ADVERTISEMENT

ಸ್ವಪಕ್ಷದ ಶಾಸಕರ ವಿರುದ್ಧವೇ ಕೊತ್ತೂರು ಮಂಜುನಾಥ್‌ ವಾಗ್ದಾಳಿ

ತೀಟೆ ಮಾಡುವರನ್ನು ದೂರವಿಡಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2023, 10:29 IST
Last Updated 2 ಅಕ್ಟೋಬರ್ 2023, 10:29 IST
   

ಕೋಲಾರ: ‘ತಲೆಕೆಟ್ಟ ಕೆಲವರು ಏನೇನೋ ಮಾತನಾಡುತ್ತಿದ್ದಾರೆ. ಸುಮ್ಮನೇ ತೀಟೆ ಮಾಡುವುದು, ಪಿನ್‌ ಚುಚ್ಚುವ ಕೆಲಸವೇ ಅಧಿಕವಾಗಿದೆ. ಕಾಂಗ್ರೆಸ್‌ ಪಕ್ಷದಲ್ಲಿ ಅಂಥವರನ್ನು ಸ್ವಲ್ಪ ದೂರ ಇಡಬೇಕು’ ಎಂದು ಕೋಲಾರ ಶಾಸಕ ಕೊತ್ತೂರು ಮಂಜುನಾಥ್‌, ಸ್ವಪಕ್ಷದ ಶಾಸಕರ ವಿರುದ್ಧವೇ ಹರಿಹಾಯ್ದರು.

ನಗರದಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿ, ‘ಕೆಲವರು ಜಾತಿ ವಿಚಾರದ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ತಮ್ಮ ಜಾತಿಯವರಿಗೆ ಮುಖ್ಯಮಂತ್ರಿ ಬೇಕು ಎನ್ನುತ್ತಿದ್ದಾರೆ. ಆ ಜಾತಿಯವರು ಅದೇ ಜಾತಿಯ ಒಬ್ಬ ಡಾಕ್ಟರ್‌, ನರ್ಸ್‌, ಪೊಲೀಸ್ ಅಧಿಕಾರಿ, ಇನ್ನೊಂದು ಜಾತಿಯವರು ಅದೇ ಜಾತಿಯ ಒಬ್ಬ ಡಾಕ್ಟರ್‌, ನರ್ಸ್‌, ಪೊಲೀಸ್‌ ಅಧಿಕಾರಿ ನೇಮಿಸಿಕೊಳ್ಳಲಿ’ ಎಂದು ಟೀಕಿಸಿದರು.

‘ನಾನು ನಿನ್ನೆ ಮುಖ್ಯಮಂತ್ರಿ ಬಳಿ ಹೋಗಿದ್ದೆ. ‘ಬೆಂಗಳೂರಿನಲ್ಲಿ ಅಡ್ಡಾಡಬೇಡಿ, ಕ್ಷೇತ್ರಕ್ಕೆ ಹೋಗಿ ಕೆಲಸ ಮಾಡಲು’ ಸೂಚಿಸಿದರು. ಅವರು ಸರಿಯಾಗಿಯೇ ಹೇಳಿದ್ದಾರೆ. ಅದನ್ನು ಬಿಟ್ಟು ಮಂತ್ರಿ ಬೇಕು, ಮುಖ್ಯಮಂತ್ರಿ ಬೇಕು ಎಂದು ಕೇಳುತ್ತಿದ್ದರೆ ಪ್ರಯೋಜನವಿಲ್ಲ. ನನಗೂ ಹಲವಾರು ಆಸೆಗಳಿವೆ. ಗೊತ್ತಿದ್ದರೆ ತೆಂಗಿನ ಮರ ಹತ್ತಬೇಕು. ಗೊತ್ತಿಲ್ಲದೇ ಹತ್ತಲು ಹೋದರೆ ಬಿದ್ದು ಕೈಕಾಲು ಮುರಿದುಕೊಳ್ಳುತ್ತೇವೆ’ ಎಂದರು.

ADVERTISEMENT

‘ನ್ಯಾಯ, ನೀತಿಯಿಂದ 136 ಶಾಸಕರು ಕಾಂಗ್ರೆಸ್‌ನಿಂದ ಗೆದ್ದಿದ್ದೇವೆ. ಕಾಂಗ್ರೆಸ್ ಸರ್ಕಾರ ಚೆನ್ನಾಗಿ ನಡೆಯುತ್ತಿದೆ. ಯಾರಾದರೂ ಶಾಸಕರು ಮಾತನಾಡಲು ಬಯಸಿದರೆ ತಮ್ಮ ತಾಲ್ಲೂಕಿನ ಜನರ ಕಷ್ಟಗಳು, ಶಿಕ್ಷಣ, ಆಸ್ಪತ್ರೆ, ಉದ್ಯೋಗ, ರೈತರ ಬಗ್ಗೆ ಮಾತನಾಡಿ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಬಳಿ ಹೋಗಿ ಆ ಕೆಲಸ ಮಾಡಿಸಿಕೊಳ್ಳಿ’ ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.