಿದ್ದು ಒಪ್ಪಿದ್ದಾರೆ. ಆಮೇಲೆ ಕೆಲಸ ಮುಂದುವರಿಸಲಿದ್ದಾರೆ’ ಎಂದು ಗೀತಾ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.