ADVERTISEMENT

ಕೋಲಾರ: 16 ತಿಂಗಳಲ್ಲಿ 1,601 ಎಕರೆ ಭೂಮಿ ಮಂಜೂರು!

ಟೀಕಾಕಾರಿಗೆ ಜಿಲ್ಲಾಧಿಕಾರಿ ಅಕ್ರಂ ಪಾಷಾ ತಿರುಗೇಟು; ವಿವಿಧ ಇಲಾಖೆಗೆ ನೀಡಿದ ಜಮೀನಿನ ದಾಖಲೆ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2024, 5:44 IST
Last Updated 20 ನವೆಂಬರ್ 2024, 5:44 IST
ಕೋಲಾರ ಜಿಲ್ಲಾಡಳಿತ ಭವನ
ಕೋಲಾರ ಜಿಲ್ಲಾಡಳಿತ ಭವನ   

ಕೋಲಾರ: ವಕ್ಫ್‌ಗೆ ಜಮೀನಿನ ಖಾತೆ ವರ್ಗಾವಣೆ ವಿವಾದ ಹಾಗೂ ಬೇರೆ ಸಮುದಾಯಕ್ಕೆ ಜಮೀನು ನೀಡಿಲ್ಲ ಎಂಬ ಟೀಕೆ ವ್ಯಕ್ತವಾದ ಬೆನ್ನಲೇ‌ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಿಗೆ ಜಿಲ್ಲಾಡಳಿತದಿಂದ ಭೂಮಿ ಮಂಜೂರಾತಿ ಮಾಡಿರುವ ಬಗ್ಗೆ ಜಿಲ್ಲಾಧಿಕಾರಿ ಅಕ್ರಂ ಪಾಷಾ ಸಾಕ್ಷ್ಯ ಸಮೇತ ದಾಖಲಾತಿ ಬಿಡುಗಡೆ ಮಾಡಿದ್ದಾರೆ.

ಕಳೆದ 16 ತಿಂಗಳಲ್ಲಿ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಿಗೆ ಸುಮಾರು 1,601 ಎಕರೆ ಭೂಮಿಯನ್ನು ಮಂಜೂರು ಮಾಡಿರುವುದಾಗಿ ಹೇಳಿದ್ದಾರೆ.

ಅಕ್ರಂ ಪಾಷಾ 2023ರ ಜೂನ್‌ 19ರಂದು ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಆಗಿನಿಂದ ಯಾವ ಇಲಾಖೆಗೆ ಎಷ್ಟು ನಿವೇಶನ, ಭೂಮಿ ನೀಡಲಾಗಿದೆ, ಯಾವ ಉದ್ದೇಶಕ್ಕೆ ನೀಡಲಾಗಿದೆ ಎಂಬುದನ್ನು ಇಲಾಖಾವಾರು ಹಾಗೂ ತಾಲ್ಲೂಕುವಾರ ಅಂಕಿ ಅಂಶ ನೀಡಿದ್ದಾರೆ.

ADVERTISEMENT

ಈಚೆಗೆ ಮಾಜಿ ಸಂಸದ ಹಾಗೂ ಬಿಜೆಪಿ ಮುಖಂಡ ಎಸ್‌.ಮುನಿಸ್ವಾಮಿ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ವಕ್ಫ್‌ಗೆ ಭೂಮಿ ಮಂಜೂರಾತಿಯಲ್ಲಿ ಜಿಲ್ಲಾಧಿಕಾರಿ ಪಾತ್ರವಿದ್ದು, ಬೇರೆ ಯಾವುದೇ ಸಮುದಾಯಕ್ಕೆ ಜಮೀನು ನೀಡಿಲ್ಲವೆಂದು ಆರೋಪಿಸಿದ್ದರು.

