ADVERTISEMENT

ಕೋಲಾರ | ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಏಕಿಷ್ಟು ಕುಸಿತ, ಯಾರು ಹೊಣೆ?

ದ್ವಿತೀಯ ಪಿಯು ಪರೀಕ್ಷೆಯಲ್ಲಿ ಜಿಲ್ಲೆಗೆ 12ನೇ ಸ್ಥಾನ; ಈಗ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲೂ ಭಾರಿ ಹಿನ್ನಡೆ

ಕೆ.ಓಂಕಾರ ಮೂರ್ತಿ
Published 11 ಮೇ 2024, 6:46 IST
Last Updated 11 ಮೇ 2024, 6:46 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಕೋಲಾರ: ಹಲವು ಪ್ರಯತ್ನಗಳು, ಭಾರಿ ಕಸರತ್ತಿನ ಹೊರತಾಗಿಯೂ ಕೋಲಾರ ಜಿಲ್ಲೆಯು ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೀರಾ ಕುಸಿತ ಕಂಡಿರುವುದು ಚರ್ಚೆಗೆ ಗ್ರಾಸವಾಗಿದೆ.

2023–24ನೇ ಸಾಲಿನಲ್ಲಿ ಶೇ 73.57 ಅಂಕಗಳೊಂದಿಗೆ 20ನೇ ಸ್ಥಾನ ಪಡೆದು ಭಾರಿ ಕುಸಿತ ಕಂಡಿದೆ. ಖಾಸಗಿಯಾಗಿ ಪರೀಕ್ಷೆ ಬರೆದ ವಿದ್ಯಾರ್ಥಿಗಳನ್ನು ಹೊರತುಪಡಿಸಿದರೆ ಶೇ 74.94 ಅಂಕಗಳೊಂದಿಗೆ 17ನೇ ಸ್ಥಾನ ಪಡೆದಿದೆ. 2022–23ನೇ ಸಾಲಿನಲ್ಲಿ ಶೇ 93.75 ಫಲಿತಾಂಶದೊಂದಿಗೆ 6ನೇ ಸ್ಥಾನ ಗಳಿಸಿತ್ತು. 2021–22ರಲ್ಲಿ ಜಿಲ್ಲೆಯು ಶೇ 94.53 ಫಲಿತಾಂಶದೊಂದಿಗೇ ಇದೇ ಸ್ಥಾನದಲ್ಲಿತ್ತು. ಈಚೆಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲೆಯು 12ನೇ ಸ್ಥಾನ ಪಡೆದಿತ್ತು.

ADVERTISEMENT

ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಈ ಹಿಂದಿನ ಎರಡು ವರ್ಷಗಳಿಗೆ ಹೋಲಿಸಿದರೆ ಸ್ಥಾನ ಮತ್ತು ಶೇಕಡವಾರು ಪ್ರಮಾಣದಲ್ಲಿಯೂ ದೊಡ್ಡ ಮಟ್ಟದಲ್ಲಿ ಕುಸಿತ ಕಂಡಿದೆ. ಈ ವಿಚಾರವು ಜಿಲ್ಲೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಯಾರು ಕಾರಣ, ಯಾರು ಹೊಣೆ ಎಂಬ ಪ್ರಶ್ನೆ ಎದ್ದಿದೆ. 

ಈ ಹಿಂದೆ ಜಿಲ್ಲೆಯ ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಸಾಮೂಹಿಕ ನಕಲು ಮಾಡಿಸಲಾಗುತ್ತಿತ್ತು ಎನ್ನುವ ಆರೋಪಗಳು ವ್ಯಾಪಕವಾಗಿದ್ದವು. ಈ ಬಗ್ಗೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ನಿರ್ದೇಶಕರು (ಪರೀಕ್ಷೆ) ಪತ್ರ ಬರೆದು ಎಚ್ಚರಿಸಿದ್ದರು.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯು ಇದೇ ಮೊದಲ ಬಾರಿ ಹಲವು ಕೇಂದ್ರಗಳ ಪರೀಕ್ಷಾ ಕೊಠಡಿಯಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಿತ್ತು. ಜೊತೆಗೆ ವೆಬ್ ಕ್ಯಾಸ್ಟಿಂಗ್ ಮಾಡಲಾಯಿತು. ಹೀಗೆ ಇಡೀ ಪರೀಕ್ಷಾ ವ್ಯವಸ್ಥೆಯ ಮೇಲೆ ಕಣ್ಗಾವಲು ಇತ್ತು. ಇದರಿಂದ ಯಾವುದೇ ಅವ್ಯವಹಾರ, ನಕಲಿಗೆ ಸಾಧ್ಯವಾಗಿಲ್ಲ. ಮಕ್ಕಳು ತುಸು ಭಯದಿಂದಲೇ ಪರೀಕ್ಷೆ ಬರೆದಿದ್ದರು. ಈ ವಿಚಾರ ಜಿಲ್ಲೆಯ ಹಿನ್ನೆಡೆ ಕಾಣಲು ಕಾರಣ ಎನ್ನಲಾಗುತ್ತಿದೆ.

