ADVERTISEMENT

ಕುಟಂಬದ ಬೆಂಕಿ ಎಚ್‌ಡಿಕೆ ನಂದಿಸಲಿ: ಸಂಸದ ಮುನಿಸ್ವಾಮಿ ತಿರುಗೇಟು

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2023, 5:56 IST
Last Updated 6 ಫೆಬ್ರುವರಿ 2023, 5:56 IST

ನರಸಾಪುರ (ಕೋಲಾರ): 'ಮೊದಲು ತಮ್ಮ ಮನೆಯಲ್ಲಿ ಹೊತ್ತಿ ಉರಿಯುತ್ತಿರುವ ಬೆಂಕಿ ಆರಿಸಿಕೊಳ್ಳಲಿ. ನಂತರ ಬಿಜೆಪಿ ಬಗ್ಗೆ ಯೋಚಿಸಲಿ' ಎಂದು ಸಂಸದ ಮುನಿಸ್ವಾಮಿ, ಜೆಡಿಎಸ್‌ ವರಿಷ್ಠ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, 'ನಿಮ್ಮ ಪಕ್ಷ, ನಿಮ್ಮ ಮನೆ ಗೊಂದಲ ಮೊದಲು ಪರಿಹರಿಸಿಕೊಂಡು ನಂತರ ಬಿಜೆಪಿ ಗೊಂದಲ ಕುರಿತು ಮಾತನಾಡಿ. ಬಾಯಿ ಚಪಲಕ್ಕೆ ಏನೇನೋ ಮಾತನಾಡಬೇಡಿ. ಅವರು ಹಾಕುವುದೆಲ್ಲ ಠುಸ್ ಬಾಂಬ್' ಎಂದರು.

ಕುಮಾರಸ್ವಾಮಿ ಅವರು ಕೇಂದ್ರ ಸಚಿವ ಪ್ರಲ್ಹಾದ ಜೋಷಿ ವಿರುದ್ಧ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ’ಚುನಾವಣೆಯಲ್ಲಿ ಗೊಂದಲ ಸೃಷ್ಟಿಸಲು ಪ್ರಯತ್ನಿಸಿದ್ದಾರೆ. ಬಿಜೆಪಿಯಲ್ಲಿ ಬಸವರಾಜ ಬೊಮ್ಮಾಯಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅಷ್ಟಕ್ಕೂ ಏನೇ ಇದ್ದರೂ ಬಿಜೆಪಿ ಆಂತರಿಕ ವಿಚಾರ. ಪಕ್ಷ ಒಡೆಯುವ ಇವರ ಪ್ರಯತ್ನ ಫಲಿಸದು' ಎಂದರು.

ADVERTISEMENT

'ನಾವು ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತೇವೆ ಎನ್ನುವ ಕುಮಾರಸ್ವಾಮಿ ಟುಸ್‍ ಬಾಂಬ್‍ಗೆ ಹೆದರುವುದಿಲ್ಲ. ಅವರ ಪಕ್ಷದಲ್ಲಿರುವವರು ಯಾರ್ಯಾರು ಕಾಂಗ್ರೆಸ್, ಬಿಜೆಪಿಗೆ ಹೋಗ್ತಾರೆ ಅದನ್ನು ಮೊದಲು ಸರಿಪಡಿಸಿಕೊಳ್ಳಲಿ. ಬಿಜೆಪಿ ಉಸಾಬರಿ ಅವರಿಗೆ ಅಗತ್ಯವಿಲ್ಲ' ಎಂದರು.

ಪ್ರಜಾಧ್ವನಿ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, 'ಕಾಂಗ್ರೆಸ್ ಧ್ವನಿ ಕಳೆದುಕೊಂಡಿರುವ ಪಕ್ಷ. ಅದಕ್ಕಾಗಿಯೇ ಅದು ಪ್ರಜಾ ಧ್ವನಿ ಯಾತ್ರೆ ನಡೆಸುತ್ತಿದೆ. ಇಡೀ ದೇಶದಲ್ಲಿ ಈಗಾಗಲೇ 3, 4ನೇ ಸ್ಥಾನಕ್ಕೆ ಕಾಂಗ್ರೆಸ್ ತಲುಪಿದೆ. ಒಂದು ರಾಜ್ಯದಲ್ಲಿ ಒಂದೆರಡು ಶಾಸಕರು ಗೆಲ್ಲಿಸಿಕೊಡಲು ಸಾಧ್ಯವಾಗಿಲ್ಲ. ಇದೇ ಗತಿ ಕರ್ನಾಟಕದಲ್ಲೂ ಬರಲಿದೆ' ಎಂದರು.

'ದಿನೇಶ್ ಗುಂಡೂರಾವ್ ತಮ್ನ ತಂದೆ ಹೆಸರೇಳಿಕೊಂಡು ರಾಜಕಾರಣ ಮಾಡುತ್ತಿದ್ದು ಮಾತಿನ ಮೇಲೆ ಹಿಡಿತವಿಲ್ಲ. ಸೋಲಿನ ಹತಾಶೆ ಅವರನ್ನು ಕಾಡುತ್ತಿದೆ. ತಂದೆ ಹೆಸರು ಬಿಟ್ಟು ನಂತರ ಚುನಾವಣೆಗೆ ಸ್ಪರ್ಧಿಸಿ ರಾಜಕಾರಣ ಮಾಡಲಿ' ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.