ADVERTISEMENT

ಸೌಲಭ್ಯ ವಂಚಿತ ಚತ್ತಗುಟ್ಲಹಳ್ಳಿ: ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 4 ಜುಲೈ 2024, 6:56 IST
Last Updated 4 ಜುಲೈ 2024, 6:56 IST
ಬಂಗಾರಪೇಟೆ ತಾಲ್ಲೂಕಿನ ಬೂದಿಕೋಟೆ ಹೋಬಳಿಯ ಚತ್ತಗುಟ್ಟಲ್ಲಹಳ್ಳಿ ಗ್ರಾಮದ ರಸ್ತೆ ಸ್ಥಿತಿ
ಬಂಗಾರಪೇಟೆ ತಾಲ್ಲೂಕಿನ ಬೂದಿಕೋಟೆ ಹೋಬಳಿಯ ಚತ್ತಗುಟ್ಟಲ್ಲಹಳ್ಳಿ ಗ್ರಾಮದ ರಸ್ತೆ ಸ್ಥಿತಿ   

ಬಂಗಾರಪೇಟೆ: ತಾಲ್ಲೂಕಿನ ಬೂದಿಕೋಟೆ ಹೋಬಳಿಯ ಬಲಮಂದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚತ್ತಗುಟ್ಲಹಳ್ಳಿ ಗ್ರಾಮಕ್ಕೆ ಮೂಲಭೂತ ಸೌಲಭ್ಯಗಳು ಮರೀಚಿಕೆಯಾಗಿವೆ.

ಇದು ಕಾಡಂಚಿನ ಗ್ರಾಮವಾಗಿದ್ದು, ಸೌಲಭ್ಯಗಳಿಲ್ಲದೆ ಸೊರಗುತ್ತಿದೆ. ಗ್ರಾಮದಲ್ಲಿ ಹುಡುಕಿದರೂ ಒಳಚರಂಡಿಯಿಲ್ಲ. ಚರಂಡಿ ನೀರು ನಿತ್ಯ ರಸ್ತೆ ಮೇಲೆ ಹರಿಯುತ್ತಿದ್ದು, ಗ್ರಾಮಸ್ಥರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ಕಸ ಸಂಗ್ರಹಕ್ಕೆ ಪಂಚಾಯಿತಿಯಿಂದ ವಾಹನ ಬಾರದ ಕಾರಣ ಎಲ್ಲಂದರಲ್ಲಿ ಕಸದ ರಾಶಿ ಇದ್ದು, ಸಾಂಕ್ರಾಮಿಕ ರೋಗದಲ್ಲಿ ಗ್ರಾಮಸ್ಥರು ದಿನ ಕಳೆಯುವಂತಾಗಿದೆ.

ಗ್ರಾಮಕ್ಕೆ ಚುನಾವಣೆ ಸಂದರ್ಭದಲ್ಲಿ ಮಾತ್ರ ಜನಪ್ರತಿನಿಧಿಗಳು ಭೇಟಿ ನೀಡಿ ಮತಯಾಚಿಸಿದರೆ, ನಂತರ ಮತ್ತೆ ಚುನಾವಣಾ ಸಮಯಕ್ಕೆ ಗ್ರಾಮದತ್ತ ಜನಪ್ರತಿನಿಧಿಗಳು ಮುಖ ಮಾಡುವುದಾಗಿದೆ. ಜತೆಗೆ ಗ್ರಾಮ ಪಂಚಾಯಿತಿ ಸದಸ್ಯರಿದ್ದರೂ ಅಭಿವೃದ್ಧಿ ಕಾರ್ಯಗಳು ಯಾವುದೂ ನಡೆದಿಲ್ಲ.  

ADVERTISEMENT

ಗ್ರಾಮಕ್ಕೆ ಸರಿಯಾದ ರಸ್ತೆ ಇಲ್ಲದ ಕಾರಣ ಗ್ರಾಮಕ್ಕೆ ಸರ್ಕಾರಿ ಬಸ್ ಮುಖ ಮಾಡಿಯೇ ಇಲ್ಲ. ಪ್ರತಿದಿನ ನಗರಕ್ಕೆ ಹೋಗಬೇಕಾದರೆ 3.ಕಿ.ಮೀ ನಡೆದುಕೊಂಡು ಬಂದು ಬಸ್‌ ಹತ್ತಬೇಕಾಗಿದೆ. ಜತೆಗೆ ಮಕ್ಕಳು ಪ್ರೌಢಶಾಲೆಗೆ ಪ್ರತಿನಿತ್ಯ ಕನಮನಹಳ್ಳಿಗೆ ನಡೆದುಕೊಂಡೇ ಹೋಗಬೇಕಿದೆ.

