ಕೋಲಾರ: ‘ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿ ಕೈಗಾರಿಕೆಗಳ ಸಿಎಸ್‍ಆರ್ ನಿಧಿ ಹಣದಲ್ಲಿ ಕೆರೆಗಳನ್ನು ಅಭಿವೃದ್ಧಿಪಡಿಸುತ್ತೇವೆ’ ಎಂದು ಸಂಸದ ಎಸ್.ಮುನಿಸ್ವಾಮಿ ಭರವಸೆ ನೀಡಿದರು.
ಇಲ್ಲಿ ಬುಧವಾರ ಕೋಡಿಕಣ್ಣೂರು ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ‘ಜಿಲ್ಲೆಯಲ್ಲಿ ಕೈಗಾರಿಕೆಗಳ ಸಿಎಸ್‍ಆರ್ ನಿಧಿ ನಿರೀಕ್ಷಿತ ಪ್ರಮಾಣದಲ್ಲಿ ಬಳಕೆಯಾಗಿಲ್ಲ. ಹೀಗಾಗಿ ಕೈಗಾರಿಕೆಗಳ ಪ್ರತಿನಿಧಿಗಳ ಜತೆ ಶೀಘ್ರವೇ ಸಭೆ ನಡೆಸಿ ಕೆರೆಗಳ ಅಭಿವೃದ್ಧಿಯ ಜವಾಬ್ದಾರಿ ನೀಡುತ್ತೇವೆ’ ಎಂದರು.
‘ಕೋಡಿಕಣ್ಣೂರು ಕೆರೆ ಸ್ವಚ್ಛತಾ ಕಾರ್ಯಕ್ಕೆ ಸರ್ಕಾರದಿಂದ ಯಾವುದೇ ಅನುದಾನ ಪಡೆದಿಲ್ಲ. ನಾನು ಮತ್ತು ಉಸ್ತುವಾರಿ ಸಚಿವರು ಜತೆಯಾಗಿ ಕೆರೆಯ ಸ್ವಚ್ಛತಾ ಕಾರ್ಯ ಕೈಗೊಂಡಿದ್ದೇವೆ. ಕೆರೆ 195 ಎಕರೆ ವಿಸ್ತಾರವಾಗಿದೆ. ಕೆರೆಯ ಒತ್ತುವರಿ ತೆರವುಗೊಳಿಸಿ ಗಡಿ ಗುರುತಿಸುವಂತೆ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಹಾಗೂ ಭೂದಾಖಲೆಗಳ ಇಲಾಖೆ ಉಪ ನಿರ್ದೇಶಕರಿಗೆ ಸೂಚಿಸಲಾಗಿದೆ’ ಎಂದು ವಿವರಿಸಿದರು.
‘ಕೆರೆಯನ್ನು ಸರ್ವೆ ಮಾಡಿ ತೆರವು ಕಾರ್ಯಾಚರಣೆ ನಡೆಸಲಾಗುತ್ತದೆ. ಜತೆಗೆ ಕೆರೆಯ ಕೋಡಿ ಎತ್ತರ ಹೆಚ್ಚಿಸಲು ಸಣ್ಣ ನೀರಾವರಿ ಇಲಾಖೆಗೆ ಸೂಚಿಸಲಾಗಿದೆ. ಅಮ್ಮೇರಹಳ್ಳಿ ಕೆರೆಗೆ ಬಂದಿರುವ ಕೆ.ಸಿ ವ್ಯಾಲಿ ನೀರು ಕೋಲಾರಮ್ಮ ಕೆರೆಗೂ ಹರಿಯಲಿದೆ. ₹ 8 ಕೋಟಿ ವೆಚ್ಚದಲ್ಲಿ ಕೋಲಾರಮ್ಮ ಕೆರೆ ದಂಡೆಯಲ್ಲಿ ನಡಿಗೆ ಪಥ ನಿರ್ಮಾಣ ಮತ್ತು ಇತರೆ ಅಭಿವೃದ್ಧಿ ಕಾರ್ಯಗಳಿಗೆ ಟೆಂಡರ್ ಕರೆಯಲಾಗಿದೆ’ ಎಂದು ಮಾಹಿತಿ ನೀಡಿದರು.