ಇದರ ಜೊತೆಗೆ ಈ ಬಾರಿ ಮೂರು ಪರೀಕ್ಷೆ ನಡೆಸಲಾಗುತ್ತಿದೆ. ಒಂದು ಪರೀಕ್ಷೆಯಲ್ಲಿ ಅನುತ್ತೀರ್ಣರಾದರೂ ಅಥವಾ ಕಡಿಮೆ ಅಂಕ ಬಂದರೂ ನಂತರದ ಎರಡು ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಇದರಿಂದ ಮಕ್ಕಳು ಉದಾಸೀನ ಮನೋಭಾವ ತೋರಿದರೆ ಎಂಬ ಆತಂಕವನ್ನು ಕೆಲ ಪೋಷಕರು ಹಾಗೂ ಶಿಕ್ಷಣ ತಜ್ಞರು ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳು ವಿನೂತನ ಪ್ರಯೋಗ ಹಾಕಿದರೂ ಪ್ರಾಂಶುಪಾಲರು, ಶಿಕ್ಷಕರ ಪ್ರಯತ್ನ ಸಾಕಾಗಲಿಲ್ಲ. ಅತಿಯಾದ ಆತ್ಮವಿಶ್ವಾಸ ಮುಳುವಾಗಿದೆ.

ಖುದ್ದಾಗಿ ಈ ಬಾರಿ ಜಿಲ್ಲಾಧಿಕಾರಿ ಅಕ್ರಂ ಪಾಷಾ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಪದ್ಮಾ ಬಸವಂತಪ್ಪ ಅಖಾಡಕ್ಕೆ ಇಳಿದಿದ್ದರು. ವಿವಿಧ ಇಲಾಖೆಗಳಿಂದ ವಿದ್ಯಾರ್ಥಿಗಳಿಗೆ ವಿವಿಧ ರೀತಿಯಲ್ಲಿ ನೆರವು ಕೊಡಿಸಿದ್ದರು, ಕಾರ್ಯಾಗಾರ ನಡೆಸಿದ್ದರು. ಅಗ್ರ ಐದರೊಳಗೆ ಸ್ಥಾನ ಪಡೆಯಬೇಕೆಂಬ ಗುರಿ ನೀಡಿದ್ದರು. ಕೋಚಿಮುಲ್ ಹಾಗೂ ಖನಿಜ ಪ್ರತಿಷ್ಠಾನ ಅಗತ್ಯ ಸೌಲಭ್ಯ ಒದಗಿಸಿದ್ದವು. ಡಿಡಿಪಿಐ ಕೃಷ್ಣಮೂರ್ತಿ ಸವಾಲಾಗಿ ಸ್ವೀಕರಿಸಿ ಸಾಕಷ್ಟು ಪ್ರಯತ್ನ ಹಾಕಿದ್ದರು. ಆದರೆ, ಆ ಕಸರತ್ತು ಸಾಕಾಗಿಲ್ಲ.

68 ಸರ್ಕಾರಿ ಇಂಗ್ಲಿಷ್‌ ಪ್ರೌಢಶಾಲೆ ಮತ್ತು ವಸತಿ ಶಾಲೆಗಳನ್ನು ಗುರುತಿಸಿ ಆರು ವಿಷಯಗಳ ಕುರಿತು 4,500 ಪರೀಕ್ಷಾ ದೀವಿಕೆ ಕೈಪಿಡಿ ವಿತರಿಸಲಾಗಿತ್ತು. ಶಾಲಾ ಶಿಕ್ಷಣ ಇಲಾಖೆಯು ಸಂಪನ್ಮೂಲ ಶಿಕ್ಷಕರಿಂದ 5 ಸೆಟ್ ಮಾದರಿ ಪ್ರಶ್ನೆಪತ್ರಿಕೆ ತಯಾರಿಸಿ ಶಾಲೆಗಳಿಗೆ ನೀಡಲಾಗಿತ್ತು. ಇಲಾಖೆಯು ಕಳೆದ ಅಕ್ಟೋಬರ್‌ನಲ್ಲೇ ಶಾಲೆಗಳಿಗೆ ‘ನನ್ನನ್ನೊಮ್ಮೆ ಗಮನಿಸಿ’, ‘ಚಿತ್ರ ಬಿಡಿಸು ಅಂಕ ಗಳಿಸು’, ‘ಅಭ್ಯಾಸ ಹಾಳೆಗಳು’ ನೀಡಿತ್ತು. ಪೋಷಕರು ಹಾಗೂ ವಿಶೇಷವಾಗಿ ತಾಯಂದಿರ ಸಭೆ ನಡೆಸಿ ವಿದ್ಯಾರ್ಥಿಗಳ ಪರೀಕ್ಷೆ ಸಿದ್ಧತೆ ಬಗ್ಗೆ ಚರ್ಚಿಸಿತ್ತು. 

