ಕೋಲಾರ: ನಗರದ ಕಸ ನಿರ್ವಹಣೆಯಲ್ಲಿ ಸಂಪೂರ್ಣ ವೈಫಲ್ಯ ಕಂಡಿರುವ ಕೋಲಾರ ನಗರಸಭೆಯು ಕೆಂದಟ್ಟಿಯಲ್ಲಿ ನಿರ್ಮಿಸಿರುವ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಅನುಮತಿಯನ್ನೇ ಪಡೆದಿಲ್ಲ.
ನಿಯಮಗಳ ಉಲ್ಲಂಘನೆ ಸಂಬಂಧ ಮಂಡಳಿಯು ನಗರಸಭೆಗೆ ನೋಟಿಸ್ ನೀಡಿದ್ದು, ಕಾನೂನು ಕ್ರಮದ ಎಚ್ಚರಿಕೆ ನೀಡಿದೆ.
‘ನಗರದಲ್ಲಿ ಘನತ್ಯಾಜ್ಯ ವಸ್ತುಗಳ ನಿಯಮ ಪಾಲನೆಯಲ್ಲಿ ಕೋಲಾರ ನಗರಸಭೆಯು ವಿಫಲವಾಗಿರುವುದು ಕಂಡುಬಂದಿದೆ. ಈ ಮೂಲಕ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ (ಎನ್‌ಜಿಟಿ) ಆದೇಶಗಳನ್ನು ಉಲ್ಲಂಘನೆ ಮಾಡಿದೆ. ಈ ಬಗ್ಗೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಮಂಡಳಿಯ ಕೇಂದ್ರ ಕಚೇರಿಗೆ ಶಿಫಾರಸು ಮಾಡಲಾಗುವುದು’ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ರಾಜು, ನಗರಸಭೆಗೆ ನೀಡಿರುವ ನೋಟಿಸ್‌ನಲ್ಲಿ ಉಲ್ಲೇಖಿಸಿದ್ದಾರೆ.
ನಗರದಲ್ಲಿ ಸಂಗ್ರಹವಾಗುವ ಘನ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ತಾಲ್ಲೂಕಿನ ವಕ್ಕಲೇರಿ ಹೋಬಳಿಯ ಕೆಂದಟ್ಟಿ ಗ್ರಾಮದ ಬಳಿ 10 ಎಕರೆ ಜಾಗದಲ್ಲಿ ₹10 ಕೋಟಿ ವೆಚ್ಚದಲ್ಲಿ ಘಟಕ ನಿರ್ಮಿಸಲಾಗಿದೆ.
ಈಗಾಗಲೇ ಸ್ವಚ್ಛ ಭಾರತ ಮಿಷನ್ 1–0 ಯೋಜನೆಯಡಿ ಘನತ್ಯಾಜ್ಯ ನಿರ್ವಹಣೆಗೆ ಪರಿಕರ ಖರೀದಿಯಲ್ಲಿ ನಡೆದಿರುವ ಕೋಟ್ಯಂತರ ರೂಪಾಯಿ ಅವ್ಯವಹಾರದ ಬಗ್ಗೆ ತನಿಖೆ ನಡೆಸಲು ನಗರಸಭೆ ನಿರ್ಣಯ ಕೈಗೊಂಡಿದೆ. ಇದಲ್ಲದೆ, ಘಟಕ ನಿರ್ಮಾಣವಾಗಿ ಹಲವು ತಿಂಗಳು ಕಳೆದಿದ್ದರೂ ಪ್ರಮುಖವಾಗಿ ಬೇಕಾಗಿರುವ ಮಾಲಿನ್ಯ ನಿಯಂತ್ರಣ ಮಂಡಳಿಯ ‘ಅಧಿಕಾರ ಪತ್ರ’ ಪಡೆಯದಿರುವುದು ಮತ್ತೊಂದು ಲೋಪವಾಗಿದೆ.
ಘನತ್ಯಾಜ್ಯ ನಿರ್ವಹಣೆ ನಿಯಮಗಳು, 2016ರ ಅಧಿನಿಯಮದ ಉಲ್ಲಂಘನೆಯಾಗಿದ್ದು, ವಿವರಣೆ ಕೇಳಿ ನೋಟಿಸ್ ನೀಡಲಾಗಿದೆ.
ಘಟಕವಿದ್ದರೂ ಅರಣ್ಯ ಭೂಮಿ, ರೈತರ ಜಮೀನು, ರಸ್ತೆ ಬದಿ, ಕೆರೆಗಳ ಸುತ್ತ ಸೇರಿದಂತೆ ಎಲ್ಲೆಂದರಲ್ಲಿ ನಗರಸಭೆಯಿಂದ ತ್ಯಾಜ್ಯ ವಿಲೇವಾರಿ ಮಾಡುತ್ತಿರುವುದು ಕಂಡುಬಂದಿದ್ದು, ಈ ಸಂಬಂಧವೂ ಮಂಡಳಿ ನೋಟಿಸ್ ನೀಡಿದೆ. ಜೊತೆಗೆ ಕಸಕ್ಕೆ ಬೆಂಕಿ ಹಾಕುತ್ತಿರುವ ಬಗ್ಗೆಯೂ ದೂರುಗಳು ಬರುತ್ತಿವೆ.
