ಕೋಲಾರ: ‘ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಎದುರಿಸಿ ನಿಲ್ಲಲು ಪ್ರತಿ ಮಹಿಳೆಯೂ ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಪಾಲಿ ಕಿವಿಮಾತು ಹೇಳಿದರು.
ಜಿಲ್ಲಾ ಪ್ರಗತಿಪರ ಮಹಿಳಾ ಸಂಘಟನೆಗಳ ಒಕ್ಕೂಟವು ಇಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಹಿಳಾ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿ, ‘ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಸಾಧನೆ ಮಾಡುತ್ತಿರುವ ಮಹಿಳೆ ಸಬಲೆಯೇ ಹೊರತು ಅಬಲೆಯಲ್ಲ. ಮಹಿಳೆಯರು ಯಾವುದೇ ಕಾರಣಕ್ಕೂ ಅಸ್ತಿತ್ವ ಕಳೆದುಕೊಳ್ಳದೆ ಸ್ವಾಭಿಮಾನದಿಂದ ಬದುಕಬೇಕು’ ಎಂದು ಸಲಹೆ ನೀಡಿದರು.
‘ಮಹಿಳೆಯು ನಾಲ್ಕು ಗೋಡೆಗಳ ಮಧ್ಯೆ ಕುಟುಂಬ ನಿರ್ವಹಣೆಗಷ್ಟೇ ಸೀಮಿತವೆಂಬ ಕಾಲ ಬದಲಾಗಿದೆ. ಮಹಿಳೆಯರು ಈಗ ಪುರುಷರಿಗೆ ಸರಿ ಸಮಾನ. ಮಹಿಳೆಯರ ಮೇಲೆ ಸಮಾಜದಲ್ಲಿ ನಡೆಯುವ ದೌರ್ಜನ್ಯದ ಬಗ್ಗೆ ಅರಿವು ಮೂಡಿಸಿ ಧೈರ್ಯ ತುಂಬಿ ಸ್ವಾವಲಂಬಿಗಳಾಗಿಸಬೇಕು. ವೇದಗಳ ಕಾಲದಲ್ಲೂ ಮಹಿಳೆಯರಿಗೆ ಸಮಾನ ಅವಕಾಶಗಳಿದ್ದವು. ಮಹಿಳಾ ಸಬಲೀಕರಣ ಎಂದರೆ ಮಹಿಳೆಯರ ಸುರಕ್ಷತೆಗೆ ಒತ್ತು ನೀಡುವುದಾಗಿದೆ’ ಎಂದರು.
‘ಸಮಾಜ ಸುಧಾರಕರು, ಮಹನೀಯರ ಹೋರಾಟ, ತ್ಯಾಗ ಬಲಿದಾನದಿಂದ ಮಹಿಳೆಯರಿಗೆ ಇಂದು ಸಮಾಜದಲ್ಲಿ ಪುರುಷರಷ್ಟೇ ಸಮಾನ ಅವಕಾಶ ದೊರೆತಿವೆ. ಮಹಿಳೆಯರು ಎಲ್ಲಾ ಅಡೆತಡೆ ಮೀರಿ ಎಲ್ಲಾ ರಂಗದಲ್ಲೂ ಸ್ಪರ್ಧೆ ನೀಡುತ್ತಿದ್ದಾರೆ. ಮಹಿಳೆಯರಿಗೆ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಹೆಚ್ಚಿನ ಪ್ರಾತಿನಿಧ್ಯ ಸಿಗಬೇಕು’ ಎಂದು ಆಶಿಸಿದರು.
‘ಮಹಿಳೆಯರು ಸ್ವಯಂ ಉದ್ಯೋಗದ ಮೂಲಕ ಬದುಕು ಕಟ್ಟಿಕೊಂಡು ಆರ್ಥಿಕವಾಗಿ ಸಬಲರಾಗಬೇಕು. ಸರ್ಕಾರದ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ಸ್ವಾವಲಂಬಿಗಳಾಗಬೇಕು. ಉನ್ನತ ಸ್ಥಾನ ಅಲಂಕರಿಸಿ ಪುರುಷರಿಗೆ ಸಮನಾಗಿ ಬೆಳೆಯಬೇಕು’ ಎಂದು ಹೇಳಿದರು.
ಅವಿಭಾಜ್ಯ ಅಂಗ: ‘ಜೀವನದಲ್ಲಿ ಮಹಿಳೆ ಮತ್ತು ಪುರುಷ ಸಮಾಜದ ಅವಿಭಾಜ್ಯ ಅಂಗ. ಹಲವು ಮಹಿಳೆಯರು ಕುಟುಂಬದಲ್ಲಿನ ಪುರುಷರ ಬೆಂಬಲದಿಂದ ಸಾಧನೆ ಮಾಡಿರುವುದನ್ನು ಮರೆಯಬಾರದು. ಮನೆಯಿಂದಲೇ ಆರಂಭವಾಗುವ ಲಿಂಗ ತಾರತಮ್ಯ ನಿವಾರಿಸುವ ನಿಟ್ಟಿನಲ್ಲಿ ಸಮಾನತೆ ಬೆಳೆಸಬೇಕು’ ಎಂದು ತಿಳಿಸಿದರು.
‘ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ 50ರಷ್ಟು ಮೀಸಲಾತಿ ಇದೆ. ಮಹಿಳೆಯರು ರಬ್ಬರ್ ಸ್ಟಾಂಪ್ ಆಗಬಾರದು. ಸ್ವಂತ ನಿರ್ಧಾರ ತೆಗೆದುಕೊಂಡು ಸಮಾಜದ ಒಳಿತಿಗೆ ಶ್ರಮಿಸಬೇಕು. ತಮ್ಮ ಅಭಿವೃದ್ಧಿಗೆ ಕಂಕಣಬದ್ಧರಾಗಬೇಕು’ ಎಂದು ಹೇಳಿದರು.
ಜಿಲ್ಲಾ ಪ್ರಗತಿಪರ ಮಹಿಳಾ ಸಂಘಟನೆಗಳ ಒಕ್ಕೂಟದ ಸದಸ್ಯೆ ಶಾಂತಮ್ಮ, ಕಲಾವಿದ ವೆಂಕಟಾಚಲಪತಿ, ಸ್ವರ್ಣಭೂಮಿ ಪ್ರತಿಷ್ಠಾನದ ಬಿ.ಶಿವಕುಮಾರ್ ಪಾಲ್ಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.