ಮುಳಬಾಗಿಲು: ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬರುವ ರೋಗಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಆದರೆ, ಆಸ್ಪತ್ರೆಯಲ್ಲಿ ಮಾತ್ರ ರೋಗಿಗಳಿಗೆ ಚಿಕಿತ್ಸೆ ನೀಡಲು ಅಗತ್ಯವಿರುವಷ್ಟು ವೈದ್ಯಕೀಯ ಸಿಬ್ಬಂದಿ ಇಲ್ಲದಿರುವುದು ತಲೆನೋವಾಗಿ ಪರಿಣಮಿಸಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ.
ಇದೇ ಕಾರಣಕ್ಕಾಗಿ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು, ಆಸ್ಪತ್ರೆ ಆವರಣವು ಸದಾ ಜನಜಂಗುಳಿಯಿಂದ ತುಂಬಿರುತ್ತದೆ ಎನ್ನುತ್ತಾರೆ ಸ್ಥಳೀಯರು.
ತಾಲ್ಲೂಕಿನ ಕೇಂದ್ರ ಸ್ಥಾನವಾದ ಸರ್ಕಾರಿ ಆಸ್ಪತ್ರೆಯಲ್ಲಿ 15 ವೈದ್ಯರು, 40 ದಾದಿಯರು ಹಾಗೂ 28 ಗ್ರೂಪ್ ಡಿ ನೌಕರರು ಕೆಲಸ ಮಾಡುತ್ತಿದ್ದಾರೆ. ಗ್ರೂಪ್ ಡಿ ಹುದ್ದೆಯಲ್ಲಿ ಕೇವಲ 10 ಸಿಬ್ಬಂದಿಯ ಕೊರತೆ ಇದೆ. ಇದನ್ನು ಹೊರತುಪಡಿಸಿ, ವೈದ್ಯರು ಮತ್ತು ದಾದಿಯರ ಎಲ್ಲ ಹುದ್ದೆಗಳೂ ಭರ್ತಿಯಾಗಿವೆ. ಆದರೆ, ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿರುವ ಕಾರಣ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರಿಂದ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಆಸ್ಪತ್ರೆಯ ಆವರಣದಲ್ಲಿ ಎಲ್ಲೆಂದರಲ್ಲಿ ರೋಗಿಗಳು ಬೀಡುಬಿಟ್ಟಿರುವುದು ಚಿತ್ರಣ ಸರ್ವೆ ಸಾಮಾನ್ಯವೆಂಬಂತಾಗಿದೆ.
ಹಿಂದೆ ಪುರಸಭೆಯಾಗಿದ್ದ ಮುಳಬಾಗಿಲು ಅನ್ನು ಮೂರು ವರ್ಷಗಳ ಹಿಂದೆ ನಗರಸಭೆಯಾಗಿ ಮೇಲ್ದರ್ಜೆಗೇರಿಸಲಾಗಿದೆ. ಇದರಿಂದ ವಸತಿ, ಜನಸಂಖ್ಯೆ, ವಾಣಿಜ್ಯ, ವ್ಯಾಪಾರ ವಹಿವಾಟು, ವಾಹನಗಳ ಓಡಾಟ, ಸರ್ಕಾರಿ ಹಾಗೂ ಇನ್ನಿತರೆ ಕೆಲಸ ಕಾರ್ಯಗಳಿಗಾಗಿ ನಗರಕ್ಕೆ ಬಂದು–ಹೋಗುವವರ ಸಂಖ್ಯೆ ಹೆಚ್ಚಳವಾಗಿದೆ. ಮತ್ತೊಂದೆಡೆ ನಗರದ ಎಲ್ಲೆಡೆ ಬಡಾವಣೆಗಳು ತಲೆ ಎತ್ತಿದ್ದು, ನಗರವು ದೊಡ್ಡದಾಗಿ ಬೆಳೆಯುತ್ತಿದೆ. ಜನಸಂಖ್ಯೆಯ ಬೆಳವಣಿಗೆಗೆ ಅನುಗುಣವಾಗಿ ವೈದ್ಯರ ಸಂಖ್ಯೆ ಹೆಚ್ಚಳವಾಗ ಕಾರಣ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಮರ್ಪಕ ವೈದ್ಯಕೀಯ ಚಿಕಿತ್ಸೆ ಸಿಗುತ್ತಿಲ್ಲ ಎನ್ನಲಾಗಿದೆ.
ನಗರದಲ್ಲಿರುವ ಸರ್ಕಾರಿ ಆಸ್ಪತ್ರೆ ಮೇಲಿನ ಒತ್ತಡ ತಡೆಗಾಗಿ ನೂಗಲಬಂಡೆ, ಬುಸಾಲಕುಂಟೆಯಲ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಉಪ ಕೇಂದ್ರ ತೆರೆಯಲಾಗಿದೆ. ಅಲ್ಲದೆ, ಸೋಮೇಶ್ವರಪಾಳ್ಯದ ಹೊಸಪಾಳ್ಯದಲ್ಲಿ ಸರ್ಕಾರಿ ಯುನಾನಿ ಆಸ್ಪತ್ರೆ ತೆರೆಯಲಾಗಿದೆ. ಆದಾಗ್ಯೂ, ಮುಳಬಾಗಿಲು ನಗರದ ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆಯಲ್ಲಿ ಇಳಿಕೆಯಾಗಿಲ್ಲ. ಹೀಗಾಗಿ, ಆಸ್ಪತ್ರೆಗೆ ಹೆಚ್ಚುವರಿ ವೈದ್ಯರು ಹಾಗೂ ದಾದಿಯರನ್ನು ನಿಯೋಜನೆ ಮಾಡಬೇಕು ಎಂದು ರೋಗಿಗಳು ಹೇಳುತ್ತಾರೆ.