‘ಜಿಲ್ಲಾಧಿಕಾರಿಯು ತಮ್ಮ ಸಾಧನೆಗಳ ಬಗ್ಗೆ ಸಂವಾದವೊಂದರಲ್ಲಿ ಹೇಳಿಕೊಂಡಿದ್ದಾರೆ. ಅದು ಕೋಲಾರದಿಂದ ಅವರ ವಿದಾಯದ ಸಂವಾದವಾಗಿದೆ. ವಾರದಲ್ಲಿ ವರ್ಗಾವಣೆ ಆಗಲಿದ್ದಾರೆ. ಜಿಲ್ಲೆಯಲ್ಲಿ ಬೇರೆಬೇರೆ ಸಮುದಾಯದವರು ಇಷ್ಟು ಜನಸಂಖ್ಯೆ ಇದ್ದರೂ ಸಮುದಾಯ ಭವನ, ಸ್ಮಶಾನ, ಶಾಲೆ, ಅಂಗನವಾಡಿ, ಆಟದ ಮೈದಾನ ನೀಡಲು ಮಾತ್ರ ಜಾಗದ ಕೊರತೆ ಎದ್ದು ಕಾಣುತ್ತಿದೆ. 500 ಶಾಲೆಗಳು ಸೋರುತ್ತಿವೆ. ಆದರೆ, ಕೋಲಾರ ತಾಲ್ಲೂಕಿನಲ್ಲೇ 218 ಎಕರೆಯನ್ನು ಒಂದು ಸಮುದಾಯಕ್ಕೆ ನೀಡಿದ್ದಾರೆ’ ಎಂದು ದೂರಿದ್ದರು.

‘ಜಿಲ್ಲೆಯಲ್ಲಿ ಸರ್ಕಾರ ಹಾಗೂ ರೈತರಿಗೆ ಸೇರಿದ 600 ಎಕರೆಗೂ ಹೆಚ್ಚು ಜಾಗದ ಖಾತೆ ವಕ್ಫ್‌ಗೆ ವರ್ಗಾವಣೆ ಆಗಿರುವ ದಾಖಲೆ ಇದೆ. ಇನ್ನಷ್ಟು ಮಾಹಿತಿ ಕಲೆಹಾಕಿ ರಾಜ್ಯ ಬಿಜೆಪಿ ಮುಖಂಡರ ನೇತೃತ್ವದಲ್ಲಿ ಶೀಘ್ರದಲ್ಲೇ ಅಹೋರಾತ್ರಿ ಧರಣಿ ನಡೆಸಲಾಗುವುದು’ ಎಂದು ಎಚ್ಚರಿಸಿದ್ದರು.

ಇದಕ್ಕೆ ತಿರುಗೇಟು ಎಂಬಂತೆ ಜಿಲ್ಲಾಧಿಕಾರಿಯು ವಿವಿಧ ಇಲಾಖೆಗಳಿಗೆ ನೀಡಿರುವ ಜಮೀನಿನ ಪಟ್ಟಿ ಬಿಡುಗಡೆ ಮಾಡಿರುವುದು ಕುತೂಹಲ ಮೂಡಿಸಿದೆ.

ಈಗಾಗಲೇ ಒಟ್ಟು 1,526.10 ಎಕರೆ ಭೂಮಿ ವಿವಿಧ ಇಲಾಖೆಗಳಿಗೆ ಮಂಜೂರಾಗಿದೆ. ಇನ್ನು 73.05 ಎಕರೆ ಮಂಜೂರಾತಿಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದಿದ್ದಾರೆ.

ಪಟ್ಟಿಯ ಪ್ರಕಾರ ಕೆಜಿಎಫ್‌ ತಾಲ್ಲೂಕಿನಲ್ಲಿ ಸಿಂಹಪಾಲು ಭೂಮಂಜೂರಾತಿ ಆಗಿದೆ. ಟೌನ್‌ಶಿಪ್‌ ಉದ್ದೇಶಕ್ಕೆ ಸೇರಿದಂತೆ ಸುಮಾರು 1,189 ಎಕರೆ ಜಮೀನು ಮಂಜೂರಾಗಿದೆ. ಅತಿ ಕಡಿಮೆ ಭೂಮಂಜೂರು ಎಂದರೆ ಬಂಗಾರಪೇಟೆ ತಾಲ್ಲೂಕು. ಅಲ್ಲಿ ಕೇವಲ 5.27 ಎಕರೆ ಭೂಮಿ ಮಂಜೂರಾಗಿದೆ. ಇನ್ನುಳಿದ ತಾಲ್ಲೂಕುಗಳಲ್ಲಿ ನೂರು ಎಕರೆಯ ಆಸುಪಾಸು ಇದೆ.

