ADVERTISEMENT

ಮಾಲೂರು ‌| ಶಿಥಿಲಗೊಂಡಿರುವ ಶಾಲಾ ಕಟ್ಟಡ

ಸುರಕ್ಷತೆ ಇಲ್ಲದೆ ಭಯದಲ್ಲಿ ‍ಪಾಠ ಕೇಳುವ ಮಕ್ಕಳು

​ಪ್ರಜಾವಾಣಿ ವಾರ್ತೆ
Published 22 ಜೂನ್ 2024, 7:12 IST
Last Updated 22 ಜೂನ್ 2024, 7:12 IST
ಮಾಲೂರು ಪಟ್ಟಣದಲ್ಲಿರುವ ಧರ್ಮರಾಯಸ್ವಾಮಿ ಸರ್ಕಾರಿ ಪ್ರಾಥಮಿಕ ಶಾಲೆ ಹೊರನೋಟ
ಮಾಲೂರು ಪಟ್ಟಣದಲ್ಲಿರುವ ಧರ್ಮರಾಯಸ್ವಾಮಿ ಸರ್ಕಾರಿ ಪ್ರಾಥಮಿಕ ಶಾಲೆ ಹೊರನೋಟ   

ಮಾಲೂರು: ಮಳೆ ಬಂದರೆ ಸೋರುವ ಕೊಠಡಿಗಳು, ಸಂಪೂರ್ಣ ಶಿಥಿಲಗೊಂಡ ಕಟ್ಟಡ, ಚಾವಣಿಯಲ್ಲಿರುವ ಸಿಮೆಂಟ್ ಶೀಟ್ ಹೊಡೆದು ಹೋಗಿರುವುದು, ಗೋಡೆ ಬಿರುಕು, ಮಳೆ ನಿಂತ ಮೇಲೆ ಕೊಠಡಿಯಲ್ಲಿ ನಿಂತಿದ್ದ ನೀರನ್ನು ಹೊರಗೆ ಚೆಲ್ಲಿ ಪಾಠ ಕೇಳಬೇಕಾದ ಅನಿವಾರ್ಯತೆ ಇದು ಪಟ್ಟಣದ ಧರ್ಮರಾಯಸ್ವಾಮಿ ಸರ್ಕಾರಿ ಪ್ರಾಥಮಿಕ ಶಾಲೆಯ ಸ್ಥಿತಿ.

ಈ ಶಾಲೆಯಲ್ಲಿ 1 ರಿಂದ 5ನೇ ತರಗತಿವರೆಗೆ 54 ಮಕ್ಕಳು ಓದುತ್ತಿದ್ದು, ಮೂರು ಮಂದಿ ಶಿಕ್ಷಕರಿದ್ದಾರೆ. ತಗಡಿನ ಶೆಡ್‌ನಲ್ಲಿ ಮೂರು ಕೊಠಡಿಗಳಿದ್ದು, ಸಂಪೂರ್ಣ ಶಿಥಿಲಗೊಂಡಿದ್ದು ಸುರಕ್ಷತೆ ಇಲ್ಲದೆ ಮಕ್ಕಳು ಪಾಠ ಕೇಳುವಂತಾಗಿದೆ.

1958ರಲ್ಲಿ ಪಟ್ಟಣದ ಧರ್ಮರಾಯಸ್ವಾಮಿ ದೇವಾಲಯದ ಕಟ್ಟಡದಲ್ಲಿ ಆರಂಭವಾದ ಈ ಸರ್ಕಾರಿ ಪ್ರಾಥಮಿಕ ಶಾಲೆ, ಆ ನಂತರ ದೇವಾಲಯ ಅಭಿವೃದ್ಧಿ ದೃಷ್ಠಿಯಿಂದ ಶಾಲೆಯನ್ನು ಪಕ್ಕದ ಸರ್ಕಾರಿ ಜಾಗದಲ್ಲಿ ದಾನಿಗಳ ಸಹಕಾರದಿಂದ ನಿರ್ಮಾಣ ಮಾಡಲಾಯಿತು. ಆದರೆ, ಕೆಲವರು ಜಮೀನು ನಮ್ಮದು ಎಂದು ದಾಖಲೆ ಸೃಷ್ಟಿಸಿಕೊಂಡಿದ್ದು, ಸರ್ಕಾರಿ ಶಾಲೆಗೆ ನೆಲೆ ಇಲ್ಲದಂತಾಗಿದೆ.