ಆಸ್ಪತ್ರೆಯಲ್ಲಿ ಬಹುತೇಕ ಎಲ್ಲ ಕಾಯಿಲೆಗಳ ವಿಭಾಗಗಳು ಮತ್ತು ನುರಿತ ವೈದ್ಯರಿದ್ದಾರೆ. ಆದರೆ, ಇರುವ ವೈದ್ಯರು ಸಾವಿರಾರು ರೋಗಿಗಳಿಗೆ ಸೂಕ್ತ ಸಮಯಕ್ಕೆ ಚಿಕಿತ್ಸೆ ನೀಡಲಾಗುತ್ತಿಲ್ಲ. ಹೀಗಾಗಿ ಆಸ್ಪತ್ರೆ ಆವರಣದಲ್ಲಿ ರೋಗಿಗಳು ಸದಾ ತುಂಬಿಕೊಂಡಿರುತ್ತಾರೆ ಎಂದು ವೈದ್ಯಾಧಿಕಾರಿಗಳು ಹೇಳುತ್ತಾರೆ.
ರಾಷ್ಟ್ರೀಯ ಹೆದ್ದಾರಿ–75 ಆಸ್ಪತ್ರೆ ಬಳಿಯೇ ಹಾದು ಹೋಗಿದೆ. ಈ ರಸ್ತೆಯಲ್ಲಿ ಸಂಭವಿಸುವ ಅಪಘಾತಗಳಲ್ಲಿ ಗಾಯಗೊಂಡವರೂ ಇದೇ ಆಸ್ಪತ್ರೆಗೆ ಬರುತ್ತಾರೆ. ಅಂತಹ ಸಂದರ್ಭಗಳಲ್ಲಿ ಸಾಮಾನ್ಯ ರೋಗಿಗಳು ಚಿಕಿತ್ಸೆಗಾಗಿ ಮತ್ತಷ್ಟು ಸಮಯ ಕಾಯುವ ಸ್ಥಿತಿ ನಿರ್ಮಾಣವಾಗುತ್ತದೆ. ಹೀಗಾಗಿ, ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಆಸ್ಪತ್ರೆಗೆ ಹೆಚ್ಚುವರಿ ವೈದ್ಯರ ನೇಮಕ ಅಥವಾ ನಿಯೋಜಿಸಬೇಕು ಎಂಬುದು ಸ್ಥಳೀಯ ನಿವಾಸಿ ವಾಸಿ ಅಮರ್ ಅಭಿಪ್ರಾಯ.
ಆಸ್ಪತ್ರೆ ದಾಖಲೆಗಳ ಪ್ರಕಾರ ಒಂದೆರಡು ವರ್ಷಗಳ ಹಿಂದೆ ಪ್ರತಿನಿತ್ಯ ಸಾಮಾನ್ಯವಾಗಿ 200–300 ರೋಗಿಗಳು ಆಸ್ಪತ್ರೆಗೆ ಬಂದು ಅಗತ್ಯವಿರುವ ಚಿಕಿತ್ಸೆ ಪಡೆದು ಮರಳುತ್ತಿದ್ದರು. ಇದರಲ್ಲಿ ಕೆಲವರು ಸಾಮಾನ್ಯ ರೋಗಗಳು ಮತ್ತೆ ಕೆಲವರು ಗಂಭೀರ ಸ್ವರೂಪದ ಕಾಯಿಲೆ ಉಳ್ಳವರಾಗಿರುತ್ತಿದ್ದರು. ಗಂಭೀರವಾದ ಕಾಯಿಲೆ ಇದ್ದವರನ್ನು ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಪ್ರತಿನಿತ್ಯ 800–1000 ರೋಗಿಗಳು ಚಿಕಿತ್ಸೆ ಪಡೆಯಲು ಬರುತ್ತಿದ್ದಾರೆ. ಇದರಲ್ಲಿ ಕೆಲವರಿಗೆ ಒಳ ರೋಗಿಗಳಾಗಿ ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡಬೇಕಿದೆ. ಇದರಿಂದಾಗಿ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದರು.
ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಇಲ್ಲ. ದಿನೇದಿನೇ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ರೋಗಿಗಳು ಚಿಕಿತ್ಸೆ ಪಡೆಯಲು ಹೆಚ್ಚು ಸಮಯ ಕಾಯುವ ಪರಿಸ್ಥಿತಿ ಎದುರಾಗಿದೆ.-ಸುರೇಂದ್ರ ಆಸ್ಪತ್ರೆ ವೈದ್ಯಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.