ಇಷ್ಟೆಲ್ಲಾ ಸೌಲಭ್ಯ ಒದಗಿಸಿ ವಿದ್ಯಾರ್ಥಿಗಳ ಮೇಲೆ ನಿಗಾ ಇಡುವಲ್ಲಿ ಅಧಿಕಾರಿಗಳು, ಪ್ರಾಂಶುಪಾಲರು, ಶಿಕ್ಷಕರು ಹಾಗೂ ಪೋಷಕರು ಎಡವಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಜಿಲ್ಲೆಯು ಕುಸಿತ ಕಂಡ ಬೇಸರದ ಹೊರತಾಗಿಯೂ ಕೆಜಿಎಫ್‌ನ ಮಹಾವೀರ ಜೈನ್‌ ಕಾಲೇಜಿನ ‌ಎ.ದರ್ಶಿತಾ 623 ಅಂಕಗಳೊಂದಿಗೆ ರಾಜ್ಯಕ್ಕೆ ಮೂರನೇ ರ‍್ಯಾಂಕ್‌ ಪಡೆದಿದ್ದಾರೆ. ವಸತಿ ಶಾಲೆಗಳಲ್ಲೂ ಉತ್ತಮ ಫಲಿತಾಂಶ ಬಂದಿದೆ. 

ಸಿ.ಸಿ.ಟಿ.ವಿ ಕಣ್ಗಾವಲು, ವೆಬ್‌ ಕ್ಯಾಸ್ಟಿಂಗ್‌ ಮೂಲಕ ಬಿಗಿ ಹಿಡಿತ ಅವ್ಯವಹಾರ, ನಕಲಿಗೆ ಸಿಗದ ಅವಕಾಶ ಜಿಲ್ಲೆಯ ಅಧಿಕಾರಿಗಳು, ಶಿಕ್ಷಕರು ಎಡವಿದ್ದೆಲ್ಲಿ?

ಹೆಚ್ಚು ಪ್ರಯತ್ನ ಬೇಕಿತ್ತು ಕುಸಿತ ಕಂಡಿರುವುದು ಸಹಜವಾಗಿಯೇ ಬೇಸರ ಉಂಟು ಮಾಡಿದೆ. ನಮ್ಮ ಶಿಕ್ಷಕರು ಹಾಗೂ ಮಕ್ಕಳು ಹೆಚ್ಚು ಪ್ರಯತ್ನ ಹಾಕಬೇಕಿತ್ತು. ಈ ಬಾರಿ ಬಹಳ ಶಿಸ್ತಿನಿಂದ ಪರೀಕ್ಷೆ ನಡೆಸಲಾಯಿತು. ಯಾವುದೇ ಅವ್ಯವಹಾರ ನಕಲಿಗೆ ಅವಕಾಶ ಇರಲಿಲ್ಲ. ಸಿ.ಸಿ.ಟಿ.ವಿ ವೆಬ್‌ ಕ್ಯಾಸ್ಟಿಂಗ್‌ ಕಾರಣ ಮಕ್ಕಳಲ್ಲಿ ಭಯ ಉಂಟಾಗಿರಬಹುದು. ಮುಂದಿನ ದಿನಗಳಲ್ಲಿ ಹೆಚ್ಚು ನಿಗಾ ಇಟ್ಟು ಉತ್ತಮ ಫಲಿತಾಂಶಕ್ಕೆ ಪ್ರಯತ್ನಿಸುತ್ತೇವೆ. ಈಗಿನಿಂದಲೇ ಕ್ರಿಯಾ ಯೋಜನೆ ರೂಪಿಸಿ ಸಿದ್ಧತೆ ನಡೆಸುತ್ತೇವೆ ಕೃಷ್ಣಮೂರ್ತಿ ಡಿಡಿಪಿಐ ಕೋಲಾರ