ಕೋಲಾರ ತಾಲ್ಲೂಕಿನಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ 24.28 ಎಕರೆ, ಇಂಧನ ಇಲಾಖೆಗೆ 63.21 ಎಕರೆ, ಇಲಾಖೆ ಕಟ್ಟಡಗಳಿಗೆ 17.36 ಎಕರೆ, ಸರ್ಕಾರಿ ಶಾಲೆಗಳಿಗೆ 7.15 ಎಕರೆ ಜಮೀನನ್ನು ಅಕ್ರಂ ಪಾಷಾ ಮಂಜೂರು ಮಾಡಿದ್ದಾರೆ. ಮಾಲೂರು ತಾಲ್ಲೂಕಿನಲ್ಲಿ ಇಂಧನ ಇಲಾಖೆಗೆ 68.20 ಎಕರೆ, ಸರ್ಕಾರಿ ಶಾಲೆಗೆ 8.08 ಎಕರೆ, ಸ್ಮಶಾನಕ್ಕೆ 4.09 ಎಕರೆ ಜಮೀನು ಮಂಜೂರು ಮಾಡಿದ್ದಾರೆ.

ಮುಳಬಾಗಿಲು ತಾಲ್ಲೂಕಿನಲ್ಲಿ ಇಂಧನ ಇಲಾಖೆಗೆ 105 ಎಕರೆ, ಸ್ಮಶಾನಕ್ಕೆ 7.19 ಎಕರೆ, ಶಾಲಾ ಕಾಲೇಜಿಗೆ 6.09 ಎಕರೆ ಜಮೀನನ್ನು ಮಂಜೂರು ಮಾಡಿದ್ದಾರೆ. ಶ್ರೀನಿವಾಸಪುರದಲ್ಲಿ ಇಂಧನ ಇಲಾಖೆಗೆ 65 ಎಕರೆ, ಸರ್ಕಾರಿ ಶಾಲಾ ಕಾಲೇಜುಗಳಿಗೆ 14.38 ಎಕರೆ, ಅರಣ್ಯ ಇಲಾಖೆಗೆ 10 ಎಕರೆ, ಗೋಶಾಲೆಗೆ 9.36 ಎಕರೆ ಭೂಮಿ ಮಂಜೂರಾಗಿ ಆಗಿದೆ. ಬಂಗಾರಪೇಟೆ ತಾಲ್ಲೂಕಿನಲ್ಲಿ ಇಂಧನ ಇಲಾಖೆಗೆ 4.21 ಎಕರೆ, ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ 1 ಎಕರೆ ಭೂಮಿ ಮಂಜೂರು ಮಾಡಿದ್ದಾರೆ.

ಖಾತೆ ಬದಲಾವಣೆ ಕೋರಿ ವಕ್ಫ್‌ನಿಂದ ಬಂದಿದ್ದ ಮನವಿಗೆ ಶ್ರೀನಿವಾಸಪುರ ತಹಶೀಲ್ದಾರ್‌ ಹಿಂಬರಹ ಪತ್ರ
ವಿವಿಧ ಇಲಾಖೆಗಳಿಗೆ ನೀಡಿರುವ ಜಮೀನಿನ ವಿವರದ ಪಟ್ಟಿ ನೀಡಿದ ಜಿಲ್ಲಾಧಿಕಾರಿ ಸರ್ಕಾರಿ ಶಾಲಾ ಕಾಲೇಜು, ಸ್ಮಶಾನಕ್ಕೆ ನೀಡಿರುವ ಭೂಮಿಯ ಮಾಹಿತಿ 73 ಎಕರೆ ಭೂ ಮಂಜೂರಾತಿಗೆ ಸರ್ಕಾರಕ್ಕೆ ಪ್ರಸ್ತಾವ
2023ರ ಜೂನ್‌ನಲ್ಲಿ ಜಿಲ್ಲಾಧಿಕಾರಿಯಾಗಿ ಬಂದಾಗಿನಿಂದ ಈವರೆಗೆ ಸ್ಮಶಾನ ಸರ್ಕಾರಿ ಶಾಲಾ ಕಾಲೇಜು ಆಸ್ಪತ್ರೆ ಸೇರಿದಂತೆ ಹಲವಾರು ಇಲಾಖೆಗಳಿಗೆ ಜಾಗ ಮಂಜೂರು ಮಾಡಲಾಗಿದೆ
ಅಕ್ರಂ ಪಾಷಾ ಜಿಲ್ಲಾಧಿಕಾರಿ