ಗ್ರಾಮದ ಜನರು ಅನಾರೋಗ್ಯವಾದರೆ 8 ಕಿ.ಮೀ ದೂರದ ತೊಪ್ಪನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಡೆದುಕೊಂಡೇ ಕಾಡಿನಲ್ಲಿ ಹೋಗಬೇಕು. ಗ್ರಾಮಸ್ಥರ ಒತ್ತಾಯಕ್ಕೆ ಮಣಿದು ಗ್ರಾಮದಲ್ಲೇ ಸರ್ಕಾರಿ ಉಪ ನ್ಯಾಯಬೆಲೆ ಅಂಗಡಿ ತೆರೆಯಲಾಗಿದೆ. ಆದರೆ, ಸರ್ವರ್ ಸಿಗದೆ ಅಂಗಡಿ ಮಾಲೀಕ ಪ್ರತಿ ತಿಂಗಳು ಪಡಿತರ ವಿತರಿಸಲು ಹೆಣಗಾಡಬೇಕಾಗಿದೆ. ದಿನವಿಡೀ ಸಾಲಾಗಿ ನಿಂತರೂ ಪಡಿತರ ಸಿಗುವುದು ಕಷ್ಟವಾಗಿದೆ.

ಗ್ರಾಮ ಪಂಚಾಯಿತಿಯಾಗಲಿ, ತಾಲ್ಲೂಕು ಆಡಳಿತವಾಗಲಿ ಇಲ್ಲಿನ ಜನರ ಕಷ್ಟ ಕೇಳುವವರೇ ಇಲ್ಲ. ನರೇಗಾ ಯೋಜನೆ ಅಡಿಯಲ್ಲಿ ಅಗತ್ಯ ಸೌಲಭ್ಯಗಳನ್ನು ಕೈಗೊಳ್ಳಬಹುದು. ಆದರೆ, ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಪಂಚಾಯಿತಿ ಆಡಳಿತ ಮಂಡಳಿ ನಿರ್ಲಕ್ಷ್ಯದಿಂದ ಚತ್ತಗುಟ್ಲಹಳ್ಳಿ ಕಡೆಗಣಿಸಲ್ಪಟ್ಟಿದ್ದು, ಸೌಲಭ್ಯಗಳಿಂದ ವಂಚಿತ ಗ್ರಾಮವಾಗಿದೆ.

ಬಂಗಾರಪೇಟೆ ತಾಲ್ಲೂಕಿನ ಬೂದಿಕೋಟೆ ಹೋಬಳಿಯ ಚತ್ತಗುಟ್ಟಲ್ಲಹಳ್ಳಿ ಗ್ರಾಮದ ರಸ್ತೆ ಸ್ಥಿತಿ
ಹಿಂಗು ಗುಂಡಿ ನಿರ್ಮಾಣ  ಕಿರಿದಾದ ರಸ್ತೆಗಳು ಇರುವುದರಿಂದ ಒಳ ಚರಂಡಿ ವ್ಯವಸ್ಥೆಯನ್ನು ಮಾಡಲು ಸಾಧ್ಯವಿಲ್ಲ. ಬದಲಿಗೆ ಪ್ರತಿಯೊಂದು ಮನೆಗೂ ಹಿಂಗು ಗುಂಡಿಗಳನ್ನು ನಿರ್ಮಾಣ ಮಾಡಲಾಗಿದೆ. ಮಧು ಚಂದ್ರ ಪಿಡಿಒ ಬಲಮಂದೆ ಗ್ರಾಮ ಪಂಚಾಯಿತಿ
ನಮ್ಮೂರಿಗೆ ಬಸ್ ಯಾವಾಗ ಬರುತ್ತೋ ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಲ್ಲಿದ್ದು ನಮ್ಮ ಗ್ರಾಮದ ಮಹಿಳೆಯರಿಗೆ ಆ ಭಾಗ್ಯವಿಲ್ಲ. ನಮ್ಮೂರಿಗೆ ಬಸ್ ಯಾವಾಗ ಬರುತ್ತೋ ಕಾದು ನೋಡಬೇಕಿದೆ.
ನಾಗೇಶ್ ರಾವ್ ಗ್ರಾಮಸ್ಥ 
ರಸ್ತೆಗೆ ಡಾಂಬರೀಕರಣ ಮಾಡಿ ಕಾಮಸಮುದ್ರ ಮತ್ತು ವೆಪನಪೆಲ್ಲಿ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಹೆಚ್ಚಾಗಿ ಉಪಯೋಗಿಸುತ್ತಿದ್ದು ಈ ರಸ್ತೆಯನ್ನು ನರೇಗಾ ಯೋಜನೆಯಲ್ಲಿ ನಿರ್ಮಾಣ ಮಾಡಿದ್ದು ಈಗ ಹಾಳಾಗಿದೆ. ಹಾಗಾಗಿ ರಸ್ತೆ ಡಾಂಬರೀಕರಣ ಮಾಡಿ ಅನುಕೂಲ ಮಾಡಿಕೊಡಬೇಕಾಗಿ ಮನವಿ.
ಗೋವಿಂದರಾವ್ ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.