ನಕಲು ತಡೆಗೆ ಪತ್ರ ಬರೆದಿದ್ದ ಇಲಾಖೆ ಯಾವುದೇ ಅವ್ಯವಹಾರಕ್ಕೆ ಆಸ್ಪದ ನೀಡದಂತೆ ಪಾರದರ್ಶಕವಾಗಿ ನಡೆಸಲು ಕ್ರಮ ವಹಿಸುವಂತೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ನಿರ್ದೇಶಕರು (ಪರೀಕ್ಷೆ) ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಮುನ್ನ ಕೋಲಾರ ಜಿಲ್ಲೆಯ ಡಿಡಿಪಿಐಗೆ ಸೂಚಿಸಿದ್ದರು. ಕೋಲಾರ ಜಿಲ್ಲೆಯಲ್ಲಿ ಸಾಮೂಹಿಕ ನಕಲು ಸಾಧ್ಯತೆ ಸಂಬಂಧ ಕೆಲ ಪೋಷಕರು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸಿ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಈ ಸೂಚನೆ ನೀಡಿದ್ದರು.

ಎರಡು ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಕೆಜಿಎಫ್‌ನ ನಾಚಪಲ್ಲಿಯ ಸರ್‌ ಎಂ.ವಿಶ್ವೇಶ್ವರಯ್ಯ ಮೆಮೋರಿಯಲ್‌ ಪ್ರೌಢಶಾಲೆ ಹಾಗೂ ಶ್ರೀನಿವಾಸಪುರ ತಾಲ್ಲೂಕಿನ ಯಲ್ದೂರಿನ ಶ್ರೀನಿವಾಸ ಪಬ್ಲಿಕ್‌ ಇಂಗ್ಲಿಷ್‌ ಮಾಧ್ಯಮ ಪ್ರೌಢಶಾಲೆಗೆ ಶೂನ್ಯ ಫಲಿತಾಂಶ ಬಂದಿದೆ. ಸರ್‌ ಎಂ.ವಿಶ್ವೇಶ್ವರಯ್ಯ ಮೆಮೋರಿಯಲ್‌ ಪ್ರೌಢಶಾಲೆ 11 ಮಕ್ಕಳು ಪರೀಕ್ಷೆ ಬರೆದಿದ್ದು ಎಲ್ಲರೂ ಅನುತ್ತೀರ್ಣರಾಗಿದ್ದಾರೆ. ಶ್ರೀನಿವಾಸ ಪಬ್ಲಿಕ್‌ ಇಂಗ್ಲಿಷ್‌ ಮಾಧ್ಯಮ ಪ್ರೌಢಶಾಲೆಯ ಇಬ್ಬರು ಮಕ್ಕಳು ಪರೀಕ್ಷೆ ಬರೆದಿದ್ದು ಅನುತ್ತೀರ್ಣರಾಗಿದ್ದಾರೆ.

ಬಾಲಕರ ಫಲಿತಾಂಶ ಕಳವಳಕಾರಿ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಬಾಲಕರ ಫಲಿತಾಂಶ ತೀವ್ರ ಕಳವಳಕಾರಿಯಾಗಿದೆ. ಶೇ 68.63 ಬಾಲಕರು ಉತ್ತೀರ್ಣರಾಗಿದ್ದರೆ ಶೇ 81.29 ಬಾಲಕಿಯರು ತೇರ್ಗಡೆಯಾಗಿದ್ದಾರೆ. 9664 ಬಾಲಕರು ಪರೀಕ್ಷೆ ಬರೆದಿದ್ದು ಕೇವಲ 6632 ಮಂದಿ ಉತ್ತೀರ್ಣರಾಗಿದ್ದಾರೆ; ಪರೀಕ್ಷೆ ಬರೆದ 9618 ಬಾಲಕಿಯರ ಪೈಕಿ 7818 ಮಂದಿ ತೇರ್ಗಡೆಯಾಗಿದ್ದಾರೆ. ಈ ನಿಟ್ಟಿನಲ್ಲಿ ಬಾಲಕಿಯರ ಸಾಧನೆ ಮೆಚ್ಚುವಂಥದ್ದು. ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕ ಪಡೆದವರು ಕೂಡ ಬಾಲಕಿಯರು. ಹೊಸದಾಗಿ ಪರೀಕ್ಷೆ ಬರೆದಿದ್ದ ಒಟ್ಟು 19282 ವಿದ್ಯಾರ್ಥಿಗಳ ಪೈಕಿ 14450 ಮಂದಿ ಉತ್ತೀರ್ಣರಾಗಿದ್ದಾರೆ.

ಕೃಷ್ಣಮೂರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.