ADVERTISEMENT

ಹೆಚ್ಚಿದ ತಾಪಮಾನ, ತಗ್ಗಿದ ಪೂರೈಕೆ | ₹ 220 ಕ್ಕೇರಿದ ಕೆ.ಜಿ ಬೀನ್ಸ್‌!

ಹೆಚ್ಚಿದ ತಾಪಮಾನ, ತಗ್ಗಿದ ಪೂರೈಕೆ; ಬಹುತೇಕ ತರಕಾರಿಗಳ ದರ ಗಗನಮುಖಿ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2024, 14:25 IST
Last Updated 29 ಏಪ್ರಿಲ್ 2024, 14:25 IST
ಬೀನ್ಸ್‌
ಬೀನ್ಸ್‌   

ಕೋಲಾರ: ಚಿಲ್ಲರೆ ಮಾರುಕಟ್ಟೆಯಲ್ಲಿ ಬೀನ್ಸ್‌ ಹಾಗೂ ಇತರ ತರಕಾರಿ ಧಾರಣೆ ಏರುತ್ತಲೇ ಇದ್ದು, ಬಿಸಿಲ ಧಗೆಯನ್ನಾದರೂ ತಡೆದುಕೊಳ್ಳಬಹುದು; ದರ ಏರಿಕೆ ಸಹಿಸಿಕೊಳ್ಳಲಾಗದ ಪರಿಸ್ಥಿತಿಗೆ ಗ್ರಾಹಕರು ಬಂದಿದ್ದಾರೆ.

ಬೀನ್ಸ್‌ ಬೆಲೆ ಕೇಳಿ ಜನರು ಹೌಹಾರುತ್ತಿದ್ದಾರೆ. ನಗರದಲ್ಲಿನ ಚಿಲ್ಲರೆ ಮಾರುಕಟ್ಟೆಯಲ್ಲಿ ಗುಣಮಟ್ಟದ ಬೀನ್ಸ್‌ ದರ ₹ 220ರವರೆಗೆ ಏರಿಕೆ ಕಂಡಿದೆ. ಕೋಲಾರ ಎಪಿಎಂಸಿಯಲ್ಲಿ ₹ 150ರ ಆಸುಪಾಸಿನಲ್ಲಿದೆ. ತಾಪಮಾನ ಹೆಚ್ಚಿದ್ದು, ಮಾರುಕಟ್ಟೆಗೆ ಆವಕ ತಗ್ಗಿದ ಪರಿಣಾಮ ಧಾರಣೆ ತೀವ್ರ ಏರಿಕೆ ಆಗುತ್ತಿದೆ. ಬೀನ್ಸ್‌ ದರ 20 ದಿನಗಳಿಂದಲೂ ಗ್ರಾಹಕರ ಕೈಸುಡುತ್ತಿದೆ.

ಹೀಗಾಗಿ, ಗ್ರಾಹಕರು ಸಂತೆಗಳಲ್ಲಿ, ತಳ್ಳೋಗಾಡಿಯಲ್ಲಿ ಹಾಗೂ ಅಂಗಡಿಗಳಲ್ಲಿ ಬೀನ್ಸ್‌ ಖರೀದಿಗೆ ಹಿಂದೆ ಮುಂದೆ ನೋಡುತ್ತಿದ್ದಾರೆ. ಕಾಲು ಕೆ.ಜಿಗೆ ₹ 50ರಿಂದ 60 ಕೊಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹೋಟೆಲ್‌ಗಳಲ್ಲಿ ಪಲಾವ್‌, ಸಾಂಬಾರ್‌, ಪಲ್ಯಕ್ಕೆ ಬೀನ್ಸ್‌ ಹಾಕುವುದನ್ನೇ ಕಡಿಮೆ ಮಾಡುತ್ತಿದ್ದಾರೆ.

