ADVERTISEMENT

ಸಿದ್ದರಾಮಯ್ಯ, HDK ತಮ್ಮ ಆಸ್ತಿ ಬದಲಾಯಿಸಿಕೊಳ್ಳಲಿ: ಸಚಿವ ಬೈರತಿ ಸುರೇಶ್‌ ಸವಾಲು

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2024, 15:26 IST
Last Updated 15 ಸೆಪ್ಟೆಂಬರ್ 2024, 15:26 IST
<div class="paragraphs"><p>ಸಚಿವ ಬೈರತಿ ಸುರೇಶ್‌ </p></div>

ಸಚಿವ ಬೈರತಿ ಸುರೇಶ್‌

   

ಕೋಲಾರ: ‘ಸಿದ್ದರಾಮಯ್ಯ ಹಾಗೂ ಎಚ್‌.ಡಿ.ಕುಮಾರಸ್ವಾಮಿ ತಮ್ಮ ಆಸ್ತಿಯನ್ನು ಪರಸ್ಪರ ಬದಲಾಯಿಸಿಕೊಳ್ಳಲಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌ ಸವಾಲು ಹಾಕಿದರು.

ಸಿದ್ದರಾಮಯ್ಯ ದಲಿತರ ನಿವೇಶನ ಕಬಳಿಕೆ ಮಾಡಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ನಗರದಲ್ಲಿ ಭಾನುವಾರ ತಿರುಗೇಟು ನೀಡಿದ ಅವರು, ‘ಇಬ್ಬರ ಆಸ್ತಿಯನ್ನು ಹೋಲಿಕೆ ಮಾಡೋಣ. ಸಿದ್ದರಾಮಯ್ಯ ತಮ್ಮ ಎಲ್ಲಾ ಆಸ್ತಿಯನ್ನು ಕುಮಾರಸ್ವಾಮಿ ಅವರಿಗೆ ನೀಡಲಿ. ಕುಮಾರಸ್ವಾಮಿ ತಮ್ಮ ಎಲ್ಲಾ ಆಸ್ತಿಯನ್ನು ಸಿದ್ದರಾಮಯ್ಯ ಅವರಿಗೆ ನೀಡಲಿ. ಆಗ ಎಲ್ಲವೂ ಸರಿ ಹೋಗುತ್ತದೆ’ ಎಂದರು.

ADVERTISEMENT

‘ಸಿದ್ದಾಮರಾಮಯ್ಯ 1982ರಿಂದ ರಾಜಕಾರಣದಲ್ಲಿದ್ದಾರೆ. ಕುಮಾರಸ್ವಾಮಿ 1998ರಲ್ಲಿ ರಾಜಕೀಯಕ್ಕೆ ಬಂದರು. ಯಾರು ಎಷ್ಟು ಆಸ್ತಿ ಮಾಡಿಕೊಂಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಸಿದ್ದರಾಮಯ್ಯ ಅವರನ್ನು ನಾನು ಬಹಳ ಹತ್ತಿರದಿಂದ ನೋಡಿದ್ದೇನೆ. ಇಡೀ ದೇಶದಲ್ಲಿ ಅತ್ಯಂತ ಪ್ರಾಮಾಣಿಕ ಮುಖ್ಯಮಂತ್ರಿ ಇದ್ದರೆ ಅದು ಸಿದ್ದರಾಮಯ್ಯ ಮಾತ್ರ. ಅವರ ಬಗ್ಗೆ ಮಾತನಾಡಿದವರನ್ನು ಆ ದೇವರೇ ನೋಡಿಕೊಳ್ಳುತ್ತಾನೆ’ ಎಂದು ನುಡಿದರು.