ಕೆರೆಗೆ ಕೊಳಚೆ ನೀರು: ನಗರದ ಕೊಳಚೆ ನೀರನ್ನು ಸಂಸ್ಕರಿಸದೆ ಐತಿಹಾಸಿಕ ಕೋಲಾರಮ್ಮ (ಅಮಾನಿಕೆರೆ) ಕೆರೆಗೆ ಹರಿಸುತ್ತಿರುವ ಬಗ್ಗೆ ಮಂಡಳಿಯು ನಗರಸಭೆಗೆ ನೋಟಿಸ್ ನೀಡಿದೆ.
ಮಳೆ ನೀರು ಹರಿಯುವ ಕಾಲುವೆಗಳಲ್ಲಿ ನಗರದ ವಿವಿಧೆಡೆಯ ತ್ಯಾಜ್ಯ ನೀರು ಹರಿದು ಕೋಲಾರಮ್ಮ ಕೆರೆಯ ಒಡಲು ಸೇರುತ್ತಿದೆ. ಇದರಿಂದ ಕೆರೆ ಕಲುಷಿತಗೊಳ್ಳುತ್ತಿದ್ದು, ಜಲಚರಗಳಿಗೂ ತೊಂದರೆ ಉಂಟಾಗುತ್ತಿದೆ. ಕೊಳಚೆ ನೀರನ್ನು ಕೆರೆಗಳಿಗೆ ಶುದ್ಧೀಕರಿಸಿ ಹರಿಸಬೇಕು.
‘ಮಳೆ ನೀರು ಕೆರೆಗೆ ಸೇರಿ ಮಾಲಿನ್ಯಕಾರಕ ಅಂಶಗಳು ಕದಡಿ ನೊರೆ ಸೃಷ್ಟಿಯಾಗುತ್ತಿದೆ. ಅಂತರಗಂಗೆ ಬೆಟ್ಟದಿಂದ ರಾಜಕಾಲುವೆಯಲ್ಲಿ ಹರಿದು ಬರುವ ನೀರಿನ ಜೊತೆಗೆ ನಗರದ ವಿವಿಧೆಡೆಯ ಕೊಳಚೆ ನೀರು ಈ ಕೆರೆ ಸೇರುತ್ತಿದೆ. ಸರ್ಕಾರ, ನಗರಸಭೆ ನಿರ್ಲಕ್ಷ್ಯದಿಂದ ಕೆರೆ ಹಾಳಾಗುತ್ತಿದೆ’ ಎಂದು ಪರಿಸರವಾದಿಗಳು, ಸ್ಥಳೀಯರು ಆರೋಪಿಸಿದ್ದಾರೆ.
ಕೋಲಾರದ ನಗರಸಭೆ ಮಾತ್ರವಲ್ಲ; ಬಂಗಾರಪೇಟೆ, ಕೆಜಿಎಫ್, ಮಾಲೂರು ಸೇರಿದಂತೆ ಎಲ್ಲಾ ನಗರಸಭೆ, ಪುರಸಭೆಯ ಆಯುಕ್ತರು, ಪೌರಾಯುಕ್ತರಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ನಗರ, ಪಟ್ಟಣ ಸುತ್ತಲಿನ ಕೆರೆಗಳಿಗೆ ಕೊಳಚೆ ನೀರನ್ನು ಶುದ್ಧೀಕರಿಸಿ ಹರಿಸುವಂತೆ ಸಲಹೆ ನೀಡಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿಗೂ ಪತ್ರ ರವಾನಿಸಿದ್ದಾರೆ.
ತ್ಯಾಜ್ಯ ನಿರ್ವಹಣೆಯಲ್ಲಿ ನಿಯಮ ಉಲ್ಲಂಘನೆ ಸಂಬಂಧ ಕೋಲಾರ ನಗರಸಭೆಗೆ ಹಲವಾರು ನೋಟಿಸ್ ನೀಡಲಾಗಿದೆ. ತ್ಯಾಜ್ಯ ವಿಲೇವಾರಿ ಘಟಕಕ್ಕೆ ಅಧಿಕಾರ ಪತ್ರವನ್ನೇ ಪಡೆದುಕೊಂಡಿಲ್ಲರಾಜು ಪರಿಸರ ಅಧಿಕಾರಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ
ಕೋಲಾರ ನಗರಸಭೆ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಆದಷ್ಟು ಬೇಗ ಅನುಮತಿ ಪಡೆಯಲಾಗುವುದು. ಈ ಸಂಬಂಧ ಪ್ರಕ್ರಿಯೆಗಳು ನಡೆಯುತ್ತಿವೆದಿಲೀಪ್ ಎಇಇ (ಪರಿಸರ) ನಗರಸಭೆ ಕೋಲಾರ
ಕಸ ನಿರ್ವಹಣೆಯಲ್ಲಿ ನಗರಸಭೆ ಕಾನೂನು ಉಲ್ಲಂಘಿಸಿದೆ. ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಗೆ ದೂರು ನೀಡಿದ್ದು ಲೋಕಾಯುಕ್ತಕ್ಕೂ ದೂರು ಕೊಡುತ್ತೇನೆ. ಕಾನೂನು ಹೋರಾಟ ನಡೆಸುತ್ತೇನೆಸುರೇಶ್ ಕುಮಾರ್ ಎನ್. ನಾಗರಿಕ ಕೋಲಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.