260 ಎಂಎಲ್‌ಡಿ ನೀರು: ‘ಕೆ.ಸಿ ವ್ಯಾಲಿ ಯೋಜನೆಯಲ್ಲಿ ಜಿಲ್ಲೆಗೆ ಸದ್ಯ 260 ಎಂಎಲ್‌ಡಿ ನೀರು ಬರುತ್ತಿದೆ. ಇದರಲ್ಲಿ 100 ಎಂಎಲ್‌ಡಿ ನೀರು ಮಾಲೂರಿಗೆ ಹರಿದು ಹೋಗುತ್ತಿದೆ. ಜನ್ನಘಟ್ಟ, ಮುದುವಾಡಿ ಕೆರೆಗಳು ತುಂಬಿದ ಬಳಿಕ ನೀರು ಬಂಗಾರಪೇಟೆ ಕ್ಷೇತ್ರದ ಹೊಳಲಿ ಹಾಗೂ ಇತರೆ ಕೆರೆಗಳಿಗೆ ಹರಿಯಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಹೇಳಿದರು.
‘ಕೆ.ಸಿ ವ್ಯಾಲಿಯಿಂದ ಸೆಪ್ಟೆಂಬರ್ ವೇಳೆಗೆ 400 ಎಂಎಲ್‌ಡಿ ಹರಿದು ಬರುವ ನಿರೀಕ್ಷೆಯಿದೆ. ಈ ಸಂಬಂಧ ಸಣ್ಣ ನೀರಾವರಿ ಇಲಾಖೆ ಸಚಿವರು ಮತ್ತು ಬಿಡಬ್ಲ್ಯೂಎಸ್‌ಎಸ್‌ಬಿ ಅಧಿಕಾರಿಗಳ ಸಭೆಯಲ್ಲಿ ಭರವಸೆ ಸಿಕ್ಕಿದೆ. 200 ಕೆರೆ ತುಂಬಿಸುವಷ್ಟು ಯೋಜನೆಯಲ್ಲಿ ನೀರು ಲಭ್ಯ ಇರುವುದರಿಂದ ಮುಂದೆ ಮತ್ತಷ್ಟು ಕೆರೆಗಳನ್ನು ತುಂಬಿಸಲಾಗುತ್ತದೆ’ ಎಂದು ತಿಳಿಸಿದರು.
ಅಂತರ್ಜಲ ವೃದ್ಧಿ: ‘ಅರಣ್ಯ ಇಲಾಖೆಯವರು ಅಥವಾ ಗ್ರಾಮ ಪಂಚಾಯಿತಿಯವರು ಕೆರೆ ಸ್ವಚ್ಛತೆ ಮಾಡುತ್ತಾರೆ ಎಂದು ನಂಬಿ ಕುಳಿತರೆ ಕೆಲಸ ಆಗುವುದಿಲ್ಲ. ಹೀಗಾಗಿ ನಾವೇ ಕೆರೆಗಳನ್ನು ಸ್ವಚ್ಛಗೊಳಿಸಲು ಮುಂದಾಗಿದ್ದೇವೆ. ಕೋಲಾರಮ್ಮ ಮತ್ತು ಕೋಡಿಕಣ್ಣೂರು ಕೆರೆ ತುಂಬಿದರೆ ಅಂತರ್ಜಲ ವೃದ್ಧಿಯಾಗುತ್ತದೆ ಹಾಗೂ ಪ್ರವಾಸೋದ್ಯಮಕ್ಕೂ ಅನುಕೂಲವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.
ಉಪ ವಿಭಾಗಾಧಿಕಾರಿ ಸೋಮಶೇಖರ್, ಸಣ್ಣ ನೀರಾವರಿ ಇಲಾಖೆ ಕಾರ್ಯ ನಿರ್ವಾಹಕ ಎಂಜಿನಿಯರ್ ಸುರೇಶ್‌ಬಾಬು, ನಗರಸಭೆ ಸದಸ್ಯರಾದ ರಾಕೇಶ್, ಮಂಜುನಾಥ್, ಅಂಬರೀಶ್, ಆಯುಕ್ತ ಶ್ರೀಕಾಂತ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.