ವಕ್ಫ್‌ ಮಂಡಳಿ ಮನವಿ ತಿರಸ್ಕಾರ, ಹಿಂಬರಹ

ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಜಮೀನು ಖಾತೆ ವರ್ಗಾವಣೆ ಕೋರಿ ವಕ್ಫ್‌ ಮಂಡಳಿಯಿಂದ ಮನವಿ ಬಂದಿದ್ದು ನಿಜವೆಂದು ಒಪ್ಪಿಕೊಂಡಿರುವ ಜಿಲ್ಲಾಧಿಕಾರಿ ಅಕ್ರಂ ಪಾಷಾ ಮನವಿ ನಿರಾಕರಿಸಿ ಹಿಂಬರಹ ನೀಡಿ ಕಳುಹಿಸಲಾಗಿದೆ ಎಂದಿದ್ದಾರೆ. ‘ರೈತರದ್ದಾಗಲಿ ಬೇರೆಯವರದ್ದಾಗಲಿ ಒಂದಿಂಚೂ ಭೂಮಿಯನ್ನು ನನ್ನ ಅಧಿಕಾರಾವಧಿಯಲ್ಲಿ ವಕ್ಫ್‌ಗೆ ನೀಡಿಲ್ಲ’ ಎಂದೂ ಸ್ಪಷ್ಟಪಡಿಸಿದ್ದಾರೆ. ‘ಜಮೀನುಗಳು ರೈತರ ಅನುಭವದಲ್ಲಿರುವುದರಿಂದ ಖಾತೆ ವರ್ಗಾವಣೆ ಮಾಡಲು ಆಗದು ಎಂದು ಆಯಾಯ ತಹಶೀಲ್ದಾರ್‌ಗಳು ಸೆಪ್ಟೆಂಬರ್‌ನಲ್ಲಿಯೇ ವಕ್ಫ್‌ಗೆ ಹಿಂಬರಹ ನೀಡಿದ್ದಾರೆ. ಮುದುವಾಡಿ ಸರ್ಕಾರಿ ಶಾಲೆಯದ್ದು ವಕ್ಫ್‌ ಜಾಗ. ಆದರೂ ಶಾಲೆಗೇ ಖಾತೆ ಮಾಡಿಕೊಡಲಾಗಿದೆ’ ಎಂದಿದ್ದಾರೆ. ಖಾತೆ ಬದಲಾವಣೆ ಕೋರಿ ಕೋಲಾರ ತಾಲ್ಲೂಕಿನಲ್ಲಿ 25 ಶ್ರೀನಿವಾಸಪುರ ತಾಲ್ಲೂಕಿನಲ್ಲಿ 42 ಬಂಗಾರಪೇಟೆ ತಾಲ್ಲೂಕಿನಲ್ಲಿ 43 ಮಾಲೂರು ತಾಲ್ಲೂಕಿನಲ್ಲಿ 14 ಕೆಜಿಎಫ್‌ ತಾಲ್ಲೂಕಿನಲ್ಲಿ 5 ಸೇರಿದಂತೆ 120ಕ್ಕೂ ಹೆಚ್ಚು ಪ್ರಕರಣಗಳಲ್ಲಿ ವಕ್ಫ್‌ನಿಂದ ಮನವಿ ಬಂದಿತ್ತು. ಈ ಸಂಬಂಧವೂ ಜಿಲ್ಲಾಧಿಕಾರಿ ದಾಖಲೆ ಬಿಡುಗಡೆ ಮಾಡಿದ್ದಾರೆ.

ಕೆಜಿಎಫ್‌ನಲ್ಲಿ ಅತಿ ಹೆಚ್ಚು ಭೂ ಮಂಜೂರಾತಿ

2023ರ ಜೂನ್‌ನಿಂದ ಈಚೆಗೆ ಕೆಜಿಎಫ್‌ ತಾಲ್ಲೂಕಿನಲ್ಲಿ ಜಿಲ್ಲಾಡಳಿತದಿಂದ ಸಾವಿರ ಎಕರೆಗೂ ಹೆಚ್ಚು ಭೂಮಿ ಮಂಜೂರು ಮಾಡಲಾಗಿದೆ. ಪ್ರಮುಖವಾಗಿ ಕೆಎಐಡಿಬಿಗೆ 668 ಎಕರೆ ಟೌನ್‌ಶಿಪ್‌ಗೆಂದು ನಗರಾಭಿವೃದ್ಧಿಗೆ ಇಲಾಖೆಗೆ 294 ಎಕರೆ ಹಾಗೂ ಪೊಲೀಸ್‌ ಇಲಾಖೆಗೆ 143.39 ಎಕರೆ ಭೂಮಿ ಲಭಿಸಿದೆ. ಒಟ್ಟು 1189 ಎಕರೆ ಮಂಜೂರಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.