ಕೋಲಾರ: ಕೋಲಾರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ 32 ವರ್ಷಗಳ ಬಳಿಕ ಕಾಂಗ್ರೆಸ್‌ನಿಂದ ಹೊಸ ಅಭ್ಯರ್ಥಿ ಕಣಕ್ಕಿಳಿಯುವ ಸಾಧ್ಯತೆ ಇದೆ.
ಈ ಕ್ಷೇತ್ರದಲ್ಲಿ ಸತತ ಎಂಟು ಬಾರಿ ಸ್ಪರ್ಧಿಸಿ ಏಳು ಸಲ ಗೆದ್ದಿರುವ ಕೆ.ಎಚ್.ಮುನಿಯಪ್ಪ ಈ ಬಾರಿ ಸ್ಪರ್ಧೆಗೆ ಅಷ್ಟೊಂದು ಆಸಕ್ತಿ ತೋರುತ್ತಿಲ್ಲ. ಹಾಗಾಗಿ ಮುಂಬರುವ ಲೋಕಸಭೆ ಚುನಾವಣೆಗೆ ಹೊಸ ಅಭ್ಯರ್ಥಿ ಶೋಧದಲ್ಲಿ ಪಕ್ಷ ತೊಡಗಿದೆ.
ವಿಧಾನಸಭೆ ಚುನಾವಣೆಯಲ್ಲಿ ದೇವನಹಳ್ಳಿ ಮೀಸಲು ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲ್ಲುವ ಮೂಲಕ ರಾಜ್ಯ ರಾಜಕಾರಣ ಪ್ರವೇಶಿಸಿರುವ ಮುನಿಯಪ್ಪ ಈಗ ಆಹಾರ ಸಚಿವ.
ಸಚಿವರಾದ ಮೇಲೆ ಕೋಲಾರಕ್ಕೆ ಅಪರೂಪಕ್ಕೊಮ್ಮೆ ಬಂದು ಹೋಗುತ್ತಿದ್ದಾರೆ. ಕಾರ್ಯಕರ್ತರ ಭೇಟಿಯೂ ಕಡಿಮೆ ಆಗಿದೆ. ಆಪ್ತರು ಮಾತ್ರ ಮುನಿಯಪ್ಪ ಅವರ ಸ್ಪರ್ಧೆಗೆ ಒತ್ತಾಯಿಸುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ ಮುನಿಯಪ್ಪ ಅವರು ಹೈಕಮಾಂಡ್ ನಿರ್ಧಾರದ ಕಡೆ ಬೊಟ್ಟು ಮಾಡುತ್ತಾರೆ.
ಪರಿಶಿಷ್ಟ ಜಾತಿಯ ಎಡಗೈ ಸಮುದಾಯಕ್ಕೆ ಸೇರಿದ ಮುನಿಯಪ್ಪ ಕೋಲಾರ ಕ್ಷೇತ್ರದಿಂದ 1991ರಿಂದ ಸತತ ಏಳು ಬಾರಿ ಸಂಸದರಾಗಿ, ಯುಪಿಎ ಸರ್ಕಾರದ ಅವಧಿಯಲ್ಲಿ ಹತ್ತು ವರ್ಷ ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.
2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಎಸ್.ಮುನಿಸ್ವಾಮಿ ಎದುರು ಮುನಿಯಪ್ಪ ಮೊದಲ ಬಾರಿಗೆ ಸೋಲು ಕಂಡಿದ್ದರು. ಕಾಂಗ್ರೆಸ್‌ನಲ್ಲಿ ಎರಡು ಬಣಗಳು (ರಮೇಶ್ ಕುಮಾರ್ ನೇತೃತ್ವದ ಘಟಬಂಧನ್ ಹಾಗೂ ಮುನಿಯಪ್ಪ ಬೆಂಬಲಿಗರು) ಸೃಷ್ಟಿಯಾಗಿ ಆಂತರಿಕ ಭಿನ್ನಾಭಿಪ್ರಾಯದಿಂದ ಸೋಲು ಎದುರಾಯಿತು ಎಂದು ಆಗ ವಿಶ್ಲೇಷಿಸಲಾಗಿತ್ತು. ಜಿಲ್ಲಾ ಕಾಂಗ್ರೆಸ್‌ನಲ್ಲಿ ಈಗಲೂ ಅದೇ ವಾತಾವರಣ ಇದೆ ಎಂದು ಹೇಳಲಾಗುತ್ತಿದೆ.
ಈ ಬಾರಿ ಕಾಂಗ್ರೆಸ್ ಟಿಕೆಟ್‌ಗಾಗಿ ಪೈಪೋಟಿ ಹೆಚ್ಚಿದ್ದು ಪ್ರಮುಖ ನಾಯಕರ ಸಮ್ಮುಖದಲ್ಲಿ ಈಚೆಗೆ ನಡೆದ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಸುಮಾರು ಏಳೆಂಟು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಆ ಸಭೆಯಲ್ಲಿ ಮುನಿಯಪ್ಪ ಕೂಡ ಇದ್ದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೆಂಬಲಿಗ ಎನ್ನಲಾದ ಬಿ.ಸಿ.ಮುದ್ದು ಗಂಗಾಧರ್, ಜಾನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್, ಬೆಳಗಾನಹಳ್ಳಿ ಮುನಿವೆಂಕಟಪ್ಪ, ಶಾಂತಕುಮಾರಿ, ಮುನಿರಾಜು, ಕೆ.ವಿ.ಗೌತಮ್, ಲಕ್ಕೂರು ನಾರಾಯಣಸ್ವಾಮಿ ಸೇರಿದಂತೆ ಹಲವು ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಇತ್ತ ಮುನಿಯಪ್ಪ ಅವರ ಅಳಿಯನ ಹೆಸರೂ ಕೇಳಿ ಬರುತ್ತಿದೆ.
‘ಹಿಂದೆ ಆಗಿರುವ ತಪ್ಪುಗಳನ್ನು ಮರೆತು ಕೆಲಸ ಮಾಡಬೇಕು. ನಾವು ಎಲ್ಲಿಯೇ ಎಡವಿದರೂ ಬಿಜೆಪಿ– ಜೆಡಿಎಸ್‌ನವರು ಲಾಭ ಪಡೆದುಕೊಳ್ಳುತ್ತಾರೆ. ಅವರು ಈಗಾಗಲೇ ಮೈತ್ರಿ ವಿಚಾರ ಮುಂದಿಟ್ಟುಕೊಂಡು ಓಡಾಡುತ್ತಿದ್ದು, ಅವಕಾಶ ನೀಡಬಾರದು’ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಈಗಾಗಲೇ ಎಚ್ಚರಿಸಿದ್ದಾರೆ.
ಸ್ಪರ್ಧಿಸಲು ಮುನಿಯಪ್ಪ ಅವರಿಗೆ ಈಗಲೂ ಆಸಕ್ತಿ ಇದೆ. ಅವರಿಗೆ ಟಿಕೆಟ್ ಕೊಡಬೇಕೆಂಬ ಒತ್ತಡವೂ ಇದೆ. ಇತರರೂ ಟಿಕೆಟ್ ಕೇಳುತ್ತಿದ್ದಾರೆ. ಕಾಂಗ್ರೆಸ್‌ನಿಂದ ಯಾರೇ ಸ್ಪರ್ಧಿಸಿದರೂ ಗೆಲ್ಲಿಸುತ್ತೇವೆಸಿ. ಲಕ್ಷ್ಮಿನಾರಾಯಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಕೋಲಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.