ADVERTISEMENT

ಗೂಡಿನಂತಿರುವ ಈ ಸರ್ಕಾರಿ ಶಾಲೆಯಲ್ಲಿ ಮಕ್ಕಳು ಕುಳಿತು ಪಾಠ ಕೇಳುವುದೇ ಸಾಹಸದ ಕೆಲಸವಾಗಿದೆ. ರಸ್ತೆಗಿಂತ ಒಂದು ಅಡಿ ಕೆಳ ಮಟ್ಟದಲ್ಲಿರುವ ಶಾಲಾ ಕೊಠಡಿಗಳಿಗೆ ರಸ್ತೆಯಿಂದ ಮಳೆ ನೀರು ಬರದಂತೆ ಬಾಗಿಲ ಬಳಿ ಸಿಮೆಂಟ್ ದಿಂಡು ನಿರ್ಮಿಸಲಾಗಿದೆ. ಇತ್ತೀಚಿಗೆ ಪೋಷಕರಿಗೆ ಇಂಗ್ಲಿಷ್‌ ವ್ಯಾಮೋಹ ಹೆಚ್ಚಾಗಿ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಯೂ ಕ್ಷೀಣಿಸುತ್ತಿರುವ ಸಂದರ್ಭದಲ್ಲೂ ಈ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಆದರೆ, ಶಾಲೆಯ ನಿವೇಶನ ಮಾಯವಾಗಿದ್ದು, ಅಸಮರ್ಪಕ ನಿರ್ವಹಣೆಯಿಂದ ಕಟ್ಟಡ ಶಿಥಿಲಗೊಂಡಿದೆ.

ಶಾಲೆಯ ಚಾವಣಿಗೆ ಹಾಕಿರುವ ಸಿಮೆಂಟ್ ಶೀಟ್ ಹೊಡೆದು ಹೋಗಿದ್ದು, ಮಳೆ ಬಂದರೆ ಕೊಠಡಿಗಳಲ್ಲಿ ನೀರು ತುಂಬಿಕೊಳ್ಳುತ್ತದೆ. ಈ ಶಾಲೆಯಲ್ಲಿ ಬಹುತೇಕ ಕೂಲಿ ಕಾರ್ಮಿಕರ ಮಕ್ಕಳು ದಾಖಲಾಗಿದ್ದು, ಭಯದಲ್ಲಿ ಪಾಠ ಕೇಳುವಂತಾಗಿದೆ.

ಶಾಲೆಯಲ್ಲಿ ಬಿರುಕು ಬಿಟ್ಟಿರುವ ಗೋಡೆ
ಶಾಲೆಯ ಚಾವಣಿಯ ಸಿಮೆಂಟ್ ಶೀಟ್ ಹೊಡೆದಿರುವುದು 

ಸರ್ಕಾರಿ ಶಾಲೆ ಇರುವುದು ನಮ್ಮ ಜಮೀನಿನಲ್ಲಿ. ನಾವು ಜಮೀನನ್ನು ಸರ್ಕಾರಿ ಶಾಲೆಗೆ ಕೊಡಲು ಒಪ್ಪುವುದಿಲ್ಲ