ಬಿಜೆಪಿ ಶಾಸಕ ಮುನಿರತ್ನ ಬಂಧನ ವಿಚಾರವಾಗಿ ಪ್ರತಿಕ್ರಿಯಿಸಿ, ‘ಕಾಂಗ್ರೆಸ್‌ನಿಂದ ಬಿಜೆಪಿಗೆ ಹೋಗಿದ್ದಕ್ಕೆ ಟಾರ್ಗೆಟ್‌ ಮಾಡುತ್ತಿದ್ದಾರೆ ಎನ್ನುತ್ತಿದ್ದಾರೆ. ಒಕ್ಕಲಿಗರು, ದಲಿತರನ್ನು ಅವಾಚ್ಯ ಶಬ್ದಗಳಿಂದ ಬೈಯ್ಯಲು, ಹಣಕ್ಕೆ ಬೇಡಿಕೆ ಇಡಲು ಕಾಂಗ್ರೆಸ್‌ ಪಕ್ಷ ಹೇಳಿತ್ತೇ? ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿ ಹೇಳಿದ್ದರೇ? ಜಾತಿ, ಜನಾಂಗದ ಮೇಲೆ ವೈಯಕ್ತಿಕವಾಗಿ ನಿಂದನೆ ಮಾಡುವುದು ಪ್ರಜಾಪ್ರಭುತ್ವಕ್ಕೆ ಮಾರಕ. ಮಾಡಿದ್ದುಣ್ಣೋ ಮಾರಾಯ ಎಂಬಂತೆ ತಪ್ಪು ಮಾಡಿದವರು ಅದರ ಫಲ ಅನುಭವಿಸಬೇಕು. ಅಸಹ್ಯಕರವಾಗಿ ಮಾತನಾಡಿರುವ ಆಡಿಯೊ ಇದೆ. ಮುನಿರತ್ನ ಮಾತನಾಡಿದ್ದು ನಿಜವೋ ಅಲ್ಲವೋ ಎಂಬುದು ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ದೃಢವಾಗಲಿದೆ, ತನಿಖೆಯಿಂದ ಗೊತ್ತಾಗುತ್ತದೆ’ ಎಂದರು.

ನಾಗಮಂಗಲ ಗಲಾಟೆ ವಿಚಾರವನ್ನು ಹರಿಯಾಣ ಚುನಾವಣೆಯಲ್ಲಿ ಪ್ರಧಾನಿ ಮೋದಿ ಪ್ರಸ್ತಾಪಿಸಿರುವ ಕುರಿತು ಪ್ರತಿಕ್ರಿಯಿಸಿ, ‘ನಾಗಮಂಗಲ ಪ್ರಕರಣ ಅತಿ ಸೂಕ್ಷ್ಮ ವಿಚಾರವಾಗಿದ್ದು, ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಹಿಂದೂ ಆಗಲಿ ಮುಸ್ಲಿಂ ಆಗಲಿ ಸೌಹಾರ್ದಯುತವಾಗಿರಬೇಕು. ಕ್ಷುಲ್ಲುಕ ಕಾರಣಗಳಿಗೆ ಜಗಳವಾಡುವುದು ಸರಿಯಲ್ಲ. ಪ್ರಧಾನಿ ಮೋದಿ ಜವಾಬ್ದಾರಿ ಅರಿತು ಮಾತನಾಡಬೇಕು. ರಾಜಕಾರಣಕ್ಕೆ ಈ ವಿಚಾರ ಬಳಸಿಕೊಳ್ಳಬಾರದು, ಉರಿಯುವ ಬೆಂಕಿಗೆ ತುಪ್ಪ ಸುರಿಯಬಾರದು’ ಎಂದು ಹೇಳಿದರು.

‘ಅಶೋಕ ಅವರಂಥ ಬಾಲಿಷ ವ್ಯಕ್ತಿ ಮತ್ತೊಬ್ಬರಿಲ್ಲ‘

‘ವಿರೋಧ ಪಕ್ಷದ ನಾಯಕ ಅಶೋಕ ಯಾವತ್ತು ಸತ್ಯ ಮಾತನಾಡಿದ್ದಾರೆ ಹೇಳಿ? ಕಡ್ಡಿಯನ್ನು ಗುಡ್ಡ ಮಾಡುವುದರಲ್ಲಿ ನಂಬರ್‌ ಒನ್‌. ಹಿಟ್‌ ಅಂಡ್‌ ರನ್‌ ಕೇಸ್‌ ಅವರು. ಅವರ ಪ್ರಕಾರ ಬಿಜೆಪಿ ಮಾಡುವುದೆಲ್ಲಾ ಸರಿ, ಕಾಂಗ್ರೆಸ್‌ನವರು ಮಾಡುವುದೆಲ್ಲಾ ಸುಳ್ಳು. ಅಶೋಕ ಅವರಷ್ಟು ಬಾಲಿಷ ಹೇಳಿಕೆ ನೀಡುವ ವ್ಯಕ್ತಿ ಕರ್ನಾಟಕದಲ್ಲಿ ಬೇರೆ ಯಾರೂ ಇಲ್ಲ’ ಎಂದು ಬೈರತಿ ಸುರೇಶ್‌ ಟೀಕಾ ಪ್ರಹಾರ ನಡೆಸಿದರು.

ಬಿಜೆಪಿ ಶಾಸಕ ಮುನಿರತ್ನ ಅವರ ಧ್ವನಿ ಪರಿಶೀಲನೆ ಆಗಬೇಕು ಎಂಬ ಅಶೋಕ ಹೇಳಿಕೆಗೆ ಈ ರೀತಿ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.