ADVERTISEMENT

ಮಾಲೂರು: ಮೃತಪಟ್ಟ ಹಸುಗಳ ಮಾಲೀಕರಿಗೆ ವಿಮೆ ಹಣ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2024, 13:26 IST
Last Updated 1 ಅಕ್ಟೋಬರ್ 2024, 13:26 IST
ಮಾಲೂರು ಪಟ್ಟಣದ ಕೋಚಿಮುಲ್ ಶಿಬಿರ ಕಚೇರಿಯಲ್ಲಿ ಹಾಲು ಉತ್ಪಾದಕರ ಒಕ್ಕೂಟದ ವತಿಯಿಂದ ರೈತರ ಮೃತಪಟ್ಟ ಹಸುಗಳಿಗೆ ಪರಿಹಾರದ ಚೆಕ್ ವಿತರಣೆ ಮಾಡಲಾಯಿತು 
ಮಾಲೂರು ಪಟ್ಟಣದ ಕೋಚಿಮುಲ್ ಶಿಬಿರ ಕಚೇರಿಯಲ್ಲಿ ಹಾಲು ಉತ್ಪಾದಕರ ಒಕ್ಕೂಟದ ವತಿಯಿಂದ ರೈತರ ಮೃತಪಟ್ಟ ಹಸುಗಳಿಗೆ ಪರಿಹಾರದ ಚೆಕ್ ವಿತರಣೆ ಮಾಡಲಾಯಿತು    

ಮಾಲೂರು: ಪಟ್ಟಣದ ಕೋಚಿಮುಲ್ ಶಿಬಿರ ಕಚೇರಿಯಲ್ಲಿ ಹಾಲು ಉತ್ಪಾದಕರ ಒಕ್ಕೂಟದ ವತಿಯಿಂದ ಮೃತಪಟ್ಟ ಹಸುಗಳ ಮಾಲೀಕರಿಗೆ ವಿಮೆ ಪರಿಹಾರದ ಚೆಕ್ ವಿತರಣೆ ಕಾರ್ಯಕ್ರಮವು ಮಂಗಳವಾರ ನಡೆಯಿತು. 

ಶಾಸಕ ಕೆ.ವೈ. ನಂಜೇಗೌಡ ಮಾತನಾಡಿ, ‘ರೈತರು ಕಡ್ಡಾಯವಾಗಿ ತಮ್ಮ ಹಸುಗಳಿಗೆ ವಿಮೆ ಮಾಡಿಸಬೇಕು. ಆಕಸ್ಮಿಕವಾಗಿ ಹಸು ಮರಣ ಹೊಂದಿದರೆ ಮತ್ತೊಂದು ಹಸು ಖರೀದಿಸಲು ವಿಮೆ ಮೊತ್ತ ಅನುಕೂಲವಾಗುತ್ತದೆ’ ಎಂದರು. 

‘ಆರು ವರ್ಷಗಳಿಂದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಒಕ್ಕೂಟದ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದು, ನನ್ನ ಆಡಳಿತ ಅವಧಿಯಲ್ಲಿ ಹಾಲು ಉತ್ಪಾದಕರ ಅಭಿವೃದ್ಧಿಗೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಿಂದ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ’ ಎಂದರು.

ADVERTISEMENT

‘ಆಡಳಿತ ಮಂಡಳಿ ಮತ್ತು ಅಧಿಕಾರಿಗಳ ಸಹಕಾರದಿಂದ ಹಾಲು ಉತ್ಪಾದಕರ ಕ್ಷೇಮಕ್ಕೆ ಉತ್ತಮ ನಿರ್ಣಯ ಕೈಗೊಳ್ಳಲಾಗಿದೆ. ಅದರಲ್ಲಿ ರಾಸುಗಳ ವಿಮೆ ಮೊತ್ತವನ್ನು ₹25 ಸಾವಿರದಿಂದ ₹70 ಸಾವಿರಕ್ಕೆ ಏರಿಸಲಾಗಿದೆ. ಈ ಮೊತ್ತವನ್ನು ₹80 ಸಾವಿರಕ್ಕೆ ಹೆಚ್ಚಿಸುವ ಬಗ್ಗೆ ಚಿಂತಿಸಲಾಗುತ್ತಿದೆ. ವಿಮೆಯನ್ನು ಎರಡು ಕಂತುಗಳಾಗಿ ಕಟ್ಟಲು ಅವಕಾಶ ಮಾಡಿಕೊಡಲಾಗಿದೆ’ ಎಂದರು.

ಹಾಲು ಉತ್ಪಾದಕರ ಸಂಘಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ನಿವೃತ್ತಿ ನಂತರ ಗ್ರಾಚುಟಿ ಹಣ ಜಾರಿಗೆ ತರಲಾಗಿದೆ. ಕಾರ್ಯದರ್ಶಿಗೆ ₹3 ಲಕ್ಷ, ಹಾಲು ಪರೀಕ್ಷಕನಿಗೆ ₹2 ಲಕ್ಷ, ಸಹಾಯಕರಿಗೆ ₹1 ಲಕ್ಷವನ್ನು ಗ್ರಾಚುಟಿ ಆಗಿ ನೀಡಲಾಗುವುದು. ಮೇವು ಕಟಾವು ಯಂತ್ರ, ಮ್ಯಾಟ್ ವಿತರಣೆ, ಮೇವು ಬೆಳೆಸಲು ಎಕರೆಗೆ ₹3,000 ಸಹಾಯಧನ ಸೇರಿದಂತೆ ರೈತರಿಗೆ ಅನುಕೂಲವಾಗುವ ವಿವಿಧ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದರು. 

ಸುಮಾರು ₹350 ಕೋಟಿ ಯೋಜನೆಯ ಕಾಮಗಾರಿಗಳು ಪ್ರಾರಂಭವಾಗಿದ್ದು, ಸುಮಾರು ₹70 ಕೋಟಿಯಲ್ಲಿ ಸೋಲಾರ್ ಪ್ಲಾಂಟ್, ಸುಮಾರು ₹50 ಕೋಟಿಯಲ್ಲಿ ಐಸ್ ಕ್ರೀಮ್ ಪ್ಲಾಂಟ್, ಎಂ.ವಿ.ಕೆ ಡೇರಿ, ಗೋಲ್ಡನ್ ಡೇರಿ ಕಾಮಗಾರಿ ನಡೆಯುತ್ತಿವೆ.

ಶಿಬಿರ ಕಚೇರಿ ಉಪ ವ್ಯವಸ್ಥಾಪಕ ಡಾ.ಲೋಹಿತ್, ಶ್ರೀನಿವಾಸ್, ಗೋವರ್ದನ್ ರೆಡ್ಡಿ, ಉಲ್ಲೂರಪ್ಪ, ಗಂಗಾಧರ್, ತಾಲ್ಲೂಕಿನ ಹಾಲು ಉತ್ಪಾದಕರ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಹಾಲು ಉತ್ಪಾದಕರು ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.