ADVERTISEMENT

‘₹ 100 ಕ್ಕೆ ವಾರಕ್ಕೆ ಆಗುವಷ್ಟು ತರಕಾರಿ ಖರೀದಿಸುತ್ತಿದ್ದೆವು. ಈಗ ನೋಡಿದರೆ ಬರೀ ಕೆ.ಜಿ ಬೀನ್ಸ್‌ಗೆ ₹ 220 ಆಗಿದೆ. ಉಳಿದ ತರಕಾರಿ ಬೆಲೆಯೂ ಹೆಚ್ಚಿದೆ. ಹೀಗೆಯೇ, ಬಿರು ಬಿಸಿಲ, ಬಿಸಿಗಾಳಿ ಮುಂದುವರಿದರೆ ಮೇ ತಿಂಗಳಲ್ಲಿ ಮತ್ತಷ್ಟು ಬೆಲೆ ಹೆಚ್ಚಲಿದೆ’ ಎಂದು ಕೋಲಾರ ನಗರದ ಸಂತೆಕಟ್ಟೆಯಲ್ಲಿ ಸೋಮವಾರ ತರಕಾರಿ ಖರೀದಿಗೆ ಬಂದವರು ಆತಂಕ ವ್ಯಕ್ತಪಡಿಸಿದರು.

ಕ್ಯಾರೆಟ್‌, ಬೆಂಡೆ, ತೊಂಡೆ, ಗೋರಿಕಾಯಿ, ಹಸಿರು ಮೆಣಸಿನಕಾಯಿ ದರವೂ ಏರಿಕೆ ಕಂಡಿದೆ. ಕೆ.ಜಿ ಬೆಂಡೆಕಾಯಿಗೆ ₹ 60, ಕ್ಯಾರೆಂಟ್‌ಗೆ ₹ 80, ಮೂಲಂಗಿಗೆ ₹ 60, ನುಗ್ಗೆಕಾಯಿಗೆ ₹ 60, ತೊಂಡೆಕಾಯಿಗೆ ₹ 60, ಗೋರಿಕಾಯಿಗೆ ₹ 60, ಬದನೆಕಾಯಿಗೆ ₹ 60, ಬೀಟ್‌ರೂಟ್‌ಗೆ ₹ 40, ಆಲೂಗಡ್ಡೆಗೆ ₹ 40 ದರ ಇದೆ. ಕೆ.ಜಿ ಹಸಿ ಮೆಣಸಿನ ಕಾಯಿಗೆ ₹ 120, ಕೆ.ಜಿ ಶುಂಠಿಗೆ ₹ 130 ಇದೆ.

‘ನೀರಿನ ಕೊರತೆಯಿಂದ ಬೆಳೆಗಳು ಒಣಗುತ್ತಿದ್ದು, ಇಳುವರಿ ಕಡಿಮೆಯಾಗಿದೆ. ಬೀನ್ಸ್‌ ಬೆಳೆ ಹೆಚ್ಚು ನೀರು ಬಯಸುತ್ತದೆ. ಹೀಗಾಗಿ, ಮಾರುಕಟ್ಟೆಗೆ ಬೀನ್ಸ್‌ ಪೂರೈಕೆ ತಗ್ಗಿದೆ. ವರ್ತಕರಿಂದ ಬೇಡಿಕೆ ಬಂದಿದ್ದು, 20 ದಿನಗಳಿಂದ ಬೀನ್ಸ್‌ ಬೆಲೆಯಲ್ಲಿ ಹೆಚ್ಚಳವಾಗಿದೆ’ ಎಂದು ಕೋಲಾರ ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಟೊಮೆಟೊ ಧಾರಣೆಯಲ್ಲಿ ವ್ಯತ್ಯಾಸವಾಗಿಲ್ಲ. ಈರುಳ್ಳಿ ಮಾತ್ರ ಅಗ್ಗವಾಗಿಯೇ ಇದ್ದು, ಬೆಳ್ಳುಳ್ಳಿ ಬೆಲೆಯೂ ನಿಯಂತ್ರಣದಲ್ಲಿದೆ.

ಕೋಲಾರದ ಸಂತೆಕಟ್ಟೆಯಲ್ಲಿ ತರಕಾರಿ ಮಾರಾಟದಲ್ಲಿ ತೊಡಗಿದ್ದ ವ್ಯಾಪಾರಿ
ತರಕಾರಿ ಧಾರಣೆ ಏರಿಕೆ
ವಿಜಯಲಕ್ಷ್ಮಿ

ಕ್ಯಾರೆಟ್‌, ಬೆಂಡೆ, ತೊಂಡೆ, ಜವಳಿಕಾಯಿ ದರವೂ ಏರಿಕೆ ಕೆ.ಜಿ ಬೆಳ್ಳುಳ್ಳಿಗೆ ₹ 160 ತಗ್ಗಿದ ಈರುಳ್ಳಿ ಬೆಲೆ; ₹ 100 ಕ್ಕೆ ನಾಲ್ಕು ಕೆ.ಜಿ