– ಸಿ.ಪಿ.ವೆಂಕಟೇಶ್ ಶಾಲೆ ಜಮೀನು ಮಾಲೀಕ 

ಬೀಳುವ ಹಂತದಲ್ಲಿ ಕಟ್ಟಡ ನಮ್ಮ ಮೊಮ್ಮಗ ಮೂರನೇ ತರಗತಿಯಲ್ಲಿ ಓದುತ್ತಿದ್ದಾನೆ. ಶಾಲೆಗೆ ಹೋದ ಮೇಲೆ ಮನೆಗೆ ಬರುವ ತನಕ ಭಯ ಆಗುತ್ತದೆ. ಏಕೆಂದರೆ ಕಟ್ಟಡ ಬೀಳುವ ಹಂತದಲ್ಲಿದೆ. ಜೋರಾಗಿ ಮಳೆ ಬಂದರೆ ಬಿದ್ದೋಗುತ್ತದೆ. ಮನೆಗೆ ಹತ್ತಿರ ಇದೆ ಅಂತ ಕಳುಹಿಸುತ್ತಿದ್ದೇವೆ. ಸಾಕಮ್ಮ ವಿದ್ಯಾರ್ಥಿನಿ ಅಜ್ಜಿ === ಕಟ್ಟಡ ದುರಸ್ತಿಗೆ ತೊಂದರೆ ಧರ್ಮರಾಯಸ್ವಾಮಿ ದೇವಾಲಯದ ಕಟ್ಟದಲ್ಲಿ ಉಚಿತವಾಗಿ ಶಾಲೆ ನಡೆಸಲು ಅವಕಾಶ ಕಲ್ಪಿಸಲಾಗಿತ್ತು. 20 ವರ್ಷಗಳ ಹಿಂದೆ ದೇವಾಲಯ ಅಭಿವೃದ್ಧಿ ಪಡಿಸಲು ಮುಂದಾದಾಗ ದೇವಾಲಯ ಸಮಿತಿ ಪಕ್ಕದ ಸರ್ಕಾರಿ ಜಾಗದಲ್ಲಿ ಶಾಲೆ ನಿರ್ಮಾಣ ಮಾಡಿ ವರ್ಗಾಯಿಸಲಾಯಿತು. ಆದರೆ ಕೆಲವರು ಅಕ್ರಮ ದಾಖಲೆ ಸೃಷ್ಟಿಸಿ ಸ್ಥಳವನ್ನು ಮಾಯ ಮಾಡಿದ್ದಾರೆ. ಶಾಲೆ ಕಟ್ಟಡ ದುರಸ್ತಿಗೆ ಅವಕಾಶ ಕಲ್ಪಿಸದೆ ತೊಂದರೆ ನೀಡುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಸಂಪೂರ್ಣ ತನಿಖೆ ಮಾಡಬೇಕು. ಎಂ.ಪಿ.ವಿಜಯಕುಮಾರ್ ಧರ್ಮರಾಯಸ್ವಾಮಿ ದೇವಾಲಯ ಸಮಿತಿ ಅಧ್ಯಕ್ಷ ======= ಮಳೆ ಬಂದರೆ ಮಕ್ಕಳು ಮನೆಗೆ  ಶಾಲೆಯ ಚಾವಣಿ ಹಾಳಾಗಿದ್ದು ಮಳೆ ಬಂದರೆ ನೀರು ಕೊಠಡಿಗಳು ತುಂಬಿಕೊಳ್ಳುತ್ತವೆ. ಇದರಿಂದ ಮಕ್ಕಳಿಗೆ ಪಾಠ ಕೇಳಲು ಸಾಧ್ಯವಾಗುವುದಿಲ್ಲ. ಕಟ್ಟಡ ಬಹಳ ಶಿಥಿಲಗೊಂಡಿರುವುದರಿಂದ ಮಕ್ಕಳನ್ನು ಮಳೆ ಬಂದರೆ ಮನೆಗೆ ಕಳುಹಿಸಿ ಬಿಡುತ್ತೇವೆ. ವನಜಾ ಶಿಕ್ಷಕಿ ===== ಸುಸಜ್ಜಿತ ಕಟ್ಟಡ ನಿರ್ಮಾಣ ಸುಮಾರು ವರ್ಷಗಳಿಂದ ಶಾಲೆ ಇದೇ ಜಾಗದಲ್ಲಿ ನಡೆಯುತ್ತಿದೆ. ಮಕ್ಕಳ ಅನುಕೂಲಕ್ಕಾಗಿ ನಿವೇಶನವನ್ನು ಬಿಟ್ಟುಕೊಡಿ ಎಂದು ಶಾಲಾ ಕಟ್ಟಡ ಇರುವ ನಿವೇಶನದ ಮಾಲೀಕರ ಬಳಿ ಮನವಿ ಮಾಡಲಾಯಿತು. ಆದರೆ ಅವರು ಒಪ್ಪಲಿಲ್ಲ. ಪಕ್ಕದಲ್ಲಿರುವ ಬಡಾವಣೆಯ ಸಿಎ ಸೈಟ್ ನೀಡುವಂತೆ ಪುರಸಭೆಗೆ ಮನವಿ ಮಾಡಲಾಗಿದೆ. ಅವರು ನಿವೇಶನ ನೀಡಿದರೆ ಸರ್ಕಾರ ಮತ್ತು ದಾನಿಗಳಿಂದ ನೆರವು ಪಡೆದು  ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲಾಗುವುದು.ಚಂದ್ರಕಲಾ ಬಿಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.