ADVERTISEMENT

ಕೋಲಾರ | ಯುವನಿಧಿ ಯೋಜನೆ: 1,545 ನಿರುದ್ಯೋಗಿಗಳು ನೋಂದಣಿ

ಜಿಲ್ಲೆಯಲ್ಲಿ 2022–23ರಲ್ಲಿ 6,200 ಮಂದಿ ಡಿಪ್ಲೊಮಾ, ಪದವಿ, ವೃತ್ತಿಪರ ಶಿಕ್ಷಣ ಕೋರ್ಸ್‌ ಉತ್ತೀರ್ಣ

​ಪ್ರಜಾವಾಣಿ ವಾರ್ತೆ
Published 13 ಜನವರಿ 2024, 7:16 IST
Last Updated 13 ಜನವರಿ 2024, 7:16 IST
ಯುವನಿಧಿ ಲೋಗೊ
ಯುವನಿಧಿ ಲೋಗೊ   

ಕೋಲಾರ: ರಾಜ್ಯ ಕಾಂಗ್ರೆಸ್‌ ಸರ್ಕಾರದ ಐದನೇ ಗ್ಯಾರಂಟಿ ಯೋಜನೆ ‘ಯುವನಿಧಿ’ಗೆ ಕೋಲಾರ ಜಿಲ್ಲೆಯಲ್ಲಿ ಈವರೆಗೆ 1,545 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ.

ಶಿವಮೊಗ್ಗದಲ್ಲಿ ಶುಕ್ರವಾರ ಈ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದು, ನೇರವಾಗಿ ಅಭ್ಯರ್ಥಿಗಳ ಖಾತೆಗೆ ಹಣ ಸೇರಲಿದೆ. ಕೋಲಾರ ತಾಲ್ಲೂಕಿನಲ್ಲಿ ಅತ್ಯಧಿಕ (406) ನೋಂದಣಿ ಆಗಿದ್ದರೆ, ಬಂಗಾರಪೇಟೆ ತಾಲ್ಲೂಕಿನಲ್ಲಿ ಕಡಿಮೆ (194) ನೋಂದಣಿ ಆಗಿದೆ.

2022-23ನೇ ಸಾಲಿನಲ್ಲಿ ಪದವಿ, ಡಿಪ್ಲೊಮಾ ತೇರ್ಗಡೆ ಆಗಿ 6 ತಿಂಗಳಿನಿಂದ ಉದ್ಯೋಗ ಸಿಗದೇ ರಾಜ್ಯದಲ್ಲಿ ವಾಸ ಇರುವವರಿಗೆ ಈ ಯುವನಿಧಿ ಯೋಜನೆ ಅನ್ವಯವಾಗಲಿದೆ. ಪದವೀಧರ ನಿರುದ್ಯೋಗಿಗಳಿಗೆ ತಿಂಗಳಿಗೆ ₹ 3 ಸಾವಿರ ಮತ್ತು ಡಿಪ್ಲೊಮಾ ತೇರ್ಗಡೆಯಾದ ನಿರುದ್ಯೋಗಿಗಳಿಗೆ ₹1,500 ಸಿಗಲಿದೆ. ನಿರುದ್ಯೋಗ ಭತ್ಯೆ ಎರಡು ವರ್ಷಗಳ ಅವಧಿಗೆ ಮಾತ್ರ ಇರುತ್ತದೆ.

ADVERTISEMENT

ಜಿಲ್ಲೆಯಲ್ಲಿ 2022–23ರಲ್ಲಿ ಸುಮಾರು 6,200 ಮಂದಿ ಡಿಪ್ಲೊಮಾ, ಪದವಿ, ಕಾನೂನು ಪದವಿ, ಪ್ಯಾರಾ ಮೆಡಿಕಲ್‌, ಎಂಜಿನಿಯರಿಂಗ್‌ ಪದವೀಧರರು ಉತ್ತೀರ್ಣರಾಗಿದ್ದಾರೆ.

‘ಜಿಲ್ಲೆಯಲ್ಲಿ ಹೆಚ್ಚಿನವರು ಪದವಿ ಮುಗಿಸಿ ಉನ್ನತ ಶಿಕ್ಷಣಕ್ಕೆ ಹೋಗುತ್ತಾರೆ. ಜಿಲ್ಲೆ ಹಾಗೂ ಬೆಂಗಳೂರು ಸುತ್ತಮುತ್ತ ಕೈಗಾರಿಕೆಗಳು ಹೆಚ್ಚಿದ್ದು, ಕೆಲಸಕ್ಕೆ ಸೇರುತ್ತಿದ್ದಾರೆ. ವಿಸ್ಟ್ರಾನ್‌ ಕಂಪನಿಗೆ ಹೆಚ್ಚು ಮಂದಿ ಹೋಗುತ್ತಿದ್ದಾರೆ. ಸುಮಾರು 4 ಸಾವಿರ ಮಹಿಳೆಯರಿಗೆ ಈ ಕಂಪನಿಯಲ್ಲಿ ಇನ್ನೂ ಉದ್ಯೋಗಾವಕಾಶವಿದೆ. ಡಿಪ್ಲೊಮಾ ಪೂರೈಸಿದವರು ಅಪ್ರೆಂಟಿಸ್‌ಶಿಪ್‌ ಮಾಡುತ್ತಿದ್ದಾರೆ. ಹೀಗಾಗಿ, ಜಿಲ್ಲೆಯಲ್ಲಿ ನಿರೀಕ್ಷೆಗಿಂತ ಕಡಿಮೆ ನೋಂದಣಿ ಆಗಿದೆ.‌ ನೋಂದಣಿಗೆ ಕಾಲಮಿತಿ ಇಲ್ಲ’ ಎಂದು ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಕೆ.ಶ್ರೀನಿವಾಸ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಯುವನಿಧಿಗೆ ಆಯ್ಕೆಯಾದ ಅಭ್ಯರ್ಥಿಗಳು ಪ್ರತಿ ತಿಂಗಳು 25ರ ನಂತರ ನಿರುದ್ಯೋಗಿ ಎಂದು ಪೋರ್ಟಲ್‌ನಲ್ಲಿ ಘೋಷಿಸಿಕೊಳ್ಳುತ್ತಿರಬೇಕು. ಸತತ 3 ತಿಂಗಳು ಘೋಷಿಸಿಕೊಳ್ಳದಿದ್ದರೆ ನೋಂದಣಿ ರದ್ದಾಗುತ್ತದೆ’ ಎಂದರು.