ಬೇಸಿಗೆಯ ತಾಪಮಾನ ಹೆಚ್ಚಳ ನೀರಿನ ಕೊರತೆಯಿಂದ ಬೆಳೆಗಳು ಒಣಗುತ್ತಿವೆ ಇಳುವರಿ ಕಡಿಮೆಯಾಗಿದೆ. ಹೀಗಾಗಿ ಮಾರುಕಟ್ಟೆಗೆ ಬೀನ್ಸ್‌ ಪೂರೈಕೆ ತಗ್ಗಿದೆ. ವರ್ತಕರಿಂದ ಬೇಡಿಕೆ ಹೆಚ್ಚಾಗಿದೆ

-ವಿಜಯಲಕ್ಷ್ಮಿ ಕೋಲಾರ ಎಪಿಎಂಸಿ ಕಾರ್ಯದರ್ಶಿ

ಕೋಲಾರದಲ್ಲಿ ತರಕಾರಿ ಧಾರಣೆ ಪಟ್ಟಿ ತರಕಾರಿ; ಧಾರಣೆ (ಕೆ.ಜಿಗೆ ₹ ಗಳಲ್ಲಿ) ಬೀನ್ಸ್; 160 ರಿಂದ 220 ಕ್ಯಾರೆಟ್‌; 60 ರಿಂದ 80 ತೊಂಡೆಕಾಯಿ; 60 ನುಗ್ಗೆಕಾಯಿ; 60 ಗೋರಿಕಾಯಿ; 60 ಬೆಂಡೆಕಾಯಿ; 60 ಮೂಲಂಗಿ; 60 ಹಾಗಲಕಾಯಿ; 60 ಬೀಟ್‌ರೂಟ್‌; 40 ಆಲೂಗಡ್ಡೆ; 40 ಹಸಿ ಮೆಣಸಿನಕಾಯಿ; 100ರಿಂದ 120 ಟೊಮೆಟೊ; 20ರಿಂದ 30 ಈರುಳ್ಳಿ; 25 ಬೆಳ್ಳುಳ್ಳಿ; 160 ಶುಂಠಿ; 120ರಿಂದ 130

ಟೊಮೆಟೊ ಮಾತ್ರ ಅಗ್ಗ! ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ ಟೊಮೆಟೊ ₹ 20ರಿಂದ 30ಕ್ಕೆ ಲಭ್ಯವಾಗುತ್ತಿದೆ. ಹೀಗಾಗಿ ತರಕಾರಿಗಳ ಧಾರಣೆಗೆ ಹೋಲಿಸಿದರೆ ಟೊಮೆಟೊ ದರ ಅಗ್ಗವಾಗಿದೆ. ಎಪಿಎಂಸಿಯಲ್ಲಿ ಕೆ.ಜಿ ಟೊಮೆಟೊ ₹ 17ಕ್ಕೆ ಮಾರಾಟವಾಗುತ್ತಿದೆ. ಸೋಮವಾರ 7236 ಕ್ವಿಂಟಲ್‌ ಟೊಮೆಟೊ ಆವಕವಾಗಿತ್ತು. ‘ಟೊಮೆಟೊಗೆ ಬೇಡಿಕೆ ತಗ್ಗಿದೆ. ಮೇ ಜೂನ್‌ನಲ್ಲಿ ಹೊರಗಡೆಯಿಂದ ಬೇಡಿಕೆ ಬರಲಿದೆ. ಆಗ ಧಾರಣೆ ಏರಲಿದೆ’ ಎಂದು ಕೋಲಾರ ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ತಿಳಿಸಿದರು. ಈರುಳ್ಳಿ ದರವೂ ತಗ್ಗಿದೆ. ₹ 100 ಕ್ಕೆ ನಾಲ್ಕು ಕೆ.ಜಿಯಂತೆ ಮಾರಾಟ ಮಾಡುತ್ತಿದ್ದಾರೆ. ತಿಂಗಳ ಹಿಂದೆ ₹ 400 ತಲುಪಿದ್ದ ಬೆಳ್ಳುಳ್ಳಿ ದರವೂ ತಗ್ಗಿದೆ. ಕೆ.ಜಿಗೆ ₹ 160ರಂತೆ ಮಾರಾಟವಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.