ಫಲಾನುಭವಿಯು ಉದ್ಯೋಗ ಪಡೆದರೆ ನಿರುದ್ಯೋಗ ಭತ್ಯೆ ತಕ್ಷಣವೇ ನಿಲ್ಲಿಸಲಾಗುತ್ತದೆ. ಯುವನಿಧಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸೇವಾಸಿಂಧು ಪೋರ್ಟಲ್, ಬಾಪೂಜಿ ಸೇವಾ ಕೇಂದ್ರ, ಕರ್ನಾಟಕ ಒನ್ ಸೇರಿದಂತೆ ಇತರೆ ಸೇವಾ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಳ್ಳಬಹುದು.

‘ಅಭ್ಯರ್ಥಿಗಳು ಸಲ್ಲಿಸಿರುವ ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ/ಡಿಪ್ಲೊಮಾ ಪ್ರಮಾಣಪತ್ರಗಳ ಸಂಖ್ಯೆಗಳನ್ನು ಕೇಂದ್ರ ಸರ್ಕಾರದ ‘ರಾಷ್ಟ್ರೀಯ ಶೈಕ್ಷಣಿಕ ಠೇವಣಿ’ ಜಾಲತಾಣದಲ್ಲಿ ನಮೂದಿಸಿ, ಅಲ್ಲಿಂದ ದಾಖಲೆ ಡೌನ್‌ಲೋಡ್‌ ಮಾಡಿಕೊಳ್ಳಲಾಗುವುದು. ನಕಲಿ ಪ್ರಮಾಣ ಪತ್ರ ಸಲ್ಲಿಸಿ, ಸೌಲಭ್ಯ ಪಡೆಯಲು ಸಾಧ್ಯವಿಲ್ಲ. ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಬಗ್ಗೆ ಪರಿಶೀಲಿಸುತ್ತಿರುತ್ತೇವೆ’ ಎಂದು ಶ್ರೀನಿವಾಸ್‌ ತಿಳಿಸಿದರು.

‘ನೋಂದಣಿ ಹೆಚ್ಚಿಸಲು ಪ್ರಯತ್ನಿಸುತ್ತಿದ್ದೇವೆ. ಜಿಲ್ಲೆಯ ಪ್ರಾಂಶುಪಾಲರ ಜೊತೆ ಜಿಲ್ಲಾಧಿಕಾರಿ ಅಕ್ರಂ ಪಾಷ ಸಭೆ ಕೂಡ ನಡೆಸಿದ್ದಾರೆ. ವಾಟ್ಸ್‌ಆ್ಯಪ್‌ ಗ್ರೂಪ್‌ ಮಾಡಿ ಮಾಹಿತಿ ನೀಡಲಾಗುತ್ತಿದೆ. ಹಿರಿಯ ವಿದ್ಯಾರ್ಥಿಗಳ ಜೊತೆ ಸಂಪರ್ಕ ಸಾಧಿಸಿದ್ದು, ನೋಂದಣಿಗೆ ಮಾಹಿತಿ ಕಲೆಹಾಕಲಾಗುತ್ತಿದೆ’ ಎಂದರು.

ಪದವೀಧರ ನಿರುದ್ಯೋಗಿಗೆ ₹ 3 ಸಾವಿರ, ಡಿಪ್ಲೊಮಾ ನಿರುದ್ಯೋಗಿಗೆ ₹1,500 ನಿರುದ್ಯೋಗಿ ಎಂದು ಪ್ರತಿ ತಿಂಗಳು ಘೋಷಣೆ ಅಗತ್ಯ ನೋಂದಣಿಗೆ ಇನ್ನೂ ಅವಕಾಶ

ಬೆಂಗಳೂರು ಸುತ್ತಮುತ್ತ ಕೈಗಾರಿಕೆಗಳು ಹೆಚ್ಚಿರುವುದರಿಂದ ಜಿಲ್ಲೆಯ ಅಭ್ಯರ್ಥಿಗಳಿಗೆ ಉದ್ಯೋಗ ಸಿಗುತ್ತಿದ್ದು ಕಡಿಮೆ ನೋಂದಣಿ ಆಗಿದೆ. ಇನ್ನೂ ಸಾವಿರ ಮಂದಿ ನೋಂದಣಿ ಆಗುವ ನಿರೀಕ್ಷೆ ಇದೆ
ಕೆ.ಶ್ರೀನಿವಾಸ್‌ ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ

ಕೋಲಾರ ಜಿಲ್ಲೆಯಲ್ಲಿ ಯುವನಿಧಿಗೆ ನೋಂದಣಿ ಆಗಿರುವವರು ತಾಲ್ಲೂಕು; ನೋಂದಣಿ ಬಂಗಾರಪೇಟೆ; 194 ಕೋಲಾರ; 406 ಕೆಜಿಎಫ್‌; 237 ಮಾಲೂರು; 198 ಮುಳಬಾಗಿಲು‌; 271 ಶ್ರೀನಿವಾಸಪುರ; 239 ಒಟ್ಟು; 1545

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.